ಪ್ರಮುಖ ಪಾತ್ರಗಳಾದ”ಟೊಂಯ್ಕಾನಂದರು ’ಮತ್ತು”ಡಿಲೈಟಾನಂದರು’, ಇಬ್ಬರು ಸ್ವಾಮಿಗಳಾಗಿದ್ದು ಇವರ ವಿಚಾರವಾಗಿ ಯಾವುದೇ ಪ್ರಸ್ತುತವಿರುವ ದೂರದರ್ಶನಗಳಲ್ಲಿ , ಪತ್ರಿಕೆಗಳಲ್ಲಿ ಬಂದಿರುವುದಿಲ್ಲ. ಇವು ಸಾಮಾನ್ಯ ಮನುಷ್ಯನ ವಿಪರೀತ ಕಲ್ಪನೆಯಾಗಿದ್ದು, ಯಾವುದೇ ಪ್ರಕಾರವಾಗಿ ಯಾರನ್ನೂ ನಕಲಿಸಿರುವುದಿಲ್ಲ. ಆದ್ದರಿಂದ, ಯಾವುದಾದರೂ ರೀತಿಯಲ್ಲಿ ಸಾಮ್ಯ ಕಂಡುಬಂದರೆ ಬರಹಗಾರನ ಮೆದುಳಿಗೇ ಸಲ್ಲಬೇಕು ಹೊರತು ತಲೆಗೆ ಹೊಡೆಯಬಾರದಾಗಿ ವಿನಂತಿ.
ಸುಮಾರು ವರ್ಷಗಳ ಹಿಂದೆ ಮೂಡಿಬಂದ ಈ ಪಾತ್ರಗಳು ಬೆಳೆಯುವುದರಲ್ಲಿ ಸ್ನೇಹಿತರ ಬಲವಾದ ಬೆಂಬಲವಿದೆ. ಎಲ್ಲರನ್ನು ಈ ಮೂಲಕ ಸ್ಮರಿಸಿ, ಟೊಂಯ್ಕಾನಂದರ ಪದತಲದಲ್ಲಿ ಕುಳಿತು ಬರಗಾಲದ ಶುರು.
ಕಷ್ಟ ಪದಗಳ ಅರ್ಥ : ಸಧ್ಯಕ್ಕೆ ಇರುವುದಿಲ್ಲ. ಬರಗಾಲ ಅಂದರೆ ಬರಹದ ಕಾಲ ಎಂದು ಓದಿಕೊಳ್ಳತಕ್ಕದ್ದು.
ಪ್ರಸ್ತಾವನೆ:
ಶ್ರೀ ಶ್ರೀ ಟೊಂಯ್ಕಾನಂದರು ಯಾರು ಎನ್ನುವ ಬಗ್ಗೆ ಹಲವು ಊಹಾಪೋಹಗಳು ಇದೆ. ಅದನ್ನೆಲ್ಲ ನಿವಾರಿಸುವ ಸಲುವಾಗಿ ಈ ವಿವರಣೆ.
ಸುಮಾರು ವರ್ಷದ ಹಿಂದೆ ನೀರ್ಬೀಳದ ( ನೀರು ಬೀಳದ ಅಂತ ಓದ್ಕೋಬಾರದು, ನೀರ್ಬೀಳ ಅಂದ್ರೆ ಜಲಪಾತ) ಕೆಳಗೆ ಇದ್ದಿದ್ದ ಒಂದು ಚಪ್ಪಟೆಯ ಕಲ್ಲನ್ನು ಬೆಟ್ಟದ ತುದಿಯವರೆಗೂ ಹೊತ್ತೊಯ್ದು ಅಲ್ಲಿ ದಿವ್ಯ ತಪಸ್ಸು ಮಾಡುತ್ತಿದ್ದ ಶ್ರೀ ಶ್ರೀ ಡಿಲೈಟಾನಂದರಿಗೆ ಮಳೆಗಾಲದಲ್ಲಿ ಕನಸಾಯ್ತು. ನೂರೆಂಟು ಯೋಜನ ದೂರದಲ್ಲೊಂದು ಆರ್ತಧ್ವನಿ. ಸಂಸ್ಕೃತಿಯ ಪರಮಾಚಾರ್ಯರಾದ ಡಿಲೈಟಾನಂದರಿಗೆ ಅರ್ಥಧ್ವನಿಗಿಂತಲೂ ಕಠೋರವಾಗಿ ಆರ್ತಧ್ವನಿ ಕೇಳಿಸಿದ್ದು ಪರಮಾಶ್ಚರ್ಯವಾದರೂ ಇಲ್ಲಿ ನಡೆದ ಸಂಗತಿ ಅದೇ. ಹಗಲಿನಲ್ಲಿ ಚೆನ್ನಾಗಿ ಮೈಮುಚ್ಚಿಕೊಂಡಿದ್ದ ಬಟ್ಟೆಯನ್ನು ಸಂಜೆಯ ವೇಳೆಗೆ ಹರಿದುಕೊಂಡು ರಾತ್ರಿಯ ಛಳಿ ಆವರಿಸುತ್ತಲೇ ಲೋಕವನ್ನು ಬೆದರಿಸುವಂತೆ ಅರ್ಥಾತ್ ಪ್ರಗತಿಪರನಾದ ನಡು-ವಯಸ್ಕನನ್ನು ತಮ್ಮ ದಿವ್ಯಚಕ್ಷುಗಳಿಂದ ಕಂಡರು ಶ್ರೀ ಗುರು. ಶ್ರೀಗಳು ಬಿಜಯಂಗೈದರು ಎನ್ನುವುದು ಗೌರವಸೂಚಕವಾದರೂ, ಯಥಾವತ್ ಸನ್ನಿವೇಶದಲ್ಲಿ ಬೆಟ್ಟದಿಂದಲೇ ಉರುಳಿಕೊಂಡು ನೂರೆಂಟು ಯೋಜನದ ದೂರವನ್ನು ತಲುಪಿದ ಡಿಲೈಟಾನಂದರು ವತ್ಸಾ ಎಂದು ಸಂಭೋದನೆ ಮಾಡಿದರು.
ಯಾರೂ ಓದದ ಕೃತಿಗೆ ಮಹತ್ ಪ್ರಶಸ್ತಿ ಬಂದಂತೆ “ಟೊಂಯ್ಕ”ನು ಆಕಾಶವನ್ನು ನೋಡಿದ. ಕರೆದವರು ಭೂಮಿಯಲ್ಲಿದ್ದರೂ ಊಳಿಡುವುದೇ ಅಭ್ಯಾಸವಾದವನಿಗೆ ಆಕಾಶ ತಾನೇ ಗುರು?. ತಮ್ಮ ಮೈ ಒರೆಸುವುದಕ್ಕೆ, ತಲೆಗೆ ಕಟ್ಟಿಕೊಳ್ಳುವುದಕ್ಕೆ, ಉಪನ್ಯಾಸ ಮಾಡುವಾಗ ಹೊದ್ದುಕೊಳ್ಳುವುದಕ್ಕಿದ್ದ ಒಂದೇ ಶಾಲನ್ನು ಟೊಂಯ್ಕನಿಗೆ ಕೊಟ್ಟು ಗುರುಗಳು ಬೆಟ್ಟದ ಅಭಿಮುಖವಾಗಿ ನಡೆಯ ತೊಡಗಿದರು. ಟೊಂಯ್ಕರು ಯಾವುದೇ ಪ್ರತಿಕ್ರಿಯೆಯನ್ನು ನೀಡಲಾಗದೆ ಸಣ್ಣ ಕಂಪನದೊಂದಿಗೆ ( ಹಿಂದೆ ನಡೆದ ನೇಪಾಳದ ಭೂಕಂಪಕ್ಕೆ ಕಾರಣವಾಗಿ ಈ ಪರಿವರ್ತನೆ ಎನ್ನುವುದು “ಶ್ರೀ ಗುರು ಟೊಂಯ್ಕ ಚರಿತೆ” ಎನ್ನುವ ಮಹದ್ಗ್ರಂಥದಲ್ಲಿ ಉಲ್ಲೇಖವಾಗಿದೆ) ನಿಂತಲ್ಲೇ ಮೂರ್ಛೆ (ಸಮಾಧಿ!) ಹೊಂದಿದರು.
ಗುರುವಿನ ಪಾದ ಬೆಳೆಸಿದಲ್ಲಿ, ಟೊಂಯ್ಕರು ಹಣೆಯ ಅಚ್ಚನ್ನು ಉಳಿಸಿದರು. ಮುಂದೆ ಹೊದೆಯಲು ಶಾಲು ಇಲ್ಲದ ಗುರುಗಳು ಬೆಟ್ಟದ ಆಚೆ ಬದಿಯ ಗುಹೆಯಂತಹ ಒಂದು ಜಾಗದಲ್ಲಿ ಸನ್ಯಾಸವನ್ನು ಮುಂದುವರೆಸಿದ್ದಾಗಿ ವಿಷಯ.
ಹಾಗೇ ಉಂಡ ಬಟ್ಟಲಿಂದ ಬಿದ್ದ ನಾಲ್ಕೈದು ಅಗುಳು ಇರುವೆಗೋ ಕೋಳಿಗೋ ಆಗುವಂತೆ ಗುರು ಡಿಲೈಟಾನಂದರ ಶಾಲಿನಲ್ಲಿ ಸಿಕ್ಕಿಕೊಂಡಿದ್ದ ಒಂದೆರಡು ತುಂಡು ಉಪದೇಶಗಳನ್ನು ಯಥಾಪ್ರಕಾರ ಸಮಾಜದ ಮೇಲೆ ಬೀರುತ್ತಾ, ಟೊಂಯ್ಕರು ಶ್ರೀ ಶ್ರೀ ಟೊಂಯ್ಕಾನಂದ ಎನ್ನುವ ಪ್ರಸಿದ್ಧಿಯನ್ನು ಪಡೆದಿದ್ದಾರೆ.
ಪುಟ- ೧
ಮಳೆಗಾಲದ ಮಧ್ಯಭಾಗದಲ್ಲಿ ಶಿಷ್ಯನಾದುದರಿಂದ ಪುಷ್ಕಳವಾಗಿ ಗಡ್ಡೆಗೆಣಸು ಫಲಾಹಾರಾದಿಗಳು ಪುಷ್ಕಳವಾಗಿ ಒದಗಿತು ಶ್ರೀವರೇಣ್ಯರಿಗೆ. ತಮ್ಮ ಸಣಕಲಾದ ದೇಹಭಾಗದಲ್ಲಿ ಈ ಗಡ್ಡೆಗೆಣಸುಗಳು ಮತ್ತು ಫಲಗಳು ಸಂಬಂಧಪಟ್ಟ ಭಾಗಗಳನ್ನು ಒಪ್ಪಿಕೊಂಡೂ ಅಪ್ಪಿಕೊಂಡೂ ಸ್ವಾಮಿಗಳ ದೇಹವನ್ನು ಬೆಳೆಸಿ ಹೊಳೆಸಿದವು.
ಗುರು ಡಿಲೈಟಾನಂದರಿಗೆ ಶಿಷ್ಯೋತ್ತಮನಾದ ಟೊಂಯ್ಕನು ಯಾವುದೇ ಅತಿಮಾನುಷವಾದ ಕೆಲಸ ಮಾಡಲಿಲ್ಲ ಎನ್ನುವ ಒಂದು ಅಸಂತೃಪ್ತಿ ಬಿಟ್ಟರೆ ಬೇರೆ ಯಾವುದೇ ಖಿನ್ನತೆ ಇರಲಿಲ್ಲ.
ಗುಹೆಯಲ್ಲಿ ನಿದ್ರಿಸುತ್ತಿರುವಾಗ ಮೈಮೇಲೆ ಹತ್ತಲು ಬರುವ ಗೊದ್ದ, ಇರುವೆಗಳನ್ನು ನಿದ್ರಾಭಂಗವಾಗದಂತೆ ತಡೆದು ಹೊಸಕಿ ಹಾಕುವ ಕಲೆ ಟೊಂಯ್ಕಾನಂದರಿಗೆ ಗೊತ್ತಿತ್ತು. ಗುರುಗಳು ಏಳುವ ಮೊದಲು ಎಬ್ಬಿಸದೇ, ನಿದ್ದೆ ಬರುವ ಮೊದಲು ಮಲಗುವಂತೆ ಮಾಡುವ ಕಲೆಯೂ. ಹೀಗಾಗಿ ಗುರುವಿನ ಸಂಪೂರ್ಣ ಕಟಾಕ್ಷ ಶಿಷ್ಯನ ಮೇಲೆ.
ಹೀಗೊಂದು ದಿನ;
ಗುರು ಡಿಲೈಟಾನಂದರೂ ಶಿಷ್ಯನಾದ ಟೊಂಯ್ಕರೂ ಊರಿನ ಜಾತ್ರಾಮಹೋತ್ಸವದ ತಯಾರಿಯ ಬಗೆಗೆ ಕರೆಯಲ್ಪಟ್ಟ ಸಭೆಗೆ ಹೊರಟರು. ದಾರಿ ಮಧ್ಯೆ ಒಂದು ಅರಳೀ ಮರದ ಕೆಳಗೆ ವಿಶ್ರಮಿಸಲು ಕುಳಿತಿದ್ದಾಗ ಯಾವುದೋ ಒಂದು ಹಕ್ಕಿಯ ವಿಸರ್ಜನೆ ಟೊಂಯ್ಕಾನಂದರ ಮೇಲೆ ಬಿತ್ತು. ಮೊದಲೇ ಬೆಟ್ಟ, ಬಯಲು ಸ್ಥಳ, ಅಷ್ಟಾಗಿ ನೀರಿನ ವ್ಯವಸ್ಥೆ ಇಲ್ಲದುದರಿಂದ ಕೋಪವೂ ಬಂತು. ಗುರುಗಳು ಹಕ್ಕಿಗೆ ಕಲ್ಲು ತೋರಿಸಿ ಓಡಿಸಲು ಸಲಹೆ ಇತ್ತರು.
ಆದರೆ ಟೊಂಯ್ಕರು, ಸಂಯಮದಿಂದ ಹಕ್ಕಿಯನ್ನು ನೋಡಿ, “ಇನ್ನು ಓಡಿಸಿ ಫಲವೇನು? ಈ ಹಕ್ಕಿ ಅಲ್ಲಿಯೇ ಇದ್ದರೇ ಒಳಿತು. ಮತ್ತೆ ಮತ್ತೆ ವಿಸರ್ಜನೆ ಹಕ್ಕಿ ಮಾಡುವುದಿಲ್ಲ. ಒಂದು ವೇಳೆ ಈ ಹಕ್ಕಿಯನ್ನು ಓಡಿಸಿದರೆ ಇನ್ನೊಂದು ಹಕ್ಕಿ ಬಂದು ಮತ್ತೆ ವಿಸರ್ಜನೆ ಮಾಡುತ್ತದೆ. ವಿಸರ್ಜನೆಯ ಸುಖ ಎಲ್ಲರಿಗೂ ದೊಡ್ಡದು ತಾನೇ” ಎಂದು ಗುರುಗಳಲ್ಲಿ ಹೇಳಿದರು.
ಗುರುಗಳ ಮುಖದಲ್ಲಿ ನೂರಾ ಇಪ್ಪತ್ತರ ಬಲ್ಬು ಕಂಡಂತೆ ಪ್ರಕಾಶಮಾನವಾಯ್ತು. ಅಹಹ! ಭಲೇ ಶಿಷ್ಯ. ಇದು ಸರ್ವೋತ್ಕೃಷ್ಟವಾದ ಮಾತು. ನೀನು ರಾಗ ದ್ವೇಷಗಳನ್ನು ಕಳೆದುಕೊಂಡು ಶಿಷ್ಯೋತ್ತಮನಾಗಿದ್ದೀಯಾ ಎಂದರು.
ಪುಟ-೨
ಪೂರ್ವಾಶ್ರಮದಲ್ಲಿ ಟೊಂಯ್ಕರು ಬಹಳ ರಸಿಕರಾಗಿದ್ದುದರಿಂದ ಜಾನಪದ,ನಾಟಕಗಳ ಪ್ರಭಾವ ಅವರ ಮೇಲೆ ಬಹಳ. ಒಂದೊಮ್ಮೆ ತೆಲುಗು ಹರಿಕತೆಯನ್ನು ಕೇಳುತ್ತಾ ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಮಾತುಗಳು ಕಿವಿಗೆ ಬಿದ್ದಿತ್ತು. “ಸೃಷ್ಟಿ ಒಕ್ಕಟೇ, ದೃಷ್ಟಿಬೇಧಂತೋ ಅನ್ನಿ ಸಮಸ್ಯಾಲ್ಲು ವಸ್ತುಂದಿ” ಎನ್ನುವ ಮಾತು ಬಹಳವಾಗಿ ನಾಟಿತ್ತು.
ಹೀಗೆ ಜಾತ್ರೆಯ ಸಭೆಗೆ ಹೊರಟಿದ್ದ ಗುರು ಡಿಲೈಟಾನಂದರೊಂದಿಗೆ ಪರಮ ಶಿಷ್ಯನಾದ ಟೊಂಯ್ಕರು ಸಾಗಿದ್ದರು. ಸಭೆಯೂ ಮುಗಿಯಿತು. ಗುರುಗಳ ಪ್ರವಚನವೂ ಇದೆ ಎಂದು ಅರಿವಾದೊಡನೆ ಟೊಂಯ್ಕನ ಮುಖದಲ್ಲಿ ಸಮಾಧಾನವಾಯ್ತು.
ಅರಿವೇ ಗುರು ಎನ್ನುವುದನ್ನ ಬರೀ ಅರಿವೆ ಕೊಟ್ಟು ಸಾಧಿಸಿ ತೋರಿಸಿದ್ದ ಗುರು ಡಿಲೈಟಾನಂದರ ಮಾತುಗಳಿಗಿಂತಲೂ ಪ್ರವಚನದ ಮೂಲಕ ನಾಲ್ಕು ಜನರಿಗೆ ಪರಿಚಿತನಾಗುವ ಅವಕಾಶ ಟೊಂಯ್ಕರಿಗೆ ಬಂದಿತ್ತು.
ಜಾತ್ರೆಯ ದಿನ ಟೊಂಯ್ಕರ ಪೂರ್ವಾಶ್ರಮದ ಮಿತ್ರನೊಬ್ಬ ( ನಾಮ ಅಪ್ರಸ್ತುತ!) ಬಂದು ಟೊಂಯ್ಕನನ್ನು ವಿಲಕ್ಷಣವಾಗಿ ನೋಡಿದ. ಗುರುಗಳ ಪ್ರವಚನದ ಸ್ಪೋಟ ಆರಂಭವಾಗುತ್ತಿದ್ದಂತೆಯೇ ಟೊಂಯ್ಕರು ನಿಧಾನಕ್ಕೆ ವೇದಿಕೆಯ ಹಿಂಭಾಗಕ್ಕೆ ಬಂದು ಆ ಗೆಳೆಯನನ್ನು ಕಂಡರು. ( ಟೊಂಯ್ಕಾನಂದರ ಚರಿತ್ರೆಯಲ್ಲಿ ಇದು ಹನೂಮಂತನ ಅವತಾರವಾದ ಮಂಗನ ಇನ್ನೊಂದು ಅವತಾರದ ಅವತಾರ ಎಂದು ಚಿತ್ರಿತವಾಗಿದೆ).
ಕುರು ಒಣಗಿ ಹೋದಮೇಲೂ ಕುರುವಿದ್ದ ಜಾಗವನ್ನು ಕನಿಕರಿಸಿ ನೋಡಿದಂತೆ ಭಾಸವಾಗಿ ಗೆಳೆಯನ ಬಳಿಗೆ ಹೋದರು ಟೊಂಯ್ಕರು. ಪೂರ್ವಮೈತ್ರಿಯ ಆಲಿಂಗನದೊಂದಿಗೆ ಗಾಂಜಾದ ಬೀಡಿಯೂ ಟೊಂಯ್ಕರ ಪಾಲಾಯಿತು. ಗುಡಗುಡಿಯ ಸೇದಿ ನೋಡೋ ಎನ್ನುವ ಪದ ನೆನಪಾಗಿ ಟೊಂಯ್ಕರು ಎಳೆದೇ ಬಿಟ್ಟರು.
ನಿರಾಮಯಾ ನಿರಾಲಂಬಾ ಸ್ವಾತ್ಮಾರಾಮಾ ಸುಧಾಸೃತಿಃ ಎನ್ನುವಂತೆ ಎಲ್ಲವೂ ಆಗಿಬಿಟ್ಟಿತು ಟೊಂಯ್ಕರಿಗೆ. ಗೆಳೆಯ ಎಲ್ಲೋ ಹೋದ. ಒಬ್ಬಂಟಿಯಾಗಿ ನಿರಾಲಂಬಾ ಅವಸ್ಥೆಯಲ್ಲಿ ಸಭೆಯ ಜನರ ಮಧ್ಯೆ ಬಂದು ಕುಳಿತ. ಅಲ್ಲಿಂದ ಎದ್ದ, ಮುಂದೆ ಕುಳಿತ. ಜಾರಿದಂತಾಯ್ತು, ಸಾವರಿಸಿ ಕಿಸಕ್ಕನೇ ನಕ್ಕ. ಮುಂದೆ ಖಾಲಿ ಕುರ್ಚಿ ಇದೆ ಎಂದು ಕುಳಿತ, ಬಿದ್ದವಂಗೆ ನೆಲವಲ್ತೆ ಮಂಚಂ!
ಮುಂದೆ ನೆಲದಲ್ಲಿಯೂ ಇರಲಾರದೇ ವೇದಿಕೆಯ ಬಲಭಾಗಕ್ಕೆ ಬಂದು ಕಂಬಕ್ಕೊರಗಿ ನಿಂತ. ಅಕಾಲದಲ್ಲಿ ಮಳೆಯಾಗುವಂತೆ, ವೇದಿಕೆಯ ಮೇಲೆ ಪ್ರವಹಿಸುತ್ತಿದ್ದ ( ಪ್ರವಚಿಸುತ್ತಿದ್ದ) ಡಿಲೈಟಾನಂದರ ವಾಗ್ಝರಿಯೋ ಎಂಬಂತೆ ಮಳೆಯಾಗತೊಡಗಿತು. ಟಾರ್ಪಾಲಿನ್ ವ್ಯವಸ್ಥೆಯಿದ್ದರೂ ಜನರು ಹೆದರಿದರು.
ಕಂಬಕ್ಕೊರಗಿ ನಿಂತ ಟೊಂಯ್ಕರಿಗೆ ಯಾವುದರ ಪರಿವೆ? ಜನರೆಲ್ಲ ಕಂಬವಿದ್ದೆಡೆ ಸೇರಿದರು. ಡಿಲೈಟಾನಂದರು ಭಾಷಣ ನಿಲ್ಲಿಸಿದರು. ಅಷ್ಟರಲ್ಲಿ ಎಡಭಾಗದ ಕಂಬವೊಂದು ಹಾಗೇ ವಾಲಿದಂತಾಯ್ತು. ಟೊಂಯ್ಕರು ಬಲಭಾಗದ ಕಂಬವನ್ನು ಅಪ್ಪಿಕೊಂಡು ನಿಂತೇ ಇದ್ದರು.
ಹತ್ತು ನಿಮಿಷವಾಗುವಷ್ಟರಲ್ಲಿ ಎಡಭಾಗದ ಪೂರ್ಣ ಟಾರ್ಪಾಲಿನ್ ವ್ಯವಸ್ಥೆ ಬಿದ್ದು ಹೋಯಿತು. ವೇದಿಕೆಯ ಬಲಭಾಗದ ಮುಖ್ಯಕಂಬದ ಕೆಳಗೆ ಪ್ರಕಾಶಮಾನವಾಗಿ ಟೊಂಯ್ಕರು ಕಂಡರು.
ಯಾರೀ ಮನುಷ್ಯ? ನಾನು ಸಭೆಯಿಂದ ಬಂದು ಕಂಬ ಹಿಡಿದುಕೊಂಡಾಗಲೇ ನೋಡಿದೆ. ಎಂತಹ ಭವಿಷ್ಯವನ್ನು ಊಹಿಸಿದ್ದಾರೆ?
ನಾನೂ ನೋಡಿದೆ, ಆ ಕಂಬ ಅವರು ಹಿಡಿದುಕೊಂಡದ್ದಕ್ಕೇ ನಿಂತಿದೆ. ಬಹಳ ತೇಜಸ್ವಿ.
ಇಂತಹ ಮಾತನ್ನೆಲ್ಲ ಕೇಳುತ್ತಿದ್ದ ಡಿಲೈಟಾನಂದರು, ಶಿಷ್ಯಾ ಟೊಂಯ್ಕಾ ಎಂದರು. ಅಷ್ಟರಲ್ಲಿ ಮಳೆಗೋ, ಗಾಳಿಗೋ ಟೊಂಯ್ಕನವರ ನಿರಾಲಂಬಾ ಸ್ಥಿತಿ ಹೋಗಿ ಸ್ವ ಅವಲಂಬಕ್ಕೆ ಬಂದಿತ್ತು. ಗುರುಗಳೇ ಎಂದು ಅಡ್ಡಬಿದ್ದ.
ಸ್ವಲ್ಪ ಸಮಯ ಕಳೆದಮೇಲೆ ಸೃಷ್ಟಿ ಒಂದೇ, ದೃಷ್ಟಿ ಬೇರೆ ಎನ್ನುವುದು ಸ್ವಯಂ ಅರ್ಥವಾಯಿತು ಟೊಂಯ್ಕರಿಗೆ.
ಉಘೇ.. ಉಘೇ..
ಮುಂದುವರೆಯುವುದು.
ಹಕ್ಕುಗಳು © Ishwara Bhat K|ಈಶ್ವರ ಭಟ್ ಕೆ.
2 thoughts on “ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೧”