ಮಲ್ಲಿಗೆಯ ಮೊಗ್ಗುಗಳು ಅರಳಿಲ್ಲವೆಂದುನುತ
ಸಿಡುಕಿದರೆ ಹೂವಾಯ್ತೆ, ಗಂಧ ಬಂತೆ?
ಅವಳ ದಾರಿಯ ಕಾದು ಕುಳಿತ ಪ್ರೇಮಿಯ ಜಗಕೆ
ಮುನಿಸು ಬಂದರೆ ಪ್ರೇಮ ಉಳಿಯದಂತೆ!

ತಡವಾದರೇನಂತೆ ಬಂದಳಲ್ಲಾ ಎನುತ
ಅಡಗಿಸಿಹ ಹೂಗಳನು ನೀಡಬೇಕು;
ಬೇಗ ಹೋಗುವೆನೆಂಬ ಅವಳ ಮಾತಿನ ನಡುವೆ
ಹೊಸತು ಪದಗಳ ಪದ್ಯ ಕಟ್ಟಬೇಕು.

ಕತ್ತಲಿನ ಕಾರ್ಮೋಡ ಸುತ್ತಲೂ ಬಂದಾಗ
ನಗೆಯ ಮಿಂಚುಗಳನ್ನು ಹರಡಬೇಕು;
ತೊರೆವ ಕ್ಷಣದಲಿ ಕಣ್ಣು ಕತ್ತಲೆಯೆ ಆಗುವುದು
ಪ್ರೇಮದಲಿ ಮೈಮರೆತು ನೆನೆಯಬೇಕು.

ಮಲ್ಲಿಗೆಯು ಅರಳುವುದು ತಡವಾದರೇನಂತೆ
ಹಿತವಾದ ಭಾವಗಳು ತಾನೆ ಪ್ರೇಮ?
ಸಹಜದಲಿ ದೊರೆತದ್ದು ಮನುಜ ಪುಣ್ಯವು ತಾನೆ
ಹೊಸಕಿದರೆ ಉಳಿದೀತೆ ನಿತ್ಯಕಾಮ!

Leave a Reply

This site uses Akismet to reduce spam. Learn how your comment data is processed.