ಗುಂಡೂರಾಯರು ಹೀಗೇ ಒಂದ್ಸಲ ಮಿತ್ರನ ಮನೆಗೆ ಊಟಕ್ಕೆ ಹೋಗಿದ್ರು. ಹಾಗಲಕಾಯಿ ಕಂಡ್ರಾಗದ ಗುಂಡೂರಾಯರ ವಿಷಯ ಮಿತ್ರನಿಗೆ ಗೊತ್ತಿದ್ದರೂ ಅವರ ಮನೆಯಲ್ಲಿ ಬೆಳೆದ ಒಳ್ಳೇ ಕಹಿ ಹಾಗಲಕಾಯಿ ಪಲ್ಯ ಸಿದ್ಧ ಆಗಿತ್ತು.

ಅಡುಗೆ ಮನೆಗೆ ಹೋಗಿದ್ದ ಮಿತ್ರ, ಹಾಗಲಕಾಯಿ ಕಹಿ ಎಷ್ಟಿದೆ ಎಂದು ಅಳೆದೂ ಆಗಿತ್ತು. ನನ್ನ ಸ್ನೇಹಿತ ಗುಂಡೂರಾಯರಿಗೆ ಹಾಗಲಕಾಯಿ ಆಗಲ್ಲ ಕಣೆ, ಇಷ್ಟ ಇಲ್ಲ.. ಅದೂ ಕಹಿ ಬೇರೆ. ಸ್ವಲ್ಪ ಹಾಕು, ಬೇಡದಿದ್ರೆ ಎಲೆಯಲ್ಲೇ ಬಿಡಲಿ ಆಯ್ತಾ.. ಅಂತ ಹೇಳಿದ್ರು ಹೆಂಡ್ತಿಗೆ.

ಇನ್ನೇನು ಊಟಕ್ಕೆ ಕೂತಾಯ್ತು. ಹಾಗಲಕಾಯಿ ಪಲ್ಯ ಒಂದು ಸೌಟ್ ಬಿತ್ತು. ಮತ್ತೆ ಮೂರ್ನಾಲ್ಕು ಬಗೆ ಪಲ್ಯ, ಕೇಸರೀಬಾತು, ಕೋಸಂಬ್ರಿ ಎಲ್ಲಾ ಬಿತ್ತು ಎಲೆಗೆ.

ಗುಂಡೂರಾಯರಿಗೆ ಹಾಗಲಕಾಯಿ ನೋಡಿದ ಕೂಡ್ಲೇ ಅರ್ಧ ಜೀವ ಧಸಕ್ಕಂತು. ಎಲೆಗೆ ಬಿದ್ದ ಮೇಲೆ ಅದನ್ನು ಬಿಡುವುದು ಸಾಧ್ಯವಿಲ್ಲ. ಏನಾದರೂ ಆಗಲಿ, ಮೊದಲು ಈ ಕಹಿ ಹಾಗಲ ನುಂಗಿ ಬಿಡೋದು, ಆಮೇಲೆ ಸಿಹಿ ತಿಂದ್ರಾಯ್ತು ಅಂತ ಲೆಕ್ಕಾಚಾರ ಹಾಕಿದ್ರು.

ಊಟ ಶುರುವಾಗುವಾಗ್ಲೇ, ಹಾಗಲಕಾಯಿಯ ಪಲ್ಯವನ್ನು ಒಂದು ಉಂಡೆ ಮಾಡಿ ನುಂಗಿಯೇ ಬಿಟ್ರು ಗುಂಡೂರಾಯರು. ದೊಡ್ಡ ಯುದ್ಧ ಗೆದ್ದ ನಗುವನ್ನು ಎಲ್ಲರಿಗೂ ತೋರಿಸಿದ್ರು..

ಅದೆಲ್ಲಿದ್ರೋ ಮಿತ್ರನ ಹೆಂಡ್ತಿ – ” ಏನ್ರೀ ನೀವು, ಗುಂಡೂರಾಯರಿಗೆ ಹಾಗಲಕಾಯಿ ಆಗಲ್ಲ ಅಂದ್ರಿ?, ಈಗ ನೋಡಿ, ಮೊದ್ಲು ಹಾಗಲಕಾಯಿ ಪಲ್ಯಾನ ಅಷ್ಟು ಚಪ್ಪರಿಸ್ಕೊಂಡ್ ತಿಂದ್ರು!” ಎಂದು ಹೇಳಿ, ಮತ್ತೆರಡು ಸೌಟು ಹಾಗಲಕಾಯಿ ಪಲ್ಯ ಎತ್ತಿ ಗುಂಡೂರಾಯರ ಎಲೆಗೆ ಹಾಕಿದ್ರು.

ಇಡೀ ಗ್ರಾಮದ ಹಾಗಲ ಬಳ್ಳಿಯ ನಾಶಕ್ಕಾಗಿ ಗುಂಡೂರಾಯರು ಟೊಂಕ ಕಟ್ಟಿ ನಿಂತಿದ್ದಾರೆ ಈಗ.

Leave a Reply

This site uses Akismet to reduce spam. Learn how your comment data is processed.