ಪುಟ-೩
ಜಗತ್ತಿನ ಗುರುಗಳನ್ನು ನೋಡಿ ಬಲ್ಲವರು ಟೊಂಯ್ಕರು. ಆದರೆ ಡಿಲೈಟಾನಂದರ ಪೂರ್ವವನ್ನೂ ಉತ್ತರವನ್ನೂ ತಿಳಿಯಲಾರದವರು. ತಾನು ಓರ್ವನೇ ಶಿಷ್ಯ, ಆದರೆ ಗುರುವಿನಿಂದ ಏನನ್ನೂ ಕಲಿಯಲಿಲ್ಲ ಎನ್ನುವ ಒಂದು ಬೇಸರ ಇತ್ತೀಚೆಗೆ ಕಾಡುತ್ತಿತ್ತು. ಮಾಡುವುದಕ್ಕೇನೂ ಕೆಲಸ ಇಲ್ಲದೇ ಕುಳಿತವನೇ ಗುರು?
ಬೆಳಗ್ಗೆ ಸೂರ್ಯ ಮೂಡುವ ಮೊದಲೇ ಏಳುತ್ತಿದ್ದ ಡಿಲೈಟರು ದೂರದ ನಡಿಗೆಯನ್ನು ಮುಗಿಸಿ ವಾಪಸ್ಸು ಬರಬೇಕಾದರೆ ಟೊಂಯ್ಕರು ಎದ್ದಿರುತ್ತಿದ್ದರು. ಇತ್ತೀಚೆಗೆ ಯಾರ್ಯಾರೋ ಭಕ್ತರು ಬರುತ್ತಿದ್ದರಿಂದ ಹಣ್ಣು ಹಂಪಲುಗಳು, ತೆಂಗಿನಕಾಯಿ ಸಿಗುತ್ತಿದ್ದುದರಿಂದ ಆಹಾರದ ಬಗ್ಗೆ ಯೋಚನೆ ಇರಲಿಲ್ಲ.
ಕುಳಿತುಕೊಂಡು ಯೋಚಿಸಲು ಒಂದು ಕಲ್ಲು, ವಿರಮಿಸಲು ಗುಹೆಯಂತಹ ಜಾಗ, ಒಳ್ಳೆಯ ತಂಗಾಳಿ, ಒಂದಿನ್ನೂರು ಮೀಟರುಗಳ ಅಂತರದಲ್ಲೊಂದು ಅರಳೀಮರ, ಅಲ್ಲಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ ಸರಕಾರದ ಕೃಪೆಯ ಕಾಲುವೆಯ ನೀರು. ಸ್ವಲ್ಪ ಕೈಚಾಚಿದರೆ ಯಾರೂ ಗದರಿಸದ ಹುಲುಸಾದ ಜೋಳದ ಗದ್ದೆ. ಇನ್ನೇನು ಬೇಕಿರಲಿಲ್ಲ ಡಿಲೈಟರಿಗೆ.
ಡಿಲೈಟರು ಸುಮ್ಮನೇ ಕುಳಿತಾಗ, ಮಾತನಾಡದೇ ಇದ್ದಾಗ ಟೊಂಯ್ಕರಿಗೆ ಒಬ್ಬಂಟಿತನ ಕಾಡುತ್ತಿತ್ತು. ಆದರೂ ಗುರುಗಳು ಹೇಳಿಕೊಟ್ಟಂತೆ ಏಳು ಸೆಕೆಂಡು ಏನನ್ನೂ ಯೋಚಿಸದೇ ಇರಬಲ್ಲ ಶಕ್ತಿ ಬಂದಿತ್ತು. ಇನ್ನು ನಲ್ವತ್ತೊಂಭತ್ತು ಸೆಕೆಂಡು ಏನೂ ಯೋಚಿಸದೇ ಇರುವ ಶಕ್ತಿ ಬರಬೇಕಿತ್ತು.
ತಕ್ಕಮಟ್ಟಿಗೆ ಕಟ್ಟುಮಸ್ತಾಗಿದ್ದ ಟೊಂಯ್ಕರು ಒಂದು ದಿನ ಆ ಬೆಟ್ಟಕ್ಕೆ ಬರುವ ಕುರಿಹಿಂಡುಗಳನ್ನು ನೋಡುತ್ತಾ ಕುಳಿತಿದ್ದರು. ಪೂರ್ವದಲ್ಲಿ ಇಂತಹ ಕುರಿಗಳನ್ನು ನೋಡಿದರೆ ಬಾಯಿಯಲ್ಲಿ ಒಂದೂವರೆ ಚಮಚದಷ್ಟಾದರೂ ನೀರು ಬರುತ್ತಿತ್ತು ಟೊಂಯ್ಕರಿಗೆ. ಈಗ ಹಾಗಿಲ್ಲ, ಕುರಿಯ ಮಂದೆ, ಅದರ ಚಂದ, ಹುಲ್ಲು ತಿನ್ನುವಾಗ ಬರುವ ಗರ್ ಗರ್ ಧ್ವನಿ ಎಲ್ಲವೂ ಬಹಳ ಆಪ್ಯಾಯಮಾನವಾಗಿತ್ತು.
ಹೀಗೇ ನೋಡುತ್ತಿದ್ದಾಗ ಒಂದು ದಿನ ಒಬ್ಬರನ್ನು ಮಾತನಾಡಿಸಿದ. ಆ ವ್ಯಕ್ತಿಯೋ, ಯಾವುದೋ ದೂರದ ಊರಿನಿಂದ ಕುರಿಗಳನ್ನು ಹೊಡೆದುಕೊಂಡು ಬರುವ ವ್ಯಕ್ತಿ. ಸಣ್ಣ ಬೆಟ್ಟದ ಮೇಲೆ ಕುರಿಗಳಿಗೆ ಮೇಯುವುದಕ್ಕೆ ಒಂದು ಕುರಿಯನ್ನು ಬೆಟ್ಟದ ಯಜಮಾನನಿಗೆ ಕೊಟ್ಟಿದ್ದ. ಹೀಗಾಗಿ ಟೊಂಯ್ಕರಿಗೆ ಆ ಬೆಟ್ಟಕ್ಕೂ, ತಾನು ತಂಗುವ ಜಾಗಕ್ಕೂ ಒಬ್ಬ ಒಡೆಯನಿದ್ದಾನೆ ಎನ್ನುವ ವಿಷಯ ಸಿಕ್ಕಿದಂತಾಯ್ತು.
ಇನ್ನೊಂದು ದಿನ, ಗುರುಗಳು ಧ್ಯಾನದಲ್ಲಿದ್ದಾಗ ಆ ಬೆಟ್ಟವನ್ನೊಳಗೊಂಡ ಆಸ್ತಿಯ ಒಡೆಯರಾದ ಮಲ್ಲಪ್ಪರನ್ನು ಭೇಟಿಯಾಗಲು ಅವರ ಮನೆಗೆ ಹೋದರು. ಈ ಮಲ್ಲಪ್ಪನವರು ಊರಿನ ಜಾತ್ರೆಯ ಮುಖ್ಯಸ್ಥರಲ್ಲಿ ಒಬ್ಬರಾದುದರಿಂದ ಟೊಂಯ್ಕರನ್ನು ಗುರುತಿಸಿ ಅವರಿಗೆ ನೀರು, ಹಾಲು, ಫಲಗಳನ್ನು ಕೊಟ್ಟು ಬಂದ ಕಾರಣವನ್ನು ಕೇಳಿದರು. ಏನಿಲ್ಲವೆಂದೇ ಶುರುಮಾಡಿದ ಟೊಂಯ್ಕರು ಆ ಬೆಟ್ಟದ ಅಷ್ಟು ನಿರುಪಯುಕ್ತ ಜಾಗದಲ್ಲಿ ಗುರುಗಳ ವಾಸಕ್ಕೆ, ಬರುವ ಭಕ್ತಾದಿಗಳಿಗೆ ನೀರು, ಶೌಚ ಇತ್ಯಾದಿ ಕ್ರಿಯೆಗೆ ಸಹಕಾರಿಯಾಗುವ ಕಟ್ಟಡಕ್ಕೆ ಅನುಮತಿಯನ್ನು ಕೇಳಿದರು.
ಮಲ್ಲಪ್ಪನವರು ಶ್ರೀಮಂತರೂ ಹೌದು, ಡಿಲೈಟರ ಮೇಲೆ ಒಳ್ಳೆಯ ಗೌರವವಿದ್ದವರೂ ಹೌದು. ಆದರೆ ಕಮ್ಯೂನಿಷ್ಟರಲ್ಲ. ಹಾಗಾಗಿ ಜಾಗವನ್ನು ಕೊಡುವುದಕ್ಕೆ ಅವರಿಗೆ ಸರ್ವಥಾ ಮನಸ್ಸಿರಲಿಲ್ಲ. ಹಾಗೆಯೇ, ಡಿಲೈಟನಾಂದರ ಪರಮ ಕೃಪೆಯನ್ನು ಕಳೆದುಕೊಳ್ಳುವುದೂ ಇಷ್ಟವಿಲ್ಲದಿದ್ದುದರಿಂದ ಬೆಟ್ಟದಲ್ಲಿ ಅವರ ವಾಸವಿದ್ದುದಕ್ಕೆ ಆಕ್ಷೇಪವಿರಲಿಲ್ಲ. ಇತ್ತೀಚೆಗೆ ಭಕ್ತರು ಎಂದುಕೊಂಡು ಬರುತ್ತಿರುವ ಜನರಿಂದ ತೋಟ ಗದ್ದೆಗಳಿಗೆ ಸಮಸ್ಯೆಯಾಗುತ್ತಿದ್ದುದೂ ಅರಿವಿತ್ತು.
ಕೆಲವೊಂದು ಸಲ ಎರಡು ಆಯ್ಕೆಗಳೂ ತಪ್ಪಲ್ಲವೆನ್ನುವಾಗ ಯಾವುದಾದರೂ ಒಂದು ಆಯ್ಕೆ ಮಾಡಿ ಮತ್ತೊಂದನ್ನ ಆಯ್ಕೆ ಮಾಡಬಹುದಿತ್ತು ಎನ್ನುವ ಪರಿತಾಪ ಉಂಟಾಗುತ್ತದೆ. ಅಂತಹ ಒಂದು ಪರಿತಾಪ, ಗೊಂದಲದ ನಡುವೆ ಮಲ್ಲಪ್ಪನವರು ಆಗಲಿ, ನೋಡೋಣ ಎಂದು ಟೊಂಯ್ಕರನ್ನು ಕಳಿಸಿದರು.
ಅಂತಿರ್ಪೊಡೆ, ಇದೆಲ್ಲ ಸಮಾಚಾರವೂ ಡಿಲೈಟಾನಂದರ ಕಿವಿಗಳಿಗೆ, ಕಣ್ಣುಗಳಿಗೆ ತಿಳಿಯಲಿಲ್ಲ. ಒಂದು ದಿನ ಶ್ರೀಮಾನ್ ಮಲ್ಲಪ್ಪನವರ ಸಂಸಾರ ಸಮೇತವಾದ ಸವಾರಿ ಗುರುಗಳಿದ್ದಲ್ಲಿಗೆ ಬಂದಾಗ ಡಿಲೈಟಾನಂದರಿಗೆ ವಿಷಯವನ್ನು ಹೇಳಿದರು. ಯಾವುದೋ ಬಿಸಿಲಿನಲ್ಲಿ ಹಪ್ಪಳ ಒಣಗಿಸುತ್ತಿದ್ದಾಗ ಬಂದ ಮಳೆಯಂತೆ ಈ ಸುದ್ಧಿ ಗುರುಗಳಿಗೆ.
ಸಮಾಧಾನದಿಂದಿದ್ದ ಪ್ರಾಕೃತಿಕ ಶಾಂತಿಗೆ ಭಂಗವಾಗುವ ಈ ಕಟ್ಟಡ, ವಸತಿಗಳಿಗೆ ಸಂತೋಷ ಪಡುವುದೋ ಬೇಸರ ಪಡುವುದೋ ತಿಳಿಯದೇ ಮೌನದ ಹುತ್ತಕ್ಕೇ ಶರಣು ಹೋದರು. ಅಲ್ಲೇ ಇದ್ದ ಟೊಂಯ್ಕರು ಯಾವುದೇ ಕಸಿವಿಸಿಯಿಲ್ಲದೇ ಆಗಲಿ ಮಲ್ಲಪ್ಪನವರೇ, ಈ ಜಾಗದಲ್ಲಿ ಹೀಗೆ, ಆ ಜಾಗದಲ್ಲಿ ಹಾಗಿದ್ದರೆ ಒಳ್ಳೆಯದು ಎಂದೂ ಹೇಳಿದರು. ಡಿಲೈಟಾನಂದರ ಹುಬ್ಬುಗಳು ಯಾವುದೋ ಶಬ್ಧಕ್ಕೆ ಮರದಿಂದ ಹಾರಿದ ಹಕ್ಕಿಗಳಂತೆ ಒಮ್ಮೆ ಹಾರಿ ಮತ್ತೆ ಕುಳಿತವು.
ಮಲ್ಲಪ್ಪನವರ ನಿಷ್ಠೆಗೆ, ಹಣಕ್ಕೆ ನೆಲವೇನು ಜನವೇನು? ಎಲ್ಲವೂ ಸಣ್ಣ ಕಾಲದ ಪರಿಧಿಯಲ್ಲಿ ಕಟ್ಟಿ ಮುಗಿಯಿತು. ಒಂದು ಸಣ್ಣ ಚಾವಡಿಯಂತಹ ಜಾಗ, ಶೌಚಾದಿ ಕ್ರಿಯೆಗಳಿಗೆ ಸ್ವಲ್ಪ ದೂರದಲ್ಲಿ ಎರಡು ಕೋಣೆಗಳು. ಮಲ್ಲಪ್ಪನವರ ಗದ್ದೆಯ ಪಂಪಿನಿಂದ ನೀರನ್ನು ಕೊಳವೆಯ ಮೂಲಕ ತಂದು ತುಂಬಿಸಬಹುದಾದಂತ ಒಂದು ಟ್ಯಾಂಕು, ಅದಕ್ಕೆ ನಲ್ಲಿಗಳ ವ್ಯವಸ್ಥೆ.
ಇಷ್ಟಾದ ಮೇಲೆ ಆ ಸ್ಥಳವು ಒಂದು ಸಣ್ಣ ಮಗು ಬಿಡಿಸಿದ ಚಿತ್ರದಂತೆ ದೂರಕ್ಕೆ ಕಾಣುತ್ತಿತ್ತು. ಯಾರೋ ತಂದಿಟ್ಟ ನಾಲ್ಕು ಹಳೇ ಪುಸ್ತಕಗಳು, ಅದ್ಯಾರೋ ತಂದು ಬಿಟ್ಟು ಹೋದ ವಿಭೂತಿಯ ಗಟ್ಟಿಯನ್ನು ತುಂಬಿದ್ದ ಬಟ್ಟಲುಗಳು ಚಾವಡಿಯ ಮೂಲೆಯಲ್ಲಿ ಪೇರಿಸಲ್ಪಟ್ಟವು. ಗುರುಗಳ ಪಾದಧೂಳಿಯನ್ನು ಪಡೆಯಬಂದವರು ತಮ್ಮ ಪಾದದ ಧೂಳನ್ನು ಚಾವಡಿಗೆ ಸೇರಿಸಬಾರದು ಎನ್ನುವ ಕಾರಣಕ್ಕೆ ಮಲ್ಲಪ್ಪನವರ ಮನೆಯಿಂದ ಹಿಂಡಿಯ ಗೋಣಿಗಳೂ ಬಂದು ಬಾಗಿಲಿಗೆ ಬಿದ್ದವು. ನಂತರ ಮಲ್ಲಪ್ಪನವರ ಮಡದಿಯ ಆರೋಪದ ಮೇರೆಗೆ ಒಳ್ಳೆಯ ಕಾಲೊರಸುಗಳೂ ಅಲ್ಲಲ್ಲಿ ರಾಜಿಸಿದವು.
ಡಿಲೈಟಾನಂದರು ಗುಹೆಯಂತ ಜಾಗದಲ್ಲಿ ತಮ್ಮ ನಂಟು ಬಿಡಲಿಲ್ಲ. ಟೊಂಯ್ಕರು ಸಂಪೂರ್ಣವಾಗಿ ಉಸ್ತುವಾರಿ ಸಚಿವರಾದರು. ಮಲ್ಲಪ್ಪನವರಂತೂ ತಮ್ಮ ಸ್ಥಳದ ಆಶೆಗೋ ಅಲ್ಲ ಭಕ್ತಿಯಿಂದಲೋ ಆಗಾಗ ಬರುವ ಮುಖ್ಯರಾದರು. ಮಲ್ಲಪ್ಪನವರೇ ಬಂದ ಮೇಲೆ ಅವರ ಸಂಬಂಧಿಕರು, ಪಟಾಲಮ್ಮುಗಳು ಬರದೇ ಇರುತ್ತಾರೆಯೇ?
ಅಲ್ಲಿ ಪೂಜೆಯಿಲ್ಲ, ಗುರುಗಳು ಮಾತನ್ನಾಡುವುದಿಲ್ಲ, ಟೊಂಯ್ಕರು ಉಪದೇಶ ಕೊಡುವ ಹಾಗಿಲ್ಲ. ನೋಡುವುದಕ್ಕೆ ಒಂದು ಚಾವಡಿ, ಎರಡು ಕೋಣೆ ಬಿಟ್ಟರೆ ಏನೂ ಇಲ್ಲ ಎನ್ನುವ ಕೆಲವು ವಿಷಯಗಳಿಂದ ದೂರದಿಂದ ಬರುವ ಜನರು ಮತ್ತೆ ಬರುತ್ತಿರಲಿಲ್ಲ. ಮೊದಮೊದಲಿಗೆ ಬಹಳಷ್ಟು ಜನ ಬಂದರೆ ನಂತರ ಜನರು ಕಡಿಮೆಯಾಗುತ್ತಿದ್ದುದು ಟೊಂಯ್ಕರಿಗೆ ಒಳಗಿಂದ ಅಸಮಾಧಾನವಾದರೆ ಡಿಲೈಟಾನಂದರಿಗೆ ಸ್ವಲ್ಪ ಖುಷಿಯೆನ್ನಿಸಿತ್ತು.
ಮಲ್ಲಪ್ಪನವರೂ ಹೊಸದಾಗಿ ಕೈಗೊಂಡ ಗ್ರಾನೈಟ್ ಬ್ಯುಸಿನೆಸ್ಸ್ ಸಲುವಾಗಿ ಈ ಗುರುಗಳನ್ನು, ಟೊಂಯ್ಕರನ್ನು ಮರೆತೇ ಬಿಟ್ಟರು. ಟೊಂಯ್ಕಾನಂದರು ಏನಾದರೂ ಮಾಡದಿದ್ದರೆ ಈಗ ಮತ್ತೆ ಎದ್ದು ಹೊರ ಜಗತ್ತಿಗೆ ಹತ್ತಿರವಾಗಲೇ ಬೇಕಾಯಿತು.
ಪುಟ-೪
ಒಂದು ಜಾತ್ರೆಯ ನಂತರ ಹಾದಿಬೀದಿಗಳು ಯಾವುದೋ ಅನುಭವಿಸಲು ಬಾರದ ದುಃಖವನ್ನು ತಂದೊಡ್ಡುತ್ತದೆ ಸುಮ್ಮನೇ ನೋಡುಗನಿಗೆ. ಅದೆಷ್ಟೋ ಬಾರಿ ನಾಳೆ ತೆಗೆದುಕೊಳ್ಳಬೇಕೆನ್ನುವ ವಸ್ತು ಅಲ್ಲಿಲ್ಲದೇ, ವಸ್ತು ಇರುವ ಅಂಗಡಿಯೂ ಕಾಣೆಯಾಗಿ ಒಟ್ಟು ಬಯಲನ್ನು ತೆರೆದಿಡುವಂತೆ ದುಃಖ. ಮಾತು ಕೇಳದಿದ್ದರೂ ತುಂಬಿದ್ದ ಸಭೆ, ಈಗ ಸಭೆಯೂ ಇಲ್ಲ, ಬರೀ ಶಿಷ್ಯ ಮತ್ತೆ ಗುರು.
ಜೋಳ ಬೆಳೆದ ಹೊಲದ ಬದಿಯಿಂದಲಾಗಿ ನಡೆಯುತ್ತಾ ಮುಂದೆ ಸಾಗುತ್ತಿದ್ದ ಡಿಲೈಟಾನಂದರು, ಅವರ ಹಿಂದೆ ಒಂದೆರಡು ಜೋಳಗಳನ್ನು ಹಿಡಿದುಕೊಂಡು ಯಾವುದೋ ಬೇಸರದಿಂದ ಗುರುವಿರಿಸಿದ ಹೆಜ್ಜೆಯನ್ನು ತುಳಿಯುತ್ತ ಸಾಗುತ್ತಿದ್ದರು ಟೊಂಯ್ಕರು. ಸಾಮಾನ್ಯವಾಗಿ ನಡೆಯುವಾಗ ಮಾತನ್ನಾಡುತ್ತಿರಲಿಲ್ಲ ಡಿಲೈಟಾನಂದರು. ಅದಕ್ಕೆ ವ್ಯತಿರಿಕ್ತವಾದ ಟೊಂಯ್ಕರು ಯಾವುದೇ ಕಾರಣಕ್ಕೆ ಬಾಯಿಯನ್ನು ಮುಚ್ಚದವರು.
ತಮ್ಮ ಪೂರ್ವಾಪರವನ್ನು ಹೇಳಲೇ ಎಂದು ಗುರುಗಳಲ್ಲಿ ಕೇಳಿಕೊಂಡಾಗ ಗುರುಗಳು ಹ್ಮ್ಂ ಎಂದರು. ಹಾಗಾಗಿ ಟೊಂಯ್ಕರು ತಮ್ಮ ಬಗೆಗೆ ಹೇಳುವಂತಾಯ್ತು. ಯಾವುದೇ ಹೆಜ್ಜೆಯು ಭಾರವಾಗುವುದು ಒಂದೋ ಬೀಳ್ಕೊಟ್ಟವರು ಆತ್ಮೀಯವಾಗಿರಬೇಕು, ಇಲ್ಲವೇ ಸಿಗುವವರು ಸಹ್ಯವಾಗುವವರಲ್ಲದಿರಬೇಕು. ಹಾಗೆಯೇ ಭಾರವಾಯಿತು ನಾಲಗೆ. ತಮ್ಮ ಜೀವನದ ಮೊದಲ ಇಪ್ಪತ್ತೈದು ವರುಷಗಳನ್ನು ಬಿಟ್ಟು ಅತ್ಯಂತ ಆತ್ಮೀಯವಾದ ನಂತರದ ಐದಾರು ವರ್ಷಗಳಿಂದ ನಡೆದ ಘಟನೆಗಳನ್ನು ಸವಿಸ್ತಾರವಾಗಿ ಹೇಳಿದರು. ಟೊಂಯ್ಕರ ಪೂರ್ವದ ಬಗೆಗೆ ಡಿಲೈಟರಿಗೆ ಸ್ವಲ್ಪವೂ ಕರುಣೆಯಿರಲಿಲ್ಲ ಹಾಗಾಗಿ ಕೇಳಲಿಲ್ಲ. ಆದರೆ ಅದೊಂದು ರಾತ್ರಿ, ಡಿಲೈಟರು ಸಿಕ್ಕಿದ ರಾತ್ರಿಯ ಹಿಂದಿನ ಘಟನೆಗಳನ್ನು ಕೇಳುವಾಗ ಡಿಲೈಟಾನಂದರ ಆಸಕ್ತಿ ಹೆಚ್ಚಾಗಿ ತಾವು ಬಿಟ್ಟು ಹೋದ ಅರಳೀಮರದಡಿ ವಿಶ್ರಾಂತಿಗಾಗಿ ಕುಳಿತರು.
ಟೊಂಯ್ಕರು ಆರಂಭಿಸಿದರು. ರಾತ್ರಿಯ ಕೆನ್ನಾಲಗೆ ಆಗಷ್ಟೇ ಸೂರ್ಯನನ್ನು ಮುಕ್ಕಿತ್ತು. ಆ ಸಂಜೆ ಒಂದು ಅದ್ಭುತವಾದ ಮುಖಪುಟವಿದ್ದ ನವ್ಯಕವಿತಾ ಸಂಕಲನ ದೊರಕಿತ್ತು ಟೊಂಯ್ಕರಿಗೆ. ದುಷ್ಯಂತ ಶಾಕುಂತಲೆಯನ್ನು ಡೇವಿಡ್ ಮತ್ತು ಸಿಸಿಲಿಯಾ ಜೊತೆಗೆ ಸೇರಿಸಿ ಹಾಡಿದರೆ ಕರ್ಕಶವಾಗುವಂತ ಮೊದಲ ಗೀತೆಯಿಂದ ಶುರುವಾಗುವ ಕವನ ಸಂಕಲನ. ಅದಕ್ಕೂ ಮೊದಲು ಚಿನ್ನಕ್ಕೆ ಹೊಳಪು ಬರಲು ಒದ್ದಾಡಿ ಸುಟ್ಟುಹೋಗಿದ್ದ ಅತೃಪ್ತ ಇದ್ದಿಲಿನ ಜೀವಗಳು ಕಾವ್ಯ ವಿಮರ್ಶೆ ಎನ್ನುವ ಅದ್ಭುತವಾದ ಮುನ್ನುಡಿ ಮತ್ತು ಅನಿಸಿಕೆಗಳನ್ನು ಹಾಕಿದ್ದರು.
ಅರೆನಿಮೀಲಿತ ನೇತ್ರ, ಮೃದುಹೂವಿನ ಮನ, ಪರಾಗದಲ್ಲಿ ಮೃತಪಟ್ಟ ದುಂಬಿ, ಅಲೌಕಿಕ ಸಂಗಾತಿ ಮುಂತಾದ ಶಬ್ಧಪುಂಜಗಳು ಅಲ್ಲಲ್ಲಿ ಕಣ್ಣಿಗೆ ರಾಚಿ ಗುಂಟೂರು ಮೆಣಸನ್ನು ಬಳಸಿ ಮಾಡಿದ ಖಾರವಾದ ಅನ್ನದಲ್ಲಿ ಸಿಕ್ಕಿದ ಕಲ್ಲುಗಳಂತೆ ಆಗಿತ್ತು. ಕೊನೆಗೆ ಇನ್ನೇನು ಪದ್ಯಗಳ ಸಂಕಲನವನ್ನು ಮುಗಿಸಬೇಕು, ಅಷ್ಟರಲ್ಲಿ ದೇಹವನ್ನು ಸಂಪೂರ್ಣ ಸುಟ್ಟ ಚಿತೆಯಲ್ಲಿ ಉಳಿದ ತಲೆಬುರುಡೆ ಒಡೆಯುವಂತೆ ಕೊನೆಯ ಕವನದ ಮುಕ್ತಾಯಕ್ಕೆ ಸಶೇಷದ ಗುರುತು.. ಟೊಂಯ್ಕರು ಅರ್ತನಾದವನ್ನು ಮಾಡದಿರುವರೇ? ವಸ್ತ್ರವನ್ನು ಹರಿದೊಗೆಯರೇ..
ಗುರು ಡಿಲೈಟಾನಂದರ ಕರುಣೆಗಾಗಿ ಆ ಕವನ ಸಂಕಲನ ಜಗತ್ತಿನಲ್ಲಿ ಪ್ರಕಾಶಿಸದೇನು?
ಮುಂದುವರೆಯುವುದು..
ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೧


ಹಕ್ಕುಗಳು © Ishwara Bhat K|ಈಶ್ವರ ಭಟ್ ಕೆ.

One thought on “ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೨”

Leave a Reply

This site uses Akismet to reduce spam. Learn how your comment data is processed.