ಮನಸೆಂಬ ಮಾಯದ ಕನ್ನಡಿ – ಬಿಂಬ ೪

ಛೇ ಅದೇನು ಟ್ರಾಫಿಕ್, ಸಿಗ್ನಲ್ ಲ್ಲಿ ನಿಂತು ಆಗ್ಲೇ ಹತ್ತು ನಿಮಿಷನೇ ಆಗೋಯ್ತು, ಯಾವಾಗ ಮೂವ್ ಆಗತ್ತೋ ಗೊತ್ತಿಲ್ಲ ಅಂತ ಬೈಕೊಂಡು ಮತ್ತೆ ಯೋಚನೆಯ ಸುಳಿಗೆ ಸಿಲುಕಿಕೊಂಡಳು ಸಹನಾ..

ಶ್ಯಮಂತ್ ಅಸೈನ್ಮೆಂಟ್ ಮುಗ್ಸಿದ್ನೋ ಇಲ್ವೋ.. ರಾಹುಲ್ ಜೊತೆ ಅಷ್ಟೊಂದು ಜಗಳ ಆಡ್ಬಾರ್ದಿತ್ತು, ಶ್ಯಮಂತ್ ಬಗ್ಗೆ ಗಮನ ಕೊಡೋಕಾಗ್ತಿಲ್ಲ.. ನಾನಾದ್ರೂ ಏನ್ಮಾಡ್ಲಿ ? ಚೆನ್ನಾಗಿ ನಡ್ಕೊಂಡು ಹೋಗ್ತಿತ್ತಲ್ಲ ಜೀವನ ?! ರಾಹುಲ್ ಕೆಲಸ ಕಳ್ಕೊಳ್ಳೋವರೆಗೂ ಕಷ್ಟ ಅಂದ್ರೇನು ಅನ್ನೋ ಅರಿವಿಲ್ಲದಂತೆ ಒಳ್ಳೆ ಐಶಾರಾಮಿ ಬದುಕೇ ನಡೀತಿತ್ತಲ್ಲ? ಒಳ್ಳೇ ಸಾಫ್ಟ್ವೇರ್ ಇಂಜಿನಿಯರ್, ಕೈತುಂಬಾ ಸಂಬಳ, ಒಳ್ಳೇ ಮನೆನೂ ಆಯ್ತು, ದೊಡ್ಡ ಕಾರು, ವೀಕೆಂಡ್ಸ್ ತಿರುಗಾಟ ಎಲ್ಲವೂ ಚೆನ್ನಾಗೇ ರೂಢಿ ಆಗಿತ್ತು. ಕೆಲಸ ಕಳ್ಕೊಂಡಮೇಲೆ, ಈ ಎಮ್ ಐ ಕಟ್ಟೋದ್ರಲ್ಲಿ, ದೊಡ್ಡ ಮನೆ ಮಾರಬೇಕಾಗಿ ಬಂತು, ಈಗ ಸಣ್ಣ ಅಪಾರ್ಟ್ಮೆಂಟ್.. ದೊಡ್ಡ ಮನೆ ರೂಢಿಯಾಗಿದೆ, ಹೊಂದ್ಕೊಳ್ಳೋದು ಕಷ್ಟ. ಸಾಲಕ್ಕೆ ಇರೋ ಬರೋ ಆಸ್ತಿ ಕರಗಿಹೋಗ್ತಿದೆ !

ನಾನೂ ದುಡೀಬೇಕಾಗಿರೋ ಪರಿಸ್ಥಿತಿ ! ರಾಹುಲ್ ಡಿಪ್ರೆಶನ್ ಗೆ ಹೋಗ್ತಿದ್ದಾನೆ, ಸಣ್ಣಪುಟ್ಟ ವಿಷ್ಯಕ್ಕೆ ಕೋಪ, ಜಗಳ, ಸಾಕಾಗಿದೆ ! ನಿನ್ನೆಯೂ ಏನೋ ಪುಟ್ಟ ವಿಷಯವೇ ಅಲ್ವೇ ಆಗಿದ್ದು ? ಅದೆಷ್ಟು ಕೋಪ ಮಾಡ್ಕೊಂಡ ! ಆಫೀಸಲ್ಲಿ ಕತ್ತೆ ಥರ ದುಡಿದು ಬರ್ತೀನಿ ನಾನು, ನಂಗೂ ಸಾಕಾಗಿದೆ ! ಮನೆಗೆ ಹೋದ್ಮೇಲೆ ಕನ್ವಿನ್ಸ್ ಮಾಡ್ಬೇಕು ಹೇಗೋ ಶ್ಯಮಂತ್ ಗೆ ಒಂದು ದಾರಿ ಮಾಡ್ಕೊಟ್ರೆ ಸಾಕು ! ಯೋಚನೆ ಮುಗೀತಿಲ್ಲ.. ಟ್ರಾಫಿಕ್ ಮೂವಾಯ್ತಲ್ಲ? ತರಾತುರಿಯಿಂದ ಮನೆಗೆ ಹೋದಳು..

 

ಮನೆಯ ಮುಂದೆ ತುಂಬಾ ಜನ ಸೇರಿದ್ರು, ಏನಾಗ್ತಿದೆ ? ಎಲ್ಲರನ್ನೂ ಸರಿಸಿ ಎದುರಿನ ದೃಷ್ಯ ನೋಡ್ತಿದ್ದಂಗೆ ಕುಸಿದು ಬಿದ್ದಳು ! ಯಾರೋ ಮಾತಾಡಿಕೊಳ್ತಿದ್ರು.. “ಗಂಡಹೆಂಡತಿ ಜಗಳ, ರೋಸಿಹೋಗಿ ಆತ್ಮಹತ್ಯೆ ಮಾಡ್ಕೊಂಡ್ನಂತೆ”!


By: Sangeetha Bhat

Advertisements

ಮನಸೆಂಬ ಮಾಯದ ಕನ್ನಡಿ – ಬಿಂಬ ೩

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೇ ಒಂದು ದಿನ
ಕಡಲನೂ ಕೂಡಬಲ್ಲೆನೇ ಒಂದು ದಿನ

ನೀನು ನನ್ನ ಪಾಲಿಗೆ ಕಡಲಿನಂತೆ ಕಣೋ.  ನಾನು ಕಡಲನ್ನು ಸೇರುವ ನದಿಯಂತೆ.
ನಿನ್ನ ಪ್ರೀತಿಯ ಅಲೆಯಲ್ಲಿ ತೇಲಿ ಹೋಗಬೇಕು.. ನಿನ್ನ ಮಾತುಗಳನ್ನು ಕೇಳುತ್ತ ನಾ ಕಳೆದು ಹೋಗಬೇಕು..ನನ್ನ ಆಸೆಗಳು ಕೊನೆ ಇಲ್ಲದವು ಕಣೋ ಹುಡುಗಾ.. ಅದಕ್ಕೆಲ್ಲ ನೀನೇ ಕಾರಣ ಅಂತ ಬೇರೆ ಹೇಳಬೇಕಾ ? ಅದರ ಅರಿವು ನಿನಗಿದೆ ಅಲ್ಲವಾ ?ಆದರೂ ಯಾವುದನ್ನೂ ಅರಿಯದ ಅಮಾಯಕನಂತೆ ನಡೆದುಕೊಳ್ಳುವದಾದರೂ ಯಾಕೆ ನೀನು ?

“ಪ್ರೀತಿ” ಎಂದರೆ ಏನು ಅನ್ನುವದನ್ನು ನಿನ್ನಿಂದಲೇ ಅರಿತಿದ್ದು ಕಣೋ.‌ ಎಲ್ಲವೂ ಅರ್ಥವಾಗಿ ಇನ್ನೇನು ನಿನ್ನ ಪ್ರೀತಿ ನನ್ನದು ಎಂದು ಸಂತಸ ಪಡುವ ಹೊತ್ತಿಗೆ ಅಪರಿಚಿತನಂತೆ ವರ್ತಿಸುತ್ತಿರುವೆಯಲ್ಲ.. ಇದು ನಿನಗೆ ತರವೇ ಗೆಳೆಯಾ?

ನೀನಿಲ್ಲದ ಬದುಕು ಹೂಗಳಿಲ್ಲದ ಹೂದೋಟದಂತೆ ಕಣೋ.. ಅಂದವಿಲ್ಲ, ಆಹ್ಲಾದವಿಲ್ಲ.. ಬದುಕಬೇಕಷ್ಟೇ.. ಮರಳಿ ಬಂದು ನನ್ನ ಬದುಕನ್ನು ಅರಳಿಸಬಾರದೇ ??

ನಿನ್ನ ಜೊತೆ ಮಾತನಾಡುತ್ತಾ ಇದ್ದರೆ ಸಮಯ ಕಳೆದದ್ದೇ ಗೊತ್ತಾಗುವದಿಲ್ಲ ಅನ್ನುತ್ತಿದ್ದವನು ನೀನು.. ಇಂದು ನನ್ನೊಂದಿಗೆ ನಾಲ್ಕು ಮಾತನಾಡಲು ಸಮಯವೇ ಇಲ್ಲದವನಂತೆ ನಡೆದುಕೊಳ್ಳುತ್ತಿರುವೆಯಲ್ಲ.. ನಾ ಮಾಡಿದ್ದಾದರೂ ಏನು ? ಚಿಕ್ಕ ಮಕ್ಕಳಂತೆ ಆಡ್ತೀಯಾ ಕಣೇ, ನಿನ್ನ ಬುದ್ಧಿ ಬೆಳೆಯುವದು ಯಾವಾಗ ಅನ್ನುತ್ತಿದ್ದೆಯಲ್ಲ.. ನಿಂಗೊತ್ತಾ ? ನನಗೆ ನಿನ್ನಲ್ಲಿ ಅಮ್ಮ ಕಾಣ್ತಾ ಇದ್ಲು ಕಣೋ..ನಾನು ಮಗುವಾಗಿಬಿಡುತ್ತಿದ್ದೆ..ಇನ್ನೆಂದೂ ಹಾಗೆ ನಡೆದುಕೊಳ್ಳಲಾರೆ.. ಮರಳಿ ಬಂದು ಬಿಡೋ..

ಸಾಯಿಸುವದಿದ್ದರೆ ಒಮ್ಮೇಲೆ ಸಾಯಿಸಿಬಿಡು.. ಹೀಗೆ ನಿರ್ಲಕ್ಷಿಸಿ ಬದುಕಿದ್ದೂ ಸತ್ತಂತೆ ಮಾಡಬೇಡ.. ನೀನಿಲ್ಲದ ಬದುಕಿಗೆ ಅರ್ಥ ಇಲ್ಲ.. ನೀ ಜೊತೆಯಿದ್ದರೆ ಅದುವೇ ಎಲ್ಲ.. ನೀನಿದ್ದರೆ ಜಗದ ಎಲ್ಲ ಸಿರಿ ಸಿಕ್ಕಂತೆ.. ನೀನಿಲ್ಲದಿದ್ದರೆ ಎಲ್ಲ ಇದ್ದರೂ ಏನೂ ಇಲ್ಲದಂತೆ….

ಕಡಲ ಸೇರದೆ ನಡುವೆಯೇ ಬರಡಾಗುವ ನದಿಯನ್ನಾಗಿ ಮಾಡದೆ, ಜುಳುಜುಳು ಹರಿದು ಸಾಗರ ಸೇರುವಂತೆ ಮಾಡು.. ನಿನಗಾಗಿ ಕಾಯುತ್ತಿರುವೆ,,ಕಾಯುತ್ತಲೇ ಇರುವೆ…

ಇಂತಿ ನಿನ್ನವಳಾಗ ಬಯಸುವ..

pexels-photo-415299.jpeg


By: Vindya Hegde

ಮಹಿಳೆ ಮತ್ತು ಆರೋಗ್ಯ -2

ಆಸ್ಟಿಯೋಪೊರೋಸಿಸ್ (Osteoporosis)

ಇದು ಮೂಳೆಗೆ ಸಂಬಂಧಿಸಿದಂತ ಖಾಯಿಲೆ. ಈ ಸ್ಥಿತಿಯಲ್ಲಿ ಮೂಳೆಯು ಸಾಂದ್ರತೆಯನ್ನು ಕಳೆದುಕೊಳ್ಳುತ್ತಾ ಶಿಥಿಲವಾಗುತ್ತದೆ. ಮೂಳೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಸೌಮ್ಯವಾದ ಒತ್ತಡಗಳಿಗೂ ಮೂಳೆಗಳು ಮುರಿಯುವ ಅಪಾಯವನ್ನು ಹೆಚ್ಚಿಸುತ್ತದೆ.

35 ವರ್ಷದ ನಂತರ ಪ್ರತಿ ಮಹಿಳೆಯರಲ್ಲೂ ಮೂಳೆಯ ಸಾಂದ್ರತೆ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ ಮತ್ತು ಋತುಬಂಧದ(ಮೆನೋಪಾಸ್) ನಂತರ ಮೂಳೆಯು ಹೆಚ್ಚು ವೇಗವಾಗಿ ದುರ್ಬಲವಾಗುತ್ತದೆ.

ಪ್ರಮುಖ ಅಪಾಯಕಾರಿ ಅಂಶಗಳು:

 • ಅನುವಂಶಿಕತೆ
 • ಜಡಜೀವನ
 • ವ್ಯಾಯಾಮದ ಕೊರತೆ
 • ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ಡಿ-ಜೀವಸತ್ವದ ಕೊರತೆ
 • ಧೂಮಪಾನ ಮತ್ತು ಮದ್ಯಪಾನ
 • ಅತೀ ಕಡಿಮೆ ದೇಹದ ತೂಕ
 • ರುಮಾಟಾಯ್ಡ್ ಆರ್ಥ್ರೈಟಿಸ್ (ತೀವ್ರ ಉರಿಯೂತ/ ಸಂಧಿವಾತ)
 • ಅರೆಜೀರ್ಣತೆ (ಪೋಷಕಾಂಶಗಳು ಸರಿಯಾಗಿ ಜೀರ್ಣಾಂಗವ್ಯೂಹದಲ್ಲಿ ಹೀರಲ್ಪಡುವುದಿಲ್ಲ)
 • ಕುಂದಿದ ಈಸ್ಟ್ರೋಜನ್ ಪ್ರಮಾಣ (ಋತುಬಂಧದ ಸಮಯದಲ್ಲಿ ಅಥವಾ ಅಂಡಾಶಯಗಳನ್ನು ತೆಗೆಸಿದ್ದಲ್ಲಿ)
 • ಕೀಮೋಥೆರಪಿ
 • ಥೈರಾಯ್ಡ್

ಈ ಸ್ಥಿತಿಯು ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಕಾಣಬಹುದಾದರೂ ಮಹಿಳೆಯರಿಗೇ ಹೆಚ್ಚು ಅಪಾಯ. ಆರೋಗ್ಯಕರ ಜೀವನಶೈಲಿ ಮತ್ತು ವೈದ್ಯರ ಸಲಹೆಯಿಂದ ಈ ಸಮಸ್ಯೆಯನ್ನು ತಡೆಗಟ್ಟಬಹುದು.

ರೋಗದ ಗುಣಲಕ್ಷಣಗಳು:

ಆಸ್ಟಿಯೋಪೊರೋಸಿಸ್ ಸಾಕಷ್ಟು ವರ್ಷಗಳ ಅವಧಿಯಲ್ಲಿ ನಿಧಾನವಾಗಿ ಬೆಳವಣಿಗೆಯಾಗುತ್ತದೆ. ರೋಗಲಕ್ಷಣಗಳನ್ನು ಗುರುತಿಸಲು ಹಲವಾರು ತಿಂಗಳುಗಳು ತೆಗೆದುಕೊಳ್ಳಬಹುದು.

 • ಮೂಳೆ ಸವೆತೆ
 • ತೀವ್ರವಾದ ಮಂಡಿನೋವು
 • ಸೂಕ್ಷ್ಮವಾದ ಒತ್ತಡಕ್ಕೆ ಮೂಳೆ ಮುರಿಯುವುದು (ಕಾಲು/ಸೊಂಟ/ಕೈ/ ಪಕ್ಕೆಲುಬು ಮೂಳೆ)
 • ತೀವ್ರವಾದ ಬೆನ್ನು ನೋವು
 • ಕುಗ್ಗಿದ ಅಥವಾ ಬಗ್ಗಿದ ದೇಹದ ಭಂಗಿ.

 

 image

ಆಸ್ಟಿಯೊಪೊರೋಸಿಸ್: ಚಿಕಿತ್ಸೆ, ಪೋಷಣೆ ಮತ್ತು ಮನೆ ಉಪಚಾರ

 • ಮೇಲಿನ ಯಾವುದೇ ಗುಣಲಕ್ಷಣಗಳು ಕಂಡುಬಂದಲ್ಲಿ ತಪ್ಪದೇ ವೈದ್ಯರನ್ನು ಕಾಣುವುದು.
 • 35 ವರ್ಷದ ನಂತರ ಆರೋಗ್ಯದ ಪೂರ್ಣ ತಪಾಸಣೆ (Total Health Check up) ಮಾಡುವುದು.
 • ಆಹಾರದಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಮತ್ತು ಡಿ-ಜೀವಸತ್ವವನ್ನು ಬಳಸುವುದು
  • ಕ್ಯಾಲ್ಸಿಯಂ ಮತ್ತು ಜೀವಸತ್ವ ಡಿ ಅಹಾರದ ಮೂಲಗಳು
   • ಡೈರಿ ಉತ್ಪನ್ನಗಳು: ಹಾಲು, ಮೊಸರು, ಚೀಸ್, ಪನೀರ್ ಮುಂತಾದ ಡೈರಿ ಉತ್ಪನ್ನಗಳು ಕ್ಯಾಲ್ಸಿಯಂ ಸಮೃದ್ಧವಾಗಿವೆ
   • ಹಸಿರು ತರಕಾರಿಗಳು ಕ್ಯಾಲ್ಸಿಯಂನ ಸಮೃದ್ಧ ಮೂಲಗಳಾಗಿವೆ. ಟರ್ನಿಪ್ ಗ್ರೀನ್ಸ್, ಕೊಲಾರ್ಡ್ ಗ್ರೀನ್ಸ್, ಲೆಟ್ಯೂಸ್, ಸೆಲರಿ, ಬ್ರೊಕೊಲಿ, ಅಣಬೆಗಳನ್ನು ಸೇವಿಸಿ.
   • ಕ್ಯಾಲ್ಸಿಯಂನ ಹೆಚ್ಚಿನ ಮೂಲಗಳು ಮೀನು, ಕಿತ್ತಳೆ, ಬಾದಾಮಿ, ಎಳ್ಳಿನ ಬೀಜಗಳು ಮತ್ತು ಮೊಳಕೆ ಕಟ್ಟಿದ ಕಾಳುಗಳು ಮತ್ತು ಕಿತ್ತಳೆ ರಸವನ್ನು ಹೊಂದಿರುವ ಕ್ಯಾಲ್ಸಿಯಂ-ಬಲವರ್ಧಿತ ಆಹಾರಗಳು.
   • ಬಾದಾಮಿ, ವಾಲ್ ನಟ್ಸ್, ಖರ್ಜೂರ, ಅಂಜೂರ
   • ಜೋನಿಬೆಲ್ಲ
   • ಶ್ರಿಂಪ್, ಸಾಲ್ಮನ್, ಕ್ರಾಬ್, ಸಾರ್ಡೈನ್ಸ್, ಮೊಟ್ಟೆ.
   • ವಿಟಮಿನ್ ಡಿ ಮುಖ್ಯವಾದುದು ಏಕೆಂದರೆ ಅದು ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚಿನ ವಿಟಮಿನ್ ಡಿ ಅನ್ನು ಸೂರ್ಯನ ಬೆಳಕಿನಿಂದ ಪಡೆಯಬಹುದು ಮತ್ತು ಇತರ ಆಹಾರ ಮೂಲಗಳಾದ ಕೊಬ್ಬಿನ ಮೀನು, ಯಕೃತ್ತು, ಮೊಟ್ಟೆಗಳಿಂದ ಪಡೆಯಬಹುದು.
 • ಗಿಡಮೂಲಿಕೆಗಳು ಮತ್ತು ಮಸಾಲೆಗಳು: ತುಳಸಿ, ಥೈಮ್, ದಾಲ್ಚಿನ್ನಿ, ಪುದೀನಾ, ಬೆಳ್ಳುಳ್ಳಿ, ಓರೆಗಾನೊ, ರೋಸ್ಮರಿ ಮತ್ತು ಪಾರ್ಸ್ಲಿ.
 • ನಿಯಮಿತ ವ್ಯಾಯಾಮ ಮತ್ತು ಸರಿಯಾದ ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಅತ್ಯಾವಶ್ಯಕ

ಟಿಪ್ಸ್:

ಅರಿಶಿಣ ಪುಡಿ, ಮೆಂತ್ಯೆ ಪುಡಿ, ಒಣಶುಂಠಿ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ, ದಿನಾಲು ಬೆಳಿಗ್ಗೆ ಈ ಮಿಶ್ರಣವನ್ನು ಒಂದು ಚಮಚದಷ್ಟು ಬಿಸಿನೀರಿನ ಜೊತೆ ಸೇವಿಸಿದಲ್ಲಿ ಮಂಡಿನೋವು ಮತ್ತು ಉರಿಯೂತದ ಸಮಸ್ಯೆಯನ್ನು ತಡೆಗಟ್ಟಬಹುದು.

image


Written By : Chaitra R Rao|Nutritionist

 

 

 

 

 

 

 

 

 

 

 

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೨

ಪುಟ-೩

ಜಗತ್ತಿನ ಗುರುಗಳನ್ನು ನೋಡಿ ಬಲ್ಲವರು ಟೊಂಯ್ಕರು. ಆದರೆ ಡಿಲೈಟಾನಂದರ ಪೂರ್ವವನ್ನೂ ಉತ್ತರವನ್ನೂ ತಿಳಿಯಲಾರದವರು. ತಾನು ಓರ್ವನೇ ಶಿಷ್ಯ, ಆದರೆ ಗುರುವಿನಿಂದ ಏನನ್ನೂ ಕಲಿಯಲಿಲ್ಲ ಎನ್ನುವ ಒಂದು ಬೇಸರ ಇತ್ತೀಚೆಗೆ ಕಾಡುತ್ತಿತ್ತು. ಮಾಡುವುದಕ್ಕೇನೂ ಕೆಲಸ ಇಲ್ಲದೇ ಕುಳಿತವನೇ ಗುರು?

ಬೆಳಗ್ಗೆ ಸೂರ್ಯ ಮೂಡುವ ಮೊದಲೇ ಏಳುತ್ತಿದ್ದ ಡಿಲೈಟರು ದೂರದ ನಡಿಗೆಯನ್ನು ಮುಗಿಸಿ ವಾಪಸ್ಸು ಬರಬೇಕಾದರೆ ಟೊಂಯ್ಕರು ಎದ್ದಿರುತ್ತಿದ್ದರು. ಇತ್ತೀಚೆಗೆ ಯಾರ್ಯಾರೋ ಭಕ್ತರು ಬರುತ್ತಿದ್ದರಿಂದ ಹಣ್ಣು ಹಂಪಲುಗಳು, ತೆಂಗಿನಕಾಯಿ ಸಿಗುತ್ತಿದ್ದುದರಿಂದ ಆಹಾರದ ಬಗ್ಗೆ ಯೋಚನೆ ಇರಲಿಲ್ಲ.

ಕುಳಿತುಕೊಂಡು ಯೋಚಿಸಲು ಒಂದು ಕಲ್ಲು, ವಿರಮಿಸಲು ಗುಹೆಯಂತಹ ಜಾಗ, ಒಳ್ಳೆಯ ತಂಗಾಳಿ, ಒಂದಿನ್ನೂರು ಮೀಟರುಗಳ ಅಂತರದಲ್ಲೊಂದು ಅರಳೀಮರ, ಅಲ್ಲಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ ಸರಕಾರದ ಕೃಪೆಯ ಕಾಲುವೆಯ ನೀರು. ಸ್ವಲ್ಪ ಕೈಚಾಚಿದರೆ ಯಾರೂ ಗದರಿಸದ ಹುಲುಸಾದ ಜೋಳದ ಗದ್ದೆ. ಇನ್ನೇನು ಬೇಕಿರಲಿಲ್ಲ ಡಿಲೈಟರಿಗೆ.

ಡಿಲೈಟರು ಸುಮ್ಮನೇ ಕುಳಿತಾಗ, ಮಾತನಾಡದೇ ಇದ್ದಾಗ ಟೊಂಯ್ಕರಿಗೆ ಒಬ್ಬಂಟಿತನ ಕಾಡುತ್ತಿತ್ತು. ಆದರೂ ಗುರುಗಳು ಹೇಳಿಕೊಟ್ಟಂತೆ ಏಳು ಸೆಕೆಂಡು ಏನನ್ನೂ ಯೋಚಿಸದೇ ಇರಬಲ್ಲ ಶಕ್ತಿ ಬಂದಿತ್ತು. ಇನ್ನು ನಲ್ವತ್ತೊಂಭತ್ತು ಸೆಕೆಂಡು ಏನೂ ಯೋಚಿಸದೇ ಇರುವ ಶಕ್ತಿ ಬರಬೇಕಿತ್ತು.

ತಕ್ಕಮಟ್ಟಿಗೆ ಕಟ್ಟುಮಸ್ತಾಗಿದ್ದ ಟೊಂಯ್ಕರು ಒಂದು ದಿನ ಆ ಬೆಟ್ಟಕ್ಕೆ ಬರುವ ಕುರಿಹಿಂಡುಗಳನ್ನು ನೋಡುತ್ತಾ ಕುಳಿತಿದ್ದರು. ಪೂರ್ವದಲ್ಲಿ ಇಂತಹ ಕುರಿಗಳನ್ನು ನೋಡಿದರೆ ಬಾಯಿಯಲ್ಲಿ ಒಂದೂವರೆ ಚಮಚದಷ್ಟಾದರೂ ನೀರು ಬರುತ್ತಿತ್ತು ಟೊಂಯ್ಕರಿಗೆ. ಈಗ ಹಾಗಿಲ್ಲ, ಕುರಿಯ ಮಂದೆ, ಅದರ ಚಂದ, ಹುಲ್ಲು ತಿನ್ನುವಾಗ ಬರುವ ಗರ್ ಗರ್ ಧ್ವನಿ ಎಲ್ಲವೂ ಬಹಳ ಆಪ್ಯಾಯಮಾನವಾಗಿತ್ತು.

ಹೀಗೇ ನೋಡುತ್ತಿದ್ದಾಗ ಒಂದು ದಿನ ಒಬ್ಬರನ್ನು ಮಾತನಾಡಿಸಿದ. ಆ ವ್ಯಕ್ತಿಯೋ, ಯಾವುದೋ ದೂರದ ಊರಿನಿಂದ ಕುರಿಗಳನ್ನು ಹೊಡೆದುಕೊಂಡು ಬರುವ ವ್ಯಕ್ತಿ. ಸಣ್ಣ ಬೆಟ್ಟದ ಮೇಲೆ ಕುರಿಗಳಿಗೆ ಮೇಯುವುದಕ್ಕೆ ಒಂದು ಕುರಿಯನ್ನು ಬೆಟ್ಟದ ಯಜಮಾನನಿಗೆ ಕೊಟ್ಟಿದ್ದ. ಹೀಗಾಗಿ ಟೊಂಯ್ಕರಿಗೆ ಆ ಬೆಟ್ಟಕ್ಕೂ, ತಾನು ತಂಗುವ ಜಾಗಕ್ಕೂ ಒಬ್ಬ ಒಡೆಯನಿದ್ದಾನೆ ಎನ್ನುವ ವಿಷಯ ಸಿಕ್ಕಿದಂತಾಯ್ತು.

ಇನ್ನೊಂದು ದಿನ, ಗುರುಗಳು ಧ್ಯಾನದಲ್ಲಿದ್ದಾಗ ಆ ಬೆಟ್ಟವನ್ನೊಳಗೊಂಡ ಆಸ್ತಿಯ ಒಡೆಯರಾದ ಮಲ್ಲಪ್ಪರನ್ನು ಭೇಟಿಯಾಗಲು ಅವರ ಮನೆಗೆ ಹೋದರು. ಈ ಮಲ್ಲಪ್ಪನವರು ಊರಿನ ಜಾತ್ರೆಯ ಮುಖ್ಯಸ್ಥರಲ್ಲಿ ಒಬ್ಬರಾದುದರಿಂದ ಟೊಂಯ್ಕರನ್ನು ಗುರುತಿಸಿ ಅವರಿಗೆ ನೀರು, ಹಾಲು, ಫಲಗಳನ್ನು ಕೊಟ್ಟು ಬಂದ ಕಾರಣವನ್ನು ಕೇಳಿದರು. ಏನಿಲ್ಲವೆಂದೇ ಶುರುಮಾಡಿದ ಟೊಂಯ್ಕರು ಆ ಬೆಟ್ಟದ ಅಷ್ಟು ನಿರುಪಯುಕ್ತ ಜಾಗದಲ್ಲಿ ಗುರುಗಳ ವಾಸಕ್ಕೆ, ಬರುವ ಭಕ್ತಾದಿಗಳಿಗೆ ನೀರು, ಶೌಚ ಇತ್ಯಾದಿ ಕ್ರಿಯೆಗೆ ಸಹಕಾರಿಯಾಗುವ ಕಟ್ಟಡಕ್ಕೆ ಅನುಮತಿಯನ್ನು ಕೇಳಿದರು.

ಮಲ್ಲಪ್ಪನವರು ಶ್ರೀಮಂತರೂ ಹೌದು, ಡಿಲೈಟರ ಮೇಲೆ ಒಳ್ಳೆಯ ಗೌರವವಿದ್ದವರೂ ಹೌದು. ಆದರೆ ಕಮ್ಯೂನಿಷ್ಟರಲ್ಲ. ಹಾಗಾಗಿ ಜಾಗವನ್ನು ಕೊಡುವುದಕ್ಕೆ ಅವರಿಗೆ ಸರ್ವಥಾ ಮನಸ್ಸಿರಲಿಲ್ಲ. ಹಾಗೆಯೇ, ಡಿಲೈಟನಾಂದರ ಪರಮ ಕೃಪೆಯನ್ನು ಕಳೆದುಕೊಳ್ಳುವುದೂ ಇಷ್ಟವಿಲ್ಲದಿದ್ದುದರಿಂದ ಬೆಟ್ಟದಲ್ಲಿ ಅವರ ವಾಸವಿದ್ದುದಕ್ಕೆ ಆಕ್ಷೇಪವಿರಲಿಲ್ಲ. ಇತ್ತೀಚೆಗೆ ಭಕ್ತರು ಎಂದುಕೊಂಡು ಬರುತ್ತಿರುವ ಜನರಿಂದ ತೋಟ ಗದ್ದೆಗಳಿಗೆ ಸಮಸ್ಯೆಯಾಗುತ್ತಿದ್ದುದೂ ಅರಿವಿತ್ತು.

ಕೆಲವೊಂದು ಸಲ ಎರಡು ಆಯ್ಕೆಗಳೂ ತಪ್ಪಲ್ಲವೆನ್ನುವಾಗ ಯಾವುದಾದರೂ ಒಂದು ಆಯ್ಕೆ ಮಾಡಿ ಮತ್ತೊಂದನ್ನ ಆಯ್ಕೆ ಮಾಡಬಹುದಿತ್ತು ಎನ್ನುವ ಪರಿತಾಪ ಉಂಟಾಗುತ್ತದೆ. ಅಂತಹ ಒಂದು ಪರಿತಾಪ, ಗೊಂದಲದ ನಡುವೆ ಮಲ್ಲಪ್ಪನವರು ಆಗಲಿ, ನೋಡೋಣ ಎಂದು ಟೊಂಯ್ಕರನ್ನು ಕಳಿಸಿದರು.

ಅಂತಿರ್ಪೊಡೆ, ಇದೆಲ್ಲ ಸಮಾಚಾರವೂ ಡಿಲೈಟಾನಂದರ ಕಿವಿಗಳಿಗೆ, ಕಣ್ಣುಗಳಿಗೆ ತಿಳಿಯಲಿಲ್ಲ. ಒಂದು ದಿನ ಶ್ರೀಮಾನ್ ಮಲ್ಲಪ್ಪನವರ ಸಂಸಾರ ಸಮೇತವಾದ ಸವಾರಿ ಗುರುಗಳಿದ್ದಲ್ಲಿಗೆ ಬಂದಾಗ ಡಿಲೈಟಾನಂದರಿಗೆ ವಿಷಯವನ್ನು ಹೇಳಿದರು. ಯಾವುದೋ ಬಿಸಿಲಿನಲ್ಲಿ ಹಪ್ಪಳ ಒಣಗಿಸುತ್ತಿದ್ದಾಗ ಬಂದ ಮಳೆಯಂತೆ ಈ ಸುದ್ಧಿ ಗುರುಗಳಿಗೆ.

ಸಮಾಧಾನದಿಂದಿದ್ದ ಪ್ರಾಕೃತಿಕ ಶಾಂತಿಗೆ ಭಂಗವಾಗುವ ಈ ಕಟ್ಟಡ, ವಸತಿಗಳಿಗೆ ಸಂತೋಷ ಪಡುವುದೋ ಬೇಸರ ಪಡುವುದೋ ತಿಳಿಯದೇ ಮೌನದ ಹುತ್ತಕ್ಕೇ ಶರಣು ಹೋದರು. ಅಲ್ಲೇ ಇದ್ದ ಟೊಂಯ್ಕರು ಯಾವುದೇ ಕಸಿವಿಸಿಯಿಲ್ಲದೇ ಆಗಲಿ ಮಲ್ಲಪ್ಪನವರೇ, ಈ ಜಾಗದಲ್ಲಿ ಹೀಗೆ, ಆ ಜಾಗದಲ್ಲಿ ಹಾಗಿದ್ದರೆ ಒಳ್ಳೆಯದು ಎಂದೂ ಹೇಳಿದರು. ಡಿಲೈಟಾನಂದರ ಹುಬ್ಬುಗಳು ಯಾವುದೋ ಶಬ್ಧಕ್ಕೆ ಮರದಿಂದ ಹಾರಿದ ಹಕ್ಕಿಗಳಂತೆ ಒಮ್ಮೆ ಹಾರಿ ಮತ್ತೆ ಕುಳಿತವು.

ಮಲ್ಲಪ್ಪನವರ ನಿಷ್ಠೆಗೆ, ಹಣಕ್ಕೆ ನೆಲವೇನು ಜನವೇನು? ಎಲ್ಲವೂ ಸಣ್ಣ ಕಾಲದ ಪರಿಧಿಯಲ್ಲಿ ಕಟ್ಟಿ ಮುಗಿಯಿತು. ಒಂದು ಸಣ್ಣ ಚಾವಡಿಯಂತಹ ಜಾಗ, ಶೌಚಾದಿ ಕ್ರಿಯೆಗಳಿಗೆ ಸ್ವಲ್ಪ ದೂರದಲ್ಲಿ ಎರಡು ಕೋಣೆಗಳು. ಮಲ್ಲಪ್ಪನವರ ಗದ್ದೆಯ ಪಂಪಿನಿಂದ ನೀರನ್ನು ಕೊಳವೆಯ ಮೂಲಕ ತಂದು ತುಂಬಿಸಬಹುದಾದಂತ ಒಂದು ಟ್ಯಾಂಕು, ಅದಕ್ಕೆ ನಲ್ಲಿಗಳ ವ್ಯವಸ್ಥೆ.

ಇಷ್ಟಾದ ಮೇಲೆ ಆ ಸ್ಥಳವು ಒಂದು ಸಣ್ಣ ಮಗು ಬಿಡಿಸಿದ ಚಿತ್ರದಂತೆ ದೂರಕ್ಕೆ ಕಾಣುತ್ತಿತ್ತು. ಯಾರೋ ತಂದಿಟ್ಟ ನಾಲ್ಕು ಹಳೇ ಪುಸ್ತಕಗಳು, ಅದ್ಯಾರೋ ತಂದು ಬಿಟ್ಟು ಹೋದ ವಿಭೂತಿಯ ಗಟ್ಟಿಯನ್ನು ತುಂಬಿದ್ದ ಬಟ್ಟಲುಗಳು ಚಾವಡಿಯ ಮೂಲೆಯಲ್ಲಿ ಪೇರಿಸಲ್ಪಟ್ಟವು. ಗುರುಗಳ ಪಾದಧೂಳಿಯನ್ನು ಪಡೆಯಬಂದವರು ತಮ್ಮ ಪಾದದ ಧೂಳನ್ನು ಚಾವಡಿಗೆ ಸೇರಿಸಬಾರದು ಎನ್ನುವ ಕಾರಣಕ್ಕೆ ಮಲ್ಲಪ್ಪನವರ ಮನೆಯಿಂದ ಹಿಂಡಿಯ ಗೋಣಿಗಳೂ ಬಂದು ಬಾಗಿಲಿಗೆ ಬಿದ್ದವು. ನಂತರ ಮಲ್ಲಪ್ಪನವರ ಮಡದಿಯ ಆರೋಪದ ಮೇರೆಗೆ ಒಳ್ಳೆಯ ಕಾಲೊರಸುಗಳೂ ಅಲ್ಲಲ್ಲಿ ರಾಜಿಸಿದವು.

ಡಿಲೈಟಾನಂದರು ಗುಹೆಯಂತ ಜಾಗದಲ್ಲಿ ತಮ್ಮ ನಂಟು ಬಿಡಲಿಲ್ಲ. ಟೊಂಯ್ಕರು ಸಂಪೂರ್ಣವಾಗಿ ಉಸ್ತುವಾರಿ ಸಚಿವರಾದರು. ಮಲ್ಲಪ್ಪನವರಂತೂ ತಮ್ಮ ಸ್ಥಳದ ಆಶೆಗೋ ಅಲ್ಲ ಭಕ್ತಿಯಿಂದಲೋ ಆಗಾಗ ಬರುವ ಮುಖ್ಯರಾದರು. ಮಲ್ಲಪ್ಪನವರೇ ಬಂದ ಮೇಲೆ ಅವರ ಸಂಬಂಧಿಕರು, ಪಟಾಲಮ್ಮುಗಳು ಬರದೇ ಇರುತ್ತಾರೆಯೇ?

ಅಲ್ಲಿ ಪೂಜೆಯಿಲ್ಲ, ಗುರುಗಳು ಮಾತನ್ನಾಡುವುದಿಲ್ಲ, ಟೊಂಯ್ಕರು ಉಪದೇಶ ಕೊಡುವ ಹಾಗಿಲ್ಲ. ನೋಡುವುದಕ್ಕೆ ಒಂದು ಚಾವಡಿ, ಎರಡು ಕೋಣೆ ಬಿಟ್ಟರೆ ಏನೂ ಇಲ್ಲ ಎನ್ನುವ ಕೆಲವು ವಿಷಯಗಳಿಂದ ದೂರದಿಂದ ಬರುವ ಜನರು ಮತ್ತೆ ಬರುತ್ತಿರಲಿಲ್ಲ. ಮೊದಮೊದಲಿಗೆ ಬಹಳಷ್ಟು ಜನ ಬಂದರೆ ನಂತರ ಜನರು ಕಡಿಮೆಯಾಗುತ್ತಿದ್ದುದು ಟೊಂಯ್ಕರಿಗೆ ಒಳಗಿಂದ ಅಸಮಾಧಾನವಾದರೆ ಡಿಲೈಟಾನಂದರಿಗೆ ಸ್ವಲ್ಪ ಖುಷಿಯೆನ್ನಿಸಿತ್ತು.

ಮಲ್ಲಪ್ಪನವರೂ ಹೊಸದಾಗಿ ಕೈಗೊಂಡ ಗ್ರಾನೈಟ್ ಬ್ಯುಸಿನೆಸ್ಸ್ ಸಲುವಾಗಿ ಈ ಗುರುಗಳನ್ನು, ಟೊಂಯ್ಕರನ್ನು ಮರೆತೇ ಬಿಟ್ಟರು. ಟೊಂಯ್ಕಾನಂದರು ಏನಾದರೂ ಮಾಡದಿದ್ದರೆ ಈಗ ಮತ್ತೆ ಎದ್ದು ಹೊರ ಜಗತ್ತಿಗೆ ಹತ್ತಿರವಾಗಲೇ ಬೇಕಾಯಿತು.

ಪುಟ-೪

ಒಂದು ಜಾತ್ರೆಯ ನಂತರ ಹಾದಿಬೀದಿಗಳು ಯಾವುದೋ ಅನುಭವಿಸಲು ಬಾರದ ದುಃಖವನ್ನು ತಂದೊಡ್ಡುತ್ತದೆ ಸುಮ್ಮನೇ ನೋಡುಗನಿಗೆ. ಅದೆಷ್ಟೋ ಬಾರಿ ನಾಳೆ ತೆಗೆದುಕೊಳ್ಳಬೇಕೆನ್ನುವ ವಸ್ತು ಅಲ್ಲಿಲ್ಲದೇ, ವಸ್ತು ಇರುವ ಅಂಗಡಿಯೂ ಕಾಣೆಯಾಗಿ ಒಟ್ಟು ಬಯಲನ್ನು ತೆರೆದಿಡುವಂತೆ ದುಃಖ. ಮಾತು ಕೇಳದಿದ್ದರೂ ತುಂಬಿದ್ದ ಸಭೆ, ಈಗ ಸಭೆಯೂ ಇಲ್ಲ, ಬರೀ ಶಿಷ್ಯ ಮತ್ತೆ ಗುರು.

ಜೋಳ ಬೆಳೆದ ಹೊಲದ ಬದಿಯಿಂದಲಾಗಿ ನಡೆಯುತ್ತಾ ಮುಂದೆ ಸಾಗುತ್ತಿದ್ದ ಡಿಲೈಟಾನಂದರು, ಅವರ ಹಿಂದೆ ಒಂದೆರಡು ಜೋಳಗಳನ್ನು ಹಿಡಿದುಕೊಂಡು ಯಾವುದೋ ಬೇಸರದಿಂದ ಗುರುವಿರಿಸಿದ ಹೆಜ್ಜೆಯನ್ನು ತುಳಿಯುತ್ತ ಸಾಗುತ್ತಿದ್ದರು ಟೊಂಯ್ಕರು. ಸಾಮಾನ್ಯವಾಗಿ ನಡೆಯುವಾಗ ಮಾತನ್ನಾಡುತ್ತಿರಲಿಲ್ಲ ಡಿಲೈಟಾನಂದರು. ಅದಕ್ಕೆ ವ್ಯತಿರಿಕ್ತವಾದ ಟೊಂಯ್ಕರು ಯಾವುದೇ ಕಾರಣಕ್ಕೆ ಬಾಯಿಯನ್ನು ಮುಚ್ಚದವರು.

ತಮ್ಮ ಪೂರ್ವಾಪರವನ್ನು ಹೇಳಲೇ ಎಂದು ಗುರುಗಳಲ್ಲಿ ಕೇಳಿಕೊಂಡಾಗ ಗುರುಗಳು ಹ್ಮ್ಂ ಎಂದರು. ಹಾಗಾಗಿ ಟೊಂಯ್ಕರು ತಮ್ಮ ಬಗೆಗೆ ಹೇಳುವಂತಾಯ್ತು. ಯಾವುದೇ ಹೆಜ್ಜೆಯು ಭಾರವಾಗುವುದು ಒಂದೋ ಬೀಳ್ಕೊಟ್ಟವರು ಆತ್ಮೀಯವಾಗಿರಬೇಕು, ಇಲ್ಲವೇ ಸಿಗುವವರು ಸಹ್ಯವಾಗುವವರಲ್ಲದಿರಬೇಕು. ಹಾಗೆಯೇ ಭಾರವಾಯಿತು ನಾಲಗೆ. ತಮ್ಮ ಜೀವನದ ಮೊದಲ ಇಪ್ಪತ್ತೈದು ವರುಷಗಳನ್ನು ಬಿಟ್ಟು ಅತ್ಯಂತ ಆತ್ಮೀಯವಾದ ನಂತರದ ಐದಾರು ವರ್ಷಗಳಿಂದ ನಡೆದ ಘಟನೆಗಳನ್ನು ಸವಿಸ್ತಾರವಾಗಿ ಹೇಳಿದರು. ಟೊಂಯ್ಕರ ಪೂರ್ವದ ಬಗೆಗೆ ಡಿಲೈಟರಿಗೆ ಸ್ವಲ್ಪವೂ ಕರುಣೆಯಿರಲಿಲ್ಲ ಹಾಗಾಗಿ ಕೇಳಲಿಲ್ಲ. ಆದರೆ ಅದೊಂದು ರಾತ್ರಿ, ಡಿಲೈಟರು ಸಿಕ್ಕಿದ ರಾತ್ರಿಯ ಹಿಂದಿನ ಘಟನೆಗಳನ್ನು ಕೇಳುವಾಗ ಡಿಲೈಟಾನಂದರ ಆಸಕ್ತಿ ಹೆಚ್ಚಾಗಿ ತಾವು ಬಿಟ್ಟು ಹೋದ ಅರಳೀಮರದಡಿ ವಿಶ್ರಾಂತಿಗಾಗಿ ಕುಳಿತರು.

ಟೊಂಯ್ಕರು ಆರಂಭಿಸಿದರು. ರಾತ್ರಿಯ ಕೆನ್ನಾಲಗೆ ಆಗಷ್ಟೇ ಸೂರ್ಯನನ್ನು ಮುಕ್ಕಿತ್ತು. ಆ ಸಂಜೆ ಒಂದು ಅದ್ಭುತವಾದ ಮುಖಪುಟವಿದ್ದ ನವ್ಯಕವಿತಾ ಸಂಕಲನ ದೊರಕಿತ್ತು ಟೊಂಯ್ಕರಿಗೆ. ದುಷ್ಯಂತ ಶಾಕುಂತಲೆಯನ್ನು ಡೇವಿಡ್ ಮತ್ತು ಸಿಸಿಲಿಯಾ ಜೊತೆಗೆ ಸೇರಿಸಿ ಹಾಡಿದರೆ ಕರ್ಕಶವಾಗುವಂತ ಮೊದಲ ಗೀತೆಯಿಂದ ಶುರುವಾಗುವ ಕವನ ಸಂಕಲನ. ಅದಕ್ಕೂ ಮೊದಲು ಚಿನ್ನಕ್ಕೆ ಹೊಳಪು ಬರಲು ಒದ್ದಾಡಿ ಸುಟ್ಟುಹೋಗಿದ್ದ ಅತೃಪ್ತ ಇದ್ದಿಲಿನ ಜೀವಗಳು ಕಾವ್ಯ ವಿಮರ್ಶೆ ಎನ್ನುವ ಅದ್ಭುತವಾದ ಮುನ್ನುಡಿ ಮತ್ತು ಅನಿಸಿಕೆಗಳನ್ನು ಹಾಕಿದ್ದರು.

ಅರೆನಿಮೀಲಿತ ನೇತ್ರ, ಮೃದುಹೂವಿನ ಮನ, ಪರಾಗದಲ್ಲಿ ಮೃತಪಟ್ಟ ದುಂಬಿ, ಅಲೌಕಿಕ ಸಂಗಾತಿ ಮುಂತಾದ ಶಬ್ಧಪುಂಜಗಳು ಅಲ್ಲಲ್ಲಿ ಕಣ್ಣಿಗೆ ರಾಚಿ ಗುಂಟೂರು ಮೆಣಸನ್ನು ಬಳಸಿ ಮಾಡಿದ ಖಾರವಾದ ಅನ್ನದಲ್ಲಿ ಸಿಕ್ಕಿದ ಕಲ್ಲುಗಳಂತೆ ಆಗಿತ್ತು. ಕೊನೆಗೆ ಇನ್ನೇನು ಪದ್ಯಗಳ ಸಂಕಲನವನ್ನು ಮುಗಿಸಬೇಕು, ಅಷ್ಟರಲ್ಲಿ ದೇಹವನ್ನು ಸಂಪೂರ್ಣ ಸುಟ್ಟ ಚಿತೆಯಲ್ಲಿ ಉಳಿದ ತಲೆಬುರುಡೆ ಒಡೆಯುವಂತೆ ಕೊನೆಯ ಕವನದ ಮುಕ್ತಾಯಕ್ಕೆ ಸಶೇಷದ ಗುರುತು.. ಟೊಂಯ್ಕರು ಅರ್ತನಾದವನ್ನು ಮಾಡದಿರುವರೇ? ವಸ್ತ್ರವನ್ನು ಹರಿದೊಗೆಯರೇ..

ಗುರು ಡಿಲೈಟಾನಂದರ ಕರುಣೆಗಾಗಿ ಆ ಕವನ ಸಂಕಲನ ಜಗತ್ತಿನಲ್ಲಿ ಪ್ರಕಾಶಿಸದೇನು?

ಮುಂದುವರೆಯುವುದು..

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೧


ಹಕ್ಕುಗಳು © Ishwara Bhat K|ಈಶ್ವರ ಭಟ್ ಕೆ.

ಸ್ಪೆಶಲ್ ಕ್ಯಾಪ್ಸಿಕಂ ಬಜ್ಜಿ.

ಸ್ಪೆಶಲ್ ಕ್ಯಾಪ್ಸಿಕಂ ಬಜ್ಜಿ..

ಸಾಮಾನ್ಯವಾಗಿ ಬಜ್ಜಿ ಅಂದ್ರೆ ಕಡಲೆಹಿಟ್ಟು, ಸ್ವಲ್ಪ ಅಕ್ಕಿಹಿಟ್ಟಲ್ಲಿ ಹಿಟ್ಟು ರೆಡಿ ಮಾಡಿ ಕರಿಯೋದು ವಾಡಿಕೆ !

ಇದರಲ್ಲಿ ಇನ್ನೂ ಕೆಲವು ಸಾಮಗ್ರಿಗಳನ್ನು ಹಾಕಿದ್ದೇನೆ.  ಗರಿಗರಿಯಾಗಿ, ಹದವಾಗಿ, ತುಂಬಾ ರುಚಿ ಕೊಡುತ್ತದೆ !

ಬೇಕಾಗುವ ಸಾಮಗ್ರಿಗಳು..

ಕ್ಯಾಪ್ಸಿಕಂ,

ಕಡಲೆಹಿಟ್ಟು ಒಂದು ಟೇಬಲ್ ಸ್ಪೂನ್,

ಅಕ್ಕಿಹಿಟ್ಟು ಎರಡು ಟೀ ಸ್ಪೂನ್,

ಚಿರೋಟಿ ರವಾ ಎರಡು ಟೀ ಸ್ಪೂನ್,

ಹೆಚ್ಚಿದ ಮೆಂತ್ಯ ಸೊಪ್ಪು ಸ್ವಲ್ಪ,

ಒಂದು ಈರುಳ್ಳಿ ಸಣ್ಣಗೆ ಹೆಚ್ಚಿದ್ದು,

ಕೊತ್ತಂಬರಿ,

ಕರಿಬೇವಿನ ಸೊಪ್ಪು ಸಣ್ಣಗೆ ಹೆಚ್ಚಿದ್ದು,

ಒಂದು ಹಸಿಮೆಣಸು ಸಣ್ಣಗೆ ಹೆಚ್ಚಿದ್ದು,

ಅಚ್ಚ ಖಾರದ ಪುಡಿ ಒಂದು ಟೀ ಸ್ಪೂನ್,

ಜೀರಿಗೆ, ಧನಿಯಾ ಪೌಡರ್ ಅರ್ಧ ಟೀಸ್ಪೂನ್,

ಬೇಕಿದ್ದಲ್ಲಿ ಯಾವುದಾದರೂ ಮಸಾಲಾ ಪುಡಿ ಸೇರಿಸಬಹುದು,

ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ, ಚಿಟಿಕೆ ಸೋಡಾ..

ಮಾಡುವ ವಿಧಾನ..

ಮೊದಲಿಗೆ ಮೇಲೆ ಹೇಳಿದ ಎಲ್ಲಾ ಹಿಟ್ಟುಗಳು, ರವಾ, ಹೆಚ್ಚಿರೋ ಎಲ್ಲಾ ತರಕಾರಿಗಳು, ಉಪ್ಪು, ಮಸಾಲಾ ಪುಡಿ, ಸೋಡಾ ಎಲ್ಲವನ್ನೂ ಹಾಕಿ, ಬೋಂಡಾ ಹಿಟ್ಟಿನ ಹದಕ್ಕೆ(ಸ್ವಲ್ಪ ಗಟ್ಟಿಯಾಗಿ ಇರಲಿ) ಕಲೆಸಿಕೊಳ್ಳಿ.

ಕ್ಯಾಪ್ಸಿಕಂ ಉದ್ದುದ್ದವಾಗಿ ಹೆಚ್ಚಿ, ಆ ಹಿಟ್ಟಿನಲ್ಲಿ ಅದ್ದಿ, ಹೊಂಬಣ್ಣ ಬರುವವರೆಗೆ ಕರಿಯಿರಿ, ಸ್ಪೆಶಲ್ ಕ್ಯಾಪ್ಸಿಕಂ ಬಜ್ಜಿ ರೆಡಿ !


By: Sangeetha Bhat

ಗಂಡಸೇ?

ಒಂದಷ್ಟು ಕಪ್ಪಡರಿ, ಮೀಸೆ ಬಂದಂತೆನಿಸಿ
ನಯದ ಕೆನ್ನೆಗೆ ಒರಟು ಬರುವ ಸುದ್ಧಿ
ಜಗದ ಹೊರೆಯನ್ನೆಲ್ಲ ನೀನು ಹೊರಬೇಕಿನ್ನು
ಕಳಿಸುವರು ಗಂಡೆಂಬ ಮುದ್ರೆ ಗುದ್ದಿ!

ತೊಗಲಿಗೇರದ ಹಳೆಯ ಅಂಗಿಗಳ ರಕ್ಷಿಸಿತು
ತೋಳು ತೋರುವ ಹಿತದ ಬಟ್ಟೆ ಬಂದು;
ಹೇಗಾದರೂ ಬೆಳಗು ರಕ್ತಕ್ರಾಂತಿಯ ನೆನೆದು
ರಾತ್ರಿಯೊಳು ಮಲಗುವುದು ಗಂಜಿ ತಿಂದು!

ಮುಂಗುರುಳು ಹಾರಿದರೆ ಜಗವೆ ನೆಗೆದಂತಾಗಿ
ದಾರಿಯಲಿ ಗೋರಿಯಲಿ ಬಹಳ ನೆನಪು;
ಅವಳಿಲ್ಲದಿರೆ ಇವಳು, ಇವಳಲ್ಲ ಅವಳಿಹಳು
ಕೊನೆಯ ಸೇರದ ನಡೆಗೆ ಬೇಲಿ ಹೂವು.

ಮೀಸೆ ತೆಗೆವಂತಾಗಿ ಗಡ್ಡ ತುರಿಕೆಯು ಬರಲು
ಕ್ರಾಂತಿ ಪ್ರೀತಿಗಳೆಲ್ಲ ಮರೆತು ಹೋಗಿ;
ಸಂಜೆವರೆಗೂ ದುಡಿದು ಹೆತ್ತವರ ಕೆಮ್ಮಿನಲಿ
ಶ್ರುತಿ ಸೇರಿ ಕೆಮ್ಮುವುದು ಇವನ ಪಾಳಿ.

ಹೀಗೊಬ್ಬನಿದ್ದನಹ! ಬಲದಲ್ಲಿ ಬುದ್ಧಿಯಲಿ
ಇವನಂತೆ ಊರೊಳಗೆ ಯಾರು ಇಲ್ಲ!
ಎನುವ ಮಾತನ್ನೆಲ್ಲ ನೆನೆಸಿ ಮರುಗುವ ಸಂಜೆ
ಊರಿನಲಿ ಜನರಿಗೂ ಕೊರತೆಯಿಲ್ಲ.

ಅಳುವುದು ಸರಿಯಲ್ಲ, ನಕ್ಕಾಗ ಜೊತೆಯಿಲ್ಲ
ಶಾಂತಿಯಲಿ ಮಲಗುವುದು ಜಗಕೆ ಸಲ್ಲ!
ಎಲ್ಲವೂ ಜೊತೆಸೇರಿ ಮತ್ತೇನೊ ಹುಡುಕುವುದು
ತಪ್ಪಿದರೆ ನೀನೋ! – ಗಂಡಸಲ್ಲ.

pexels-photo-212286.jpeg


By : Ishwara Bhat K

ಮಂಜಿನ ಹನಿಗಳೆ ಕುಡಿಯಲು ಬನ್ನಿ

ಮಂಜಿನ ಹನಿಗಳೆ ಕುಡಿಯಲು ಬನ್ನಿ
ನನ್ನೆದೆ ಕನಸುಗಳ
ನಶೆಯೇರದೆ ಮರಗಟ್ಟುವ ತೆರದಲಿ
ಕುಣಿಸುವ ಆಶೆಗಳ

ಬಿಸಿಯಿದ್ದರೆ ಆ ಕನಸಿನ ಮೂಟೆಯು
ಹೀರಿ ಆವಿಯಾಗಿ
ಮೋಡದಾಚೆಗೂ ಲೋಕವಿದೆಯಲ್ಲ
ಅಲ್ಲಿ ಹಿಡಿದು ಸಾಗಿ!

ತಂಪಗಿದ್ದು ನೀವ್ ಕರಗಿಹೋದರೆ
ನೀರು ಆಗಿ ತನ್ನಿ!
ಕಪ್ಪು ಮಣ್ಣಿನಲಿ ಸತ್ವ ರಾಶಿಯಿದೆ
ಹೊಸದು ಬೆಳೆಯ ತನ್ನಿ.

ಕನಸುಗಳೆದೆಯಲಿ ಭ್ರಾಂತಿಯ ಮುಸುಕಿದೆ
ಸುಳ್ಳಲಿ ಆಗಿದೆ ಘಾಸಿ;
ಕನಸಿದೆಯೆನುತಲಿ ಇಲ್ಲೇ ನಿಲ್ಲದಿರೆ
ಸತ್ಯರವಿಯನುಳಿಸಿ.

pexels-photo-552791.jpeg


By: Ishwara Bhat K