ಹಾದಿಯಲಿ ಸಿಕ್ಕಿದ್ದ ಗೆಲ್ಲು ತಂದೆನು ಮನೆಗೆ
ಮಣ್ಣಿನಲಿ ಬುಡವಿಟ್ಟೆ, ನೀರನೆರೆದೆ
ಒಮ್ಮೆ ಚಿಗುರಿದರಾಯ್ತು ದೇವನಿಗೆ ಕೈ ಮುಗಿವೆ
ಎಂದೆನುತ ದಿನಕೊಮ್ಮೆ ಕನಸುತಿದ್ದೆ.
ಚಿಗುರಿತದು ಒಂದು ದಿನ, ನೀರನೆರೆಯುತಲಿದ್ದೆ
ಬೆಳೆಯಲದು ಹೊಳೆಯಲದು ಎಂದು ದುಡಿದೆ
ಎಲೆಬೆಳೆದು ಗೆಲ್ಲರಳಿ ಮೊಗ್ಗು ಮೂಡುವ ದಿನಕೆ
ಗಿಡದ ಜೊತೆಗೂ ಮಾತು ಉಳಿಸುತಿದ್ದೆ.
ಯಾವ ಹೂ ಬಿಡುವುದೋ? ದೊಡ್ಡದೇ ಸಣ್ಣದೇ
ಹಳದಿಯದೆ? ಬಿಳಿಯದೇ? ಕೆಂಪು ತಾನೆ?
ಎಷ್ಟು ಗಳಿಗೆಯ ಹೂವು? ಕೊಯ್ಯುವುದೆ ಬಿಡುವುದೆ?
ಮೊಗ್ಗೊಡೆವ ಮೊದಲಿಷ್ಟು ಆಶೆ ಬೇನೆ!
ಹೂವರಳಿ ಬಾಡಿತು, ಹೀಚು ಕಾಯಿಯ ಕಂಡೆ
ಚಟ್ನಿಗೋ ಸಾರಿಗೋ ಬಾರದಿದು ಎಂದು;
ಆಸೆಯಲಿ ತಂದಿದ್ದ ಒಂದು ಗೆಲ್ಲಿನ ಬುಡದಿ
ಹೊಸತು ಮೆಂತೆಯ ಸೊಪ್ಪು ಸೊಗಸಿತಿಂದು.