ನಸುಬೆಳಗು ಎದ್ದು ಆಟೋವನ್ನು ಒರೆಸಿ ಕನ್ನಡಿಯನ್ನು ನೋಡಿ ಫಳ್ ಎಂದು ಹಲ್ಕಿರಿದು ಬಾಡಿಗೆದಾರರಿಗಾಗಿ ಆಚೀಚೆ ನೋಡುತ್ತಿದ್ದ. ಬಹಳ ಬಿರುಸಾಗಿ ಬಂದಾಂತನೊಬ್ಬ ಹೊರಡು ಮೆಜೆಸ್ಟಿಕ್ಕಿಗೆ ಎಂದು ಆಜ್ಞಾಪಿಸಿದ.
ಸರಿ, ಸಾರ್ ಕೂತ್ಕಳ್ಳಿ. ಮೀಟರ್ ಮೇಲೆ ಐವತ್ತು ಕೊಡಿ
ಆಯ್ತು ಕಣ್ರೀ, ಬೇಗ ಹೋಗಿ.. ಯಶವಂತಪುರದಿಂದ ಹತ್ಬೇಕಿತ್ತು ಟ್ರೈನು.. ಇನ್ನು ಹತ್ನಿಮಿಷ ಇರೋದು.. ಮೆಜೆಸ್ಟಿಕ್ಕಿಂದ ಹತ್ತಿದ್ರಾಯ್ತು.. ಬೇಗ ಹೊರಡಿ.
~
ಮೆಜೆಸ್ಟಿಕ್ ಆಟೋಗಳ ಪಾಲಿಗೆ ಸ್ವರ್ಗ. ಬೆಳಗ್ಗಿನ ಬೋಣಿಯೇ ನೂರಾ ಇಪ್ಪತ್ತು ರುಪಾಯಿ.
ಆಟೋ.. ಆಟೋ..
ಹ್ಮ್ಂ.. ಎಲ್ಲಿಗೆ ಮೇಡಂ?
ಇಂಡಿಯನ್ ಎಕ್ಸ್’ಪ್ರೆಸ್ ಸಾರ್.
ಸರಿ.
~
ಇಳಿಸಿ, ಬಸ್ ಸ್ಟಾಂಡ್ ಬದಿಗೆ ಬಂದು ನಿಂತ. ಎಂಟು ಘಂಟೆ ತೋರಿಸುತ್ತಿತ್ತು ವಾಚು. ಇನ್ನೊಂದು ಸವಾರಿ ಆದ್ಮೇಲೆ ತಿಂಡಿ ತಿನ್ನೋಣ.
ಆಟೋ..
ಹೇಳಿ ಸಾರ್
ಎಂಜಿ ರೋಡು.
ಬನ್ನಿ ಸಾರ್.
~
ಎಂಜಿ ರೋಡಲ್ಲಿ ಹೋಟೇಲೆಲ್ಲಿದೆ? ಹತ್ತು ಘಂಟೆಗೆ ತಿನ್ನೋಣ.
ಆಟೋ.. ಆಟೋ..
ಯಾವ್ ಕಡೆ?
ವಿವೇಕ್ ನಗರ
ಆ ಕಡೆ ಬರಲ್ಲ ಮೇಡಂ..
ಯಾಕ್ರೀ? ಯಾರೂ ಬರಲ್ಲ ಅಂತೀರಾ? ಐವತ್ತು ರುಪಾಯಿ ಜಾಸ್ತಿ ಕೊಡ್ತೀನಿ..
ಸರಿ ಮೇಡಂ.. ಬನ್ನಿ.
~
ಟೊಮೆಟೋ ಬಾತ್. ಖಾರಾ.. ಆದ್ರೂ ಹೊಟ್ಟೆಗೆ ಒಳ್ಳೇದಂತೆ. ಬೆಳಗ್ಗಿಂದ ಐನೂರು ಆಗಿರ್ಬೇಕು ಕಲೆಕ್ಷನ್ನು.
ಆಟೋ..
ಹೇಳಿ ಸಾರ್
ಕಾರ್ಪೋರೇಶನ್ ನಡ್ಯಪ್ಪ.
ಆಯ್ತು ಸಾರ್..
~
ವಯಸ್ಸಾದೋರ್ನ ಕೂರಿಸ್ಬಾರ್ದು.. ಹತ್ತು ರುಪಾಯಿ ಕಡ್ಮೇನೇ ಕೊಟ್ಟ. ಇರ್ಲಿ.
ಆಟೋ,
ಹೇಳಿ.
ವಿಲ್ಸನ್ನು ಗಾರ್ಡನ್ನು.
ಬರ್ರಿ.

~
ಆಟೋ,
ಹೇಳಿ,
ಮಡಿವಾಳ ಪೋಲಿಸ್ ಸ್ಟೇಷನ್ನು
ಬನ್ನಿ.
~
ಆಟೋ ಆಟೋ..
ಹೇಳಿ,
ಬೊಮ್ಮನಹಳ್ಳಿ
ಬನ್ನಿ.
~
ಘಂಟೆ ಮೂರು. ಊಟ ಸರಿಯಾಗಿಲ್ಲ.. ಮುದ್ದೆನಾದ್ರು ತಿನ್ಬೋದಿತ್ತು. ಚಪಾತಿ ಫುಲ್ ಮೈದಾನೇ ಇರ್ಬೇಕು..
ಏನು ಯಾರೂ ಇಲ್ಲ, ಎಲ್ಲಾ ಬಸ್ಸಲ್ಲೇ ಹೋಗ್ತವ್ರಾ?
ಆಟೋ..
ಹೇಳಿ,
ಬೊಮ್ಮಸಂದ್ರ..
ಅದೆಲ್ಲಿ ಬರತ್ತೆ?
ನಾನು ಹೇಳ್ತೀನಿ, ನೀವು ಹೋಗಿ..
.
.
ಇಷ್ಟೊಂದು ದೂರನಾ? ಇನ್ನು ಬರಲ್ಲ ರೀ..
ಇನ್ನು ಸ್ವಲ್ಪನೇ ಇರೋದು.. ಜಿಗಣಿ ಲಿಂಕ್ ರೋಡ್ ಹತ್ರ ಬಿಡಿ, ಸಾಕು.
ಸರಿ.
~

ಆಟೋ..
ಯಾವ್ ಕಡೆಗೆ?
ಅತ್ತಿಬೆಲೆ..
ಬರಲ್ಲಪ್ಪ..

~
ರಾತ್ರಿ ಏಳು ಘಂಟೆ… ಅಯ್ಯೋ ಇನ್ನು ಯಶವಂತಪುರಕ್ಕೆ ಹೋಗೋದ್ಯಾವಾಗಾ????


ಹೀಗೆ ಆಟೋದ ಮನುಷ್ಯ ರಾತ್ರಿ ಹನ್ನೆರಡುವರೆಗೆ ಮನೆಗೆ ಬಂದ.. ಹಣವೇನೋ ಬಹಳವಿತ್ತಂತೆ.

Leave a Reply

This site uses Akismet to reduce spam. Learn how your comment data is processed.