Kindness of strangers

clasped-hands-comfort-hands-people-45842.jpeg Kindness of strangers

I had once been to Mumbai’s busiest Dadar station at 7.30pm to receive my sister. Train had already arrived.  I was a bit late. Thanks to the Mumbai traffic. You can never reach on time.  I met my sister in the station and wanted to call the driver and then I realize that I had lost the purse. The purse had some cash and the drivers number. I walked to and fro on the 6th platform frantically looking for the purse but there was no signs of it.  Setting a final glance at the station I got into the vehicle. Just then my driver shows me the missing purse.

How did he get it?  Certain “Yadav” had found my purse at the station, found in it driver’s number, called and  handed it over to him and disappeared.

My heartfelt thanks to Mr.Yadav. It’s amazing to know that in this busy and corrupt world there are people honest and sincere who have the art of taking time for others and making this world a beautiful place to live in.

By :-  Nathalia Dsouza

Advertisements

ಅಮ್ಮ ಹೇಳಿದ ಜಯನ ಕತೆ

ಬೆಂಗಳೂರಿಂದ ಮನೆಗೆ ವಾಪಸ್ಸು ಹೋಗುತ್ತಿರುವ ಖುಷಿ. ಹೆಚ್ಚಾಗಿ ಎಲ್ಲರೂ ವಾಪಸ್ಸು ಹೋಗುವುದುಸಾಮಾನ್ಯವಾದರೂ ನಾನು ಹಾಗಲ್ಲ. ಬೆಂಗಳೂರಿಗೆ ಬಂದುಸುಮಾರು ಒಂದು ವರುಷವೂ ಐದಾರು ತಿಂಗಳುಗಳೂಕಳೆದಾದ ಮೇಲೆ ಈಗ ವಾಪಸ್ಸು ಹೋಗುತ್ತಿರುವುದು. ಸಮಯ ಸಿಕ್ಕಿರಲಿಲ್ಲ ಎನ್ನುವುದಕ್ಕಿಂತ ಕೆಲಸದ ಒತ್ತಡದಿಂದಪ್ರತಿ ಶನಿವಾರವಾಗಲೀ ಆದಿತ್ಯವಾರವಾಗಲೀ ಊರಿಗೆಹೋಗುವ ಯೋಚನೆ ಬಂದರೂ ಆಗುವುದಿಲ್ಲ. ಏನೋಒಂದು ಸಬೂಬು ಹೇಳಿ ಮಲಗುವುದೋ ಇಲ್ಲವೇ ಸಣ್ಣತಿರುಗಾಟವೋ ಮಾಡುವುದನ್ನು ಬಿಟ್ಟರೆ ಊರಿಗೆ ಹೋಗುವದೊಡ್ಡ ಆಸೆ ಇರುತ್ತಿರಲಿಲ್ಲ.

ಊರಿನ ಆತ್ಮೀಯ ಸ್ನೇಹಿತರೆಲ್ಲಾ ಇಂದು ನೆನಪಾಗುತ್ತಿದ್ದಾರೆ, ಹೇಗಿದ್ದಾರೋ? ಸಿಕ್ಕ ಒಂದು ವಾರದ ರಜೆಯಲ್ಲಿ ಎಲ್ಲರನ್ನುಅಲ್ಲದಿದ್ದರೂ ಸಾಧ್ಯವಾದಷ್ಟು ಜನರನ್ನ ಭೇಟಿಯಾಗಬೇಕು. ಡಿಗ್ರೀ ಮುಗಿಸಿದ ತಿಂಗಳೇ ಒಳ್ಳೆಯ ಉದ್ಯೋಗಸಿಕ್ಕಿದುದರಿಂದ ಬೆಂಗಳೂರಿಗೆ ಬಂದು ಬೆಂಗಳೂರಿಗನಾಗಿಹೋದ ನನಗೆ ಅವರ ಬಗ್ಗೆ ಇಷ್ಟು ದಿನ ನೆನಪಾಗದೇಇದ್ದುದಾದರೂ ಹೇಗೆ?

 
ಬಸ್ಸು ತಡವಾದರೂ ಘಾಟಿಯನ್ನು ಇಳಿಯುವಾಗ ಮನೆಗೆಬಂದಷ್ಟೇ ಖುಷಿ. ಬೆಂಗಳೂರಿನ ಚರ್ಮಕ್ಕೆ ಸಹನೀಯವಾದವಾತಾವರಣದಿಂದ ಮುಕ್ತಗೊಂಡ ಅನುಭವವಾಗುವುದುಘಾಟಿ ಇಳಿದಾಗಲೇ. ಈ ವಾತಾವರಣಕ್ಕೆ ಹೊಂದಿಕೊಂಡ ೨೨ವರ್ಷ ಅದೇಕೆ ಒಂದು ವರುಷದ ಬೆಂಗಳೂರಿನ ಹವೆಯನ್ನುಇಷ್ಟಪಡುತ್ತದೋ?
ಊರು ಬಂತು, ಇನ್ನೆಷ್ಟು ದೂರ ಮನೆ? ಮೊದಲಿನಕಾಲುಹಾದಿ ಈಗ ಮಣ್ಣಿನ ರಸ್ತೆಯಾಗಿದೆ. ಅಲ್ಲೆಲ್ಲೋ ಇದ್ದಹೆಸರಿಡದ ದಪ್ಪನೆಯ ಮರ ಕಾಣೆಯಾಗಿ ಯಾವುದೋಮನೆಯಲ್ಲಿ ಬೆಂಕಿಪೆಟ್ಟಿಗೆಯೊಳಗಿರಬಹುದು. ದಿನಕ್ಕೆಮುನ್ನೂರರ ವ್ಯಾಪಾರ ಮಾಡುತ್ತಿದ್ದ ತಿಮ್ಮಯ್ಯನಅಂಗಡಿಯಲ್ಲಿ ತುಂಬ ದಾಸ್ತಾನು. ಆಹಾ..ಬೆಳವಣಿಗೆಯೇ.

—-

ಅಮ್ಮಾ…

ಇಷ್ಟುದ್ದದ ಮುಖ ಅಷ್ಟಗಲವಾಗುವುದನ್ನು ಗಮನಿಸಿದೆ.

ಬಿಳಿಯಾಗಿದ್ದೀಯಲ್ಲಾ ಮಗನೇ,

ಎ ಸಿ ಆಫೀಸು.. ಅಂದರೆ ಹವಾನಿಯಂತ್ರಕ ಅಳವಡಿಸಿದಕೋಣೆಯಲ್ಲಿ ಕುಳಿತು ಕೆಲಸ ಮಾಡಿದ್ರೆ ಇನ್ನೇನು ಆಗುವುದು?

ಆಟ ಓಟ ಎಲ್ಲಾ ಇಲ್ಲ ಅನ್ನು,
ಹ್ಮ್..ಹಸಿವಾಗ್ತಾ ಇದೆ. ಇಲ್ಲೇ ಮಾತನಾಡೋದಾ ಅಲ್ಲ ಅಂಗಿಬನೀನು ಆದ್ರೂ ಬದಲಿಸಬೇಕಾ?
ಹೌದು. ನಿನಗಿಷ್ಟ ಅಂತ ಉದ್ದಿನದೋಸೆ ಮಾಡಿದ್ದೇನೆ. ಶೂ ಅಲ್ಲಿಡಬೇಡ, ನಾಯಿ ಕಚ್ಚಿಕೊಂಡು ಹೋದ್ರೆ ಮತ್ತೆಬರಿಗಾಲಲ್ಲಿ ನಡೆಯಬೇಕಷ್ಟೆ. ಮಾಡಿಗೆ ಸಿಕ್ಕಿಸಿಬಿಡು. ಎಂತವಾಸನೆ ಅದು ಕೊಳೆತ ಹಾಗೆ?
ಸಾಕ್ಸ್, ಕಾಲು ಬೆವರಿದೆ ಅದಕ್ಕೆ. ನಾನು ಕೈಕಾಲು ತೊಳೆದುಬರ್ತೇನೆ, ಮತ್ತೆ ಕತೆ ಹೇಳು.

ದೋಸೆ ಸೂಪರ್ರಾಗಿದೆ ಅಮ್ಮ, ಈಗ ಸಾಕು.

ಇನ್ನೊಂದು ತಿನ್ನು. ಬಿಸಿ ಬಿಸಿ. ಅಲ್ಲೆಲ್ಲಾ ಹೋಟೆಲಿನಲ್ಲಿ ಮಾಡಿಟ್ಟದ್ದು ತಿನ್ನೋದಲ್ವ? ಆಗಾಗ ಮನೆಗಾದ್ರೂ ಬರ್ಲಿಕ್ಕಾಗುದಿಲ್ವ?
ಒಂದೇ ಸಾಕು ದೋಸೆ, ಈಗ್ಲೇ ಐದಾರಾಯ್ತು. ಹೋಟೆಲಲ್ಲಿ ಮಾಡಿಟ್ಟದ್ದು ಕೊಡುವುದಿಲ್ಲ, ಆಗಲೇ ಮಾಡಿ ಕೊಡ್ತಾರೆ. ಮನೆಗೆ ಬರ್ಲಿಕ್ಕೆ ರಜೆ ಸಿಗ್ಬೇಕಲ್ವ? ಮನೆಗೆ ಬಂದ್ರೆ ವಾಪಸ್ಸು ಹೋಗ್ಲಿಕ್ಕೆ ಮನಸು ಬರೋದಿಲ್ಲ. ಇಲ್ಲೇ ಇರ್ಬೇಕಾ?
ಇರು ಮಾರಾಯ. ಅಪ್ಪನಿಗೆ ಇರುವ ೨೦ ಅಡಿಕೆ ಮರನೋಡ್ಲಿಕ್ಕಾಗುವುದಿಲ್ಲ. ಇರುವ ಒಂದು ದನ ಹಾರಿಹೋಗುವಷ್ಟು ಬಡವಾಗಿದೆ. ಸಂಜೆಯಾದ್ರೆ ಅಪ್ಪನಿಗೆ ಲೋಕದ ವಿಷಯ ಮಾತಾಡ್ಲಿಕ್ಕೆ ಪೇಟೆಗೆ ಹೋಗ್ಬೇಕು, ನಾನು ಗೋಡೆಯ ಹತ್ರ ಮಾತಾಡ್ಬೇಕಾ?

ಅದಕ್ಯಾಕೆ ತಲೆಬಿಸಿ ಮಾಡೋದು? ಒಂದು ಟೀವಿ ತರುವ.. ಹೇಗೂ ಟೈಂಪಾಸ್ ಆಗ್ತದೆ.

ಅದೊಂದು ಕಡ್ಮೆ ಇದೆ ನೋಡು. ದಿನಾ ಗುಡಿಸಿ ವರೆಸಿ ಸಾಕಾಗಿದೆ. ಇನ್ನು ಅದನ್ನೂ ತಂದು ಮಣ್ಣು ತಿನ್ನಲಿಕ್ಕೆ ಇಲ್ಲಿಟ್ರೆ ಸಾಕು.

ಸರಿ, ನೀನೂ ಬೆಂಗಳೂರಿಗೆ ಬಾ.. ಇನ್ನು ಒಂದು ವರುಷ ಆದ್ರೆ ಹೇಗೂ ಸ್ವಲ್ಪ ದೊಡ್ಡ ಕೆಲಸ ಸೇರಬಹುದು. ಜಯಣ್ಣನ ಮನೆಯಲ್ಲಿ ಯಾರೂ ಇಲ್ವ? ಎಂತ ಯಾರೂ ಇಲ್ಲದ ಹಾಗೆ?

ಸರಿ. ಇನ್ನು ನಾನು ಬಂದು ಬೆಂಗಳೂರು ಒಂದು ಉದ್ದಾರ ಆಗ್ಬೇಕು ನೋಡು. ಜಯಣ್ಣನ ಕತೆ ದೊಡ್ಡದಿದೆ. ಅದನ್ನುಹೇಳಿದ್ರೆ ಈ ಪಾತ್ರೆ ತೊಳೆಯುವ ಕೆಲಸ ಮಧ್ಯಾಹ್ನ ಆಗ್ತದೆ. ನೀನು ಸ್ವಲ್ಪ ನಿದ್ರೆ ಮಾಡು.

ಸುಮಾರು ೫-೬ ತಿಂಗಳಾಯ್ತು ಜಯನನ್ನು ನೋಡಿ, ಚೆನ್ನಾಗಿದ್ದಾರಂತೆ. ಅದು ಸುಮಾರು ಹಳೆಯ ಕತೆ. ಬಹುಶಃಜನರೆಲ್ಲಾ ಮರೆತಿದ್ದಾರೋ ಏನೊ. ಕೆಳಗೆ ನದಿಯ ಆಚೆಗೊತ್ತಿದೆಯಲ್ಲಾ ನಿನಗೆ? ರುಕ್ಕಯ್ಯ ಗೊತ್ತಿದೆಯಲ್ಲ?

ಹ್ಮ್.. ರುಕ್ಕಯ್ಯನ ಮಗಳು ಕುಮುದ ನನ್ನ ಕ್ಲಾಸು. ಏನಾಯ್ತು?

ಸುಮಾರು ಏಳೆಂಟು ತಿಂಗಳ ಹಿಂದಿನ ವಿಷಯ ಇದು. ರುಕ್ಕಯ್ಯನಿಗೂ ಈ ಜಯನಿಗೂ ಒಳ್ಳೆ ದೋಸ್ತಿ. ಈ ಜಯನಿಗೆ ನಿನ್ನಷ್ಟೇ ಪ್ರಾಯ, ಒಂದೆರಡು ವರ್ಷ ಜಾಸ್ತಿ ಅಲ್ವ? ನೀನುಕಾಲೇಜಿಗೆ ಹೋಗುವಾಗ ಅವನು ಮೇಸ್ತ್ರಿ ಕೆಲಸಕ್ಕೆಹೋಗುತ್ತಿದ್ದ. ಮತ್ತೇನೋ ಪಂಚಾಯತು ಕಾಂಟ್ರಾಕ್ಟು ಅಂತತಿರುಗಾಡಿದ. ಒಳ್ಳೆ ಹಣಮಾಡಿದ. ನಾನು ಮೊದಲು ಮೊಬೈಲು ನೋಡಿದ್ದು ಅವನ ಕೈಯ್ಯಲ್ಲೇ ಅಲ್ವ? ಮನೆಕಟ್ಟಿಸಿದ. ಅಪ್ಪ ತೀರಿಕೊಂಡ ಕೂಡಲೇ ಇಡೀ ಜಾಗದಲ್ಲಿಬುಲ್ಡೋಜರ್ ತರಿಸಿ ಚಂದ ಮಾಡಿ ಅಡಿಕೆ ಮರ ನೆಟ್ಟ.ಒಳ್ಳೆಕೆಲಸಗಾರ.

ಇದೆಲ್ಲಾ ನನಗೂ ಗೊತ್ತು. ನಾನಿರುವಾಗಲೇ ಇದನ್ನೆಲ್ಲಾಮಾಡಿದ್ದು ಅವನು. ಅವನ ತಂಗಿ ಮದುವೆಯ ಒಂದುವಾರದ ನಂತರ ನಾನು ಬೆಂಗಳೂರಿಗೆ ಹೋದದ್ದು. ಅಲ್ಲಿಂದಮುಂದುವರೆಸು ಕತೆ.

ಹೌದು. ತಂಗಿ ಮದುವೆಯಾದ ಮೇಲೆ ಜವಾಬ್ದಾರಿ ಕಡಿಮೆಯಾದಂತೆ ಅನ್ನಿಸಿತೋ ಏನೋ? ಅವನಮ್ಮ ದಿನಾಮನೆಗೆ ಬಂದು ಅಳುತ್ತಾ ಕೂತಿರುತ್ತಿದ್ದರು. ದಿನಾ ಕುಡೀತಿದ್ದ, ಇಸ್ಪೀಟಾಡಿ ಮನೆಗೆ ಬರೋದಕ್ಕೆ ಹನ್ನೆರಡುಘಂಟೆಯಾಗುತ್ತಿತ್ತು. ಈ ಕಾಲಕ್ಕೆ ರುಕ್ಕಯ್ಯ ಅವನ ಜೋಡಿ. ಅವನಿಗಾದ್ರು ಬುದ್ದಿ ಬೇಡ್ವ? ನಿನ್ನಪ್ಪನಿಗಿಂತ ದೊಡ್ಡವಯಸ್ಸಿನಲ್ಲಿ.

ಅದು ಅವರವರ ಇಷ್ಟ ಅಲ್ವೇನಮ್ಮಾ? ಅದರಲ್ಲಿ ನಾನುನೀನು ಏನು ಹೇಳ್ಳಿಕ್ಕುಂಟು?

ಅದು ಸರಿಯೇ. ಹೀಗೆ ಜಯನನ್ನು ರುಕ್ಕಯ್ಯ ತುಂಬಾಹಚ್ಚಿಕೊಂಡ. ರುಕ್ಕಯ್ಯನ ಮನೆಗೂ ಸಲೀಸಾಗಿ ಹೋಗಿಬರತೊಡಗಿದ. ಆ ಕುಮುದನಿಗಾದ್ರು ಬುದ್ಧಿ ಬೇಡ್ವಾ? ಅವಳಿಗೆ ಮದುವೆ ನಿಶ್ಚಯವಾಗಿತ್ತು. ಆದರೂ ಈ ಜಯನನ್ನುಇಷ್ಟಪಡ್ತಿದ್ಳಂತೆ. ಇನ್ನು ನಿನ್ನದೇನಾದರೂ ಇಂತ ಏರ್ಪಾಡು ಉಂಟಾ ಹೇಗೆ?

ಅಯ್ಯ. ಹೋಗಿ ಹೋಗಿ ನನಗೆ ಯಾರಾದ್ರು ಸಿಗ್ತಾರ? ಈಮುಸುಡಿಗೆ?

ಮಗನೆ, ಅದು ಬಿಡು. ಹುಡುಗಿಯರಿಗೆ ಇಷ್ಟ ಆಗ್ಲಿಕ್ಕೆ ಮುಸುಡು ಬೇಡ. ಅದೊಂದು ಸಮಯದಲ್ಲಿ ಅವರಿಗೆಹಾಗನ್ನಿಸಿದರೆ ಸಾಕು, ಮತ್ತೆ ಯಾವ ಸಾಹಸಕ್ಕೂ ಅವರುತಯಾರು. ನೀವೇ ಎಮ್ಮೆತಮ್ಮಣ್ಣಗಳು.. ಅರ್ಥವಾಗುವ ಬದಲು ಬೆಪ್ಪುತಕ್ಕಡಿಗಳ ಹಾಗೆ ಇರ್ತೀರಿ.

ಅದು ಬಿಡಮ್ಮ. ನಾನೇನಾದ್ರು ಅಂಥ ಏರ್ಪಾಡು ಮಾಡಿದ್ರೆಹೇಳ್ತೇನೆ.. ನೀನೇ ಅಪ್ಪನಲ್ಲಿ ಹೇಳು. ಈಗ ಕತೆಮುಂದುವರೀಲಿ.

ಹಾಗೆ ಈ ಜಯ ಹೋಗಿ ಅವಳ ತಲೆಯಲ್ಲಿ ಕೂತು, ಅವಳುಮದುವೆಯಾದ್ರೆ ಈ ಜಯನನ್ನೇ ಎನ್ನುವ ಒಂದು ರಾಗಶುರುಮಾಡಿದಳು. ಆ ಪೆದ್ದು ರುಕ್ಕಯ್ಯನಿಗೆ ಗೊತ್ತಾಗ್ಲೇ ಇಲ್ಲತುಂಬಾ ಸಮಯ. ಈ ಜಯನೂ ಸುಮ್ಮನೇ ಇದ್ದ. ಪೇಟೆಗೆಹೋದಾಗ ಭೇಟಿಯಾಗುವುದು, ಎಲ್ಲೆಲ್ಲೋ ತಿರುಗುವುದೆಲ್ಲಾಮತ್ತೆ ಕ್ರಮೇಣ ಗೊತ್ತಾಯಿತು ಜನರಿಗೆ.

ಮತ್ತೆ?

ಇದೆಲ್ಲಾ ಕ್ರಮೇಣ ನಡೆಯುತ್ತಾ ಇದ್ದ ಹಾಗೆ ರುಕ್ಕಯ್ಯನಿಗೆಯಾವುದೋ ಹಣದ ವಿಷಯದಲ್ಲಿ ಜಯನ ಜೊತೆಗೆ ಜಗಳವಾಯಿತು. ಇದರಿಂದ ರುಕ್ಕಯ್ಯ ಮತ್ತೆ ಜಯ ಬೇರೆಬೇರೆಯಾದರು. ಇದು ಜಯ ಮತ್ತೆ ಕುಮುದನ ಮಧ್ಯೆ ದೊಡ್ಡಗೋಡೆಯಾಯಿತು.

ಅಮ್ಮಾ.. ನಿನ್ನ ಧಾರಾವಾಹಿ ಕತೆ ಒಂದು ಸಲ ಮುಗಿಸು. ನಂಗೇನೋ ನೀನೇ ತಯಾರಿಸಿದ ಕತೆಯ ತರಹ ಕಾಣ್ತಿದೆ.

ಹೌದು ಮಗನೆ, ಈಗೆಲ್ಲಾ ಹಾಗೆ ಅಲ್ವ? ನಿಜವಾದ ಕತೆಗಳು ಯಾವತ್ತೂ ರೋಚಕ ಅಂತ್ಯ ಕಾಣಬೇಕಾಗಿಲ್ಲವಲ್ಲ!. ಹೀಗೆಕುಮುದನ ಮದುವೆಗೆ ಇನ್ನೇನು ಒಂದುವಾರ ಇದೆಅನ್ನುವಷ್ಟರಲ್ಲಿ ಕುಮುದಳ ಒತ್ತಾಯದ ಮೇರೆಗೆ ಜಯ ಕುಮುದಳನ್ನು ಕರೆದುಕೊಂಡು ಮಂಗ್ಳೂರಿಗೋ ಪುತ್ತೂರಿಗೋ ಓಡಿ ಹೋದ. ಇದು ಮರುದಿನ ಊರೆಲ್ಲಾತುಂಬಾ ದೊಡ್ಡ ಸುದ್ಧಿಯಾಯ್ತು.

ಮತ್ತೆ?

ಮದುವೆಗೆ ಎಲ್ಲ ಸಿದ್ಧಮಾಡಿದ್ದ ರುಕ್ಕಯ್ಯ ಕುಸಿದು ಆಸ್ಪತ್ರೆಸೇರಿದ. ಒಂದು ವಾರದಲ್ಲಿ ಪುನಃ ಮನೆಗೆ ಬಂದನಂತೆ. ಬಂದಮೇಲೆ ದೊಡ್ಡ ಕತ್ತಿ ತೆಗೆದುಕೊಂಡು ಬಂದು ಜಯನ ಮನೆಯ ಹತ್ತಿರ ಬಂದು ಕಾಯುತ್ತಾ ಕುಳಿತಿದ್ದನಂತೆ.

ಆಮೇಲೆ?

ಸುಮಾರು ಇನ್ನೊಂದು ವಾರ ಆಗಿರಬಹುದು. ಜಯ ಮನೆಗೆಬಂದ. ಬಂದು ಅಮ್ಮನನ್ನೂ ಮತ್ತೆ ಕೆಲವು ವಸ್ತುಗಳನ್ನೂತೆಗೆದುಕೊಂಡು ವಾಪಸ್ಸು ಹೋದನು. ಮನೆಗೆ ಬಂದುಅಮ್ಮನೂ ಜಯನೂ ಬರ್ತೇನೆ. ಯಾವತ್ತಾದರೂ ಎಲ್ಲಿಯಾದರೂ ಸಿಗುವ. ಕುಮುದ ಚೆನ್ನಾಗಿದ್ದಾಳೆ. ನಾನಿನ್ನುಹೊಸ ಜೀವನ ಶುರು ಮಾಡ್ತೇನೆ ಎಂದೆಲ್ಲಾ ಹೇಳಿ ಹೋದ.

ಓಹೋ.. ಹೀಗೆಲ್ಲಾ ಆಯ್ತಾ?

ಹೌದು. ಇದು ಗೊತ್ತಾದ ರುಕ್ಕಯ್ಯ ರಾತ್ರಿ ಪುನಃ ಕತ್ತಿಹಿಡಿದುಕೊಂಡು ಬಂದ. ಮನೆಯ ಹಂಚುಗಳಿಗೆಲ್ಲಾ ಕಲ್ಲೆಸೆದು, ನಮ್ಮ ಮನೆಗೂ ಬಂದು ಜಯ ಎಲ್ಲಿದ್ದಾನೆ ಎಂದುಕೇಳಿದ. ನನಗ್ಗೊತ್ತಿಲ್ಲ ಅಂದೆ. ಒಂದು ಗ್ಲಾಸು ನೀರು ಕುಡಿದುಹೊರಟುಹೋದ.

ಇಷ್ಟೆಲ್ಲಾ ಆಯ್ತಾ? ಇದೆಲ್ಲಾ ಯಾಕೆ ನಂಗೆ ಹೇಳ್ಳಿಲ್ಲ ಫೋನಲ್ಲಿ?

ನೀನು ಮಾತಾಡುವ ಮೂರು ನಿಮಿಷಕ್ಕೆ ಕತೆ ಹೇಳಲಿಕ್ಕಾಗತ್ತಾ ಮಗನೇ?

ಸರಿ. ನನಗೆ ಸೀರೆ ಸೆಲೆಕ್ಟ್ ಮಾಡಲಿಕ್ಕೆ ಬರಲಿಲ್ವೇನೋ? ಈನೀಲಿ ಸೀರೆ ನಿನಗೆ. ಅಪ್ಪನಿಗೆ ಪಂಚೆ ಅಲ್ಲಿಂದ ತರುವುದೇನಕ್ಕೆಅಲ್ವಾ? ಅಂಗಿ ತಂದಿದ್ದೇನೆ.
ಎಂತಕೆ ಸೀರೆ, ಇರಲಿ. ಈ ಸಲದ ಜಾತ್ರೆಗಾದರೂ ಇದನ್ನುಹಾಕಿಕೊಂಡು ರೈಸಬಹುದು..ಈಗ ಎಂತ ಬರೀ ಚಾಯ ಸಾಕಾನಿನಗೆ?
ಹ್ಮ್. ಕೊಡು. ಒಂದು ರೌಂಡ್ ತಿರುಗಿ ಬರ್ತೇನೆ ಮತ್ತೆ.

ಅದ್ಯಾಕೋ ಸಂಜೆಗತ್ತಲೆಯಲ್ಲಿ ಜಯಣ್ಣನ ಮನೆಯ ಹತ್ತಿರಹೋದೆ. ಯಾರೋ ಜಗಲಿಯಲ್ಲಿ ಕುಳಿತಂತೆ ಕಂಡಿತು? ಲೈಟುಮುಖಕ್ಕೆ ಹಿಡಿದೆ. ಕತ್ತಿ ಹಿಡಿದುಕೊಂಡು ಎದ್ದು ಬಂತು ದೇಹಜೊತೆಗೆ ನೂರಿನ್ನೂರು ಬರೆಯಲಾಗದ ಪದಗಳು. ಓಡಿಅಲ್ಲಿಂದ ಮನೆ ಸೇರಿದೆ.


By: Ishwara Bhat K

ಎರಡು ದಿಂಬಿನ ಕತೆ

ಒಂದನೇ ದಿಂಬು :ಯಾಕೆ ಇವ್ಳು ಅರ್ಥ ಮಾಡ್ಕೊಳ್ಳಲ್ಲ

-ಮೊನ್ನೆ ತಾನೇ ಹೋಗ್ಬಂದಿದ್ದೀಯಲ್ಲೇ? ಮತ್ತೆ ಯಾಕ್ ಹೋಗ್ತಾ ಇದೀಯಾ?
ಅಯ್ಯೋ, ನಿಮ್ಗೊತ್ತಾಗಲ್ಲ. ಹೋಗ್ಲೇ ಬೇಕು. ಸ್ವಲ್ಪ ಅರ್ಜೆಂಟ್ ಕೆಲ್ಸ ಇದೆ ಊರಲ್ಲಿ.
-ಅಲ್ಲಾ, ನಂಗೆ ಇಲ್ಯಾರಿದ್ದಾರೆ?
ಅಯ್ಯೋ.. ಹತ್ವರ್ಷ ಒಬ್ರೇ ಇದ್ರಿ, ಈಗೇನ್ ಒಂದ್ ದಿನಕ್ಕೆ ಹೀಗೆಲ್ಲಾ ಹೇಳೋದು?
-ಅದಲ್ವೇ, ನೀನು ಇಲ್ದಿದ್ರೆ ಏನಾಗಲ್ಲ. ಊಟಕ್ಕೆ ಸಾಂಬಾರು, ಸಾರು ಏನಾದ್ರು ಮಾಡೋದಕ್ಕೆ.. ಹೇಳ್ದೆ.
ಅದ್ಕೇನು, ಹೇಳ್ಕೊಡ್ತೀನಿ.
-ಹ್ಮ್ಂ, ಹೇಳು.
ಒಂದೂವರೆ ಚಮಚ ಉದ್ದಿನಬೇಳೆ, ನಾಲ್ಕು ಮೆಣಸು, ಸ್ವಲ್ಪ ಜೀರಿಗೆ…
-ಅದು ಗೊತ್ತು ಬಿಡೆ, ಅದೆಲ್ಲಾ ಗೊತ್ತು.
ಓಹ್ ಉಪ್ಪು, ಹುಳಿ, ಬೆಲ್ಲ ಹಾಕೋದಾ.. ಇಷ್ಟೇ ಇಷ್ಟು ಹುಳಿ,
-ಬೇಡ, ಬೇಡ.. ನಾನು ಅಡುಗೇನೇ ಮಾಡ್ಕೊಳ್ಳಲ್ಲ. ಹೋಟೆಲ್ಲಲ್ಲಿ ತಿಂತೀನಿ. ನೀನ್ಯಾವಾಗ ವಾಪಸ್ಸು?
ಹೋಟೆಲ್ಲಾ? ಯಾಕೆ? ನಿಮ್ಗೇನ್ ಮಾಡ್ಕೊಂಡ್ ತಿಂದ್ರೆ? ನೂರ್ ರುಪಾಯಿನಾದ್ರೂ ಉಳಿಯತ್ತೆ.
-ಅದೇ ನೀನ್ಯಾಕೆ ಊರಿಗೆ? ಒಂದ್ ಸಾವ್ರ ಉಳಿಯಲ್ವಾ?
ನಾನು ಊರಿಗೆ ಹೋಗ್ಬೇಕಾದ್ರೆ ಮಾತ್ರ ಹೀಗೆ ಹೇಳ್ತೀರ, ನೀವೆಲ್ಲ ಆಫೀಸ್ ಟೂರ್ ಅಂತ ನಾಲ್ಕ್ ದಿನ ಹೋಗ್ತೀರ.
-ಹ್ಮ್ಂ, ಅದಿರ್ಲಿ, ನೀನ್ಯಾವಾಗ ವಾಪಸ್ಸು?
ಇವತ್ ಸೋಮವಾರ, ಗುರುವಾರ ವಾಪಸ್ ಬರ್ತೀನಿ. ಆದ್ರೆ ಸ್ಲೀಪರ್ ಬಸ್ಸು ಬುಕ್ ಮಾಡಿ.
-ಬಸ್ ಬುಕ್ ಮಾಡ್ಬೇಕಾ? ಒಬ್ಳಿಗೆ ಬರೋಕೆ ಇಡೀ ಬಸ್ ಯಾಕೆ ಬುಕ್ ಮಾಡ್ಲಿ?
ಇದೇ ಆಯ್ತು.. ನಾನು ಹೋಗಲ್ಲ. ಬರೀ ತಮಾಷೆ ಮಾಡಿ.
-ಹಹ.. ಆಯ್ತು ಕಣೆ, ನಾನು ಬರೋಕೆ ಮಾತ್ರ ಬುಕ್ ಮಾಡ್ತೀನಿ. ಹೋಗೋಕಲ್ಲ.


ಎರಡನೇ ದಿಂಬು: ಯಾಕೆ ಇವ್ರು ಅರ್ಥ ಮಾಡ್ಕೊಳ್ಳಲ್ಲ

ಯಾಕೋ ಹೋಗೋಕೇ ಮನ್ಸಿಲ್ಲ ರೀ,
ಯಾಕೆ? ಬುಕ್ ಮಾಡಿದ್ದು ವೇಷ್ಟಾಗುತ್ತೆ. ಹೋಗ್ಬಾ.. ಅಲ್ಲೇನೋ ಅರ್ಜೆಂಟ್ ಕೆಲ್ಸ ಇತ್ತಲ್ಲ.
ಅದು ಬಿಡ್ರೀ, ಯಾರಾದ್ರೂ ಮಾಡ್ತಾರೆ, ನಾನು ಹೋಗ್ದಿದ್ರೂ ನಡೆಯುತ್ತೆ.
ಅದ್ಯಾಕೆ ಸಡನ್ ಆಗಿ ಚೇಂಜ್ ಮಾಡಿದ್ದು? ಈಗ ಬುಕ್ ಮಾಡಾಯ್ತಲ್ಲ?
ಏನೋ, ನೀವು ನಿಜ್ವಾಗ್ಲೂ ಅಡುಗೆ ಮಾಡಿ ಊಟ ಮಾಡ್ತೀರಾ?
ಅದೇನ್ ಬಿಡೆ ಮಹಾ, ಒಂದೂವರೆ ಚಮ್ಚ ಕೊತ್ತಂಬರಿ, ಒಂದ್ ಚಮಚ ಜೀರಿಗೆ..
ಅದೆಲ್ಲಾ ಗೊತ್ತು ಬಿಡ್ರೀ, ನೀವು ಚೆನ್ನಾಗೇ ಮಾಡ್ತೀರ ಅಡುಗೇನ.. ಆದ್ರೂ
ಏನು?
ಊಟ ಮಾಡುವಾಗ ಒಂದೆರಡು ತುತ್ತು ಕಟ್ಟಿ ಕೊಡ್ತೀರಲ್ಲಾ, ಅದನ್ನ ಬಿಟ್ಟು ಹೆಂಗೆ ಹೋಗೋದು?
ಅಯ್ಯೋ ಮಹರಾಣಿ, ಬ್ಯಾಗ್ ಎಲ್ಲಾ ತುಂಬ್ಸಿ ಆಯ್ತಾ? ಬಸ್ಸಿಗೆ ಇನ್ನು ಹತ್ತೇ ನಿಮಿಷ ಇರೋದು.


By: Ishwara Bhat K

 

ಹೈಸ್ಕೂಲ್ ದಿನಗಳು – ಭಾಗ ೩

ಭಾಗ – ೩

ಅವಳು ಹಿಂದಿನ ಬೆಂಚಿನಲ್ಲಿ ಕುಳಿತು ಕೊಳ್ಳುತ್ತಿದ್ದಳು. ಹಾಗಂತ ಅವಳು ದಡ್ಡಿಯೇನಲ್ಲ. ಎಲ್ಲರಿಗಿಂತ ಎತ್ತರ ಇದ್ದಳು. ಅದಕ್ಕೆ ಹಿಂದಿನ ಬೆಂಚಿನ ಹುಡುಗಿಯರ ಸಾಲಿಗೆ ಸೇರಿದ್ದಳು. ಅವಳು ಜಾಣೆ.
ಬರೆದ ಅಕ್ಷರಗಳ ಚಂದವನ್ನು ನೋಡಲು ಎರಡು ಕಣ್ಣು ಗಳು ಸಾಲದು. ಆದರೆ ಮಿತ ಭಾಷಿ.ಗಟ್ಟಿಯಾಗಿ ಮಾತನಾಡಿದ್ದೇ ಇಲ್ಲ. ಹುಡುಗರ ಕಡೆಗಂತು ನೋಡ್ತಾನೆ ಇರ್ಲಿಲ್ಲ. ಒಟ್ಟಿನಲ್ಲಿ ಆಚಾರ, ಸಂಸ್ಕೃತಿಯ ಪ್ರತಿರೂಪ ಎನಿಸಿದ್ದಳು. .  ಹುಡುಗರಿಗಂತು ಸಕ್ಕರೆ ತಿಂದಷ್ಟು ಖುಷಿ. ಯಾಕೆ ಗೊತ್ತಾ?  ಇನ್ನು ಒಂದು ತಿಂಗಳವರೆಗೆ ತಮ್ಮನ್ನು ಕಂಟ್ರೋಲ್ ಮಾಡುವವರು ಯಾರೂ ಇಲ್ಲ. ಎನ್ನುವ ಒಣ ಜಂಭ.
ಆದರೆ ಶಿಕ್ಷಕರ ಆಯ್ಕೆ ಸರಿಯಾಗಿಯೇ ಇತ್ತು. ಹಳಿತಪ್ಪಿದ್ದ ಶಿಸ್ತು ಮತ್ತೆ ಹಳಿಯತ್ತ ಬಂತು
ಬೆಲ್  ಆದ ಮೇಲೆ ಕಿಟಿಕಿ ಹಾರುವಂತಿರಲಿಲ್ಲ. ಗಲಾಟೆ ಮಾಡುವಂತಿರಲಿಲ್ಲ. ಹಾಗೆನಾದರು ಮಾಡಿದರೆ ಅವರ ಹೆಸರು ಅವಳ ಸುಂದರ ಕೈಬರಹದಲ್ಲಿ ಶಿಕ್ಷಕರ ಕೈ ಸೇರುತ್ತಿತ್ತು.  ಹಾಗಂತ ತನಗೆ ಆಗದವರ ಹಸರನ್ನು ಬರೆಯುವ ಹವ್ಯಾಸ ಅವಳಿಗೆ ಇರಲಿಲ್ಲ. ಆದರೂ ಅವಳ ನಾಯಕತ್ವದ ಕಾಲಾವಧಿಯಲ್ಲಿ. ಪ್ರಯೋಗಾರ್ಥ ರಾಕೆಟ್ ಉಡ್ಡವಣೆಗಳು ಗುಟ್ಡಾಗಿ ನಡೆಯುತ್ತಿದ್ದುವು. ಆ ಗುಟ್ಟು ರಟ್ಟಾದುದು ರಾಕೆಟ್ ಒಂದು ಯಶಸ್ವಿಯಾಗಿ ಲ್ಯಾಂಡ್ ಆದಾಗ. ಅದು ಹುಡುಗಿಯೊಬ್ಬಳ ತಲೆ ಮೇಲೆ. ಅದೇನಂದು ಅಂತ ಹೇಳ್ತೀನಿ ಒಂದು ಪುಟ್ಟ ಹಿನ್ನಲೆಯೊಂದಿಗೆ.
ನಾನು ಮೊದಲೇ ಹೇಳಿದಂತೆ ನಮ್ಮ ಕ್ಲಾಸ್ ಇದ್ದುದು ಹೊಸ ಕಟ್ಟಡದಲ್ಲಿ‌. ಆ ಕ್ಲಾಸ್ ಗಳ ಕಿಟಿಕಿಗಳ ಬಗ್ಗೆ ನಾನು ಈ ಮೊದಲೇ ಹೇಳಿದ್ದೆ. ಆ ಕಟ್ಟಡದ ಹಿಂಬಾಗದಲ್ಲಿ ಶೌಚಾಲಯವಿತ್ತು.ಅದು ಹುಡುಗರು ಕುಳಿತು ಕೊಳ್ಳುವ ಕಿಟಿಕಿಯ ಹತ್ತಿರವೇ ಇತ್ತು. ಹೀಗಿರಲು ಒಂದು ದಿನ  ಹುಡುಗಿಯೊಬ್ಬಳು ಶೌಚಾಯದಿಂದ ಕಿರುಚುತ್ತಾ ಒಡೋಡಿ ಬಂದಳು. ವಿಷಯ ಏನೆಂದು ಅವಳ ತಲೆ ಮೇಲೆ ಲ್ಯಾಂಡ್ ಆಗಿದ್ದ ರಾಕೆಟ್ಟೇ ಹೇಳುತ್ತಿತ್ತು. ಅದೇನೊ ಅಮೇರಿಕಾದವರು, ರಷ್ಯಾದವರು ಕಳುಹಿಸುತಿದ್ದಾರಲ್ಲ!  ಅದೇ ಮಾನವ ರಹಿತ ನೌಕೆ. ಅವುಗಳಲ್ಲಿ ಮಂಗನನ್ನೋ ನಾಯಿಯನ್ನೋ ಕಳುಹಿಸುತ್ತಿದ್ದರಂತೆ. ಹಾಗೇನಾದರು ಯಾವುದಾದರು ಪ್ರಾಣಿ ತನ್ನ ತಲೆಮೇಲೆ ರಾಕೆಟ್ ಮೂಲಕ ಇಳಿದಿರಬಹುದೇ ಎಂಬ ಆತಂಕದಿಂದ ಕಂಗಾಲಾಗಿದ್ದಳು ಆ ಚಂದ್ರಮುಖಿ. ವಿಷಯ ಲೀಡರ್ ಹತ್ರ ಹೋಯಿತು. ಲೀಡರ್ ಗೆ ಭಯಂಕರ ಮಂಡೆ ಬೆಚ್ಚ‌ ಸುರುವಾಯ್ತು. ತನ್ನ ಕಾಲಾವಧಿಯಲ್ಲಿ ಈ ತರ ನಡೆಯಬೇಕೇ?… ಆದರೆ ಅದರ ಬಗ್ಗೆ ಯೋಚಿಸುತ್ತಾ ಕೂರುವಂತಿರಲಿಲ್ಲ. ಕ್ರಮ ಕೈಗೊಳ್ಳಲೇ ಬೇಕಿತ್ತು. ಮಾಹಿತಿ ಸಂಗ್ರಹ ಆರಂಭವಾಯಿತು. ಮೊದಲನೇಯದಾಗಿ ರಾಕೆಟ್ ನಿರ್ಮಿಸುದವರ ನ್ನು ಮತ್ತು ಉಡಾಯಿಸಿದವರನ್ನು ಕಂಡು ಹಿಡಿಯುವ ಪ್ರಯತ್ನ ನಡೆಯಿತು. ಆದರೆ ಉಡಾಯಿಸಲ್ಪಟ್ಟ ರಾಕೆಟ್ ನ್ನು ಬಿಡಿಸಿ ನೋಡಿದರೆ ಅದು ಬರೀ ಬಿಳಿಯ ಹಾಳೆಯಾಗಿತ್ತು ಅದರಲ್ಲಿ ಯಾವ ಸಂದೇಶವೂ ಇರಲಿಲ್ಲ. ಆ ರಾಕೆಟ್ ಮೂಲಕ ಬೇರೆ ಯಾವುದಾದರು ವಸ್ತು ತಲೆ ಮೇಲೆ ಲ್ಯಾಂಡ್ ಆಗಿರ ಬಹುದೇ ಎಂದು ಪರೀಕ್ಷಿಸಲಾಯಿತು. ಯಾವ ಕುರುಹು ದೊರೆಯಲಿಲ್ಲ. ಅಕ್ಷರ ರಹಿತ ರಾಕೆಟ್ ನ್ನು ಉಡಾಯಿಸಿದ ಆ ಮಹಾ ವಿಜ್ಞಾನಿ ಯಾರು ಎಂದು ಕಂಡು ಹಿಡಿಯುವ ಪ್ರಯತ್ನ ವಿಫಲವಾಗಲು, ಲೀಡರ್ ಆ ವಿಷಯವನ್ನು ಕ್ಲಾಸ್ ಟೀಚರಿಗೆ ಹಸ್ತಾಂತರಿಸಿದರು. ಚೆಂಡು ಈಗ ಶಿಕ್ಷಕರ ಅಂಗಳ ಸೇರಿತು.
ವಿಚಾರಣೆ ನಡೆಯಿತು. ಆದರೆ ಬಾಹ್ಯಾಕಾಶ ವಿಜ್ಞಾನಿಯ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಕೊನೆಗೆ ಶಿಕ್ಷಕರೇ ಹೇಳಿದರು, ತಪ್ಪು ಮಾಡಿದವರು ಒಪ್ಪಿಕೊಳ್ಳಿ. ಶಿಕ್ಷೆ ಕೊಡುವುದಿಲ್ಲ ಎಂದರು. ಅದು ತಪ್ಪು ಅಂತ ಒಪ್ಪಿಕೊಳ್ಳಲು ಸಿದ್ಧರಿಲ್ಲವೋ ಅಲ್ಲ ಹುಡುಗಿಯರ ಕೆಂಗಣ್ಣಿಗೆ ಗುರಿಯಾಗುವುದು ಬೇಡ ಅಂತಲೊ ಏನೋ ಯಾರೂ ಕೈ ಎತ್ತಲಿಲ್ಲ. ಅಂತು ಆ ಮಹಾನ್ ವಿಜ್ಞಾನಿಗಳು ತಮ್ಮ ಪ್ರತಿಭೆ ಗುರುತಿಸಲ್ಪಡಬಹುದಾದ ಸುವರ್ಣ ಅವಕಾಶದಿಂದ ವಂಚಿತರಾದರು.ಹೀಗೆ ಶಿಕ್ಷೆ ಜಾರಿ ಆಯ್ತು ಹುಡುಗರಿಗೆ. ಹುಡುಗಿಯರು ಈ ಕೆಲಸವನ್ನು ಮಾಡಿರಲಿಕ್ಕಿಲ್ಲ ಅಂತ ಅವರು ಹೇಗೆ  ನಿರ್ಧರಿಸಿದರೋ ಗೊತ್ತಿಲ್ಲ.ಶಿಕ್ಷೆ ಏನು? ನಿಂತು ಕೊಳ್ಳುವುದು. ಕ್ಲಾಸ್ ಮುಗಿಯುವ ವರೆಗೆ. ನಾನು ತಪ್ಪು ಮಾಡಿಲ್ಲ ಆದುದರಿಂದ ನಿಂತು ಕೊಳ್ಳುವುದಿಲ್ಲ ಅಂತ ಹೇಳುವ ದೈರ್ಯ ಯಾರಿಗೂ ಇರಲಿಲ್ಲ. ಕೊನೆಗೂ ದಾರದ ಜೊತೆ ಹೂವು ಮುಡಿಯೇರಿದಂತೆ ಸಾಧನೆ ಮಾಡದವರಿಗೂ ಸಾಧನೆಯ ಪುರಸ್ಕಾರ ದೊರೆಯಿತು.
ಘಟನೆ ಅನೀರಿಕ್ಷಿತವಾಗಿತ್ತು. ಮುಂದೆ ನಡೆಯದಂತೆ ತಡೆಯಲೇ ಬೇಕಿತ್ತು, ಸಲಹೆಗಳು ಬಂದುವು.  ಸೈಡ್ ಬದಲಾಯಿಸಿದರೆ ಹೇಗೆ? ಅಂದರೆ ಹುಡುಗರ ಸೈಡಿನಲ್ಲಿ ಹುಡುಗಿಯರು. ಹುಡಯಗಿಯರ ಸೈಡಿನಲ್ಲಿ ಹುಡುಗರು ಕುಳಿತು ಕೊಳ್ಖುವುದು. ಹಾಗೆ ಮಾಡಲು ಹಲವು ಸಮಸ್ಯೆಗಳು ಇದ್ದುವು. ಸಂಪ್ರದಾಯದ ಉಲ್ಲಂಘನೆ.ಅದೇನೋ ಗೊತ್ತಿಲ್ಲ. ನಾನು ಕಲಿತಿದ್ದ ಎಲ್ಲಾ ಕ್ಲಾಸಿನಲ್ಲೂ ಹುಡುಗಿಯರು ಹುಡುಗರ ಎಡಗಡೆಯಲ್ಲಿಯೇ ಕುಳಿತು ಕೊಳ್ಳುತ್ತಿದ್ದರು.

ನಿಮ್ಮ ಕ್ಲಾಸಿನಲ್ಲಿ ಹೇಗಿತ್ತೋ ಗೊತ್ತಿಲ್ಲ.ಬದಲಾವಣೆ ಜಗದ ನಿಯಮ. ಬದಲಾಯಿಸೋಣ ಎಂದರೆ ಶಿಕ್ಷಕರ ಸರ್ವಾಧಿಪತ್ಯ ಇಲ್ಲಿ ನಡೆಯುವಂತಿರಲಿಲ್ಲ. ಬಿಲ್ ಪಾಸ್ ಮಾಡಲು ಹುಡುಗಿಯರ ಬೆಂಬಲ ಬೇಕೇ ಬೇಕಿತ್ತು. ಬದಲಾವಣೆ ನಮ್ಮ ಕ್ಲಾಸಿನವರಿಗೆ ಅದರಲ್ಲೂ ವಿದ್ಯಾರ್ಥಿನಿಯರಿಗೆ ಇಷ್ಟವೇ ಇರಲಿಲ್ಲ. ಅದಕ್ಕೂ ಕಾರಣವಿತ್ತು. ಬದಲಾದರೆ ಹುಡುಗರ ಎದುರಿನಲ್ಲೇ ಬೆಂಚಿನತ್ತ ಹೋಗ ಬೇಕಿತ್ತು. ಅದು ಹುಡುಗಿಯರಿಗೆ ಗೊತ್ತಿತ್ತು.  ಅದಲ್ಲದೆ ಕೇವಲ ನಮ್ಮ ಕ್ಲಾಸಿನಲ್ಲಿ ಬದಲಾವಣೆ ಮಾಡಿದರೆ ಉಪಗ್ರಹಗಳು ಗ್ರಹಗಳನ್ನು ಬಹಳ ಹತ್ತಿರದಿಂದ ಸುತ್ತಬಹುತ್ತಿತ್ತು. ಹೀಗಾದರೆ ಉಪಗ್ರಹಗಳು ಗ್ರಹಗಳ ಗುರುತ್ವಾಕಾರ್ಷಣೆಯ ಪರಿಧಿಯೊಳಗೆ ಬಂದು ದುರಂತಗಳಾಗುವ ಸಂಭವ ವಿತ್ತು.
ಇಡೀ ಸೌರವ್ಯೂಹದ ಬದಲಾವಣೆಗೆ SPL ನೆರವು ಬೇಕಿತ್ತು. ಯಾರಪ್ಪ ಈ SPL? ನನಗೂ ಮೊದಮೊದಲು ಅವನ್ಯಾರೆಂದು ಗೊತ್ತೇ ಇರಲಿಲ್ಲ. (ನನ್ನ ಶಾಲಾವಧಿಯಲ್ಲಿ ಅವಳು ಎಂಬವಳು SPL ಆಗಲೇ ಇಲ್ಲ.)
SPL ಎಂದರೆ ಬೆಳಗ್ಗೆ ಅಸೆಂಬ್ಲಿಯ ನೇತೃತ್ವ ವಹಿಸುತ್ತಾರೆ ನೋಡಿ  ಅವರೆ ಈ SPL ಮತ್ತು ಪ್ರಾರ್ಥನೆಯ ಅವಕಾಶಗಳು ಎ,ಬಿ, ಡಿವಿಷನ್ ಗಳಿಗೆ ಮೀಸಲು. ಅಧಿಕೃತವಾಗಿ ಅಲ್ಲ. ಅನಧಿಕೃತವಾಗಿ. ಅದಕ್ಕೂ ಕಾರಣವಿದೆ. ಈ ಎ ಮತ್ತು ಬಿ  ಡಿವಿಷನ್ ನಲ್ಲಿ ಇರ್ತಾರಲ್ಲ. ಅವರು ಅದೇ ಶಾಲೆಯಲ್ಲಿ ಒಂದನೇಯ ತರಗತಿಯಿಂದ ಕಲಿಯುತ್ತಾ ಬಂದವರು. ಸಿ.ಡಿ.ಯಲ್ಲಿ ಇರ್ತಾರಲ್ಲ. ಅವರು 8ನೇಯ ಕ್ಲಾಸಿಗೆ ಹೊರಗಿಂದ ಬಂದವರು. ಒಂದು ರೀತಿಯಲ್ಲಿ ಎ.ಬಿ.ಯವರು ಮನೆಯ ಮಗಳಂದಿರು ನಾವು ಸೊಸೆಯಂದಿರು
ನನ್ನ ಶಾಲಾವಧಿಯಲ್ಲಿ ಸೊಸೆಯಂದಿರಿಗೆ ಆಧಿಕಾರ ಸಿಕ್ಕಿದ್ಧೇ ಇಲ್ಲ.

…… ಮುಂದುವರೆಯುವುದು.

pexels-photo-764681.jpeg


By :  Marcel D’Souza

 

ಹೈಸ್ಕೂಲ್ ದಿನಗಳು – ಭಾಗ ೨

ಮನಸೆಂಬ ಮಾಯದ ಕನ್ನಡಿ – ಬಿಂಬ ೪

ಛೇ ಅದೇನು ಟ್ರಾಫಿಕ್, ಸಿಗ್ನಲ್ ಲ್ಲಿ ನಿಂತು ಆಗ್ಲೇ ಹತ್ತು ನಿಮಿಷನೇ ಆಗೋಯ್ತು, ಯಾವಾಗ ಮೂವ್ ಆಗತ್ತೋ ಗೊತ್ತಿಲ್ಲ ಅಂತ ಬೈಕೊಂಡು ಮತ್ತೆ ಯೋಚನೆಯ ಸುಳಿಗೆ ಸಿಲುಕಿಕೊಂಡಳು ಸಹನಾ..

ಶ್ಯಮಂತ್ ಅಸೈನ್ಮೆಂಟ್ ಮುಗ್ಸಿದ್ನೋ ಇಲ್ವೋ.. ರಾಹುಲ್ ಜೊತೆ ಅಷ್ಟೊಂದು ಜಗಳ ಆಡ್ಬಾರ್ದಿತ್ತು, ಶ್ಯಮಂತ್ ಬಗ್ಗೆ ಗಮನ ಕೊಡೋಕಾಗ್ತಿಲ್ಲ.. ನಾನಾದ್ರೂ ಏನ್ಮಾಡ್ಲಿ ? ಚೆನ್ನಾಗಿ ನಡ್ಕೊಂಡು ಹೋಗ್ತಿತ್ತಲ್ಲ ಜೀವನ ?! ರಾಹುಲ್ ಕೆಲಸ ಕಳ್ಕೊಳ್ಳೋವರೆಗೂ ಕಷ್ಟ ಅಂದ್ರೇನು ಅನ್ನೋ ಅರಿವಿಲ್ಲದಂತೆ ಒಳ್ಳೆ ಐಶಾರಾಮಿ ಬದುಕೇ ನಡೀತಿತ್ತಲ್ಲ? ಒಳ್ಳೇ ಸಾಫ್ಟ್ವೇರ್ ಇಂಜಿನಿಯರ್, ಕೈತುಂಬಾ ಸಂಬಳ, ಒಳ್ಳೇ ಮನೆನೂ ಆಯ್ತು, ದೊಡ್ಡ ಕಾರು, ವೀಕೆಂಡ್ಸ್ ತಿರುಗಾಟ ಎಲ್ಲವೂ ಚೆನ್ನಾಗೇ ರೂಢಿ ಆಗಿತ್ತು. ಕೆಲಸ ಕಳ್ಕೊಂಡಮೇಲೆ, ಈ ಎಮ್ ಐ ಕಟ್ಟೋದ್ರಲ್ಲಿ, ದೊಡ್ಡ ಮನೆ ಮಾರಬೇಕಾಗಿ ಬಂತು, ಈಗ ಸಣ್ಣ ಅಪಾರ್ಟ್ಮೆಂಟ್.. ದೊಡ್ಡ ಮನೆ ರೂಢಿಯಾಗಿದೆ, ಹೊಂದ್ಕೊಳ್ಳೋದು ಕಷ್ಟ. ಸಾಲಕ್ಕೆ ಇರೋ ಬರೋ ಆಸ್ತಿ ಕರಗಿಹೋಗ್ತಿದೆ !

ನಾನೂ ದುಡೀಬೇಕಾಗಿರೋ ಪರಿಸ್ಥಿತಿ ! ರಾಹುಲ್ ಡಿಪ್ರೆಶನ್ ಗೆ ಹೋಗ್ತಿದ್ದಾನೆ, ಸಣ್ಣಪುಟ್ಟ ವಿಷ್ಯಕ್ಕೆ ಕೋಪ, ಜಗಳ, ಸಾಕಾಗಿದೆ ! ನಿನ್ನೆಯೂ ಏನೋ ಪುಟ್ಟ ವಿಷಯವೇ ಅಲ್ವೇ ಆಗಿದ್ದು ? ಅದೆಷ್ಟು ಕೋಪ ಮಾಡ್ಕೊಂಡ ! ಆಫೀಸಲ್ಲಿ ಕತ್ತೆ ಥರ ದುಡಿದು ಬರ್ತೀನಿ ನಾನು, ನಂಗೂ ಸಾಕಾಗಿದೆ ! ಮನೆಗೆ ಹೋದ್ಮೇಲೆ ಕನ್ವಿನ್ಸ್ ಮಾಡ್ಬೇಕು ಹೇಗೋ ಶ್ಯಮಂತ್ ಗೆ ಒಂದು ದಾರಿ ಮಾಡ್ಕೊಟ್ರೆ ಸಾಕು ! ಯೋಚನೆ ಮುಗೀತಿಲ್ಲ.. ಟ್ರಾಫಿಕ್ ಮೂವಾಯ್ತಲ್ಲ? ತರಾತುರಿಯಿಂದ ಮನೆಗೆ ಹೋದಳು..

 

ಮನೆಯ ಮುಂದೆ ತುಂಬಾ ಜನ ಸೇರಿದ್ರು, ಏನಾಗ್ತಿದೆ ? ಎಲ್ಲರನ್ನೂ ಸರಿಸಿ ಎದುರಿನ ದೃಷ್ಯ ನೋಡ್ತಿದ್ದಂಗೆ ಕುಸಿದು ಬಿದ್ದಳು ! ಯಾರೋ ಮಾತಾಡಿಕೊಳ್ತಿದ್ರು.. “ಗಂಡಹೆಂಡತಿ ಜಗಳ, ರೋಸಿಹೋಗಿ ಆತ್ಮಹತ್ಯೆ ಮಾಡ್ಕೊಂಡ್ನಂತೆ”!


By: Sangeetha Bhat

ಮನಸೆಂಬ ಮಾಯದ ಕನ್ನಡಿ – ಬಿಂಬ ೩

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೇ ಒಂದು ದಿನ
ಕಡಲನೂ ಕೂಡಬಲ್ಲೆನೇ ಒಂದು ದಿನ

ನೀನು ನನ್ನ ಪಾಲಿಗೆ ಕಡಲಿನಂತೆ ಕಣೋ.  ನಾನು ಕಡಲನ್ನು ಸೇರುವ ನದಿಯಂತೆ.
ನಿನ್ನ ಪ್ರೀತಿಯ ಅಲೆಯಲ್ಲಿ ತೇಲಿ ಹೋಗಬೇಕು.. ನಿನ್ನ ಮಾತುಗಳನ್ನು ಕೇಳುತ್ತ ನಾ ಕಳೆದು ಹೋಗಬೇಕು..ನನ್ನ ಆಸೆಗಳು ಕೊನೆ ಇಲ್ಲದವು ಕಣೋ ಹುಡುಗಾ.. ಅದಕ್ಕೆಲ್ಲ ನೀನೇ ಕಾರಣ ಅಂತ ಬೇರೆ ಹೇಳಬೇಕಾ ? ಅದರ ಅರಿವು ನಿನಗಿದೆ ಅಲ್ಲವಾ ?ಆದರೂ ಯಾವುದನ್ನೂ ಅರಿಯದ ಅಮಾಯಕನಂತೆ ನಡೆದುಕೊಳ್ಳುವದಾದರೂ ಯಾಕೆ ನೀನು ?

“ಪ್ರೀತಿ” ಎಂದರೆ ಏನು ಅನ್ನುವದನ್ನು ನಿನ್ನಿಂದಲೇ ಅರಿತಿದ್ದು ಕಣೋ.‌ ಎಲ್ಲವೂ ಅರ್ಥವಾಗಿ ಇನ್ನೇನು ನಿನ್ನ ಪ್ರೀತಿ ನನ್ನದು ಎಂದು ಸಂತಸ ಪಡುವ ಹೊತ್ತಿಗೆ ಅಪರಿಚಿತನಂತೆ ವರ್ತಿಸುತ್ತಿರುವೆಯಲ್ಲ.. ಇದು ನಿನಗೆ ತರವೇ ಗೆಳೆಯಾ?

ನೀನಿಲ್ಲದ ಬದುಕು ಹೂಗಳಿಲ್ಲದ ಹೂದೋಟದಂತೆ ಕಣೋ.. ಅಂದವಿಲ್ಲ, ಆಹ್ಲಾದವಿಲ್ಲ.. ಬದುಕಬೇಕಷ್ಟೇ.. ಮರಳಿ ಬಂದು ನನ್ನ ಬದುಕನ್ನು ಅರಳಿಸಬಾರದೇ ??

ನಿನ್ನ ಜೊತೆ ಮಾತನಾಡುತ್ತಾ ಇದ್ದರೆ ಸಮಯ ಕಳೆದದ್ದೇ ಗೊತ್ತಾಗುವದಿಲ್ಲ ಅನ್ನುತ್ತಿದ್ದವನು ನೀನು.. ಇಂದು ನನ್ನೊಂದಿಗೆ ನಾಲ್ಕು ಮಾತನಾಡಲು ಸಮಯವೇ ಇಲ್ಲದವನಂತೆ ನಡೆದುಕೊಳ್ಳುತ್ತಿರುವೆಯಲ್ಲ.. ನಾ ಮಾಡಿದ್ದಾದರೂ ಏನು ? ಚಿಕ್ಕ ಮಕ್ಕಳಂತೆ ಆಡ್ತೀಯಾ ಕಣೇ, ನಿನ್ನ ಬುದ್ಧಿ ಬೆಳೆಯುವದು ಯಾವಾಗ ಅನ್ನುತ್ತಿದ್ದೆಯಲ್ಲ.. ನಿಂಗೊತ್ತಾ ? ನನಗೆ ನಿನ್ನಲ್ಲಿ ಅಮ್ಮ ಕಾಣ್ತಾ ಇದ್ಲು ಕಣೋ..ನಾನು ಮಗುವಾಗಿಬಿಡುತ್ತಿದ್ದೆ..ಇನ್ನೆಂದೂ ಹಾಗೆ ನಡೆದುಕೊಳ್ಳಲಾರೆ.. ಮರಳಿ ಬಂದು ಬಿಡೋ..

ಸಾಯಿಸುವದಿದ್ದರೆ ಒಮ್ಮೇಲೆ ಸಾಯಿಸಿಬಿಡು.. ಹೀಗೆ ನಿರ್ಲಕ್ಷಿಸಿ ಬದುಕಿದ್ದೂ ಸತ್ತಂತೆ ಮಾಡಬೇಡ.. ನೀನಿಲ್ಲದ ಬದುಕಿಗೆ ಅರ್ಥ ಇಲ್ಲ.. ನೀ ಜೊತೆಯಿದ್ದರೆ ಅದುವೇ ಎಲ್ಲ.. ನೀನಿದ್ದರೆ ಜಗದ ಎಲ್ಲ ಸಿರಿ ಸಿಕ್ಕಂತೆ.. ನೀನಿಲ್ಲದಿದ್ದರೆ ಎಲ್ಲ ಇದ್ದರೂ ಏನೂ ಇಲ್ಲದಂತೆ….

ಕಡಲ ಸೇರದೆ ನಡುವೆಯೇ ಬರಡಾಗುವ ನದಿಯನ್ನಾಗಿ ಮಾಡದೆ, ಜುಳುಜುಳು ಹರಿದು ಸಾಗರ ಸೇರುವಂತೆ ಮಾಡು.. ನಿನಗಾಗಿ ಕಾಯುತ್ತಿರುವೆ,,ಕಾಯುತ್ತಲೇ ಇರುವೆ…

ಇಂತಿ ನಿನ್ನವಳಾಗ ಬಯಸುವ..

pexels-photo-415299.jpeg


By: Vindya Hegde

ಮಹಿಳೆ ಮತ್ತು ಆರೋಗ್ಯ -2

ಆಸ್ಟಿಯೋಪೊರೋಸಿಸ್ (Osteoporosis)

ಇದು ಮೂಳೆಗೆ ಸಂಬಂಧಿಸಿದಂತ ಖಾಯಿಲೆ. ಈ ಸ್ಥಿತಿಯಲ್ಲಿ ಮೂಳೆಯು ಸಾಂದ್ರತೆಯನ್ನು ಕಳೆದುಕೊಳ್ಳುತ್ತಾ ಶಿಥಿಲವಾಗುತ್ತದೆ. ಮೂಳೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಸೌಮ್ಯವಾದ ಒತ್ತಡಗಳಿಗೂ ಮೂಳೆಗಳು ಮುರಿಯುವ ಅಪಾಯವನ್ನು ಹೆಚ್ಚಿಸುತ್ತದೆ.

35 ವರ್ಷದ ನಂತರ ಪ್ರತಿ ಮಹಿಳೆಯರಲ್ಲೂ ಮೂಳೆಯ ಸಾಂದ್ರತೆ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ ಮತ್ತು ಋತುಬಂಧದ(ಮೆನೋಪಾಸ್) ನಂತರ ಮೂಳೆಯು ಹೆಚ್ಚು ವೇಗವಾಗಿ ದುರ್ಬಲವಾಗುತ್ತದೆ.

ಪ್ರಮುಖ ಅಪಾಯಕಾರಿ ಅಂಶಗಳು:

 • ಅನುವಂಶಿಕತೆ
 • ಜಡಜೀವನ
 • ವ್ಯಾಯಾಮದ ಕೊರತೆ
 • ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ಡಿ-ಜೀವಸತ್ವದ ಕೊರತೆ
 • ಧೂಮಪಾನ ಮತ್ತು ಮದ್ಯಪಾನ
 • ಅತೀ ಕಡಿಮೆ ದೇಹದ ತೂಕ
 • ರುಮಾಟಾಯ್ಡ್ ಆರ್ಥ್ರೈಟಿಸ್ (ತೀವ್ರ ಉರಿಯೂತ/ ಸಂಧಿವಾತ)
 • ಅರೆಜೀರ್ಣತೆ (ಪೋಷಕಾಂಶಗಳು ಸರಿಯಾಗಿ ಜೀರ್ಣಾಂಗವ್ಯೂಹದಲ್ಲಿ ಹೀರಲ್ಪಡುವುದಿಲ್ಲ)
 • ಕುಂದಿದ ಈಸ್ಟ್ರೋಜನ್ ಪ್ರಮಾಣ (ಋತುಬಂಧದ ಸಮಯದಲ್ಲಿ ಅಥವಾ ಅಂಡಾಶಯಗಳನ್ನು ತೆಗೆಸಿದ್ದಲ್ಲಿ)
 • ಕೀಮೋಥೆರಪಿ
 • ಥೈರಾಯ್ಡ್

ಈ ಸ್ಥಿತಿಯು ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಕಾಣಬಹುದಾದರೂ ಮಹಿಳೆಯರಿಗೇ ಹೆಚ್ಚು ಅಪಾಯ. ಆರೋಗ್ಯಕರ ಜೀವನಶೈಲಿ ಮತ್ತು ವೈದ್ಯರ ಸಲಹೆಯಿಂದ ಈ ಸಮಸ್ಯೆಯನ್ನು ತಡೆಗಟ್ಟಬಹುದು.

ರೋಗದ ಗುಣಲಕ್ಷಣಗಳು:

ಆಸ್ಟಿಯೋಪೊರೋಸಿಸ್ ಸಾಕಷ್ಟು ವರ್ಷಗಳ ಅವಧಿಯಲ್ಲಿ ನಿಧಾನವಾಗಿ ಬೆಳವಣಿಗೆಯಾಗುತ್ತದೆ. ರೋಗಲಕ್ಷಣಗಳನ್ನು ಗುರುತಿಸಲು ಹಲವಾರು ತಿಂಗಳುಗಳು ತೆಗೆದುಕೊಳ್ಳಬಹುದು.

 • ಮೂಳೆ ಸವೆತೆ
 • ತೀವ್ರವಾದ ಮಂಡಿನೋವು
 • ಸೂಕ್ಷ್ಮವಾದ ಒತ್ತಡಕ್ಕೆ ಮೂಳೆ ಮುರಿಯುವುದು (ಕಾಲು/ಸೊಂಟ/ಕೈ/ ಪಕ್ಕೆಲುಬು ಮೂಳೆ)
 • ತೀವ್ರವಾದ ಬೆನ್ನು ನೋವು
 • ಕುಗ್ಗಿದ ಅಥವಾ ಬಗ್ಗಿದ ದೇಹದ ಭಂಗಿ.

 

 image

ಆಸ್ಟಿಯೊಪೊರೋಸಿಸ್: ಚಿಕಿತ್ಸೆ, ಪೋಷಣೆ ಮತ್ತು ಮನೆ ಉಪಚಾರ

 • ಮೇಲಿನ ಯಾವುದೇ ಗುಣಲಕ್ಷಣಗಳು ಕಂಡುಬಂದಲ್ಲಿ ತಪ್ಪದೇ ವೈದ್ಯರನ್ನು ಕಾಣುವುದು.
 • 35 ವರ್ಷದ ನಂತರ ಆರೋಗ್ಯದ ಪೂರ್ಣ ತಪಾಸಣೆ (Total Health Check up) ಮಾಡುವುದು.
 • ಆಹಾರದಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಮತ್ತು ಡಿ-ಜೀವಸತ್ವವನ್ನು ಬಳಸುವುದು
  • ಕ್ಯಾಲ್ಸಿಯಂ ಮತ್ತು ಜೀವಸತ್ವ ಡಿ ಅಹಾರದ ಮೂಲಗಳು
   • ಡೈರಿ ಉತ್ಪನ್ನಗಳು: ಹಾಲು, ಮೊಸರು, ಚೀಸ್, ಪನೀರ್ ಮುಂತಾದ ಡೈರಿ ಉತ್ಪನ್ನಗಳು ಕ್ಯಾಲ್ಸಿಯಂ ಸಮೃದ್ಧವಾಗಿವೆ
   • ಹಸಿರು ತರಕಾರಿಗಳು ಕ್ಯಾಲ್ಸಿಯಂನ ಸಮೃದ್ಧ ಮೂಲಗಳಾಗಿವೆ. ಟರ್ನಿಪ್ ಗ್ರೀನ್ಸ್, ಕೊಲಾರ್ಡ್ ಗ್ರೀನ್ಸ್, ಲೆಟ್ಯೂಸ್, ಸೆಲರಿ, ಬ್ರೊಕೊಲಿ, ಅಣಬೆಗಳನ್ನು ಸೇವಿಸಿ.
   • ಕ್ಯಾಲ್ಸಿಯಂನ ಹೆಚ್ಚಿನ ಮೂಲಗಳು ಮೀನು, ಕಿತ್ತಳೆ, ಬಾದಾಮಿ, ಎಳ್ಳಿನ ಬೀಜಗಳು ಮತ್ತು ಮೊಳಕೆ ಕಟ್ಟಿದ ಕಾಳುಗಳು ಮತ್ತು ಕಿತ್ತಳೆ ರಸವನ್ನು ಹೊಂದಿರುವ ಕ್ಯಾಲ್ಸಿಯಂ-ಬಲವರ್ಧಿತ ಆಹಾರಗಳು.
   • ಬಾದಾಮಿ, ವಾಲ್ ನಟ್ಸ್, ಖರ್ಜೂರ, ಅಂಜೂರ
   • ಜೋನಿಬೆಲ್ಲ
   • ಶ್ರಿಂಪ್, ಸಾಲ್ಮನ್, ಕ್ರಾಬ್, ಸಾರ್ಡೈನ್ಸ್, ಮೊಟ್ಟೆ.
   • ವಿಟಮಿನ್ ಡಿ ಮುಖ್ಯವಾದುದು ಏಕೆಂದರೆ ಅದು ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚಿನ ವಿಟಮಿನ್ ಡಿ ಅನ್ನು ಸೂರ್ಯನ ಬೆಳಕಿನಿಂದ ಪಡೆಯಬಹುದು ಮತ್ತು ಇತರ ಆಹಾರ ಮೂಲಗಳಾದ ಕೊಬ್ಬಿನ ಮೀನು, ಯಕೃತ್ತು, ಮೊಟ್ಟೆಗಳಿಂದ ಪಡೆಯಬಹುದು.
 • ಗಿಡಮೂಲಿಕೆಗಳು ಮತ್ತು ಮಸಾಲೆಗಳು: ತುಳಸಿ, ಥೈಮ್, ದಾಲ್ಚಿನ್ನಿ, ಪುದೀನಾ, ಬೆಳ್ಳುಳ್ಳಿ, ಓರೆಗಾನೊ, ರೋಸ್ಮರಿ ಮತ್ತು ಪಾರ್ಸ್ಲಿ.
 • ನಿಯಮಿತ ವ್ಯಾಯಾಮ ಮತ್ತು ಸರಿಯಾದ ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಅತ್ಯಾವಶ್ಯಕ

ಟಿಪ್ಸ್:

ಅರಿಶಿಣ ಪುಡಿ, ಮೆಂತ್ಯೆ ಪುಡಿ, ಒಣಶುಂಠಿ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ, ದಿನಾಲು ಬೆಳಿಗ್ಗೆ ಈ ಮಿಶ್ರಣವನ್ನು ಒಂದು ಚಮಚದಷ್ಟು ಬಿಸಿನೀರಿನ ಜೊತೆ ಸೇವಿಸಿದಲ್ಲಿ ಮಂಡಿನೋವು ಮತ್ತು ಉರಿಯೂತದ ಸಮಸ್ಯೆಯನ್ನು ತಡೆಗಟ್ಟಬಹುದು.

image


Written By : Chaitra R Rao|Nutritionist

 

 

 

 

 

 

 

 

 

 

 

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೨

ಪುಟ-೩

ಜಗತ್ತಿನ ಗುರುಗಳನ್ನು ನೋಡಿ ಬಲ್ಲವರು ಟೊಂಯ್ಕರು. ಆದರೆ ಡಿಲೈಟಾನಂದರ ಪೂರ್ವವನ್ನೂ ಉತ್ತರವನ್ನೂ ತಿಳಿಯಲಾರದವರು. ತಾನು ಓರ್ವನೇ ಶಿಷ್ಯ, ಆದರೆ ಗುರುವಿನಿಂದ ಏನನ್ನೂ ಕಲಿಯಲಿಲ್ಲ ಎನ್ನುವ ಒಂದು ಬೇಸರ ಇತ್ತೀಚೆಗೆ ಕಾಡುತ್ತಿತ್ತು. ಮಾಡುವುದಕ್ಕೇನೂ ಕೆಲಸ ಇಲ್ಲದೇ ಕುಳಿತವನೇ ಗುರು?

ಬೆಳಗ್ಗೆ ಸೂರ್ಯ ಮೂಡುವ ಮೊದಲೇ ಏಳುತ್ತಿದ್ದ ಡಿಲೈಟರು ದೂರದ ನಡಿಗೆಯನ್ನು ಮುಗಿಸಿ ವಾಪಸ್ಸು ಬರಬೇಕಾದರೆ ಟೊಂಯ್ಕರು ಎದ್ದಿರುತ್ತಿದ್ದರು. ಇತ್ತೀಚೆಗೆ ಯಾರ್ಯಾರೋ ಭಕ್ತರು ಬರುತ್ತಿದ್ದರಿಂದ ಹಣ್ಣು ಹಂಪಲುಗಳು, ತೆಂಗಿನಕಾಯಿ ಸಿಗುತ್ತಿದ್ದುದರಿಂದ ಆಹಾರದ ಬಗ್ಗೆ ಯೋಚನೆ ಇರಲಿಲ್ಲ.

ಕುಳಿತುಕೊಂಡು ಯೋಚಿಸಲು ಒಂದು ಕಲ್ಲು, ವಿರಮಿಸಲು ಗುಹೆಯಂತಹ ಜಾಗ, ಒಳ್ಳೆಯ ತಂಗಾಳಿ, ಒಂದಿನ್ನೂರು ಮೀಟರುಗಳ ಅಂತರದಲ್ಲೊಂದು ಅರಳೀಮರ, ಅಲ್ಲಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ ಸರಕಾರದ ಕೃಪೆಯ ಕಾಲುವೆಯ ನೀರು. ಸ್ವಲ್ಪ ಕೈಚಾಚಿದರೆ ಯಾರೂ ಗದರಿಸದ ಹುಲುಸಾದ ಜೋಳದ ಗದ್ದೆ. ಇನ್ನೇನು ಬೇಕಿರಲಿಲ್ಲ ಡಿಲೈಟರಿಗೆ.

ಡಿಲೈಟರು ಸುಮ್ಮನೇ ಕುಳಿತಾಗ, ಮಾತನಾಡದೇ ಇದ್ದಾಗ ಟೊಂಯ್ಕರಿಗೆ ಒಬ್ಬಂಟಿತನ ಕಾಡುತ್ತಿತ್ತು. ಆದರೂ ಗುರುಗಳು ಹೇಳಿಕೊಟ್ಟಂತೆ ಏಳು ಸೆಕೆಂಡು ಏನನ್ನೂ ಯೋಚಿಸದೇ ಇರಬಲ್ಲ ಶಕ್ತಿ ಬಂದಿತ್ತು. ಇನ್ನು ನಲ್ವತ್ತೊಂಭತ್ತು ಸೆಕೆಂಡು ಏನೂ ಯೋಚಿಸದೇ ಇರುವ ಶಕ್ತಿ ಬರಬೇಕಿತ್ತು.

ತಕ್ಕಮಟ್ಟಿಗೆ ಕಟ್ಟುಮಸ್ತಾಗಿದ್ದ ಟೊಂಯ್ಕರು ಒಂದು ದಿನ ಆ ಬೆಟ್ಟಕ್ಕೆ ಬರುವ ಕುರಿಹಿಂಡುಗಳನ್ನು ನೋಡುತ್ತಾ ಕುಳಿತಿದ್ದರು. ಪೂರ್ವದಲ್ಲಿ ಇಂತಹ ಕುರಿಗಳನ್ನು ನೋಡಿದರೆ ಬಾಯಿಯಲ್ಲಿ ಒಂದೂವರೆ ಚಮಚದಷ್ಟಾದರೂ ನೀರು ಬರುತ್ತಿತ್ತು ಟೊಂಯ್ಕರಿಗೆ. ಈಗ ಹಾಗಿಲ್ಲ, ಕುರಿಯ ಮಂದೆ, ಅದರ ಚಂದ, ಹುಲ್ಲು ತಿನ್ನುವಾಗ ಬರುವ ಗರ್ ಗರ್ ಧ್ವನಿ ಎಲ್ಲವೂ ಬಹಳ ಆಪ್ಯಾಯಮಾನವಾಗಿತ್ತು.

ಹೀಗೇ ನೋಡುತ್ತಿದ್ದಾಗ ಒಂದು ದಿನ ಒಬ್ಬರನ್ನು ಮಾತನಾಡಿಸಿದ. ಆ ವ್ಯಕ್ತಿಯೋ, ಯಾವುದೋ ದೂರದ ಊರಿನಿಂದ ಕುರಿಗಳನ್ನು ಹೊಡೆದುಕೊಂಡು ಬರುವ ವ್ಯಕ್ತಿ. ಸಣ್ಣ ಬೆಟ್ಟದ ಮೇಲೆ ಕುರಿಗಳಿಗೆ ಮೇಯುವುದಕ್ಕೆ ಒಂದು ಕುರಿಯನ್ನು ಬೆಟ್ಟದ ಯಜಮಾನನಿಗೆ ಕೊಟ್ಟಿದ್ದ. ಹೀಗಾಗಿ ಟೊಂಯ್ಕರಿಗೆ ಆ ಬೆಟ್ಟಕ್ಕೂ, ತಾನು ತಂಗುವ ಜಾಗಕ್ಕೂ ಒಬ್ಬ ಒಡೆಯನಿದ್ದಾನೆ ಎನ್ನುವ ವಿಷಯ ಸಿಕ್ಕಿದಂತಾಯ್ತು.

ಇನ್ನೊಂದು ದಿನ, ಗುರುಗಳು ಧ್ಯಾನದಲ್ಲಿದ್ದಾಗ ಆ ಬೆಟ್ಟವನ್ನೊಳಗೊಂಡ ಆಸ್ತಿಯ ಒಡೆಯರಾದ ಮಲ್ಲಪ್ಪರನ್ನು ಭೇಟಿಯಾಗಲು ಅವರ ಮನೆಗೆ ಹೋದರು. ಈ ಮಲ್ಲಪ್ಪನವರು ಊರಿನ ಜಾತ್ರೆಯ ಮುಖ್ಯಸ್ಥರಲ್ಲಿ ಒಬ್ಬರಾದುದರಿಂದ ಟೊಂಯ್ಕರನ್ನು ಗುರುತಿಸಿ ಅವರಿಗೆ ನೀರು, ಹಾಲು, ಫಲಗಳನ್ನು ಕೊಟ್ಟು ಬಂದ ಕಾರಣವನ್ನು ಕೇಳಿದರು. ಏನಿಲ್ಲವೆಂದೇ ಶುರುಮಾಡಿದ ಟೊಂಯ್ಕರು ಆ ಬೆಟ್ಟದ ಅಷ್ಟು ನಿರುಪಯುಕ್ತ ಜಾಗದಲ್ಲಿ ಗುರುಗಳ ವಾಸಕ್ಕೆ, ಬರುವ ಭಕ್ತಾದಿಗಳಿಗೆ ನೀರು, ಶೌಚ ಇತ್ಯಾದಿ ಕ್ರಿಯೆಗೆ ಸಹಕಾರಿಯಾಗುವ ಕಟ್ಟಡಕ್ಕೆ ಅನುಮತಿಯನ್ನು ಕೇಳಿದರು.

ಮಲ್ಲಪ್ಪನವರು ಶ್ರೀಮಂತರೂ ಹೌದು, ಡಿಲೈಟರ ಮೇಲೆ ಒಳ್ಳೆಯ ಗೌರವವಿದ್ದವರೂ ಹೌದು. ಆದರೆ ಕಮ್ಯೂನಿಷ್ಟರಲ್ಲ. ಹಾಗಾಗಿ ಜಾಗವನ್ನು ಕೊಡುವುದಕ್ಕೆ ಅವರಿಗೆ ಸರ್ವಥಾ ಮನಸ್ಸಿರಲಿಲ್ಲ. ಹಾಗೆಯೇ, ಡಿಲೈಟನಾಂದರ ಪರಮ ಕೃಪೆಯನ್ನು ಕಳೆದುಕೊಳ್ಳುವುದೂ ಇಷ್ಟವಿಲ್ಲದಿದ್ದುದರಿಂದ ಬೆಟ್ಟದಲ್ಲಿ ಅವರ ವಾಸವಿದ್ದುದಕ್ಕೆ ಆಕ್ಷೇಪವಿರಲಿಲ್ಲ. ಇತ್ತೀಚೆಗೆ ಭಕ್ತರು ಎಂದುಕೊಂಡು ಬರುತ್ತಿರುವ ಜನರಿಂದ ತೋಟ ಗದ್ದೆಗಳಿಗೆ ಸಮಸ್ಯೆಯಾಗುತ್ತಿದ್ದುದೂ ಅರಿವಿತ್ತು.

ಕೆಲವೊಂದು ಸಲ ಎರಡು ಆಯ್ಕೆಗಳೂ ತಪ್ಪಲ್ಲವೆನ್ನುವಾಗ ಯಾವುದಾದರೂ ಒಂದು ಆಯ್ಕೆ ಮಾಡಿ ಮತ್ತೊಂದನ್ನ ಆಯ್ಕೆ ಮಾಡಬಹುದಿತ್ತು ಎನ್ನುವ ಪರಿತಾಪ ಉಂಟಾಗುತ್ತದೆ. ಅಂತಹ ಒಂದು ಪರಿತಾಪ, ಗೊಂದಲದ ನಡುವೆ ಮಲ್ಲಪ್ಪನವರು ಆಗಲಿ, ನೋಡೋಣ ಎಂದು ಟೊಂಯ್ಕರನ್ನು ಕಳಿಸಿದರು.

ಅಂತಿರ್ಪೊಡೆ, ಇದೆಲ್ಲ ಸಮಾಚಾರವೂ ಡಿಲೈಟಾನಂದರ ಕಿವಿಗಳಿಗೆ, ಕಣ್ಣುಗಳಿಗೆ ತಿಳಿಯಲಿಲ್ಲ. ಒಂದು ದಿನ ಶ್ರೀಮಾನ್ ಮಲ್ಲಪ್ಪನವರ ಸಂಸಾರ ಸಮೇತವಾದ ಸವಾರಿ ಗುರುಗಳಿದ್ದಲ್ಲಿಗೆ ಬಂದಾಗ ಡಿಲೈಟಾನಂದರಿಗೆ ವಿಷಯವನ್ನು ಹೇಳಿದರು. ಯಾವುದೋ ಬಿಸಿಲಿನಲ್ಲಿ ಹಪ್ಪಳ ಒಣಗಿಸುತ್ತಿದ್ದಾಗ ಬಂದ ಮಳೆಯಂತೆ ಈ ಸುದ್ಧಿ ಗುರುಗಳಿಗೆ.

ಸಮಾಧಾನದಿಂದಿದ್ದ ಪ್ರಾಕೃತಿಕ ಶಾಂತಿಗೆ ಭಂಗವಾಗುವ ಈ ಕಟ್ಟಡ, ವಸತಿಗಳಿಗೆ ಸಂತೋಷ ಪಡುವುದೋ ಬೇಸರ ಪಡುವುದೋ ತಿಳಿಯದೇ ಮೌನದ ಹುತ್ತಕ್ಕೇ ಶರಣು ಹೋದರು. ಅಲ್ಲೇ ಇದ್ದ ಟೊಂಯ್ಕರು ಯಾವುದೇ ಕಸಿವಿಸಿಯಿಲ್ಲದೇ ಆಗಲಿ ಮಲ್ಲಪ್ಪನವರೇ, ಈ ಜಾಗದಲ್ಲಿ ಹೀಗೆ, ಆ ಜಾಗದಲ್ಲಿ ಹಾಗಿದ್ದರೆ ಒಳ್ಳೆಯದು ಎಂದೂ ಹೇಳಿದರು. ಡಿಲೈಟಾನಂದರ ಹುಬ್ಬುಗಳು ಯಾವುದೋ ಶಬ್ಧಕ್ಕೆ ಮರದಿಂದ ಹಾರಿದ ಹಕ್ಕಿಗಳಂತೆ ಒಮ್ಮೆ ಹಾರಿ ಮತ್ತೆ ಕುಳಿತವು.

ಮಲ್ಲಪ್ಪನವರ ನಿಷ್ಠೆಗೆ, ಹಣಕ್ಕೆ ನೆಲವೇನು ಜನವೇನು? ಎಲ್ಲವೂ ಸಣ್ಣ ಕಾಲದ ಪರಿಧಿಯಲ್ಲಿ ಕಟ್ಟಿ ಮುಗಿಯಿತು. ಒಂದು ಸಣ್ಣ ಚಾವಡಿಯಂತಹ ಜಾಗ, ಶೌಚಾದಿ ಕ್ರಿಯೆಗಳಿಗೆ ಸ್ವಲ್ಪ ದೂರದಲ್ಲಿ ಎರಡು ಕೋಣೆಗಳು. ಮಲ್ಲಪ್ಪನವರ ಗದ್ದೆಯ ಪಂಪಿನಿಂದ ನೀರನ್ನು ಕೊಳವೆಯ ಮೂಲಕ ತಂದು ತುಂಬಿಸಬಹುದಾದಂತ ಒಂದು ಟ್ಯಾಂಕು, ಅದಕ್ಕೆ ನಲ್ಲಿಗಳ ವ್ಯವಸ್ಥೆ.

ಇಷ್ಟಾದ ಮೇಲೆ ಆ ಸ್ಥಳವು ಒಂದು ಸಣ್ಣ ಮಗು ಬಿಡಿಸಿದ ಚಿತ್ರದಂತೆ ದೂರಕ್ಕೆ ಕಾಣುತ್ತಿತ್ತು. ಯಾರೋ ತಂದಿಟ್ಟ ನಾಲ್ಕು ಹಳೇ ಪುಸ್ತಕಗಳು, ಅದ್ಯಾರೋ ತಂದು ಬಿಟ್ಟು ಹೋದ ವಿಭೂತಿಯ ಗಟ್ಟಿಯನ್ನು ತುಂಬಿದ್ದ ಬಟ್ಟಲುಗಳು ಚಾವಡಿಯ ಮೂಲೆಯಲ್ಲಿ ಪೇರಿಸಲ್ಪಟ್ಟವು. ಗುರುಗಳ ಪಾದಧೂಳಿಯನ್ನು ಪಡೆಯಬಂದವರು ತಮ್ಮ ಪಾದದ ಧೂಳನ್ನು ಚಾವಡಿಗೆ ಸೇರಿಸಬಾರದು ಎನ್ನುವ ಕಾರಣಕ್ಕೆ ಮಲ್ಲಪ್ಪನವರ ಮನೆಯಿಂದ ಹಿಂಡಿಯ ಗೋಣಿಗಳೂ ಬಂದು ಬಾಗಿಲಿಗೆ ಬಿದ್ದವು. ನಂತರ ಮಲ್ಲಪ್ಪನವರ ಮಡದಿಯ ಆರೋಪದ ಮೇರೆಗೆ ಒಳ್ಳೆಯ ಕಾಲೊರಸುಗಳೂ ಅಲ್ಲಲ್ಲಿ ರಾಜಿಸಿದವು.

ಡಿಲೈಟಾನಂದರು ಗುಹೆಯಂತ ಜಾಗದಲ್ಲಿ ತಮ್ಮ ನಂಟು ಬಿಡಲಿಲ್ಲ. ಟೊಂಯ್ಕರು ಸಂಪೂರ್ಣವಾಗಿ ಉಸ್ತುವಾರಿ ಸಚಿವರಾದರು. ಮಲ್ಲಪ್ಪನವರಂತೂ ತಮ್ಮ ಸ್ಥಳದ ಆಶೆಗೋ ಅಲ್ಲ ಭಕ್ತಿಯಿಂದಲೋ ಆಗಾಗ ಬರುವ ಮುಖ್ಯರಾದರು. ಮಲ್ಲಪ್ಪನವರೇ ಬಂದ ಮೇಲೆ ಅವರ ಸಂಬಂಧಿಕರು, ಪಟಾಲಮ್ಮುಗಳು ಬರದೇ ಇರುತ್ತಾರೆಯೇ?

ಅಲ್ಲಿ ಪೂಜೆಯಿಲ್ಲ, ಗುರುಗಳು ಮಾತನ್ನಾಡುವುದಿಲ್ಲ, ಟೊಂಯ್ಕರು ಉಪದೇಶ ಕೊಡುವ ಹಾಗಿಲ್ಲ. ನೋಡುವುದಕ್ಕೆ ಒಂದು ಚಾವಡಿ, ಎರಡು ಕೋಣೆ ಬಿಟ್ಟರೆ ಏನೂ ಇಲ್ಲ ಎನ್ನುವ ಕೆಲವು ವಿಷಯಗಳಿಂದ ದೂರದಿಂದ ಬರುವ ಜನರು ಮತ್ತೆ ಬರುತ್ತಿರಲಿಲ್ಲ. ಮೊದಮೊದಲಿಗೆ ಬಹಳಷ್ಟು ಜನ ಬಂದರೆ ನಂತರ ಜನರು ಕಡಿಮೆಯಾಗುತ್ತಿದ್ದುದು ಟೊಂಯ್ಕರಿಗೆ ಒಳಗಿಂದ ಅಸಮಾಧಾನವಾದರೆ ಡಿಲೈಟಾನಂದರಿಗೆ ಸ್ವಲ್ಪ ಖುಷಿಯೆನ್ನಿಸಿತ್ತು.

ಮಲ್ಲಪ್ಪನವರೂ ಹೊಸದಾಗಿ ಕೈಗೊಂಡ ಗ್ರಾನೈಟ್ ಬ್ಯುಸಿನೆಸ್ಸ್ ಸಲುವಾಗಿ ಈ ಗುರುಗಳನ್ನು, ಟೊಂಯ್ಕರನ್ನು ಮರೆತೇ ಬಿಟ್ಟರು. ಟೊಂಯ್ಕಾನಂದರು ಏನಾದರೂ ಮಾಡದಿದ್ದರೆ ಈಗ ಮತ್ತೆ ಎದ್ದು ಹೊರ ಜಗತ್ತಿಗೆ ಹತ್ತಿರವಾಗಲೇ ಬೇಕಾಯಿತು.

ಪುಟ-೪

ಒಂದು ಜಾತ್ರೆಯ ನಂತರ ಹಾದಿಬೀದಿಗಳು ಯಾವುದೋ ಅನುಭವಿಸಲು ಬಾರದ ದುಃಖವನ್ನು ತಂದೊಡ್ಡುತ್ತದೆ ಸುಮ್ಮನೇ ನೋಡುಗನಿಗೆ. ಅದೆಷ್ಟೋ ಬಾರಿ ನಾಳೆ ತೆಗೆದುಕೊಳ್ಳಬೇಕೆನ್ನುವ ವಸ್ತು ಅಲ್ಲಿಲ್ಲದೇ, ವಸ್ತು ಇರುವ ಅಂಗಡಿಯೂ ಕಾಣೆಯಾಗಿ ಒಟ್ಟು ಬಯಲನ್ನು ತೆರೆದಿಡುವಂತೆ ದುಃಖ. ಮಾತು ಕೇಳದಿದ್ದರೂ ತುಂಬಿದ್ದ ಸಭೆ, ಈಗ ಸಭೆಯೂ ಇಲ್ಲ, ಬರೀ ಶಿಷ್ಯ ಮತ್ತೆ ಗುರು.

ಜೋಳ ಬೆಳೆದ ಹೊಲದ ಬದಿಯಿಂದಲಾಗಿ ನಡೆಯುತ್ತಾ ಮುಂದೆ ಸಾಗುತ್ತಿದ್ದ ಡಿಲೈಟಾನಂದರು, ಅವರ ಹಿಂದೆ ಒಂದೆರಡು ಜೋಳಗಳನ್ನು ಹಿಡಿದುಕೊಂಡು ಯಾವುದೋ ಬೇಸರದಿಂದ ಗುರುವಿರಿಸಿದ ಹೆಜ್ಜೆಯನ್ನು ತುಳಿಯುತ್ತ ಸಾಗುತ್ತಿದ್ದರು ಟೊಂಯ್ಕರು. ಸಾಮಾನ್ಯವಾಗಿ ನಡೆಯುವಾಗ ಮಾತನ್ನಾಡುತ್ತಿರಲಿಲ್ಲ ಡಿಲೈಟಾನಂದರು. ಅದಕ್ಕೆ ವ್ಯತಿರಿಕ್ತವಾದ ಟೊಂಯ್ಕರು ಯಾವುದೇ ಕಾರಣಕ್ಕೆ ಬಾಯಿಯನ್ನು ಮುಚ್ಚದವರು.

ತಮ್ಮ ಪೂರ್ವಾಪರವನ್ನು ಹೇಳಲೇ ಎಂದು ಗುರುಗಳಲ್ಲಿ ಕೇಳಿಕೊಂಡಾಗ ಗುರುಗಳು ಹ್ಮ್ಂ ಎಂದರು. ಹಾಗಾಗಿ ಟೊಂಯ್ಕರು ತಮ್ಮ ಬಗೆಗೆ ಹೇಳುವಂತಾಯ್ತು. ಯಾವುದೇ ಹೆಜ್ಜೆಯು ಭಾರವಾಗುವುದು ಒಂದೋ ಬೀಳ್ಕೊಟ್ಟವರು ಆತ್ಮೀಯವಾಗಿರಬೇಕು, ಇಲ್ಲವೇ ಸಿಗುವವರು ಸಹ್ಯವಾಗುವವರಲ್ಲದಿರಬೇಕು. ಹಾಗೆಯೇ ಭಾರವಾಯಿತು ನಾಲಗೆ. ತಮ್ಮ ಜೀವನದ ಮೊದಲ ಇಪ್ಪತ್ತೈದು ವರುಷಗಳನ್ನು ಬಿಟ್ಟು ಅತ್ಯಂತ ಆತ್ಮೀಯವಾದ ನಂತರದ ಐದಾರು ವರ್ಷಗಳಿಂದ ನಡೆದ ಘಟನೆಗಳನ್ನು ಸವಿಸ್ತಾರವಾಗಿ ಹೇಳಿದರು. ಟೊಂಯ್ಕರ ಪೂರ್ವದ ಬಗೆಗೆ ಡಿಲೈಟರಿಗೆ ಸ್ವಲ್ಪವೂ ಕರುಣೆಯಿರಲಿಲ್ಲ ಹಾಗಾಗಿ ಕೇಳಲಿಲ್ಲ. ಆದರೆ ಅದೊಂದು ರಾತ್ರಿ, ಡಿಲೈಟರು ಸಿಕ್ಕಿದ ರಾತ್ರಿಯ ಹಿಂದಿನ ಘಟನೆಗಳನ್ನು ಕೇಳುವಾಗ ಡಿಲೈಟಾನಂದರ ಆಸಕ್ತಿ ಹೆಚ್ಚಾಗಿ ತಾವು ಬಿಟ್ಟು ಹೋದ ಅರಳೀಮರದಡಿ ವಿಶ್ರಾಂತಿಗಾಗಿ ಕುಳಿತರು.

ಟೊಂಯ್ಕರು ಆರಂಭಿಸಿದರು. ರಾತ್ರಿಯ ಕೆನ್ನಾಲಗೆ ಆಗಷ್ಟೇ ಸೂರ್ಯನನ್ನು ಮುಕ್ಕಿತ್ತು. ಆ ಸಂಜೆ ಒಂದು ಅದ್ಭುತವಾದ ಮುಖಪುಟವಿದ್ದ ನವ್ಯಕವಿತಾ ಸಂಕಲನ ದೊರಕಿತ್ತು ಟೊಂಯ್ಕರಿಗೆ. ದುಷ್ಯಂತ ಶಾಕುಂತಲೆಯನ್ನು ಡೇವಿಡ್ ಮತ್ತು ಸಿಸಿಲಿಯಾ ಜೊತೆಗೆ ಸೇರಿಸಿ ಹಾಡಿದರೆ ಕರ್ಕಶವಾಗುವಂತ ಮೊದಲ ಗೀತೆಯಿಂದ ಶುರುವಾಗುವ ಕವನ ಸಂಕಲನ. ಅದಕ್ಕೂ ಮೊದಲು ಚಿನ್ನಕ್ಕೆ ಹೊಳಪು ಬರಲು ಒದ್ದಾಡಿ ಸುಟ್ಟುಹೋಗಿದ್ದ ಅತೃಪ್ತ ಇದ್ದಿಲಿನ ಜೀವಗಳು ಕಾವ್ಯ ವಿಮರ್ಶೆ ಎನ್ನುವ ಅದ್ಭುತವಾದ ಮುನ್ನುಡಿ ಮತ್ತು ಅನಿಸಿಕೆಗಳನ್ನು ಹಾಕಿದ್ದರು.

ಅರೆನಿಮೀಲಿತ ನೇತ್ರ, ಮೃದುಹೂವಿನ ಮನ, ಪರಾಗದಲ್ಲಿ ಮೃತಪಟ್ಟ ದುಂಬಿ, ಅಲೌಕಿಕ ಸಂಗಾತಿ ಮುಂತಾದ ಶಬ್ಧಪುಂಜಗಳು ಅಲ್ಲಲ್ಲಿ ಕಣ್ಣಿಗೆ ರಾಚಿ ಗುಂಟೂರು ಮೆಣಸನ್ನು ಬಳಸಿ ಮಾಡಿದ ಖಾರವಾದ ಅನ್ನದಲ್ಲಿ ಸಿಕ್ಕಿದ ಕಲ್ಲುಗಳಂತೆ ಆಗಿತ್ತು. ಕೊನೆಗೆ ಇನ್ನೇನು ಪದ್ಯಗಳ ಸಂಕಲನವನ್ನು ಮುಗಿಸಬೇಕು, ಅಷ್ಟರಲ್ಲಿ ದೇಹವನ್ನು ಸಂಪೂರ್ಣ ಸುಟ್ಟ ಚಿತೆಯಲ್ಲಿ ಉಳಿದ ತಲೆಬುರುಡೆ ಒಡೆಯುವಂತೆ ಕೊನೆಯ ಕವನದ ಮುಕ್ತಾಯಕ್ಕೆ ಸಶೇಷದ ಗುರುತು.. ಟೊಂಯ್ಕರು ಅರ್ತನಾದವನ್ನು ಮಾಡದಿರುವರೇ? ವಸ್ತ್ರವನ್ನು ಹರಿದೊಗೆಯರೇ..

ಗುರು ಡಿಲೈಟಾನಂದರ ಕರುಣೆಗಾಗಿ ಆ ಕವನ ಸಂಕಲನ ಜಗತ್ತಿನಲ್ಲಿ ಪ್ರಕಾಶಿಸದೇನು?

ಮುಂದುವರೆಯುವುದು..

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೧


ಹಕ್ಕುಗಳು © Ishwara Bhat K|ಈಶ್ವರ ಭಟ್ ಕೆ.

ಸ್ಪೆಶಲ್ ಕ್ಯಾಪ್ಸಿಕಂ ಬಜ್ಜಿ.

ಸ್ಪೆಶಲ್ ಕ್ಯಾಪ್ಸಿಕಂ ಬಜ್ಜಿ..

ಸಾಮಾನ್ಯವಾಗಿ ಬಜ್ಜಿ ಅಂದ್ರೆ ಕಡಲೆಹಿಟ್ಟು, ಸ್ವಲ್ಪ ಅಕ್ಕಿಹಿಟ್ಟಲ್ಲಿ ಹಿಟ್ಟು ರೆಡಿ ಮಾಡಿ ಕರಿಯೋದು ವಾಡಿಕೆ !

ಇದರಲ್ಲಿ ಇನ್ನೂ ಕೆಲವು ಸಾಮಗ್ರಿಗಳನ್ನು ಹಾಕಿದ್ದೇನೆ.  ಗರಿಗರಿಯಾಗಿ, ಹದವಾಗಿ, ತುಂಬಾ ರುಚಿ ಕೊಡುತ್ತದೆ !

ಬೇಕಾಗುವ ಸಾಮಗ್ರಿಗಳು..

ಕ್ಯಾಪ್ಸಿಕಂ,

ಕಡಲೆಹಿಟ್ಟು ಒಂದು ಟೇಬಲ್ ಸ್ಪೂನ್,

ಅಕ್ಕಿಹಿಟ್ಟು ಎರಡು ಟೀ ಸ್ಪೂನ್,

ಚಿರೋಟಿ ರವಾ ಎರಡು ಟೀ ಸ್ಪೂನ್,

ಹೆಚ್ಚಿದ ಮೆಂತ್ಯ ಸೊಪ್ಪು ಸ್ವಲ್ಪ,

ಒಂದು ಈರುಳ್ಳಿ ಸಣ್ಣಗೆ ಹೆಚ್ಚಿದ್ದು,

ಕೊತ್ತಂಬರಿ,

ಕರಿಬೇವಿನ ಸೊಪ್ಪು ಸಣ್ಣಗೆ ಹೆಚ್ಚಿದ್ದು,

ಒಂದು ಹಸಿಮೆಣಸು ಸಣ್ಣಗೆ ಹೆಚ್ಚಿದ್ದು,

ಅಚ್ಚ ಖಾರದ ಪುಡಿ ಒಂದು ಟೀ ಸ್ಪೂನ್,

ಜೀರಿಗೆ, ಧನಿಯಾ ಪೌಡರ್ ಅರ್ಧ ಟೀಸ್ಪೂನ್,

ಬೇಕಿದ್ದಲ್ಲಿ ಯಾವುದಾದರೂ ಮಸಾಲಾ ಪುಡಿ ಸೇರಿಸಬಹುದು,

ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ, ಚಿಟಿಕೆ ಸೋಡಾ..

ಮಾಡುವ ವಿಧಾನ..

ಮೊದಲಿಗೆ ಮೇಲೆ ಹೇಳಿದ ಎಲ್ಲಾ ಹಿಟ್ಟುಗಳು, ರವಾ, ಹೆಚ್ಚಿರೋ ಎಲ್ಲಾ ತರಕಾರಿಗಳು, ಉಪ್ಪು, ಮಸಾಲಾ ಪುಡಿ, ಸೋಡಾ ಎಲ್ಲವನ್ನೂ ಹಾಕಿ, ಬೋಂಡಾ ಹಿಟ್ಟಿನ ಹದಕ್ಕೆ(ಸ್ವಲ್ಪ ಗಟ್ಟಿಯಾಗಿ ಇರಲಿ) ಕಲೆಸಿಕೊಳ್ಳಿ.

ಕ್ಯಾಪ್ಸಿಕಂ ಉದ್ದುದ್ದವಾಗಿ ಹೆಚ್ಚಿ, ಆ ಹಿಟ್ಟಿನಲ್ಲಿ ಅದ್ದಿ, ಹೊಂಬಣ್ಣ ಬರುವವರೆಗೆ ಕರಿಯಿರಿ, ಸ್ಪೆಶಲ್ ಕ್ಯಾಪ್ಸಿಕಂ ಬಜ್ಜಿ ರೆಡಿ !


By: Sangeetha Bhat

ಗಂಡಸೇ?

ಒಂದಷ್ಟು ಕಪ್ಪಡರಿ, ಮೀಸೆ ಬಂದಂತೆನಿಸಿ
ನಯದ ಕೆನ್ನೆಗೆ ಒರಟು ಬರುವ ಸುದ್ಧಿ
ಜಗದ ಹೊರೆಯನ್ನೆಲ್ಲ ನೀನು ಹೊರಬೇಕಿನ್ನು
ಕಳಿಸುವರು ಗಂಡೆಂಬ ಮುದ್ರೆ ಗುದ್ದಿ!

ತೊಗಲಿಗೇರದ ಹಳೆಯ ಅಂಗಿಗಳ ರಕ್ಷಿಸಿತು
ತೋಳು ತೋರುವ ಹಿತದ ಬಟ್ಟೆ ಬಂದು;
ಹೇಗಾದರೂ ಬೆಳಗು ರಕ್ತಕ್ರಾಂತಿಯ ನೆನೆದು
ರಾತ್ರಿಯೊಳು ಮಲಗುವುದು ಗಂಜಿ ತಿಂದು!

ಮುಂಗುರುಳು ಹಾರಿದರೆ ಜಗವೆ ನೆಗೆದಂತಾಗಿ
ದಾರಿಯಲಿ ಗೋರಿಯಲಿ ಬಹಳ ನೆನಪು;
ಅವಳಿಲ್ಲದಿರೆ ಇವಳು, ಇವಳಲ್ಲ ಅವಳಿಹಳು
ಕೊನೆಯ ಸೇರದ ನಡೆಗೆ ಬೇಲಿ ಹೂವು.

ಮೀಸೆ ತೆಗೆವಂತಾಗಿ ಗಡ್ಡ ತುರಿಕೆಯು ಬರಲು
ಕ್ರಾಂತಿ ಪ್ರೀತಿಗಳೆಲ್ಲ ಮರೆತು ಹೋಗಿ;
ಸಂಜೆವರೆಗೂ ದುಡಿದು ಹೆತ್ತವರ ಕೆಮ್ಮಿನಲಿ
ಶ್ರುತಿ ಸೇರಿ ಕೆಮ್ಮುವುದು ಇವನ ಪಾಳಿ.

ಹೀಗೊಬ್ಬನಿದ್ದನಹ! ಬಲದಲ್ಲಿ ಬುದ್ಧಿಯಲಿ
ಇವನಂತೆ ಊರೊಳಗೆ ಯಾರು ಇಲ್ಲ!
ಎನುವ ಮಾತನ್ನೆಲ್ಲ ನೆನೆಸಿ ಮರುಗುವ ಸಂಜೆ
ಊರಿನಲಿ ಜನರಿಗೂ ಕೊರತೆಯಿಲ್ಲ.

ಅಳುವುದು ಸರಿಯಲ್ಲ, ನಕ್ಕಾಗ ಜೊತೆಯಿಲ್ಲ
ಶಾಂತಿಯಲಿ ಮಲಗುವುದು ಜಗಕೆ ಸಲ್ಲ!
ಎಲ್ಲವೂ ಜೊತೆಸೇರಿ ಮತ್ತೇನೊ ಹುಡುಕುವುದು
ತಪ್ಪಿದರೆ ನೀನೋ! – ಗಂಡಸಲ್ಲ.

pexels-photo-212286.jpeg


By : Ishwara Bhat K

ಮಂಜಿನ ಹನಿಗಳೆ ಕುಡಿಯಲು ಬನ್ನಿ

ಮಂಜಿನ ಹನಿಗಳೆ ಕುಡಿಯಲು ಬನ್ನಿ
ನನ್ನೆದೆ ಕನಸುಗಳ
ನಶೆಯೇರದೆ ಮರಗಟ್ಟುವ ತೆರದಲಿ
ಕುಣಿಸುವ ಆಶೆಗಳ

ಬಿಸಿಯಿದ್ದರೆ ಆ ಕನಸಿನ ಮೂಟೆಯು
ಹೀರಿ ಆವಿಯಾಗಿ
ಮೋಡದಾಚೆಗೂ ಲೋಕವಿದೆಯಲ್ಲ
ಅಲ್ಲಿ ಹಿಡಿದು ಸಾಗಿ!

ತಂಪಗಿದ್ದು ನೀವ್ ಕರಗಿಹೋದರೆ
ನೀರು ಆಗಿ ತನ್ನಿ!
ಕಪ್ಪು ಮಣ್ಣಿನಲಿ ಸತ್ವ ರಾಶಿಯಿದೆ
ಹೊಸದು ಬೆಳೆಯ ತನ್ನಿ.

ಕನಸುಗಳೆದೆಯಲಿ ಭ್ರಾಂತಿಯ ಮುಸುಕಿದೆ
ಸುಳ್ಳಲಿ ಆಗಿದೆ ಘಾಸಿ;
ಕನಸಿದೆಯೆನುತಲಿ ಇಲ್ಲೇ ನಿಲ್ಲದಿರೆ
ಸತ್ಯರವಿಯನುಳಿಸಿ.

pexels-photo-552791.jpeg


By: Ishwara Bhat K

ದೋಸೆ

ಚುಂಮ್ ಚುಂಮ್ ಜಳಿಯಲಿ ಚುಂಯಿ ಚುಂಯಿ ದೋಸೆ ಹೊಯ್ಯುವಾಗಲೇ ಚುಂಯಿ ಚುಂಯಿ ಸಂಗೀತ ಹೊರಡಿಸುವ ದೋಸೆ ತಿಂದಮೇಲೆಯೂ ಸಂಗೀತ ಹೊರಡಿಸುವುದೇ? ಅದು ದೋಸೆಯೊಂದಿಗೆ ತಿನ್ನುವ ಪಲ್ಯದ ಮೇಲೆ ಅವಲಂಬಿತವಾಗಿರುತ್ತದೆ. ದೋಸೆ ಎನ್ನುವಾಗ ಬಾಲ್ಯದ ನೆನಪಾಗುತ್ತದೆ. ಅಂದು ಚಳಿಗಾಲದಲ್ಲಿ, ಬೆಳಗ್ಗೆ ಅಮ್ಮ ಬೇಗನೆ ಎದ್ದು ಒಲೆಯ ಮೇಲೆ ಕಾವಲಿ ಇಟ್ಟು ಚೊಂಯ್ಯ್ ಎಂದು ದೋಸೆ ಹೊಯ್ಯಲು ನಿದ್ರೆಯಲ್ಲಿದ್ದ ನಾವೆಲ್ಲ ಎದ್ದು ಅಮ್ಮನ ಹತ್ತಿರ ಒಲೆ ಮುಂದೆ ಕುಳಿತು ಕೊಳ್ಳುತ್ತಿದ್ದೆವು.ಹೊಯ್ದ ದೋಸೆಗಳನ್ನೆಲ್ಲ ಸರದಿಯಂತೆ ತಿನ್ನಲು ಯಾರು ಎಷ್ಡು ದೋಸೆ ತಿಂದರು ಎಂದು ಗೊತ್ತೇ ಆಗುತ್ತಿರಲಿಲ್ಲ. ಮೊದ ಮೊದಲು ಬೆಂಗಳೂರಿನಲ್ಲಿ ನಾನು ದೋಸೆ ತಿನ್ನುತ್ತಾನೆ ಇರಲಿಲ್ಲ. ಯಾಕೆ ಗೊತ್ತಾ?. ಇಲ್ಲಿ ದೋಸೆ ಹೊಯ್ಯವುದು ತಗಡಿನ ಮೇಲೆ. ಹೊಯ್ಯುವ ಮೊದಲು ಈ ತಗಡನ್ನು ಕಸಪೊರಕೆ ಅರ್ಥಾತ್ ಹಿಡಿಸೂಡಿಯಿಂದ ಗುಡಿಸುತ್ತಾರೆ. ಅದೇನೂ ಇರಲಿ, ತಗಡಿನ ಮೇಲೆ ವೃತ್ತಾಕಾರದಲ್ಲಿ ದೋಸೆ ಹೊಯ್ಯುತ್ತಾರಲ್ಲ. ಅವರ ಕಲೆಯನ್ನು ಮೆಚ್ಚಲೇ ಬೇಕು.ವೃತ್ತ ಬಿಡಿಸಲು ಇವರಿಗೆ ಯಾವುದೇ ಗಣಿತದ ಉಪಕರಣ ಬೇಕಾಗಿಲ್ಲ ಅಂತ ಅನಿಸುತ್ತೆ. ದೋಸೆ ವೃತ್ಯಾಕಾರದಲ್ಲಿದೆ. ಅಂದರೆ ಅದರ ತ್ರಿಜ್ಯದ ವರ್ಗಕ್ಕೆ ಪೈ ಯಿಂದ ಗುಣಿಸಿದರೆ ಅದರ ವಿಸ್ತಿರ್ಣ ಸಿಗುತ್ತದೆ. ಪೈ ಯ ನಿಜವಾದ ಬೆಲೆ ಅನಂತ. ಅಂದರೆ ಅದಕ್ಕೆ ಕೊನೆಯಿಲ್ಲ. ಅಂದರೆ ದೋಸೆಯ ವಿಸ್ತಿರ್ಣವು ಅನಂತವಾಗಿರ ಬೇಕು ಅಲ್ವಾ? ಅನಂತ ವಿಸ್ತಿರ್ಣ ಹೊಂದಿರುವ ದೋಸೆ ತಿಂದರೆ ಯಾಕೆ ಖಾಲಿಯಾಗುತ್ತದೆ.ಇದು ಯಕ್ಷ ಪ್ರಶ್ನೆಯಾಗು ನನ್ನನ್ನು ಕಾಡತ್ತಿದೆ.

By Marcel Dsouza

%d bloggers like this: