ಮಂಜಿನ ಹನಿಗಳೆ ಕುಡಿಯಲು ಬನ್ನಿ

ಮಂಜಿನ ಹನಿಗಳೆ ಕುಡಿಯಲು ಬನ್ನಿ
ನನ್ನೆದೆ ಕನಸುಗಳ
ನಶೆಯೇರದೆ ಮರಗಟ್ಟುವ ತೆರದಲಿ
ಕುಣಿಸುವ ಆಶೆಗಳ

ಬಿಸಿಯಿದ್ದರೆ ಆ ಕನಸಿನ ಮೂಟೆಯು
ಹೀರಿ ಆವಿಯಾಗಿ
ಮೋಡದಾಚೆಗೂ ಲೋಕವಿದೆಯಲ್ಲ
ಅಲ್ಲಿ ಹಿಡಿದು ಸಾಗಿ!

ತಂಪಗಿದ್ದು ನೀವ್ ಕರಗಿಹೋದರೆ
ನೀರು ಆಗಿ ತನ್ನಿ!
ಕಪ್ಪು ಮಣ್ಣಿನಲಿ ಸತ್ವ ರಾಶಿಯಿದೆ
ಹೊಸದು ಬೆಳೆಯ ತನ್ನಿ.

ಕನಸುಗಳೆದೆಯಲಿ ಭ್ರಾಂತಿಯ ಮುಸುಕಿದೆ
ಸುಳ್ಳಲಿ ಆಗಿದೆ ಘಾಸಿ;
ಕನಸಿದೆಯೆನುತಲಿ ಇಲ್ಲೇ ನಿಲ್ಲದಿರೆ
ಸತ್ಯರವಿಯನುಳಿಸಿ.

pexels-photo-552791.jpeg


By: Ishwara Bhat K

Advertisements

ಚಿತ್ರವ ಬಿಡಿಸುವ ಚಂದಿರ ಬಾನೊಳು

ಚಿತ್ರವ ಬಿಡಿಸುವ ಚಂದಿರ ಬಾನೊಳು
ಸೂರ್ಯನ ಕಿರಣದಿ ಕುಂಚವ ಮಾಡಿ

ಆಗಸ ಬಿಳಿಯೆನೆ ಕರಿಯನು ಒಡ್ಡುತ
ಕರಿಯಾಯ್ತೆನುತಿರೆ ಬಿಳಿಯೆಳೆಯ
ಕೆಂಪು ನೀಲಿಗಳ ಬಣ್ಣಗಳೆಲ್ಲಿದೆ?
ದೂರುವ ವಿಕೃತಿಯ ಮಾಡುವ ತಿಳಿಯ!

ಬಳಿಯೊಳು ತೇಲುವ ಕಪ್ಫಿನ ಅಂಗಿಯ
ಮೋಡದ ಕೊಳೆಯನು ಹೊರಗೆಸೆದು
ನೆಲವದು ಕರಿಯೆನೆ ಭ್ರಾಂತಿಯ ಬರಿಸುವ
ಮೋಡವೆ ಮನಸೆನೆ, ಆಗಿದೆ ಹೊಳೆದು.

ಗೆಳೆಯನ ಖಾರವ ಎದೆಯೊಳಗಾಡಿಸಿ
ಶಾಂತಿಯ ಮಾತುಗಳಾಡುವೊಲು!
ಸೂರ್ಯನ ಬಿಸಿಯನು ನಮ್ಮೆದೆಗಿಳಿಸುವ
ಚಂದಿರ ಚಿತ್ರಕ, ನಮಗಿಂ ಮಿಗಿಲು.

pexels-photo-746111.jpeg


By : Ishwara Bhat K

ಹಾಡೆಷ್ಟನೋ ಬರೆದ ಕವಿ

ಹಾಡೆಷ್ಟನೋ ಬರೆದ ಕವಿ ಓದಿದರು ಹಲವರು
ಕವಿಗಾಗಿ ಹಾಡಿದವರ್ಯಾರು?
ಇರದ ಭಾವನೆಗಳನು ಎಳೆದು ತುಂಬಿದ ಅವನು
ಅವನ ಭಾವವ ಅರಿತರ್ಯಾರು?

ಮರವು ಎಲೆಗಳನುಳಿದು ದೇಹಗಾಯದ ನಡುವೆ
ಮೊಗ್ಗುಗಳ ಹೊರದೂಡಲೇಕೆ?
ಹೂವರಳಿ ನಿಂತಾಗ ಚಿಟ್ಟೆಗೋ ಹಸಿವಾಯ್ತು
ಮೊಳಕೆಯಾದಿತೆ ಕಾಯಿ ಮಳೆಗಾಲಕೆ?

ಹುಳದ ರಕ್ಷಣೆಕವಚ ರೇಶ್ಮೆಯಾಗುವುದೆಂತೊ
ಕವಿಗಿಲ್ಲ ಅವನೊಲಿದ ಭಾವ
ಯಾವುದೋ ಹೊದಿಕೆಯಲಿ ಯಾರದೋ ಕನಸಿರಲು
ಜಿಗಣೆ ಕಳೆಯಿತು ರಾತ್ರಿ ಹಸಿವ!

ನೋಡಿ ಸುಮ್ಮನೆ ನಗಲು, ನಕ್ಕಂತೆ ನಟಿಸಿರಲು
ಜಗವು ಖುಷಿಪಟ್ಟರದು ಪಡಲಿ;
ಏನಾದರೇನಿಹುದು ಏನುಳಿದು ಹೊಳೆಯುವುದು?
ಎನುತ ಬರೆದಿಟ್ಟ ಕವಿ ಬಳಲಿ.

notebook-pencil-notes-sketch.jpg


By : Ishwara Bhat K

ಒಂದೇ ರೀತಿಯ ಎರಡು ಹೂಗಳು.

ಒಂದೇ ರೀತಿಯ ಎರಡು ಹೂಗಳು
ಬಳ್ಳಿಯಲಿತ್ತು, ಅರಳಿತ್ತು!
ಒಂದನು ಕೊಯ್ದಳು ಮಲ್ಲಿಗೆ ಮಗಳು
ಇನ್ನೊಂದಲ್ಲಿಯೆ ಉಳಿದಿತ್ತು.

ಕೊಯ್ದಿಹ ಹೂವಿಗೆ ದಾರವು ಸೇರಿ
ಹೂವಿನ ಮಾಲೆ! ಹೆಸರಾಯ್ತು
ಬಳ್ಳಿಯೊಳುಳಿದ ಘಮಿಸುವ ಹೂವು
ಸಂಜೆಯವರೆಗೂ ನಗುತಿತ್ತು.

ದೇವರಿಗಿಟ್ಟಳು, ಮುಡಿಯೊಳಗಿಟ್ಟಳು
ಹೂವಿನ ಮನಸಿನ ನಗೆಯವಳು!
ರಾತ್ರಿಯ ಇಬ್ಬನಿ ಬಳ್ಳಿಯ ಹೂವಿನ
ಮೆಲ್ಲನೆ ಹೀರುತ ಕೊಳೆಸಿದಳು.

ಒಂದೇ ಭಾವದ ಜನರು ಬೆರೆತರೂ
ಹೊಂದಿಕೆಯಾಗದೆ ಬದುಕಿದರು!
ಜತೆಗೆ ಸೇರಿದರೂ, ಜೊತೆಗೆ ಬಾಳಿದರೂ
ತೆರಳುವ ದಿನದಲಿ ಅಗಲಿದರು.

FB_IMG_1521452281859.jpg


By : Ishwara Bhat K

Photo : Google.

ಮನೆಯ ಬದಲಿಸುವಾಗ…

ಮನೆಯ ಬದಲಿಸುವಾಗ – By Ishwara Bhat K


ಮನೆಯ ಬದಲಿಸುವಾಗ ಹಳೆಯ ಮನೆಯನು ನೆನೆದು
ಅವಳೊಂದು ಕ್ಷಣ ನಿಂದು ದಿಟ್ಟಿಸಿದಳು
ಯಾವುದೋ ಬೇಸರದ ರಾಗಗಳು ಸಂಜೆಯಲಿ
ತೇಲಿ ಬಂದಂತಾಗಿ ಕಂಪಿಸಿದಳು.

ಜಳಕವಾಡುವ ಮೊದಲು ತೆಗೆದಿಟ್ಟ ಬಿಂದಿಯಿದೆ
ಮಸುಕೊಳಾಡುವ ಕೋಣೆ ಕನ್ನಡಿಯಲಿ
ಎಣ್ಣೆ ಹೀರಿದ ತಲೆಯು ಗೋಡೆಯಲಿ ಚಿತ್ರಗಳ
ಬಿಡಿಸಿಟ್ಟು ಕೊರಗುತಿದೆ ಮೌನದಲ್ಲಿ.

ಹಳೆಯ ಪುಸ್ತಕಗಳಲಿ ಬರಹಗಳು ನಗುತಲಿದೆ
ಮಡಿಚಿಟ್ಟ ಭಾಗಗಳು ಸುಮ್ಮನಿಹವು;
ನಾಯಕನ ನಾಯಕಿಯ ಪಾತ್ರಗಳು ಗಲಭೆಯಲಿ
ಮುಚ್ಚಿಟ್ಟ ನಲಿವುಗಳು ಮತ್ತೆ ನಗವು.

ಪಾತ್ರೆಯಲಿ ಉಕ್ಕೇರಿ ಹಾಲು ಚೆಲ್ಲಿದ ಜಾಗ
ಮರೆತು ಕೊಳೆಯುತ್ತಿದ್ದ ತರಕಾರಿಯು
ಅಡುಗೆಕೋಣೆಯ ಜಗವು ಒಂದು ಸುಂದರ ಕನಸು
ಪಾತ್ರೆಗಳು ಇಂದೇಕೋ ಸುಮ್ಮನಿಹವು

ಬಾಗಿಲನು ತುಸುತೆರೆದು ನೋಡುವಾಗಲೆ ಕಾಂಬ
ತುಂಟ ಹುಡುಗರ ಕಣ್ಣು ಮಿಂಚದೆಲ್ಲಿ?
ಮತ್ತೆ ಎಂದಾದರೂ ಇಲ್ಲಿ ಬರುವೆನೆ? ಬರಲು
ಎದುರುಗೊಂಬುದೆ ಹಳೆಯ ರಂಗವಲ್ಲಿ?

Fruit Within –


 

I hide within you dear flower,

Do not hesitate to bend lower;

I need your fall for my rise

Don’t be let down

Beware of Creators praise.

I am a fruit waiting to be myself

To get my place and grow into fullness

To let someone grow in cheerfulness

To give my best before I go away

 

A Tree is known by its fruits many say

So wait for the fruit night and day

Some do not allow the flower to fade

And let the fruit its farewell bade

 So wait,

          For the flower to bloom and fade

          There hides an excellent seed that’s made

           To reach to that supreme grade

           And let you praise your God

Hurry up!

Let your flowery self fall

And true self grow tall

 

Written By: Cynthia D’souza  SSpS