ಹಾಡೆಷ್ಟನೋ ಬರೆದ ಕವಿ

ಹಾಡೆಷ್ಟನೋ ಬರೆದ ಕವಿ ಓದಿದರು ಹಲವರು
ಕವಿಗಾಗಿ ಹಾಡಿದವರ್ಯಾರು?
ಇರದ ಭಾವನೆಗಳನು ಎಳೆದು ತುಂಬಿದ ಅವನು
ಅವನ ಭಾವವ ಅರಿತರ್ಯಾರು?

ಮರವು ಎಲೆಗಳನುಳಿದು ದೇಹಗಾಯದ ನಡುವೆ
ಮೊಗ್ಗುಗಳ ಹೊರದೂಡಲೇಕೆ?
ಹೂವರಳಿ ನಿಂತಾಗ ಚಿಟ್ಟೆಗೋ ಹಸಿವಾಯ್ತು
ಮೊಳಕೆಯಾದಿತೆ ಕಾಯಿ ಮಳೆಗಾಲಕೆ?

ಹುಳದ ರಕ್ಷಣೆಕವಚ ರೇಶ್ಮೆಯಾಗುವುದೆಂತೊ
ಕವಿಗಿಲ್ಲ ಅವನೊಲಿದ ಭಾವ
ಯಾವುದೋ ಹೊದಿಕೆಯಲಿ ಯಾರದೋ ಕನಸಿರಲು
ಜಿಗಣೆ ಕಳೆಯಿತು ರಾತ್ರಿ ಹಸಿವ!

ನೋಡಿ ಸುಮ್ಮನೆ ನಗಲು, ನಕ್ಕಂತೆ ನಟಿಸಿರಲು
ಜಗವು ಖುಷಿಪಟ್ಟರದು ಪಡಲಿ;
ಏನಾದರೇನಿಹುದು ಏನುಳಿದು ಹೊಳೆಯುವುದು?
ಎನುತ ಬರೆದಿಟ್ಟ ಕವಿ ಬಳಲಿ.

notebook-pencil-notes-sketch.jpg


By : Ishwara Bhat K

Advertisements

ಹೈಸ್ಕೂಲ್ ದಿನಗಳು – ಭಾಗ ೨

10ನೇಯ ಸರದಿ. ಶಿಕ್ಷಕರು ಹೆಸರು ಕರೆದರು. ಉತ್ತರ ಪತ್ರಿಕೆ ಪಡೆಯಲು ಹೊರಟವರನ್ನು. ಅಲ್ಲೇ ನಿಲ್ಲಲು ಹೇಳಿದರು ಶಿಕ್ಷಕರು.
ಉತ್ತರ ಪತ್ರಿಕೆಯನ್ನು ತೆರೆದು ಓದಲು ಆರಂಬಿಸಿದರು.
ಪ್ರಶ್ಬೆ: ಹಾಸಿಗೆ ಇದ್ದಷ್ಟು ಕಾಲು ಚಾಚು ಈ ಗಾದೆಯನ್ನು ವಿವರಿಸಿ.
ಉತ್ತರ: ಬಸವ ಮನೆಗೆ ಬಂದಾಗ ಬಂಗಾರಿ. ಹಾಸಿಗೆಯಲ್ಲಿ ಮಲಗಿ ನಿದ್ರಿಸುತ್ತಿದ್ದಳು. ಅವಳು ಕಾಲನ್ನು ಹಾಸಿಗೆಯಿಂದ ಹೊರಗೆ ಚಾಚಿದ್ದಳು. ಇದನ್ನು ನೋಡಿ ಬಸವನಿಗೆ ಕೋಪ ಬಂತು. ಹಾಸಿಗೆಯಿದ್ದಷ್ಟು ಕಾಲು ಚಾಚು ಎಂದು ಬಸವನು ಬಂಗಾರಿಯನ್ನುಬೈದನು.
ಶಿಕ್ಷಕರು ಉತ್ತರವನ್ನು ಓದಿ ಮುಗಿಸಿದರು.ನಮಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ.

ಅಂತೂ ಇಂತೂ 8 ಮತ್ತು 9 ಮುಗಿಯಿತು. 10 ನೇ ಕ್ಲಾಸಿಗೆ ಕಾಲಿಟ್ಟಿದ್ದೆವು. 9 ಮತ್ತು 10 ಇದ್ದುದು ಹೊಸ ಕಟ್ಟಡ ದ‌ಲ್ಲಿ. ಅದು ಮಕ್ಕಳಿಗೆ ತುಂಬಾ ಯೂಸರ್ ಪ್ರಂಡ್ಲಿಯಾಗಿತ್ತು. ಅದಕ್ಕೆ ಬಾಗಿಲುಗಳು ಮಾತ್ರವಲ್ಲ, ಕಿಟಿಕಿಗಳು ಇದ್ದುವು. ತರಗತಿಗಳಿಗೆ ಕಿಟಿಕಿಗಳಿರುವುದು ಸಹಜ.ಅದನ್ನು ವೆಬ್ ಸೈಟಿ ನಲ್ಲಿ ಬರೆಯಬೇಕೆ? ಎಂದು ಮಂಡೆ ಬೆಚ್ಚ ಮಾಡ್ತಾ ಇದ್ದೀರಾ?ವಿಷಯ ಏನು ಗೊತ್ತಾ? ಆ ಕಿಟಿಕಿಗಳಿಗೆ ಸರಳುಗಳೇ ಇರಲಿಲ್ಲ, ಅರ್ಥಾತ್ ಬಾಗಿಲಿನಂತೆಯೇ ಇದ್ದುವು. ಈ ಕ್ಲಾಸುಗಳಿಗೆ ನನ್ನ ಆಗಮನ ಮತ್ತು ನಿರ್ಗಮನ ಹೆಚ್ವಾಗಿ ನಡೆದದ್ದು ಈ ಕಿಟಿಕಿಗಳ ಮೂಲಕವೇ ಎಂದು ಹೆಮ್ಮೆಯಿಂದಲೇ ಹೇಳುತ್ತೇನೆ.
ಬಿಡುವಿನ ಸಮಯದಲ್ಲಿ ಹುಡುಗರು ವಿಂಡೊ10 ಮೂಲಕ ಛಂಗನೆ ಹಾರಿ ವಿಂಡೊ 9ನಲ್ಲಿದ್ದ ಸೌಂದರ್ಯವನ್ನು ಅಸ್ವಾದಿಸಿ ಮತ್ತೆ ವಿಂಡೊ ಮೂಲಕ ಸ್ವಸ್ಥಾನ ಸೇರುತ್ತಿದ್ದರು. ವಿಂಡೊಗಳು ದಿನಚರಿಯನ್ನು ಇಷ್ಟು ಸುಲಭಗೊಳಿಸುತ್ತವೆ ಎಂದು ನಮಗೆ ತಿಳಿದಿರಲಿಲ್ಲ. ಬಹುಶ: ಬಿಲ್ ಗ್ರೇಟ್ಸ್ ನಮ್ಮ ಕಿಟಿಕಿ ಬಳಕೆ ನೋಡಿಯೇ ವಿಂಡೊ ಕಂಡು ಹಿಡಿದಿರ ಬೇಕು ಅಂತ ಕಾಣುತ್ತೆ. ಹುಡುಗರ ತುಂಟತನ ಮುಂದುವರಿದಿತ್ತು. ರಾಕೆಟ್ ಉಡಾಯಿಸುವ ಯೋಜನೆಯು ಆರಂಭವಾಗಿತ್ತು. ಹುಡುಗರ ಈ ಮಂಗನಾಟವನ್ನು ಹೇಗಾದರು ಮಟ್ಟಹಾಕಬೇಕೆಂದು ಕ್ಲಾಸ್ ಟೀಚರ್ ಯೋಚಿಸುತ್ತಿದ್ದರು. ಅವರ ಯೋಚನೆಯ ಫಲವೇ ಲೇಡಿ ಕ್ಲಾಸ್ ಲೀಡರ್ ನೇಮಕ. ಆ ಕ್ಲಾಸ್ ಲೀಡರ್ ಯಾರು? ಅವಳ ಅಧಿಕಾರದ ಅವದಿಯಲ್ಲಿ ಎನೇನು ನಡೆಯಿತು ಹೇಳ್ತೀನಿ.

ಮುಂದಿನ ಭಾಗದಲ್ಲಿ…


By: Marshal D’souza

ಮೊದಲನೇ ಭಾಗ ಓದಲು : ಹೈಸ್ಕೂಲ್ ದಿನಗಳು – ಭಾಗ ೧

ಒಂದೇ ರೀತಿಯ ಎರಡು ಹೂಗಳು.

ಒಂದೇ ರೀತಿಯ ಎರಡು ಹೂಗಳು
ಬಳ್ಳಿಯಲಿತ್ತು, ಅರಳಿತ್ತು!
ಒಂದನು ಕೊಯ್ದಳು ಮಲ್ಲಿಗೆ ಮಗಳು
ಇನ್ನೊಂದಲ್ಲಿಯೆ ಉಳಿದಿತ್ತು.

ಕೊಯ್ದಿಹ ಹೂವಿಗೆ ದಾರವು ಸೇರಿ
ಹೂವಿನ ಮಾಲೆ! ಹೆಸರಾಯ್ತು
ಬಳ್ಳಿಯೊಳುಳಿದ ಘಮಿಸುವ ಹೂವು
ಸಂಜೆಯವರೆಗೂ ನಗುತಿತ್ತು.

ದೇವರಿಗಿಟ್ಟಳು, ಮುಡಿಯೊಳಗಿಟ್ಟಳು
ಹೂವಿನ ಮನಸಿನ ನಗೆಯವಳು!
ರಾತ್ರಿಯ ಇಬ್ಬನಿ ಬಳ್ಳಿಯ ಹೂವಿನ
ಮೆಲ್ಲನೆ ಹೀರುತ ಕೊಳೆಸಿದಳು.

ಒಂದೇ ಭಾವದ ಜನರು ಬೆರೆತರೂ
ಹೊಂದಿಕೆಯಾಗದೆ ಬದುಕಿದರು!
ಜತೆಗೆ ಸೇರಿದರೂ, ಜೊತೆಗೆ ಬಾಳಿದರೂ
ತೆರಳುವ ದಿನದಲಿ ಅಗಲಿದರು.

FB_IMG_1521452281859.jpg


By : Ishwara Bhat K

Photo : Google.

ಹೈಸ್ಕೂಲ್ ದಿನಗಳು – ಭಾಗ ೧

ಏಳನೇ ಕ್ಲಾಸ್ ಮುಗಿಸಿ 8ನೇ ಕ್ಲಾಸಿಗೆ ಕಾಲಿಟ್ಟಿದ್ದೆ. ಹೆಸರಿನಲ್ಕಿ ಕಾಲೇಜು ಇದ್ದರೂ ಅದು ಹೈಸ್ಕೂಲೇ ಆಗಿತ್ತು. ಕೊನೆಯಲ್ಲಿ ಪೆರಡಾಲ ಅಂತ ಇದ್ದರೂ, ಅದು ಇದ್ದದ್ದು ನೀರ್ಚಾಲಿನಲ್ಲಿ. ನನ್ನ ಕ್ಲಾಸಿನಲ್ಲಿ ಹೊಸಬರು ಹಾಗೆಯೇ ಅನುಭವಿಗಳು ಇದ್ದರು. ಅನುಭವಿಗಳೆಂದರೆ ಹಿಂದಿನ ವರ್ಷ ಇದೇ ಕ್ಲಾಸಿನಲ್ಲಿ ಇದ್ದು ಬೆಂಚಿಗೆ ಅಂಟಿಕೊಂಡವರು ಈ ಅನುಭವಿಗಳೇ. ನಮಗೆ ಅಂದರೆ ಹೊಸಬರಿಗೆ ಮಾರ್ಗದರ್ಶಕರು.
ಅಧ್ಯಾಪಕರು ತರಗತಿಗೆ ಬಂದು ತಮ್ಮ ಪರಿಚಯ ಮಾಡುವ ಮುನ್ನವೇ ಅವರ ಪರಿಚಯವಾಗಿತ್ತು. ಅದು ಅನುಭವಿ ಕಿಲಾಡಿಗಳಿಂದ. ಅಂತಿಂಥ ಕಿಲಾಡಿಗಳಲ್ಲ. ಪ್ರಚಂಡ ಕಿಲಾಡಿಗಳು. ಅವರು ಶಿಕ್ಷಕರಿಗೆ ಇಟ್ಟ ಹೆಸರನ್ನು ಕೇಳಿದರೆ ಖಂಡಿತ ಬೆಚ್ಚಿ ಬೇಳ್ತೀರಾ.ಹಾಗಾದರೆ ಆ ಹೆಸರುಗಳು ಯಾವುವು?
ಒಬ್ಬರು ಚೀನಿಕಾಯಿ ಮತ್ತೊಬ್ಬರು ಕುತ್ತಗುಡ್ಡೆ. ಇನ್ನೊಬ್ಬರು ಗಡಿಬಿಡಿ ಹೀಗೆ… ಮಾಸ್ಟ್ರಿಗೆ ಹೆಸರಿಟ್ಟವರು ಹೆಡ್ ಮಾಸ್ಟ್ರಿಗೆ ಹೆಸರಿಡದೆ ಇರ್ತಾರಾ? ಅವರಿಗೂ ಇಟ್ಟಿದ್ದರು. ಆಡು ಮಾಸ್ಟ್ರು ಅಂತ. ಅದು ಅವರಿಗೆ ಅನ್ವರ್ಥನಾಮವೇ ಆಗಿತ್ತು. ಯಾಕೆಂದರೆ ಅವರು ಸದಾ ಎಲೆ ಅಡಿಕೆ ಜಗಿಯುತ್ತಿದ್ದರು.

ಮಳೆಗಾಲದಲ್ಲಿ ಈ ಹೆಡ್ ಮಾಸ್ಟರ್ ಮಳೆಯಲ್ಲಿ ಒದ್ದೆಯಾಗಲಿ ಅಂತ ನಾವು ಯಾವಾಗಲೂ ಪ್ರಾರ್ಥನೆ ಮಾಡುತ್ತಿದ್ದೆವು. ಯಾಕೆ ಗೊತ್ತಾ? ಅವರು ಒದ್ದೆಯಾದರೆ ಶಾಲೆಗೆ ರಜೆ ಘೋಷಿಸಲ್ಪಡುತ್ತದೆ ಎನ್ನುವುದು ಅಲಿಖಿತ ಶಾಲಾ ನಿಯಮ. ಮಾಸ್ಟ್ರ ಬಗ್ಗೆ ಮಾತನಾಡುತ್ತ ಎಲ್ಲೊ ಹೋಗಿ ಬಿಟ್ಟೆ. ಎಲ್ಲಾ ಸರಿ ಶಿಕ್ಷಕರಿಗೆ ಅಡ್ಡ ಹೆಸರು ಯಾಕೆ ಇಟ್ಟರು. ಬಹುಶ: ಗುರುಗಳ ಹೆಸರು ಹೇಳಬಾರದು. ಅದಕ್ಕಿರಬಹುದು ಅಂತ ತಿಳಿದು ಕೊಂಡಿದ್ದೆ. ಈ ಅಡ್ಡ ಹೆಸರನ್ನು ಯಾರಿಟ್ಟರೋ ಗೊತ್ತಿಲ್ಲ.ನಮಗಂತೂ ಅದು ನಮ್ಮ ಸೀನಿಯರ್ಸ್ ಗಳಿಂದ ಬಂದ ಕೊಡುಗೆಯಾಗಿತ್ತು. ಅಡ್ಡ ಹೆಸರು ಶಿಕ್ಷಕರಿಗೆ ಮಾತ್ರವಲ್ಲ ವಿದ್ಯಾರ್ಥಿಗಳಿಗೂ ಸಿಕ್ಕಿತ್ತು. ಹಾಗೆ ನಮಗೆ ಹಸರಿಟ್ಟ ಶಿಕ್ಷಕರೆಂದರೆ ಚೀನಿಕಾಯಿ, ಅವರು ಜಟಾಯು ಅಂತಲೇ ಕರೆಯುತ್ತಿದ್ದರು. ಅವರು ಹಾಗೆ ಕರೆಯುತ್ತಿದ್ದುದು ದ್ವೇಷದಿಂದಲ್ಲ. ಪ್ರೀತಿಯಿಂದ. ನಿಜ ಹೇಳಬೇಕೆಂದರೆ ಹೈಸ್ಕೂಲಿನಲ್ಲಿ ನನಗೆ ಅತ್ಯಂತ ಆತ್ಮೀಯರಾಗಿದ್ದ ಶಿಕ್ಷಕರು ಅವರೇ ಆಗಿದ್ದರು. ಒಬ್ಬರೇ ಒಬ್ಬರನ್ನು ಬಿಟ್ಟರೆ ಉಳಿದೆಲ್ಲಾ ಶಿಕ್ಷಕರು ನನಗೆ ತುಂಬಾ ಇಷ್ಟ.

ಆ ಒಬ್ಬ ಶಿಕ್ಷಕರ ಪಾಠ ನನಗೆ ಮಾತ್ರವಲ್ಲ. ಯಾರಿಗೂ ಇಷ್ಟವಾಗಲು ಸಾಧ್ಯವೇ ಇಲ್ಲ. ಅವರ ಬೋಧನೆ ಇಷ್ಟಪಟ್ಟವರು ಯಾರಾದರು ಇದ್ದರೆ ಅದು ಶತಮಾನದ ಅದ್ಭುತವೇ ಸರಿ. ಹಾಗಾದರೆ ಅವರಿಗೆ ಅಡ್ಡ ಹೆಸರಿಡಲಿಲ್ಲವೇ? ಅಡ್ಡ ಹೆಸರೇನು? ಉದ್ದ ಹೆಸರನ್ನು ಇಟ್ಟಿದ್ದರು. ಅಡ್ಡ ಹೆಸರು ವರ್ಣ ತಾರತಮ್ಯದ ಗೊಂದಲ ಎಬ್ಬಿಸ ಬಹುದೆಂದು ಅದನ್ನು ನಾನಿಲ್ಲಿ ಪ್ರಸ್ಥಾಪಿಸುವುದಿಲ್ಲ.
ಅವರ ಬೋಧನೆ ತಮಗೆ ಸಿಗದಿರಲಿ ಎಂದು ವರ್ಷಾರಂಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ದೇವರಲ್ಲಿ ಬೇಡಿಕೊಳ್ಳುತ್ತಿದ್ದರು. ದೇವರಾದರು ಏನು ಮಾಡಿಯಾರು? ಎಲ್ಲ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಲು ಹೋದರೆ ಅವರನ್ನು ಯಾವ ಕ್ಲಾಸಿಗೆ ಹಾಕಬೇಕು? ಅಂತೂ ನಮ್ಮ ಕ್ಲಾಸಿಗೆ ಬಂದೇ ಬಿಟ್ಟರು. ಬಹುಶ: ನಮ್ಮ ಭಕ್ತಿ ಕಡಿಮೆ ಇದ್ದಿರಬೇಕು.
ನಾನು ಕೇಳಿಸಿ ಕೊಂಡ ಅವರ ಮೊದಲ ಮಾತೆಂದರೆ “ಬಿದ್ದು ಕೊಳ್ಳಿ ಪಲ್ಲದಲ್ಲಿ”
ಅವರ ಅಭಿಪ್ರಾಯದಲ್ಲಿ: ನಮ್ಮ ಕ್ಲಾಸ್ ಪಲ್ಲ. ನಾವೆಲ್ಲರು ಎಮ್ಮೆಗಳು. ನಮ್ಮ ಸಹವಾಸದ ಫಲವೋ ಎನೊ, ಅವರು ನಿಂತುಕೊಂಡು ಪಾಠ ಮಾಡಿದ್ದೇ ಇಲ್ಲ. ಕ್ಲಾಸಿಗೆ ಬಂದೊಡನೆ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದ ಅವರು, ಏಳುತ್ತಿದ್ದುದು ಆ ಪೀರಿಯೆಡ್ ಮುಗಿದ ಮೇಲೆಯೇ. ಅವರ ಬೋಧನೆಯಲ್ಲಿ ಹಾಸ್ಯವಂತೂ ಇರುತ್ತಿರಲಿಲ್ಲ. ಆದರೆ ಅಪಹಾಸ್ಯಕ್ಕೆ ಕೊರತೆಯಿರಲಿಲ್ಲ.’ಮದ್ರಮಣ’ ಇದರ ಅರ್ಥವನ್ನು ಮಕ್ಕಳ ಹತ್ರ ಅಗಾಗ ಹೇಳಿಸಿ ಖುಷಿ ಪಡುತ್ತಿದ್ದ ಇವರ ಪಾಂಡಿತ್ಯದ ಪರಮಾವಧಿ ಕಿರಿಕಿರಿ ಉಂಟು ಮಾಡುತ್ತಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಿರುವಾಗ ಇವರ ಕ್ಲಾಸಿನಲ್ಲೂ ಇಂದು ಹಾಸ್ಯ ಪ್ರಸಂಗ ನಡೆಯಿತು. ಅದೇನು ಅಂತ ಹೇಳ್ತೀನಿ ಕೇಳಿ.

ಕಾಲು ವಾರ್ಷಿಕ ಪರೀಕ್ಷೆ ಮುಗಿದಿತ್ತು. ಭಯ ಆರಂಭವಾಗಿತ್ತು. ಭಯ ಬೇರೆ ಯಾರದ್ದು ಅಲ್ಲ. ಈ ಪಂಡಿತ ಶಿಕ್ಷಕರದ್ದು. ಅವರು ಉತ್ತರ ಪತ್ರಿಕೆ ಕೊಡುವ ದಿನ ನಮಗಂತೂ ಕರಾಳ ದಿನ. ಯಾಕೆ ಗೊತ್ತಾ?. ಉತ್ತರ ಪತ್ರಿಕೆಯಲ್ಲಿ ತಪ್ಪುಗಳು ಇದ್ದಲ್ಲಿ ಅವರು ಅದನ್ನು ಓದಿ ಎಲ್ಲರ ಮುಂದೆ ಅವಮಾನ ಮಾಡುತ್ತಿದ್ದರು. ಅವರು ಉತ್ತರ ಪತ್ರಿಕೆ ಕೊಟ್ಟ ಮೇಲೆ ಮನಸ್ದು ನಿರಾಳವಾಗುತ್ತಿತ್ತು. ಅದೊಂದು ದಿನ ಅವರು ಉತ್ತರ ಪತ್ರಿಕೆಯೊಂದಿಗೆ ಬಂದರು. ಎಲ್ಲರ ಮುಖದಲ್ಲೂ ಗಾಭರಿ ಈ ನಲ್ವತ್ತು ನಿಮಿಷಗಳಲ್ಲಿ ಏನಾಗ ಬಹುದು ಎಂಬ ಆತಂಕ. ಉತ್ತರ ಪತ್ರಿಕೆ ಕೊಡುತ್ತಾ ಹೋದರು.ಒಂದು, ಎರಡು, ಮೂರು, ನಾಲ್ಕು, ಐದು. ಏನು ಸಂಭವಿಸಲಿಲ್ಲ ಇಂದು ಯಾಕೋ ಸೂರ್ಯ ಪಶ್ಚಿಮದಲ್ಲಿ ಹುಟ್ಟರಬೇಕು ಅಂತ ಅನಿಸಿತ್ತು. ಆದರೆ ಆತಂಕ ಕಡಿಮೆ ಆಗಲಿಲ್ಲ. ಆಗಿರುವುದು ಕೇವಲ ಐದು ಓವರ್. ಇನ್ನು ಬಾಕಿಯಿದೆ 35ಓವರ್.ಕನಿಷ್ಟ ಒಂದು ಓವರನ್ನಾದರೂ ಚಚ್ಚಿ ಚಿಂದಿ ಚಿತ್ರಾನ್ನ ಮಾಡದೆ ಬಿಡುವ ಜಾಯಮಾನ ಅವರದ್ದಲ್ಲ ಎಂಬ ವಿಷಯ ಎಲ್ಲರಿಗೂ ಗೊತ್ತಿತ್ತು. ಅದಕ್ಕಾಗಿ ಉಸಿರು ಹಿಡಿದು ನಿಂತಿದ್ದೆವು

ಮುಂದುವರಿಯುವುದು.


By :  Marcel D’Souza

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೧

ಪ್ರಮುಖ ಪಾತ್ರಗಳಾದ”ಟೊಂಯ್ಕಾನಂದರು ’ಮತ್ತು”ಡಿಲೈಟಾನಂದರು’, ಇಬ್ಬರು ಸ್ವಾಮಿಗಳಾಗಿದ್ದು ಇವರ ವಿಚಾರವಾಗಿ ಯಾವುದೇ ಪ್ರಸ್ತುತವಿರುವ ದೂರದರ್ಶನಗಳಲ್ಲಿ , ಪತ್ರಿಕೆಗಳಲ್ಲಿ ಬಂದಿರುವುದಿಲ್ಲ. ಇವು ಸಾಮಾನ್ಯ ಮನುಷ್ಯನ ವಿಪರೀತ ಕಲ್ಪನೆಯಾಗಿದ್ದು, ಯಾವುದೇ ಪ್ರಕಾರವಾಗಿ ಯಾರನ್ನೂ ನಕಲಿಸಿರುವುದಿಲ್ಲ. ಆದ್ದರಿಂದ, ಯಾವುದಾದರೂ ರೀತಿಯಲ್ಲಿ ಸಾಮ್ಯ ಕಂಡುಬಂದರೆ ಬರಹಗಾರನ ಮೆದುಳಿಗೇ ಸಲ್ಲಬೇಕು ಹೊರತು ತಲೆಗೆ ಹೊಡೆಯಬಾರದಾಗಿ ವಿನಂತಿ.

ಸುಮಾರು ವರ್ಷಗಳ ಹಿಂದೆ ಮೂಡಿಬಂದ ಈ ಪಾತ್ರಗಳು ಬೆಳೆಯುವುದರಲ್ಲಿ ಸ್ನೇಹಿತರ ಬಲವಾದ ಬೆಂಬಲವಿದೆ. ಎಲ್ಲರನ್ನು ಈ ಮೂಲಕ ಸ್ಮರಿಸಿ, ಟೊಂಯ್ಕಾನಂದರ ಪದತಲದಲ್ಲಿ ಕುಳಿತು ಬರಗಾಲದ ಶುರು.

ಕಷ್ಟ ಪದಗಳ ಅರ್ಥ : ಸಧ್ಯಕ್ಕೆ ಇರುವುದಿಲ್ಲ. ಬರಗಾಲ ಅಂದರೆ ಬರಹದ ಕಾಲ ಎಂದು ಓದಿಕೊಳ್ಳತಕ್ಕದ್ದು.


ಪ್ರಸ್ತಾವನೆ:

ಶ್ರೀ ಶ್ರೀ ಟೊಂಯ್ಕಾನಂದರು ಯಾರು ಎನ್ನುವ ಬಗ್ಗೆ ಹಲವು ಊಹಾಪೋಹಗಳು ಇದೆ. ಅದನ್ನೆಲ್ಲ ನಿವಾರಿಸುವ ಸಲುವಾಗಿ ಈ ವಿವರಣೆ.

ಸುಮಾರು ವರ್ಷದ ಹಿಂದೆ ನೀರ್ಬೀಳದ ( ನೀರು ಬೀಳದ ಅಂತ ಓದ್ಕೋಬಾರದು, ನೀರ್ಬೀಳ ಅಂದ್ರೆ ಜಲಪಾತ) ಕೆಳಗೆ ಇದ್ದಿದ್ದ ಒಂದು ಚಪ್ಪಟೆಯ ಕಲ್ಲನ್ನು ಬೆಟ್ಟದ ತುದಿಯವರೆಗೂ ಹೊತ್ತೊಯ್ದು ಅಲ್ಲಿ ದಿವ್ಯ ತಪಸ್ಸು ಮಾಡುತ್ತಿದ್ದ ಶ್ರೀ ಶ್ರೀ ಡಿಲೈಟಾನಂದರಿಗೆ ಮಳೆಗಾಲದಲ್ಲಿ ಕನಸಾಯ್ತು. ನೂರೆಂಟು ಯೋಜನ ದೂರದಲ್ಲೊಂದು ಆರ್ತಧ್ವನಿ. ಸಂಸ್ಕೃತಿಯ ಪರಮಾಚಾರ್ಯರಾದ ಡಿಲೈಟಾನಂದರಿಗೆ ಅರ್ಥಧ್ವನಿಗಿಂತಲೂ ಕಠೋರವಾಗಿ ಆರ್ತಧ್ವನಿ ಕೇಳಿಸಿದ್ದು ಪರಮಾಶ್ಚರ್ಯವಾದರೂ ಇಲ್ಲಿ ನಡೆದ ಸಂಗತಿ ಅದೇ. ಹಗಲಿನಲ್ಲಿ ಚೆನ್ನಾಗಿ ಮೈಮುಚ್ಚಿಕೊಂಡಿದ್ದ ಬಟ್ಟೆಯನ್ನು ಸಂಜೆಯ ವೇಳೆಗೆ ಹರಿದುಕೊಂಡು ರಾತ್ರಿಯ ಛಳಿ ಆವರಿಸುತ್ತಲೇ ಲೋಕವನ್ನು ಬೆದರಿಸುವಂತೆ ಅರ್ಥಾತ್ ಪ್ರಗತಿಪರನಾದ ನಡು-ವಯಸ್ಕನನ್ನು ತಮ್ಮ ದಿವ್ಯಚಕ್ಷುಗಳಿಂದ ಕಂಡರು ಶ್ರೀ ಗುರು. ಶ್ರೀಗಳು ಬಿಜಯಂಗೈದರು ಎನ್ನುವುದು ಗೌರವಸೂಚಕವಾದರೂ, ಯಥಾವತ್ ಸನ್ನಿವೇಶದಲ್ಲಿ ಬೆಟ್ಟದಿಂದಲೇ ಉರುಳಿಕೊಂಡು ನೂರೆಂಟು ಯೋಜನದ ದೂರವನ್ನು ತಲುಪಿದ ಡಿಲೈಟಾನಂದರು ವತ್ಸಾ ಎಂದು ಸಂಭೋದನೆ ಮಾಡಿದರು.

ಯಾರೂ ಓದದ ಕೃತಿಗೆ ಮಹತ್ ಪ್ರಶಸ್ತಿ ಬಂದಂತೆ “ಟೊಂಯ್ಕ”ನು ಆಕಾಶವನ್ನು ನೋಡಿದ. ಕರೆದವರು ಭೂಮಿಯಲ್ಲಿದ್ದರೂ ಊಳಿಡುವುದೇ ಅಭ್ಯಾಸವಾದವನಿಗೆ ಆಕಾಶ ತಾನೇ ಗುರು?. ತಮ್ಮ ಮೈ ಒರೆಸುವುದಕ್ಕೆ, ತಲೆಗೆ ಕಟ್ಟಿಕೊಳ್ಳುವುದಕ್ಕೆ, ಉಪನ್ಯಾಸ ಮಾಡುವಾಗ ಹೊದ್ದುಕೊಳ್ಳುವುದಕ್ಕಿದ್ದ ಒಂದೇ ಶಾಲನ್ನು ಟೊಂಯ್ಕನಿಗೆ ಕೊಟ್ಟು ಗುರುಗಳು ಬೆಟ್ಟದ ಅಭಿಮುಖವಾಗಿ ನಡೆಯ ತೊಡಗಿದರು. ಟೊಂಯ್ಕರು ಯಾವುದೇ ಪ್ರತಿಕ್ರಿಯೆಯನ್ನು ನೀಡಲಾಗದೆ ಸಣ್ಣ ಕಂಪನದೊಂದಿಗೆ ( ಹಿಂದೆ ನಡೆದ ನೇಪಾಳದ ಭೂಕಂಪಕ್ಕೆ ಕಾರಣವಾಗಿ ಈ ಪರಿವರ್ತನೆ ಎನ್ನುವುದು “ಶ್ರೀ ಗುರು ಟೊಂಯ್ಕ ಚರಿತೆ” ಎನ್ನುವ ಮಹದ್ಗ್ರಂಥದಲ್ಲಿ ಉಲ್ಲೇಖವಾಗಿದೆ) ನಿಂತಲ್ಲೇ ಮೂರ್ಛೆ (ಸಮಾಧಿ!) ಹೊಂದಿದರು.

ಗುರುವಿನ ಪಾದ ಬೆಳೆಸಿದಲ್ಲಿ, ಟೊಂಯ್ಕರು ಹಣೆಯ ಅಚ್ಚನ್ನು ಉಳಿಸಿದರು. ಮುಂದೆ ಹೊದೆಯಲು ಶಾಲು ಇಲ್ಲದ ಗುರುಗಳು ಬೆಟ್ಟದ ಆಚೆ ಬದಿಯ ಗುಹೆಯಂತಹ ಒಂದು ಜಾಗದಲ್ಲಿ ಸನ್ಯಾಸವನ್ನು ಮುಂದುವರೆಸಿದ್ದಾಗಿ ವಿಷಯ.

ಹಾಗೇ ಉಂಡ ಬಟ್ಟಲಿಂದ ಬಿದ್ದ ನಾಲ್ಕೈದು ಅಗುಳು ಇರುವೆಗೋ ಕೋಳಿಗೋ ಆಗುವಂತೆ ಗುರು ಡಿಲೈಟಾನಂದರ ಶಾಲಿನಲ್ಲಿ ಸಿಕ್ಕಿಕೊಂಡಿದ್ದ ಒಂದೆರಡು ತುಂಡು ಉಪದೇಶಗಳನ್ನು ಯಥಾಪ್ರಕಾರ ಸಮಾಜದ ಮೇಲೆ ಬೀರುತ್ತಾ, ಟೊಂಯ್ಕರು ಶ್ರೀ ಶ್ರೀ ಟೊಂಯ್ಕಾನಂದ ಎನ್ನುವ ಪ್ರಸಿದ್ಧಿಯನ್ನು ಪಡೆದಿದ್ದಾರೆ.


ಪುಟ- ೧

ಮಳೆಗಾಲದ ಮಧ್ಯಭಾಗದಲ್ಲಿ ಶಿಷ್ಯನಾದುದರಿಂದ ಪುಷ್ಕಳವಾಗಿ ಗಡ್ಡೆಗೆಣಸು ಫಲಾಹಾರಾದಿಗಳು ಪುಷ್ಕಳವಾಗಿ ಒದಗಿತು ಶ್ರೀವರೇಣ್ಯರಿಗೆ. ತಮ್ಮ ಸಣಕಲಾದ ದೇಹಭಾಗದಲ್ಲಿ ಈ ಗಡ್ಡೆಗೆಣಸುಗಳು ಮತ್ತು ಫಲಗಳು ಸಂಬಂಧಪಟ್ಟ ಭಾಗಗಳನ್ನು ಒಪ್ಪಿಕೊಂಡೂ ಅಪ್ಪಿಕೊಂಡೂ ಸ್ವಾಮಿಗಳ ದೇಹವನ್ನು ಬೆಳೆಸಿ ಹೊಳೆಸಿದವು.

ಗುರು ಡಿಲೈಟಾನಂದರಿಗೆ ಶಿಷ್ಯೋತ್ತಮನಾದ ಟೊಂಯ್ಕನು ಯಾವುದೇ ಅತಿಮಾನುಷವಾದ ಕೆಲಸ ಮಾಡಲಿಲ್ಲ ಎನ್ನುವ ಒಂದು ಅಸಂತೃಪ್ತಿ ಬಿಟ್ಟರೆ ಬೇರೆ ಯಾವುದೇ ಖಿನ್ನತೆ ಇರಲಿಲ್ಲ.

ಗುಹೆಯಲ್ಲಿ ನಿದ್ರಿಸುತ್ತಿರುವಾಗ ಮೈಮೇಲೆ ಹತ್ತಲು ಬರುವ ಗೊದ್ದ, ಇರುವೆಗಳನ್ನು ನಿದ್ರಾಭಂಗವಾಗದಂತೆ ತಡೆದು ಹೊಸಕಿ ಹಾಕುವ ಕಲೆ ಟೊಂಯ್ಕಾನಂದರಿಗೆ ಗೊತ್ತಿತ್ತು. ಗುರುಗಳು ಏಳುವ ಮೊದಲು ಎಬ್ಬಿಸದೇ, ನಿದ್ದೆ ಬರುವ ಮೊದಲು ಮಲಗುವಂತೆ ಮಾಡುವ ಕಲೆಯೂ. ಹೀಗಾಗಿ ಗುರುವಿನ ಸಂಪೂರ್ಣ ಕಟಾಕ್ಷ ಶಿಷ್ಯನ ಮೇಲೆ.

ಹೀಗೊಂದು ದಿನ;

ಗುರು ಡಿಲೈಟಾನಂದರೂ ಶಿಷ್ಯನಾದ ಟೊಂಯ್ಕರೂ ಊರಿನ ಜಾತ್ರಾಮಹೋತ್ಸವದ ತಯಾರಿಯ ಬಗೆಗೆ ಕರೆಯಲ್ಪಟ್ಟ ಸಭೆಗೆ ಹೊರಟರು. ದಾರಿ ಮಧ್ಯೆ ಒಂದು ಅರಳೀ ಮರದ ಕೆಳಗೆ ವಿಶ್ರಮಿಸಲು ಕುಳಿತಿದ್ದಾಗ ಯಾವುದೋ ಒಂದು ಹಕ್ಕಿಯ ವಿಸರ್ಜನೆ ಟೊಂಯ್ಕಾನಂದರ ಮೇಲೆ ಬಿತ್ತು. ಮೊದಲೇ ಬೆಟ್ಟ, ಬಯಲು ಸ್ಥಳ, ಅಷ್ಟಾಗಿ ನೀರಿನ ವ್ಯವಸ್ಥೆ ಇಲ್ಲದುದರಿಂದ ಕೋಪವೂ ಬಂತು. ಗುರುಗಳು ಹಕ್ಕಿಗೆ ಕಲ್ಲು ತೋರಿಸಿ ಓಡಿಸಲು ಸಲಹೆ ಇತ್ತರು.

ಆದರೆ ಟೊಂಯ್ಕರು, ಸಂಯಮದಿಂದ ಹಕ್ಕಿಯನ್ನು ನೋಡಿ, “ಇನ್ನು ಓಡಿಸಿ ಫಲವೇನು? ಈ ಹಕ್ಕಿ ಅಲ್ಲಿಯೇ ಇದ್ದರೇ ಒಳಿತು. ಮತ್ತೆ ಮತ್ತೆ ವಿಸರ್ಜನೆ ಹಕ್ಕಿ ಮಾಡುವುದಿಲ್ಲ. ಒಂದು ವೇಳೆ ಈ ಹಕ್ಕಿಯನ್ನು ಓಡಿಸಿದರೆ ಇನ್ನೊಂದು ಹಕ್ಕಿ ಬಂದು ಮತ್ತೆ ವಿಸರ್ಜನೆ ಮಾಡುತ್ತದೆ. ವಿಸರ್ಜನೆಯ ಸುಖ ಎಲ್ಲರಿಗೂ ದೊಡ್ಡದು ತಾನೇ” ಎಂದು ಗುರುಗಳಲ್ಲಿ ಹೇಳಿದರು.

ಗುರುಗಳ ಮುಖದಲ್ಲಿ ನೂರಾ ಇಪ್ಪತ್ತರ ಬಲ್ಬು ಕಂಡಂತೆ ಪ್ರಕಾಶಮಾನವಾಯ್ತು. ಅಹಹ! ಭಲೇ ಶಿಷ್ಯ. ಇದು ಸರ್ವೋತ್ಕೃಷ್ಟವಾದ ಮಾತು. ನೀನು ರಾಗ ದ್ವೇಷಗಳನ್ನು ಕಳೆದುಕೊಂಡು ಶಿಷ್ಯೋತ್ತಮನಾಗಿದ್ದೀಯಾ ಎಂದರು.

ಪುಟ-೨

ಪೂರ್ವಾಶ್ರಮದಲ್ಲಿ ಟೊಂಯ್ಕರು ಬಹಳ ರಸಿಕರಾಗಿದ್ದುದರಿಂದ ಜಾನಪದ,ನಾಟಕಗಳ ಪ್ರಭಾವ ಅವರ ಮೇಲೆ ಬಹಳ. ಒಂದೊಮ್ಮೆ ತೆಲುಗು ಹರಿಕತೆಯನ್ನು ಕೇಳುತ್ತಾ ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಮಾತುಗಳು ಕಿವಿಗೆ ಬಿದ್ದಿತ್ತು. “ಸೃಷ್ಟಿ ಒಕ್ಕಟೇ, ದೃಷ್ಟಿಬೇಧಂತೋ ಅನ್ನಿ ಸಮಸ್ಯಾಲ್ಲು ವಸ್ತುಂದಿ” ಎನ್ನುವ ಮಾತು ಬಹಳವಾಗಿ ನಾಟಿತ್ತು.

ಹೀಗೆ ಜಾತ್ರೆಯ ಸಭೆಗೆ ಹೊರಟಿದ್ದ ಗುರು ಡಿಲೈಟಾನಂದರೊಂದಿಗೆ ಪರಮ ಶಿಷ್ಯನಾದ ಟೊಂಯ್ಕರು ಸಾಗಿದ್ದರು. ಸಭೆಯೂ ಮುಗಿಯಿತು. ಗುರುಗಳ ಪ್ರವಚನವೂ ಇದೆ ಎಂದು ಅರಿವಾದೊಡನೆ ಟೊಂಯ್ಕನ ಮುಖದಲ್ಲಿ ಸಮಾಧಾನವಾಯ್ತು.

ಅರಿವೇ ಗುರು ಎನ್ನುವುದನ್ನ ಬರೀ ಅರಿವೆ ಕೊಟ್ಟು ಸಾಧಿಸಿ ತೋರಿಸಿದ್ದ ಗುರು ಡಿಲೈಟಾನಂದರ ಮಾತುಗಳಿಗಿಂತಲೂ ಪ್ರವಚನದ ಮೂಲಕ ನಾಲ್ಕು ಜನರಿಗೆ ಪರಿಚಿತನಾಗುವ ಅವಕಾಶ ಟೊಂಯ್ಕರಿಗೆ ಬಂದಿತ್ತು.

ಜಾತ್ರೆಯ ದಿನ ಟೊಂಯ್ಕರ ಪೂರ್ವಾಶ್ರಮದ ಮಿತ್ರನೊಬ್ಬ ( ನಾಮ ಅಪ್ರಸ್ತುತ!) ಬಂದು ಟೊಂಯ್ಕನನ್ನು ವಿಲಕ್ಷಣವಾಗಿ ನೋಡಿದ. ಗುರುಗಳ ಪ್ರವಚನದ ಸ್ಪೋಟ ಆರಂಭವಾಗುತ್ತಿದ್ದಂತೆಯೇ ಟೊಂಯ್ಕರು ನಿಧಾನಕ್ಕೆ ವೇದಿಕೆಯ ಹಿಂಭಾಗಕ್ಕೆ ಬಂದು ಆ ಗೆಳೆಯನನ್ನು ಕಂಡರು. ( ಟೊಂಯ್ಕಾನಂದರ ಚರಿತ್ರೆಯಲ್ಲಿ ಇದು ಹನೂಮಂತನ ಅವತಾರವಾದ ಮಂಗನ ಇನ್ನೊಂದು ಅವತಾರದ ಅವತಾರ ಎಂದು ಚಿತ್ರಿತವಾಗಿದೆ).

ಕುರು ಒಣಗಿ ಹೋದಮೇಲೂ ಕುರುವಿದ್ದ ಜಾಗವನ್ನು ಕನಿಕರಿಸಿ ನೋಡಿದಂತೆ ಭಾಸವಾಗಿ ಗೆಳೆಯನ ಬಳಿಗೆ ಹೋದರು ಟೊಂಯ್ಕರು. ಪೂರ್ವಮೈತ್ರಿಯ ಆಲಿಂಗನದೊಂದಿಗೆ ಗಾಂಜಾದ ಬೀಡಿಯೂ ಟೊಂಯ್ಕರ ಪಾಲಾಯಿತು. ಗುಡಗುಡಿಯ ಸೇದಿ ನೋಡೋ ಎನ್ನುವ ಪದ ನೆನಪಾಗಿ ಟೊಂಯ್ಕರು ಎಳೆದೇ ಬಿಟ್ಟರು.

ನಿರಾಮಯಾ ನಿರಾಲಂಬಾ ಸ್ವಾತ್ಮಾರಾಮಾ ಸುಧಾಸೃತಿಃ ಎನ್ನುವಂತೆ ಎಲ್ಲವೂ ಆಗಿಬಿಟ್ಟಿತು ಟೊಂಯ್ಕರಿಗೆ. ಗೆಳೆಯ ಎಲ್ಲೋ ಹೋದ. ಒಬ್ಬಂಟಿಯಾಗಿ ನಿರಾಲಂಬಾ ಅವಸ್ಥೆಯಲ್ಲಿ ಸಭೆಯ ಜನರ ಮಧ್ಯೆ ಬಂದು ಕುಳಿತ. ಅಲ್ಲಿಂದ ಎದ್ದ, ಮುಂದೆ ಕುಳಿತ. ಜಾರಿದಂತಾಯ್ತು, ಸಾವರಿಸಿ ಕಿಸಕ್ಕನೇ ನಕ್ಕ. ಮುಂದೆ ಖಾಲಿ ಕುರ್ಚಿ ಇದೆ ಎಂದು ಕುಳಿತ, ಬಿದ್ದವಂಗೆ ನೆಲವಲ್ತೆ ಮಂಚಂ!

ಮುಂದೆ ನೆಲದಲ್ಲಿಯೂ ಇರಲಾರದೇ ವೇದಿಕೆಯ ಬಲಭಾಗಕ್ಕೆ ಬಂದು ಕಂಬಕ್ಕೊರಗಿ ನಿಂತ. ಅಕಾಲದಲ್ಲಿ ಮಳೆಯಾಗುವಂತೆ, ವೇದಿಕೆಯ ಮೇಲೆ ಪ್ರವಹಿಸುತ್ತಿದ್ದ ( ಪ್ರವಚಿಸುತ್ತಿದ್ದ) ಡಿಲೈಟಾನಂದರ ವಾಗ್ಝರಿಯೋ ಎಂಬಂತೆ ಮಳೆಯಾಗತೊಡಗಿತು. ಟಾರ್ಪಾಲಿನ್ ವ್ಯವಸ್ಥೆಯಿದ್ದರೂ ಜನರು ಹೆದರಿದರು.

ಕಂಬಕ್ಕೊರಗಿ ನಿಂತ ಟೊಂಯ್ಕರಿಗೆ ಯಾವುದರ ಪರಿವೆ? ಜನರೆಲ್ಲ ಕಂಬವಿದ್ದೆಡೆ ಸೇರಿದರು. ಡಿಲೈಟಾನಂದರು ಭಾಷಣ ನಿಲ್ಲಿಸಿದರು. ಅಷ್ಟರಲ್ಲಿ ಎಡಭಾಗದ ಕಂಬವೊಂದು ಹಾಗೇ ವಾಲಿದಂತಾಯ್ತು. ಟೊಂಯ್ಕರು ಬಲಭಾಗದ ಕಂಬವನ್ನು ಅಪ್ಪಿಕೊಂಡು ನಿಂತೇ ಇದ್ದರು.

ಹತ್ತು ನಿಮಿಷವಾಗುವಷ್ಟರಲ್ಲಿ ಎಡಭಾಗದ ಪೂರ್ಣ ಟಾರ್ಪಾಲಿನ್ ವ್ಯವಸ್ಥೆ ಬಿದ್ದು ಹೋಯಿತು. ವೇದಿಕೆಯ ಬಲಭಾಗದ ಮುಖ್ಯಕಂಬದ ಕೆಳಗೆ ಪ್ರಕಾಶಮಾನವಾಗಿ ಟೊಂಯ್ಕರು ಕಂಡರು.

ಯಾರೀ ಮನುಷ್ಯ? ನಾನು ಸಭೆಯಿಂದ ಬಂದು ಕಂಬ ಹಿಡಿದುಕೊಂಡಾಗಲೇ ನೋಡಿದೆ. ಎಂತಹ ಭವಿಷ್ಯವನ್ನು ಊಹಿಸಿದ್ದಾರೆ?

ನಾನೂ ನೋಡಿದೆ, ಆ ಕಂಬ ಅವರು ಹಿಡಿದುಕೊಂಡದ್ದಕ್ಕೇ ನಿಂತಿದೆ. ಬಹಳ ತೇಜಸ್ವಿ.

ಇಂತಹ ಮಾತನ್ನೆಲ್ಲ ಕೇಳುತ್ತಿದ್ದ ಡಿಲೈಟಾನಂದರು, ಶಿಷ್ಯಾ ಟೊಂಯ್ಕಾ ಎಂದರು. ಅಷ್ಟರಲ್ಲಿ ಮಳೆಗೋ, ಗಾಳಿಗೋ ಟೊಂಯ್ಕನವರ ನಿರಾಲಂಬಾ ಸ್ಥಿತಿ ಹೋಗಿ ಸ್ವ ಅವಲಂಬಕ್ಕೆ ಬಂದಿತ್ತು. ಗುರುಗಳೇ ಎಂದು ಅಡ್ಡಬಿದ್ದ.

ಸ್ವಲ್ಪ ಸಮಯ ಕಳೆದಮೇಲೆ ಸೃಷ್ಟಿ ಒಂದೇ, ದೃಷ್ಟಿ ಬೇರೆ ಎನ್ನುವುದು ಸ್ವಯಂ ಅರ್ಥವಾಯಿತು ಟೊಂಯ್ಕರಿಗೆ.

ಉಘೇ.. ಉಘೇ..

ಮುಂದುವರೆಯುವುದು.


ಹಕ್ಕುಗಳು © Ishwara Bhat K|ಈಶ್ವರ ಭಟ್ ಕೆ.

ಮಹಿಳೆ ಮತ್ತು ಆರೋಗ್ಯ -1

ಮಹಿಳೆ ಮತ್ತು ಆರೋಗ್ಯ

                  ಹೆಣ್ಣು ಸಂಸಾರದ ಕಣ್ಣು. ಇಡೀ ಜಗತ್ತನ್ನೇ ಗೆಲ್ಲುವ ಶಕ್ತಿ ಅವಳಲ್ಲಿದೆ. ತನ್ನ ಆಸಕ್ತಿ, ಅಭಿರುಚಿ, ಜವಾಬ್ದಾರಿಗಳನ್ನು ಸಂಸಾರದಲ್ಲಷ್ಟೇ ಅಲ್ಲದೆ ಸಮಾಜದಲ್ಲೂ ತೋರುವುದು/ವಹಿಸುವುದು ಅವಳ ವೈಶಿಷ್ಟ್ಯ. ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುವ ಅವಳು ಸಂಸಾರ ಹಾಗು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತನ್ನ ಆರೋಗ್ಯ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಮರೆಯುತ್ತಾಳೆ. ಈಗಿನ ಜಂಜಾಟದ ಒತ್ತಡದ ಜೀವನದಲ್ಲಿ ಸದಾಕಾಲ ಎನರ್ಜಿ ಉಳಿಸಿಕೊಳ್ಳುವುದು ಅತ್ಯಗತ್ಯ.

ಇಲ್ಲಿವೆ ಕೆಲವು ಸುಲಭೋಪಾಯಗಳು:

  • ಸಮತೋಲನ ಆಹಾರ ಸೇವಿಸುವುದರಿಂದ ಅಧಿಕ ಸುಸ್ತು, ಆಯಾಸವನ್ನು ತಡೆಗಟ್ಟಬಹುದು. ಸಮತೋಲನ ಆಹಾರ ಕಾರ್ಬೋಹೈಡ್ರೇಟ್, ಪ್ರೋಟೀನ್, ಫ್ಯಾಟ್, ವಿಟಮಿನ್ಸ್, ಖನಿಜಗಳು, ನೀರು ಈ ಎಲ್ಲ ಪೋಷಕಾಂಶಗಳನ್ನು ಹೊಂದಿರಬೇಕು.
  • ಪ್ರತಿನಿತ್ಯ ಆಹಾರದಲ್ಲಿ ಹಸಿ ತರಕಾರಿ, ಹಣ್ಣು, ಸೊಪ್ಪುಗಳನ್ನು ಹೇರಳವಾಗಿ ಬಳಸಬೇಕು. ಇವುಗಳಿಂದ ಕಬ್ಬಿಣ, ಕ್ಯಾಲ್ಸಿಯಂ, ನಾರು, ಖನಿಜಾಂಶ ಮತ್ತು ಜೀವಸತ್ವಗಳು ದೊರೆಯುತ್ತವೆ.
  • ದಿನಕ್ಕೆ 2-3 ಲೀಟರಿನಷ್ಟು ನೀರು ಕುಡಿಯಬೇಕು. ಮಿತವಾದ ಕಾಫಿ/ಟೀ ಸೇವನೆಯು ಸಹ ಮಾನಸಿಕ ಸ್ವಾಸ್ಥ್ಯಕ್ಕೆ ಉಪಯೋಗವಾಗಬಹುದು.
  • ಖಾಲಿ ಹೊಟ್ಟೆಗೆ ಸೇವಿಸಿದ ಲೋಳೆರಸದ ಜ್ಯೂಸ್ ಇಡೀ ದಿನ ನಿಮ್ಮನ್ನು ಹೈ ಎನರ್ಜೆಟಿಕ್ ಆಗಿರುವಂತೆ ಮಾಡಬಲ್ಲದು. ಅಂತೆಯೆ ಡ್ರೈ ಫ್ರೂಟ್ಸ್ ಕೂಡ.
  • ಉತ್ತಮ ಆಹಾರ ಕ್ರಮದ ಜೊತೆಗೆ ವ್ಯಾಯಾಮವು ಅತ್ಯಗತ್ಯ. ನಿಯಮಿತ ವ್ಯಾಯಾಮ, ಯಾವುದೇ ರೀತಿಯ ದೈಹಿಕ ಚಟುವಟಿಕೆಯೂ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಡಲು ಸಹಕಾರಿ. ನಡಿಗೆ, ಈಜು, ಕ್ರೀಡೆಗಳು, ತೋಟಗಾರಿಕೆ, ಸೈಕ್ಲಿಂಗ್ ಇತ್ಯಾದಿ ಚಟುವಟಿಕೆಗಳು ವ್ಯಾಯಾಮ ನೀಡಬಲ್ಲವು.
  • ಇವೆಲ್ಲದರೊಂದಿಗೆ ಸ್ಥಿತಪ್ರಜ್ಞ ಮನಸ್ಸು ಆರೋಗ್ಯ ಭಾಗ್ಯಕ್ಕೆ ಸೋಪಾನವಾಗಬಲ್ಲದು.

 


  • Written By : Chaitra R Rao|Nutritionist

ಸ್ಟಫ್ಡ್ ಜಾಮೂನ್ ರಬಡಿ

ಸ್ಟಫ್ಡ್ ಜಾಮೂನ್ ರಬಡಿ

26168581_1846101678795724_4111697306722738650_n

ಬೇಕಾಗುವ ಸಾಮಗ್ರಿಗಳು:

ಜಾಮೂನ್ ಪೌಡರ್
ಕೋವಾ
ಸಕ್ಕರೆ
ಬಾದಾಮಿ
ಏಲಕ್ಕಿ
ಗೋಡಂಬಿ
ಕೇಸರಿ
ಹಾಲು
ಸ್ವಲ್ಪ ಕಂಡೆನ್ಸ್ಡ್ ಹಾಲು
ಕರಿಯಲು ಎಣ್ಣೆ

ಮಾಡುವ ವಿಧಾನ.

ಮೊದಲಿಗೆ ಹಾಲನ್ನು ಸಣ್ಣ ಉರಿಯಲ್ಲಿ ಕಾಯಿಸಿ. ಕುದಿಯುವ ಹದಕ್ಕೆ ಬರುತ್ತಿದ್ದಂತೆ ಸಕ್ಕರೆ, ಏಲಕ್ಕಿ, ಸ್ವಲ್ಪ ತುರಿದ ಬಾದಾಮಿ ಹಾಕಿ ಕುದಿಸಿ. ಗಟ್ಟಿಯಾಗುತ್ತಿದ್ದಂತೆ ಗ್ಯಾಸ್ ಆರಿಸಿ ಸ್ವಲ್ಪ ತಣ್ಣಗಾಗಲು ಬಿಡಿ.
ನಂತರ,
ಒಂದು ಕಪ್ ಸಕ್ಕರೆ, ಒಂದೂಕಾಲು ಕಪ್ ನೀರಿನ ಹದಕ್ಕೆ ಒಂದೆಳೆ ಸಕ್ಕರೆ ಪಾಕ ಮಾಡಿಟ್ಟುಕೊಳ್ಳಿ.
ನಂತರ..
ಜಾಮೂನ್ ಪೌಡರ್ ಗೆ ಒಂದು ಕಪ್ ಹಾಲಿನ ಹದಕ್ಕೆ ಕಾಲು ಕಪ್ ಕೋವಾ, ಸ್ವಲ್ಪ ನೀರು ಹಾಕಿ ಮೃದುವಾಗಿ ಹಿಟ್ಟು ಕಲಸಿಕೊಳ್ಳಿ.
ಸ್ಟಫಿಂಗ್ ಗೆ..
ಕಾಲು ಕಪ್ ತುರಿದ ಅಥವಾ ಸಣ್ಣಗೆ ಹೆಚ್ಚಿದ ಬಾದಾಮಿ, ಸಣ್ಣಗೆ ತುಂಡುಮಾಡಿದ ಗೋಡಂಬಿ, ಕೇಸರಿ ಎಸಳುಗಳು ಜೊತೆಗೆ ಸ್ವಲ್ಪ ಕೋವಾ ಹಾಕಿ ಮಿಕ್ಸ್ ಮಾಡಿಟ್ಟುಕೊಳ್ಳಿ.

ಜಾಮೂನು ಪುಟ್ಟ ಪುಟ್ಟ ಉಂಡೆಗಳಾಗಿ ಮಾಡಿಕೊಂಡು ಅದರ ಒಳಗೆ ಸ್ಟಫ್ ಮಾಡಿಟ್ಟ ಬಾದಾಮಿ, ಗೋಡಂಬಿ ಮಿಕ್ಸ್ ಗಳನ್ನು ಸ್ವಲ್ಪ ತುಂಬಿ.
ಮತ್ತೆ ಉಂಡೆ ಕಟ್ಟಿ, ಸಣ್ಣ ಉರಿಯಲ್ಲಿ ಕೆಂಪಗಾಗುವ ವರೆಗೆ ಕರಿದು, ಸಕ್ಕರೆಪಾಕದಲ್ಲಿ ಮುಳುಗಿಸಿಡಿ.
ಪಾಕ ಚೆನ್ನಾಗಿ ಕುಡಿದು ಉಬ್ಬಿಕೊಂಡಮೇಲೆ , ಅದರಿಂದ ತೆಗೆದು ರೆಡಿ ಮಾಡಿಟ್ಟುಕೊಂಡ ರಬಡಿಯೊಡನೆ ಅತಿಥಿಗಳಿಗೆ ಕೊಡಿ.


ಚಿತ್ರ ಮತ್ತು ಬರಹ : ಸಂಗೀತಾ ಭಟ್