ಹರಟೆಮಲ್ಲರ ತಂಡ ದೇಗುಲದ ಜಗಲಿಯಲಿ
ಸಂಜೆಯಲಿ ಸೇರುವರು ಮಾತಿಗಾಗಿ;
ಊರು ಪರವೂರುಗಳ ಸುದ್ಧಿಯನು ಬೆರೆಸುವರು
ಸುಮ್ಮನುರಿವುದು ಮಾತು ತಣ್ಣಗಾಗಿ.
ದೇಗುಲದ ಅರ್ಚಕರು ಪೂಜೆ ಮಿತಿಮಾಡುವರು
ಇವರ ಮಾತಿನ ಸುಳಿಗೆ ಮೋಹಗೊಂಡು
ನಂದಿಬಟ್ಟಲ ಹೂವು ಹಿತವಾಗಿ ಅರಳುವುದು
ಈ ಮಾತನೆಲ್ಲವನು ಹೀರಿಕೊಂಡು!
ಒಣಮರದ ಎದುರಿದ್ದ ಮನೆಯ ಆ ಹಿರಿಮಗಳು
ಗಾಡಿಯಲಿ ಓಡಾಡುತಿದ್ದ ಬಗೆಯ
ಹೊಸದಾಗಿ ಬಂದಿರುವ ದಂಪತಿಗಳೂ ಸೊಗಸು
ಗಂಡ ಬಲು ಜೋರಿಹನು ಕುಡುಕರೊಡೆಯ!
ದೂರದೂರಿನ ರೈತ ಬೆಳೆದಿದ್ದ ಕುಂಬಳವ
ನಮ್ಮೂರ ಜನರೂನು ಬೆಳೆಯಬೇಕು;
ಹೊಸರೋಗ ಎಂದೇನು ಕಳವಳವೆ ಬೇಕಿಲ್ಲ
ನಿಂಬೆರಸ ಬೇವುಗಳ ತಿನ್ನಬೇಕು.
ಚೀಟಿದುಡ್ಡೆಲ್ಲವೂ ಚಿಟ್ಟೆಯಂತೆಯೆ ಹಾರಿ
ಹೊಸದು ಸಾಲದ ಬಡ್ಡಿ ಜಾಸ್ತಿಯಂತೆ
ಮತ್ತೊಂದು ವಿಷಯಕ್ಕೆ ಹರಟೆ ಮನಮಾಡುವುದು
ನೋಡೇನೊ ಕಚ್ಚುವುದು ಸೊಳ್ಳೆ ಬಂತೆ?
ಬೀದಿದೀಪಗಳುರಿದು ಎಲ್ಲ ಮುಖವೂ ಕಂಡು
ಅಂತಸ್ತಿನಂತರವು ಎದೆಗೆ ಬರಲು;
ಮನೆಯ ದಾರಿಯ ಹುಡುಕಿ ಜನರೆಲ್ಲ ತೆರಳಿದರು
ಹೆಚ್ಚಾದ ತಿಳುವಳಿಕೆಯೊಂದು ಅಮಲು!