ಕನ್ನಡ ನಾಡಿನ ಅತ್ಯಂತ ದೊಡ್ಡ ಸೌಭಾಗ್ಯವೆಂದರೆ ಡಿವಿಜಿಯವರು ಬರೆದ ಮಂಕುತಿಮ್ಮನ ಕಗ್ಗವನ್ನು ಹೊಂದಿರುವುದು. ಕನ್ನಡದ ಭಗವದ್ಗೀತೆಯೆಂದೇ ಉದ್ಘೋಷಿಸಲ್ಪಟ್ಟ ಚೌಪದಿಗಳ ಸಂಗ್ರಹ. ವಸ್ತು, ವೇದಾಂತ, ವಿಷಯ ಎಲ್ಲವೂ ಸಮಗ್ರವಾಗಿ ನಾಲ್ಕು ಸಾಲುಗಳಲ್ಲಿ ಹಿಡಿದಿಟ್ಟುಕೊಂಡು, ಓದಿದಂತೆ ಒಂದೊಂದು ಚೌಪದಿಯೂ ಒಂದೊಂದು ಲೇಖನವಾಗುವಷ್ಟು ವಿಸ್ತಾರವನ್ನು ಹೊಂದಿದೆ ಎಂದರೆ ಅತಿಷಯೋಕ್ತಿಯಲ್ಲ.

ಎಲ್ಲಿಯೂ ಗೊಂದಲವಿಲ್ಲ. ಯಾವುದೂ ಅಪೂರ್ಣವಲ್ಲ. ಎಲ್ಲಾ ವಿಚಾರಗಳಿಗೂ ಉಪಸಂಹಾರವನ್ನು ಕೊಡುವಂತಹ ಕಗ್ಗ. ಪ್ರತಿದಿನ ಎಲ್ಲಾದರೂ ಒಂದು ಕಡೆ ಕಗ್ಗದ ಒಂದಾದರೂ ಸಾಲನ್ನು ನೋಡಬಹುದು. ವಾರ್ತಾಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ ಯಾರೋ ಬರೆದಂತಹ ಡೈರಿಗಳಲ್ಲಿ.. ಹೆಚ್ಚೇಕೆ ಕರ್ನಾಟಕ ಸಾರಿಗೆಯ ಬಸ್ಸುಗಳಲ್ಲಿ ಡೈವರಿನ ಹಿಂದೆ ಇರುವಂತಹ ಫಲಕದಲ್ಲಿ ಕಗ್ಗದ ಈ ಸಾಲುಗಳನ್ನು ಓದಬಹುದು. “ಬರದಿಹುದರೆಣಿನಿಕೆಯಲಿ ಬಂದಿಹುದ ಮರೆಯದಿರು, ಗುರುತಿಸೊಳಿತಿರುವುದನು ಕೇಡುಗಳ ನಡುವೆ , ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು । ಹರುಷಕದೆ ದಾರಿಯೆಲೊ – ಮಂಕುತಿಮ್ಮ”

ಈ ಕಗ್ಗಗಳಲ್ಲಿ ಇಂದು ಓದಿಗೆ ಸಿಲುಕಿದ ಒಂದು ಕವಿತೆಯ ಬಗೆಗೆ ಈ ಕೆಳಗೆ ಬರೆಯುತ್ತಿದ್ದೇನೆ. ಇದರ ಅರ್ಥ ಬಹಳ ಸುಲಭವಾದದ್ದು ಮತ್ತೆ ಸುಲಭಗ್ರಾಹ್ಯವಾದದ್ದು.

ಅಜ್ಞಾತವಾದುದನಭಾವವೆನೆ ನಾಸ್ತಿಕನು
ಅಜ್ಞೇಯವೆಂದದಕೆ ಕೈಮುಗಿಯೆ ಭಕ್ತ
ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ
ಸ್ವಜ್ಞಪ್ತಿಶೋಧಿ ಮುನಿ – ಮಂಕುತಿಮ್ಮ

ಅಜ್ಞಾತವಾದುದನ್ನು ಅಭಾವ ಎಂದು ತಿಳಿದುಕೊಂಡವನು ನಾಸ್ತಿಕ; ಅಜ್ಞೇಯಯವು ಅದು ಎಂದು ಅದಕೆ ಕೈಮುಗಿದರೆ ಆತ ಭಕ್ತ. ಅದು ಜಿಜ್ಞಾಸೆಗೆ ಯೋಗ್ಯವಾದದ್ದು ಎಂದು ಅದನ್ನು ಪರೀಕ್ಷಿಸಿದರೆ ಆತ ವಿಜ್ಞಾನಿ. ಸ್ವಜ್ಞಪ್ತಿಶೋಧ – ಸ್ವಂತ ಅನುಭವ ಮತ್ತು ಆಲೋಚನೆಗಳಿಂದ ಅದನ್ನು ಅರಿತುಕೊಳ್ಳುವವನು ಮುನಿ ಎಂದು ಇದರ ಅರ್ಥ,.

ದೈವದ ಬಗೆಗೆ ನಮಗೆ ಗೊತ್ತಿಲ್ಲ. ಹಾಗಾಗಿ ದೈವ ಇಲ್ಲ ಎನ್ನುವುದು, ಮತ್ತು ಅದನ್ನು ಪ್ರತಿಪಾದಿಸುವುದು ನಾಸ್ತಿಕನ ಹಾದಿ. ಹಾಗೆಯೇ ದೈವದ ಇರುವಿಕೆಯ ಬಗೆಗೆ ಗೊತ್ತಿಲ್ಲ, ಆದರೆ ಅದನ್ನು ನಂಬಿಕೊಂಡು ಬದುಕುವವನು ಭಕ್ತ. ಭಕ್ತನಾದವನಿಗೆ ಅದರ ಬಗೆಗೆ ತಿಳುವಳಿಕೆ ಅಗತ್ಯವಿಲ್ಲ, ಒಟ್ಟಿನಲ್ಲಿ ನಂಬಿಕೆ.

ದೈವವೆಂದರೆ ಏನು? ಅದನ್ನು ಹೇಗೆ ಪರೀಕ್ಷಿಸುವುದು. ಯಾವ ಸಾಧ್ಯತೆಗಳಿಂದ ಅದನ್ನು ನಂಬುವುದು ಎಂದೆಲ್ಲಾ ಪರೀಕ್ಷೆಗಳನ್ನು ಮಾಡುವವನು ವಿಜ್ಞಾನಿ. ಆತನು ಯಾವುದೇ ವಿಚಾರಗಳನ್ನು ಸಾಧನಗಳಿಂದ ಅಳೆದು, ಪರೀಕ್ಷಿಸಿ ಪಡೆದುಕೊಳ್ಳುತ್ತಾನೆ. ಇನ್ನು ಸ್ವಂತ ಅನುಭವಗಳಿಂದ, ಯೋಚನೆಗಳಿಂದ ಸಾಕ್ಷೀಕರಿಸಿಕೊಳ್ಳುವವನು ಮುನಿ. ಪರವಸ್ತುಗಳ ಹಂಗಿಲ್ಲದೆ ತನ್ನಿಂದಲೇ ಯೋಚಿಸಿಕೊಂಡು ವಿಚಾರವನ್ನು ಅರಿತುಕೊಳ್ಳುವವನು, ಜಿಜ್ಞಾಸೆ ಮಾಡಿಕೊಳ್ಳುವವನು.

ಉದಾಹರಣೆಗೆ ನಾವು ಯಾವುದೋ ವಿಮಾನಯಾನದಲ್ಲಿದ್ದೇವೆ. ಅಲ್ಲಿ ಒಬ್ಬರು ಈಗ ತಯಾರಾದ ಬಿಸಿ ಚಹಾ ಸೇವನೆಗೆ ಲಭ್ಯವಿದೆ ಎನ್ನುತ್ತಾರೆ. ಆಗ ನಾಸ್ತಿಕನು ಅದನ್ನು ಒಪ್ಪುವುದಿಲ್ಲ ಮತ್ತು ಚಹಾ ಬೇಡವೆನ್ನುತ್ತಾನೆ. ಭಕ್ತನು ಚಹಾವನ್ನು ತೆಗೆದುಕೊಂಡು ಕುಡಿಯುತ್ತಾನೆ. ವಿಜ್ಞಾನಿ, ಚಹಾವನ್ನು ಈಗ ಹೇಗೆ ತಯಾರಿಸಲಾಯಿತು? ಯಾರು ತಯಾರಿಸಿದರು? ಎಷ್ಟು ಹೊತ್ತಾಯಿತು ಎಂದು ಅದರ ಸಾಧ್ಯತೆಗಳನ್ನು ಹುಡುಕುತ್ತಾನೆ. ಮುನಿ ತಾನು ಚಹಾವನ್ನು ತಯಾರಿಸಿದ ಬಗೆಗಳನ್ನು ಕಲ್ಪಿಸಿಕೊಂಡು, ಯೋಚಿಸಿಕೊಂಡು ಹೇಗೆ ಮಾಡಿರಬಹುದು? ಯಾವುದಿಲ್ಲಾ ಬಗೆಗಳು ಇದೆ ಎಂದು ಚಿಂತಿಸಿ ಕಂಡುಕೊಳ್ಳುತ್ತಾನೆ.

ಇಲ್ಲಿ ಯಾರ ಬಗೆಯೂ ತಪ್ಪಲ್ಲ. ಇದು ವಿವಿಧ ಜನರ ವಿವಿಧ ಬಗೆಯಷ್ಟೇ. ಆದರೆ ಮುನಿ/ಋಷಿಯ ಮಾದರಿ ಬಹಳ ಉತ್ತಮವಾದುದು. ಇದನ್ನು ಬೇರೆ ವಿಚಾರಗಳಿಗೂ ತಾಳೆ ಹಾಕಿಕೊಳ್ಳಬಹುದು.

ಕಛೇರಿಗಳಲ್ಲಿಯೂ ಕೂಡ ಈ ತೆರನಾದ ಜನರು ಇರಬಹುದು, ಇರುತ್ತಾರೆ. ಯಾವುದೋ ಪ್ರಾಜೆಕ್ಟ್ ಬಂದಾಗ ತಕ್ಷಣ ನಿರಾಕರಿಸುವವರು ಒಂದು ಬಗೆಯ ನಾಸ್ತಿಕರು. ಬಂದ ಪ್ರಾಜೆಕ್ಟುಗಳನ್ನು ಹಾಗೆಯೇ ಒಪ್ಪಿಕೊಂಡು ಮುಂದುವರೆಯುವವರು ಭಕ್ತರು. ಯಾವುದೆಲ್ಲಾ ಉಪಕರಣಗಳು ಬೇಕೆಂದು ಹುಡುಕುವವರು ವಿಜ್ಞಾನಿಯ ಮಾದರಿಯವರು. ಆಲೋಚಿಸಿ, ಅನುಭವದಿಂದ ಪ್ರಾಜೆಕ್ಟನ್ನು ತೆಗೆದುಕೊಳ್ಳುವವರು ಮುನಿ.

Leave a Reply

This site uses Akismet to reduce spam. Learn how your comment data is processed.