ಏಳನೇ ಕ್ಲಾಸ್ ಮುಗಿಸಿ 8ನೇ ಕ್ಲಾಸಿಗೆ ಕಾಲಿಟ್ಟಿದ್ದೆ. ಹೆಸರಿನಲ್ಕಿ ಕಾಲೇಜು ಇದ್ದರೂ ಅದು ಹೈಸ್ಕೂಲೇ ಆಗಿತ್ತು. ಕೊನೆಯಲ್ಲಿ ಪೆರಡಾಲ ಅಂತ ಇದ್ದರೂ, ಅದು ಇದ್ದದ್ದು ನೀರ್ಚಾಲಿನಲ್ಲಿ. ನನ್ನ ಕ್ಲಾಸಿನಲ್ಲಿ ಹೊಸಬರು ಹಾಗೆಯೇ ಅನುಭವಿಗಳು ಇದ್ದರು. ಅನುಭವಿಗಳೆಂದರೆ ಹಿಂದಿನ ವರ್ಷ ಇದೇ ಕ್ಲಾಸಿನಲ್ಲಿ ಇದ್ದು ಬೆಂಚಿಗೆ ಅಂಟಿಕೊಂಡವರು ಈ ಅನುಭವಿಗಳೇ. ನಮಗೆ ಅಂದರೆ ಹೊಸಬರಿಗೆ ಮಾರ್ಗದರ್ಶಕರು.
ಅಧ್ಯಾಪಕರು ತರಗತಿಗೆ ಬಂದು ತಮ್ಮ ಪರಿಚಯ ಮಾಡುವ ಮುನ್ನವೇ ಅವರ ಪರಿಚಯವಾಗಿತ್ತು. ಅದು ಅನುಭವಿ ಕಿಲಾಡಿಗಳಿಂದ. ಅಂತಿಂಥ ಕಿಲಾಡಿಗಳಲ್ಲ. ಪ್ರಚಂಡ ಕಿಲಾಡಿಗಳು. ಅವರು ಶಿಕ್ಷಕರಿಗೆ ಇಟ್ಟ ಹೆಸರನ್ನು ಕೇಳಿದರೆ ಖಂಡಿತ ಬೆಚ್ಚಿ ಬೇಳ್ತೀರಾ.ಹಾಗಾದರೆ ಆ ಹೆಸರುಗಳು ಯಾವುವು?
ಒಬ್ಬರು ಚೀನಿಕಾಯಿ ಮತ್ತೊಬ್ಬರು ಕುತ್ತಗುಡ್ಡೆ. ಇನ್ನೊಬ್ಬರು ಗಡಿಬಿಡಿ ಹೀಗೆ… ಮಾಸ್ಟ್ರಿಗೆ ಹೆಸರಿಟ್ಟವರು ಹೆಡ್ ಮಾಸ್ಟ್ರಿಗೆ ಹೆಸರಿಡದೆ ಇರ್ತಾರಾ? ಅವರಿಗೂ ಇಟ್ಟಿದ್ದರು. ಆಡು ಮಾಸ್ಟ್ರು ಅಂತ. ಅದು ಅವರಿಗೆ ಅನ್ವರ್ಥನಾಮವೇ ಆಗಿತ್ತು. ಯಾಕೆಂದರೆ ಅವರು ಸದಾ ಎಲೆ ಅಡಿಕೆ ಜಗಿಯುತ್ತಿದ್ದರು.

ಮಳೆಗಾಲದಲ್ಲಿ ಈ ಹೆಡ್ ಮಾಸ್ಟರ್ ಮಳೆಯಲ್ಲಿ ಒದ್ದೆಯಾಗಲಿ ಅಂತ ನಾವು ಯಾವಾಗಲೂ ಪ್ರಾರ್ಥನೆ ಮಾಡುತ್ತಿದ್ದೆವು. ಯಾಕೆ ಗೊತ್ತಾ? ಅವರು ಒದ್ದೆಯಾದರೆ ಶಾಲೆಗೆ ರಜೆ ಘೋಷಿಸಲ್ಪಡುತ್ತದೆ ಎನ್ನುವುದು ಅಲಿಖಿತ ಶಾಲಾ ನಿಯಮ. ಮಾಸ್ಟ್ರ ಬಗ್ಗೆ ಮಾತನಾಡುತ್ತ ಎಲ್ಲೊ ಹೋಗಿ ಬಿಟ್ಟೆ. ಎಲ್ಲಾ ಸರಿ ಶಿಕ್ಷಕರಿಗೆ ಅಡ್ಡ ಹೆಸರು ಯಾಕೆ ಇಟ್ಟರು. ಬಹುಶ: ಗುರುಗಳ ಹೆಸರು ಹೇಳಬಾರದು. ಅದಕ್ಕಿರಬಹುದು ಅಂತ ತಿಳಿದು ಕೊಂಡಿದ್ದೆ. ಈ ಅಡ್ಡ ಹೆಸರನ್ನು ಯಾರಿಟ್ಟರೋ ಗೊತ್ತಿಲ್ಲ.ನಮಗಂತೂ ಅದು ನಮ್ಮ ಸೀನಿಯರ್ಸ್ ಗಳಿಂದ ಬಂದ ಕೊಡುಗೆಯಾಗಿತ್ತು. ಅಡ್ಡ ಹೆಸರು ಶಿಕ್ಷಕರಿಗೆ ಮಾತ್ರವಲ್ಲ ವಿದ್ಯಾರ್ಥಿಗಳಿಗೂ ಸಿಕ್ಕಿತ್ತು. ಹಾಗೆ ನಮಗೆ ಹಸರಿಟ್ಟ ಶಿಕ್ಷಕರೆಂದರೆ ಚೀನಿಕಾಯಿ, ಅವರು ಜಟಾಯು ಅಂತಲೇ ಕರೆಯುತ್ತಿದ್ದರು. ಅವರು ಹಾಗೆ ಕರೆಯುತ್ತಿದ್ದುದು ದ್ವೇಷದಿಂದಲ್ಲ. ಪ್ರೀತಿಯಿಂದ. ನಿಜ ಹೇಳಬೇಕೆಂದರೆ ಹೈಸ್ಕೂಲಿನಲ್ಲಿ ನನಗೆ ಅತ್ಯಂತ ಆತ್ಮೀಯರಾಗಿದ್ದ ಶಿಕ್ಷಕರು ಅವರೇ ಆಗಿದ್ದರು. ಒಬ್ಬರೇ ಒಬ್ಬರನ್ನು ಬಿಟ್ಟರೆ ಉಳಿದೆಲ್ಲಾ ಶಿಕ್ಷಕರು ನನಗೆ ತುಂಬಾ ಇಷ್ಟ.

ಆ ಒಬ್ಬ ಶಿಕ್ಷಕರ ಪಾಠ ನನಗೆ ಮಾತ್ರವಲ್ಲ. ಯಾರಿಗೂ ಇಷ್ಟವಾಗಲು ಸಾಧ್ಯವೇ ಇಲ್ಲ. ಅವರ ಬೋಧನೆ ಇಷ್ಟಪಟ್ಟವರು ಯಾರಾದರು ಇದ್ದರೆ ಅದು ಶತಮಾನದ ಅದ್ಭುತವೇ ಸರಿ. ಹಾಗಾದರೆ ಅವರಿಗೆ ಅಡ್ಡ ಹೆಸರಿಡಲಿಲ್ಲವೇ? ಅಡ್ಡ ಹೆಸರೇನು? ಉದ್ದ ಹೆಸರನ್ನು ಇಟ್ಟಿದ್ದರು. ಅಡ್ಡ ಹೆಸರು ವರ್ಣ ತಾರತಮ್ಯದ ಗೊಂದಲ ಎಬ್ಬಿಸ ಬಹುದೆಂದು ಅದನ್ನು ನಾನಿಲ್ಲಿ ಪ್ರಸ್ಥಾಪಿಸುವುದಿಲ್ಲ.
ಅವರ ಬೋಧನೆ ತಮಗೆ ಸಿಗದಿರಲಿ ಎಂದು ವರ್ಷಾರಂಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ದೇವರಲ್ಲಿ ಬೇಡಿಕೊಳ್ಳುತ್ತಿದ್ದರು. ದೇವರಾದರು ಏನು ಮಾಡಿಯಾರು? ಎಲ್ಲ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಲು ಹೋದರೆ ಅವರನ್ನು ಯಾವ ಕ್ಲಾಸಿಗೆ ಹಾಕಬೇಕು? ಅಂತೂ ನಮ್ಮ ಕ್ಲಾಸಿಗೆ ಬಂದೇ ಬಿಟ್ಟರು. ಬಹುಶ: ನಮ್ಮ ಭಕ್ತಿ ಕಡಿಮೆ ಇದ್ದಿರಬೇಕು.
ನಾನು ಕೇಳಿಸಿ ಕೊಂಡ ಅವರ ಮೊದಲ ಮಾತೆಂದರೆ “ಬಿದ್ದು ಕೊಳ್ಳಿ ಪಲ್ಲದಲ್ಲಿ”
ಅವರ ಅಭಿಪ್ರಾಯದಲ್ಲಿ: ನಮ್ಮ ಕ್ಲಾಸ್ ಪಲ್ಲ. ನಾವೆಲ್ಲರು ಎಮ್ಮೆಗಳು. ನಮ್ಮ ಸಹವಾಸದ ಫಲವೋ ಎನೊ, ಅವರು ನಿಂತುಕೊಂಡು ಪಾಠ ಮಾಡಿದ್ದೇ ಇಲ್ಲ. ಕ್ಲಾಸಿಗೆ ಬಂದೊಡನೆ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದ ಅವರು, ಏಳುತ್ತಿದ್ದುದು ಆ ಪೀರಿಯೆಡ್ ಮುಗಿದ ಮೇಲೆಯೇ. ಅವರ ಬೋಧನೆಯಲ್ಲಿ ಹಾಸ್ಯವಂತೂ ಇರುತ್ತಿರಲಿಲ್ಲ. ಆದರೆ ಅಪಹಾಸ್ಯಕ್ಕೆ ಕೊರತೆಯಿರಲಿಲ್ಲ.’ಮದ್ರಮಣ’ ಇದರ ಅರ್ಥವನ್ನು ಮಕ್ಕಳ ಹತ್ರ ಅಗಾಗ ಹೇಳಿಸಿ ಖುಷಿ ಪಡುತ್ತಿದ್ದ ಇವರ ಪಾಂಡಿತ್ಯದ ಪರಮಾವಧಿ ಕಿರಿಕಿರಿ ಉಂಟು ಮಾಡುತ್ತಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಿರುವಾಗ ಇವರ ಕ್ಲಾಸಿನಲ್ಲೂ ಇಂದು ಹಾಸ್ಯ ಪ್ರಸಂಗ ನಡೆಯಿತು. ಅದೇನು ಅಂತ ಹೇಳ್ತೀನಿ ಕೇಳಿ.

ಕಾಲು ವಾರ್ಷಿಕ ಪರೀಕ್ಷೆ ಮುಗಿದಿತ್ತು. ಭಯ ಆರಂಭವಾಗಿತ್ತು. ಭಯ ಬೇರೆ ಯಾರದ್ದು ಅಲ್ಲ. ಈ ಪಂಡಿತ ಶಿಕ್ಷಕರದ್ದು. ಅವರು ಉತ್ತರ ಪತ್ರಿಕೆ ಕೊಡುವ ದಿನ ನಮಗಂತೂ ಕರಾಳ ದಿನ. ಯಾಕೆ ಗೊತ್ತಾ?. ಉತ್ತರ ಪತ್ರಿಕೆಯಲ್ಲಿ ತಪ್ಪುಗಳು ಇದ್ದಲ್ಲಿ ಅವರು ಅದನ್ನು ಓದಿ ಎಲ್ಲರ ಮುಂದೆ ಅವಮಾನ ಮಾಡುತ್ತಿದ್ದರು. ಅವರು ಉತ್ತರ ಪತ್ರಿಕೆ ಕೊಟ್ಟ ಮೇಲೆ ಮನಸ್ದು ನಿರಾಳವಾಗುತ್ತಿತ್ತು. ಅದೊಂದು ದಿನ ಅವರು ಉತ್ತರ ಪತ್ರಿಕೆಯೊಂದಿಗೆ ಬಂದರು. ಎಲ್ಲರ ಮುಖದಲ್ಲೂ ಗಾಭರಿ ಈ ನಲ್ವತ್ತು ನಿಮಿಷಗಳಲ್ಲಿ ಏನಾಗ ಬಹುದು ಎಂಬ ಆತಂಕ. ಉತ್ತರ ಪತ್ರಿಕೆ ಕೊಡುತ್ತಾ ಹೋದರು.ಒಂದು, ಎರಡು, ಮೂರು, ನಾಲ್ಕು, ಐದು. ಏನು ಸಂಭವಿಸಲಿಲ್ಲ ಇಂದು ಯಾಕೋ ಸೂರ್ಯ ಪಶ್ಚಿಮದಲ್ಲಿ ಹುಟ್ಟರಬೇಕು ಅಂತ ಅನಿಸಿತ್ತು. ಆದರೆ ಆತಂಕ ಕಡಿಮೆ ಆಗಲಿಲ್ಲ. ಆಗಿರುವುದು ಕೇವಲ ಐದು ಓವರ್. ಇನ್ನು ಬಾಕಿಯಿದೆ 35ಓವರ್.ಕನಿಷ್ಟ ಒಂದು ಓವರನ್ನಾದರೂ ಚಚ್ಚಿ ಚಿಂದಿ ಚಿತ್ರಾನ್ನ ಮಾಡದೆ ಬಿಡುವ ಜಾಯಮಾನ ಅವರದ್ದಲ್ಲ ಎಂಬ ವಿಷಯ ಎಲ್ಲರಿಗೂ ಗೊತ್ತಿತ್ತು. ಅದಕ್ಕಾಗಿ ಉಸಿರು ಹಿಡಿದು ನಿಂತಿದ್ದೆವು

ಮುಂದುವರಿಯುವುದು.


By :  Marcel D’Souza

2 thoughts on “ಹೈಸ್ಕೂಲ್ ದಿನಗಳು – ಭಾಗ ೧”

Leave a Reply

This site uses Akismet to reduce spam. Learn how your comment data is processed.