ಮನಸೆಂಬ ಮಾಯದ ಕನ್ನಡಿ – ಬಿಂಬ ೬

ರೂಮಿಗೆ ಕಾಲಿಟ್ಟ ನಾರಾಯಣರಾಯರು ಒಂದು ಕ್ಷಣ ಅವಾಕ್ಕಾದರು ! ಮಂಚದ ಸುತ್ತ ಹೂವಿನ ಅಲಂಕಾರ, ಸಣ್ಣನೆ ಲೈಟ್, ಊದುಬತ್ತಿಯ ಘಮ ತುಂಬಿರೋ ರೂಮು. ಮಕ್ಕಳ ಕೆಲಸವೇ ಇದು ! ಕೋತಿ ಮುಂಡೇವು ! ನಗುತ್ತಲೇ ಬೈದುಕೊಂಡರು. ಹಾಗೇ ದಿಂಬಿಗೆ ಒರಗಿಕೊಂಡರು. ಅರವತ್ತನೇ ವರ್ಷದ ಶಾಂತಿ ಇವತ್ತು. ಅದೆಷ್ಟು ಸಂಭ್ರಮ ! ಶಾಂತಾ ಅದೆಷ್ಟು ಮುದ್ದಾಗಿ ಕಾಣ್ತಿದ್ದಳು ಇವತ್ತು ! ಮುಖದಲ್ಲಿ ನಸುನಗೆ ಮೂಡಿತು. ಭಗವಂತನ ದಯೆ ನಮ್ಮ ಮೇಲೆ ಸಾಕಷ್ಟಿದೆಯೇನೋ ಅನ್ನುವಂತೆ, ಸಂತೃಪ್ತ ಸಂಸಾರ, ಅನ್ಯೋನ್ಯ ದಾಂಪತ್ಯ ನಮ್ಮದು. ಸೌಮ್ಯ, ಸ್ವಾತಿ ನಂತರ ಕೌಶಿಕ್ ಹುಟ್ಟಿರೋದು. ಎಲ್ಲರೂ ದಡ ಮುಟ್ಟಿದ್ದಾಗಿದೆ. ಪಿತ್ರಾರ್ಜಿತ ಆಸ್ತಿಯಾದ ಮೂರು ಮನೆ ಜೊತೆ, ನನ್ನ ದುಡಿತದ ಉಳಿತಾಯವೂ ಸೇರಿ ಸಾಕಷ್ಟು ಆಸ್ತಿಪಾಸ್ತಿಯೂ ಆಗಿದೆ. ಹೆಣ್ಣುಮಕ್ಕಳಿಗೆ ಒಳ್ಳೆಯ ಕಡೆನೋಡಿ ಮದುವೆಮಾಡಿಕೊಟ್ಟಿದ್ದಾಗಿದೆ, ಜೊತೆಗೆ ಸುಖವಾಗಿ, ಹಿತವಾಗಿಯೂ ಇದ್ದಾರೆ. ಮಗ ಕೌಶಿಕ್ ಹೆಂಡತಿ ಸುಹಾ ಎಷ್ಟು ಒಳ್ಳೆಯ ಹುಡುಗಿ. ಮುದ್ದಾಗಿದ್ದಾಳೆ. ಇವನೂ ಕೈತುಂಬಾ ದುಡಿಯೋದ್ರಿಂದ ಅವಳು ಕೆಲಸಕ್ಕೆ ಹೋಗೋದು ಬೇಡ, ಮನೆ ನೋಡ್ಕೊಂಡು ಆರಾಮಾಗಿ ಇರ್ಲಿ ಅಂದ. ಇವಳೂ ಚೆನ್ನಾಗೇ ಹೊಂದ್ಕೊಂಡಿದ್ದಾಳೆ. ಚಿಟಿ-ಪಿಟಿ ಅಂತ ಮನೆತುಂಬಾ ಒಡಾಡ್ಕೊಂಡಿರೋ ಹುಡುಗಿ. ಮೊಮ್ಮಗ ಅನಿಕೇತ್ ಹುಟ್ಟಿದ ಮೇಲಂತೂ ಮನೆಯಲ್ಲಿ ಯಾರಿಗೂ ಬಿಡುವಿಲ್ಲದಷ್ಟು ಕೆಲಸ. ರಾಯರಿಗೆ ಮುಖದಲ್ಲಿ ಮುಗುಳ್ನಗೆ ಮೂಡಿತು. ಶಾಂತಾಗೆ ತುಂಬಾ ಸುಸ್ತಾಗಿದೆ ಅನ್ಸುತ್ತೆ. ಬೆಳಿಗ್ಗೆಯಿಂದ ಓಡಾಟ. ಒಂದೇ ಸಮ ಕೆಲಸ ಮಾಡ್ತಿಡ್ಡಾಳೆ. ಮಕ್ಕಳೆಲ್ಲ ನಾವು ನೋಡ್ಕೋತೀವಿ ಅಂದ್ರೂ ಕೇಳಿಲ್ಲ. ಅವಳಿಗೂ ಸಂಭ್ರಮ. ಅವಳಿಗೂ ಐವತ್ತೈದಾಯ್ತು. ಸೊಸೆಯೂ ಜಾಸ್ತಿ ಕೆಲಸ ಕೊಡೋಲ್ಲ. ಯಾಕೋ ಇತ್ತೀಚೆಗೆ ಸುಸ್ತು ಅಂತಿದ್ದಾಳೆ. ಸ್ವಲ್ಪ ಕಟ್ಟುನಿಟ್ಟಾಗಿ ರೆಸ್ಟ್ ಮಾಡೋಕೆ ಹೇಳ್ಬೇಕು ಅಂದ್ಕೊಂಡ್ರು.
ಬಾಗಿಲು ಸದ್ದಾಯಿತು. ಬಂದ್ಲು ಅನ್ಸುತ್ತೆ, ಪಾಪ ಸುಸ್ತಾಗಿರಬೇಕು. ಕೂತಲ್ಲಿಂದ ಎದ್ದುನಿಂತರು. ಮುಖದ ಮೇಲೆಲ್ಲ ಬೆವರ ಹನಿ ಮೂಡ್ತಿದೆ ಇವಳಿಗೆ. ಮದುವೆಯಾಗಿದ್ದಾಗ ಹೇಗಿದ್ಳೋ ಈಗ್ಲೂ ಹಾಗೇ ಇದ್ದಾಳೆ ನನ್ನ ಸುಂದರಿ. ಕೈ ಹಿಡಿದುಕೊಂಡರು. ಯಾಕೋ ಎದೆನೋಯ್ತಾ ಇದೇರೀ ಅಂದರು ಶಾಂತಾಬಾಯಿ. ಎದೆ ನೀವಿಕೊಟ್ಟು, ಸ್ವಲ್ಪ ನೀರು ತರೋಕೆ ಹೋದರು, ಯಾಕೋ ಒದ್ದಾಡಿತು ಆ ಜೀವ..! ಮಗನ ಕೂಗಿ, ನೀರು ತೆಗೆದುಕೊಂಡು ಹೋದಾಗ, ಕರೆದರೂ ಮಿಸುಕಾಡಲಿಲ್ಲ ! ಸಂತೃಪ್ತ ಬದುಕಿನ ಸುಖ ಅನುಭವಿಸಿದ ಜಾಸ್ತಿ ಸುಖದ ಅನುಭೂತಿ ತಡೆದುಕೊಳ್ಳದ ಪ್ರಾಣಪಕ್ಷಿ ಹಾರಿಹೋಗಿತ್ತು !

 By: Sangeetha Bhat
Advertisements

ಮಹಿಳೆ ಮತ್ತು ಆರೋಗ್ಯ – ೩

ರಕ್ತಹೀನತೆ

ಒಟ್ಟು ರಕ್ತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ರಕ್ತಕಣಗಳು ಇದ್ದಲ್ಲಿ ಅಥವಾ ಪ್ರತೀ ರಕ್ತಕಣಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಹಿಮೋಗ್ಲೋಬಿನ್ ಇದ್ದಲ್ಲಿ ರಕ್ತಹೀನತೆ ಅಥವಾ ಅನೀಮಿಯ ಎಂದು ಕರೆಯಲ್ಪಡುತ್ತದೆ. ಈ ಎರಡು ಸಂದರ್ಭಗಳಲ್ಲಿ, ರಕ್ತ ಜೀವಕೋಶಗಳು ತಮ್ಮ ಆಮ್ಲಜನಕ ಸಾಗಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇದು ಅಧಿಕ ರಕ್ತಸ್ರಾವ ಅಥವಾ ಕೆಂಪುಕಣಗಳ ಉತ್ಪಾದನೆಯಲ್ಲಿ ಏನಾದರೂ ದೋಷದಿಂದ ಅಥವಾ ಯಾವುದೇ ಇತರೆ ಕಾರಣಗಳಿಂದ ಬರಬಹುದಾಗಿದೆ. ಕಬ್ಬಿಣ ಅಂಶದ ಕೊರತೆಯಿಂದಾಗುವ ರಕ್ತಹೀನತೆಯು ಕುಪೋಷಣೆಯಿಂದಾಗುತ್ತದೆ.

ಹಿಮೋಗ್ಲೋಬಿನ್ ಎಂದರೆ ಕಬ್ಬಿಣದ ಕಣಗಳಿಂದ ಸಮೃದ್ಧವಾಗಿರುವ ಪ್ರೋಟೀನ್, ಇದರಿಂದಾಗಿ ರಕ್ತವು ಕೆಂಪು ಬಣ್ಣದ್ದಾಗಿರುತ್ತದೆ ಮತ್ತು ಇವು ಆಮ್ಲಜನಕವನ್ನು ಶ್ವಾಸಕೋಶದಿಂದ ದೇಹದ ಇತರೆ ಭಾಗಗಳಿಗೆ ಸಾಗಿಸಲು ನೆರವಾಗುತ್ತದೆ.

ಸಾಮಾನ್ಯ ಹಿಮೋಗ್ಲೋಬಿನ್ ಮಟ್ಟವು ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಬೇರೆ ಬೇರೆಯದ್ದಾಗಿರುತ್ತದೆ.

ಪುರುಷ:

ಹಿಮೋಗ್ಲೋಬಿನ್ ಪ್ರಮಾಣ: 13.5 to 17.5 g/dL

ರಕ್ತಕಣಗಳ ಸಂಖ್ಯೆ: 4.7 to 6.1 million cells/mcl

ಮಹಿಳೆ:

ಹಿಮೋಗ್ಲೋಬಿನ್ ಪ್ರಮಾಣ: 12.0 to 15.5 g/dL

ರಕ್ತಕಣಗಳ ಸಂಖ್ಯೆ: 4.2 to 5.4 million cells/mcl

ಪ್ರಮುಖ ಕಾರಣಗಳು:

 • ಆಹಾರದಲ್ಲಿಯ ಕಬ್ಬಿಣ, ವಿಟಮಿನ್ ಬಿ12, ಮತ್ತು ಫೋಲಿಕ್ ಆಸಿಡ್ಗಳ ಕೊರತೆ.
 • ಧೀರ್ಘಾವಧಿಯ ಸಮಸ್ಯೆಗಳಾದ ಕಿಡ್ನಿ ಸಮಸ್ಯೆ, ಕ್ಯಾನ್ಸರ್, ಅಲ್ಸರೇಟಿವ್ ಕೊಲೈಟಿಸ್.
 • ಅನುವಂಶಿಕತೆ: ತಲಾಸೇಮಿಯಾ ಅಥವಾ ಸಿಕಲ್ ಸೆಲ್ ರಕ್ತಹೀನತೆ.
 • ಗರ್ಭಾವಸ್ಥೆ
 • ಮೂಲವ್ಯಾಧಿ
 • ಮೂಳೆ ಮಜ್ಜೆಯ ತೊಂದರೆಗಳಾದ ಲಿಂಫೋಮಾ, ಲ್ಯುಕೇಮಿಯಾ, ಅನೇಕ ಮೈಲೋಮ.
 • ಅಧಿಕ ರಕ್ತಸ್ರಾವ
 • ಅರೆಜೀರ್ಣತೆ (ಪೋಷಕಾಂಶಗಳು ಸರಿಯಾಗಿ ಜೀರ್ಣಾಂಗವ್ಯೂಹದಲ್ಲಿ ಹೀರಲ್ಪಡುವುದಿಲ್ಲ)
 • ಸ್ಟೀರಾಯ್ಡ್ಸ್ ಹೊಂದಿರುವ ಔಷಧಿಗಳು

ರೋಗಲಕ್ಷಣಗಳು:

 • ಅಧಿಕ ಸುಸ್ತು, ಆಯಾಸ, ಕೆಲಸಗಳಲ್ಲಿ ನಿರಾಸಕ್ತಿ
 • ತಲೆನೋವು , ತಲೆ ಭಾರ
 • ತಲೆ ಸುತ್ತುವಿಕೆ
 • ಉಸಿರಾಟದಲ್ಲಿ ತೊಂದರೆ
 • ಎದೆ ನೋವು
 • ಏರಿದ ಅಥವಾ ಅನಿಯಮಿತ ಹೃದಯಬಡಿತ
 • ಕೈ ಕಾಲು ತಣ್ಣಗಾಗುವುದು
 • ಬಿಳಚಿದ ಅಥವಾ ಕಳೆಗುಂದಿದ ಮುಖ
 • ಕೂದಲು ಉದುರುವುದು
 • ಕಿವಿಗಳಲ್ಲಿ ರಿಂಗಣಿಸುವುದು ಅಥವಾ ಸದ್ದುಗಳು ಕೇಳಿಸಿದಂತಾಗುವುದು (ಟಿನ್ನಿಟಸ್)
 • ಮಲಬದ್ಧತೆ

ರಕ್ತಹೀನತೆ: ಚಿಕಿತ್ಸೆ, ಪೋಷಣೆ ಮತ್ತು ಮನೆ ಉಪಚಾರ

 • ಮೇಲಿನ ಯಾವುದೇ ಗುಣಲಕ್ಷಣಗಳು ಕಂಡುಬಂದಲ್ಲಿ ತಪ್ಪದೇ ವೈದ್ಯರನ್ನು ಕಾಣುವುದು.
 • ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಫೋಲಿಕ್ ಆಸಿಡ್, ಬಿ12 ಜೀವಸತ್ವ ಮತ್ತು ಕಬ್ಬಿಣದ ಬಳಕೆ. ನೈಜವಾಗಿ ಗಾಢ ಬಣ್ಣ ಹೊಂದಿರುವ ಎಲ್ಲ ತರಕಾರಿ ಮತ್ತು ಹಣ್ಣುಗಳು ಕಬ್ಬಿಣದ ಉತ್ತಮ ಮೂಲವಾಗಿರುತ್ತದೆ.

ಫೋಲಿಕ್ ಆಸಿಡ್, ಬಿ12 ಜೀವಸತ್ವ ಮತ್ತು ಕಬ್ಬಿಣದ ಮೂಲಗಳು:

 • ತರಕಾರಿಗಳು: ಸೊಪ್ಪುಗಳು- ಅನ್ನೆ ಸೊಪ್ಪು, ಹೊನಗೊನ್ನೆ. ಪಾಲಾಕ್, ಸಬ್ಬಸಿಗೆ, ಕೀರೆ ಸೊಪ್ಪು, ಚಿಲಕವರೆ, ಬೀಟ್’ರೂಟ್, ಸಿಹಿಗುಂಬಳ, ಕ್ಯಾರೆಟ್, ಟೋಮ್ಯಾಟೋ.
 • ಹಣ್ಣುಗಳು: ದಾಳಿಂಬೆ, ದ್ರಾಕ್ಷಿ, ಕಿತ್ತಳೆ, ಮೂಸಂಬಿ, ಪಪ್ಪಾಯ, ಬಾಳೆಹಣ್ಣು, ಬೆಣ್ಣೆಹಣ್ಣು, ಸ್ಟ್ರಾಬೆರ್ರಿ,ಕಲ್ಲಂಗಡಿ, ಸೀಬೆಹಣ್ಣು ಮತ್ತು ಕಿವಿ ಹಣ್ಣು
 • ಒಣಹಣ್ಣುಗಳು ಮತ್ತು ಬೀಜಗಳು: ಅಂಜೂರ, ಖರ್ಜೂರ, ಏಪ್ರಿಕಾಟ್ಸ್, ಬಾದಾಮಿ, ಶೇಂಗಾ, ಸೂರ್ಯಕಾಂತಿ ಬೀಜ
 • ರಾಗಿ, ಕೆಂಪಕ್ಕಿ, ಮೊಳಕೆ ಕಾಳುಗಳು.
 • ಕೆಂಪು ಮಾಂಸ, ಕೋಳಿ, ಮೀನು, ಮೊಟ್ಟೆ
 • ಹಾಲು ಮತ್ತು ಹಾಲಿನ ಉತ್ಪನ್ನಗಳು
 • ಸೋಯಾಬೀನ್ಸ್
 • ಶುದ್ಧವಾದ ಜೇನುತುಪ್ಪ
 • ಗಿಡಮೂಲಿಕೆಗಳು: ಗೋಧಿಹುಲ್ಲು ಮತ್ತು ನಿಂಬೆಹುಲ್ಲು
 • ನಿಯಮಿತ ವ್ಯಾಯಾಮ ಮತ್ತು ಸರಿಯಾದ ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಅತ್ಯಾವಶ್ಯಕ
 • ತ್ಯಜಿಸಬೇಕಾದ ಆಹಾರ
  ಗಾಢವಾದ ಕಾಫಿ ಮತ್ತು ಚಹಾ, ಸಂಸ್ಕರಿಸಿದ ಅಹಾರ ಪಾದಾರ್ಥಗಳಾದ ಮೈದಾ ಹಿಟ್ಟು ಮತ್ತು ಪೂರ್ವಸಿದ್ಧ, ಹೊಗೆಯಾಡಿಸಿದ, ಸಂರಕ್ಷಿಸಲ್ಪಟ್ಟ ಮತ್ತು ಸಂಸ್ಕರಿಸಿದ ಆಹಾರಗಳು.

ಟಿಪ್ಸ್:

ಗೋಧಿ ಹುಲ್ಲಿನ ಪುಡಿ ಅಥವಾ ನಿಂಬೆಹುಲ್ಲಿನ ಪುಡಿಯನ್ನು ದಿನಾಲು ಬೆಳಿಗ್ಗೆ ಅರ್ಧ ಚಮಚದಷ್ಟು ಬಿಸಿನೀರಿನ ಜೊತೆ ಸೇವಿಸಿದಲ್ಲಿ ರಕ್ತಹೀನತೆಯ ಸಮಸ್ಯೆಯನ್ನು ತಡೆಗಟ್ಟಬಹುದು.

1

 


Written By : Chaitra R Rao|Nutritionist

 

 

 

 

 

 

 

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೩

ಪುಟ-೫

ಕೆಲವೊಂದು ಸಲ ಎರಡು ಆಯ್ಕೆಗಳೂ ತಪ್ಪಲ್ಲವೆನ್ನುವಾಗ ಯಾವುದಾದರೂ ಒಂದು ಆಯ್ಕೆ ಮಾಡಿ ಮತ್ತೊಂದನ್ನ ಆಯ್ಕೆ ಮಾಡಬಹುದಿತ್ತು ಎನ್ನುವ ಪರಿತಾಪ ಉಂಟಾಗುತ್ತದೆ. ಅಂತಹ ಒಂದು ಪರಿತಾಪ, ಗೊಂದಲದ ನಡುವೆ ಮಲ್ಲಪ್ಪನವರು ಆಗಲಿ, ನೋಡೋಣ ಎಂದು ಟೊಂಯ್ಕರನ್ನು ಕಳಿಸಿದರು.

ಅಂತಿರ್ಪೊಡೆ, ಇದೆಲ್ಲ ಸಮಾಚಾರವೂ ಡಿಲೈಟಾನಂದರ ಕಿವಿಗಳಿಗೆ, ಕಣ್ಣುಗಳಿಗೆ ತಿಳಿಯಲಿಲ್ಲ. ಒಂದು ದಿನ ಶ್ರೀಮಾನ್ ಮಲ್ಲಪ್ಪನವರ ಸಂಸಾರ ಸಮೇತವಾದ ಸವಾರಿ ಗುರುಗಳಿದ್ದಲ್ಲಿಗೆ ಬಂದಾಗ ಡಿಲೈಟಾನಂದರಿಗೆ ವಿಷಯವನ್ನು ಹೇಳಿದರು. ಯಾವುದೋ ಬಿಸಿಲಿನಲ್ಲಿ ಹಪ್ಪಳ ಒಣಗಿಸುತ್ತಿದ್ದಾಗ ಬಂದ ಮಳೆಯಂತೆ ಈ ಸುದ್ಧಿ ಗುರುಗಳಿಗೆ.

ಸಮಾಧಾನದಿಂದಿದ್ದ ಪ್ರಾಕೃತಿಕ ಶಾಂತಿಗೆ ಭಂಗವಾಗುವ ಈ ಕಟ್ಟಡ, ವಸತಿಗಳಿಗೆ ಸಂತೋಷ ಪಡುವುದೋ ಬೇಸರ ಪಡುವುದೋ ತಿಳಿಯದೇ ಮೌನದ ಹುತ್ತಕ್ಕೇ ಶರಣು ಹೋದರು. ಅಲ್ಲೇ ಇದ್ದ ಟೊಂಯ್ಕರು ಯಾವುದೇ ಕಸಿವಿಸಿಯಿಲ್ಲದೇ ಆಗಲಿ ಮಲ್ಲಪ್ಪನವರೇ, ಈ ಜಾಗದಲ್ಲಿ ಹೀಗೆ, ಆ ಜಾಗದಲ್ಲಿ ಹಾಗಿದ್ದರೆ ಒಳ್ಳೆಯದು ಎಂದೂ ಹೇಳಿದರು. ಡಿಲೈಟಾನಂದರ ಹುಬ್ಬುಗಳು ಯಾವುದೋ ಶಬ್ಧಕ್ಕೆ ಮರದಿಂದ ಹಾರಿದ ಹಕ್ಕಿಗಳಂತೆ ಒಮ್ಮೆ ಹಾರಿ ಮತ್ತೆ ಕುಳಿತವು.

ಮಲ್ಲಪ್ಪನವರ ನಿಷ್ಠೆಗೆ, ಹಣಕ್ಕೆ ನೆಲವೇನು ಜನವೇನು? ಎಲ್ಲವೂ ಸಣ್ಣ ಕಾಲದ ಪರಿಧಿಯಲ್ಲಿ ಕಟ್ಟಿ ಮುಗಿಯಿತು. ಒಂದು ಸಣ್ಣ ಚಾವಡಿಯಂತಹ ಜಾಗ, ಶೌಚಾದಿ ಕ್ರಿಯೆಗಳಿಗೆ ಸ್ವಲ್ಪ ದೂರದಲ್ಲಿ ಎರಡು ಕೋಣೆಗಳು. ಮಲ್ಲಪ್ಪನವರ ಗದ್ದೆಯ ಪಂಪಿನಿಂದ ನೀರನ್ನು ಕೊಳವೆಯ ಮೂಲಕ ತಂದು ತುಂಬಿಸಬಹುದಾದಂತ ಒಂದು ಟ್ಯಾಂಕು, ಅದಕ್ಕೆ ನಲ್ಲಿಗಳ ವ್ಯವಸ್ಥೆ.

ಇಷ್ಟಾದ ಮೇಲೆ ಆ ಸ್ಥಳವು ಒಂದು ಸಣ್ಣ ಮಗು ಬಿಡಿಸಿದ ಚಿತ್ರದಂತೆ ದೂರಕ್ಕೆ ಕಾಣುತ್ತಿತ್ತು. ಯಾರೋ ತಂದಿಟ್ಟ ನಾಲ್ಕು ಹಳೇ ಪುಸ್ತಕಗಳು, ಅದ್ಯಾರೋ ತಂದು ಬಿಟ್ಟು ಹೋದ ವಿಭೂತಿಯ ಗಟ್ಟಿಯನ್ನು ತುಂಬಿದ್ದ ಬಟ್ಟಲುಗಳು ಚಾವಡಿಯ ಮೂಲೆಯಲ್ಲಿ ಪೇರಿಸಲ್ಪಟ್ಟವು. ಗುರುಗಳ ಪಾದಧೂಳಿಯನ್ನು ಪಡೆಯಬಂದವರು ತಮ್ಮ ಪಾದದ ಧೂಳನ್ನು ಚಾವಡಿಗೆ ಸೇರಿಸಬಾರದು ಎನ್ನುವ ಕಾರಣಕ್ಕೆ ಮಲ್ಲಪ್ಪನವರ ಮನೆಯಿಂದ ಹಿಂಡಿಯ ಗೋಣಿಗಳೂ ಬಂದು ಬಾಗಿಲಿಗೆ ಬಿದ್ದವು. ನಂತರ ಮಲ್ಲಪ್ಪನವರ ಮಡದಿಯ ಆರೋಪದ ಮೇರೆಗೆ ಒಳ್ಳೆಯ ಕಾಲೊರಸುಗಳೂ ಅಲ್ಲಲ್ಲಿ ರಾಜಿಸಿದವು.

ಡಿಲೈಟಾನಂದರು ಗುಹೆಯಂತ ಜಾಗದಲ್ಲಿ ತಮ್ಮ ನಂಟು ಬಿಡಲಿಲ್ಲ. ಟೊಂಯ್ಕರು ಸಂಪೂರ್ಣವಾಗಿ ಉಸ್ತುವಾರಿ ಸಚಿವರಾದರು. ಮಲ್ಲಪ್ಪನವರಂತೂ ತಮ್ಮ ಸ್ಥಳದ ಆಶೆಗೋ ಅಲ್ಲ ಭಕ್ತಿಯಿಂದಲೋ ಆಗಾಗ ಬರುವ ಮುಖ್ಯರಾದರು. ಮಲ್ಲಪ್ಪನವರೇ ಬಂದ ಮೇಲೆ ಅವರ ಸಂಬಂಧಿಕರು, ಪಟಾಲಮ್ಮುಗಳು ಬರದೇ ಇರುತ್ತಾರೆಯೇ?

ಅಲ್ಲಿ ಪೂಜೆಯಿಲ್ಲ, ಗುರುಗಳು ಮಾತನ್ನಾಡುವುದಿಲ್ಲ, ಟೊಂಯ್ಕರು ಉಪದೇಶ ಕೊಡುವ ಹಾಗಿಲ್ಲ. ನೋಡುವುದಕ್ಕೆ ಒಂದು ಚಾವಡಿ, ಎರಡು ಕೋಣೆ ಬಿಟ್ಟರೆ ಏನೂ ಇಲ್ಲ ಎನ್ನುವ ಕೆಲವು ವಿಷಯಗಳಿಂದ ದೂರದಿಂದ ಬರುವ ಜನರು ಮತ್ತೆ ಬರುತ್ತಿರಲಿಲ್ಲ. ಮೊದಮೊದಲಿಗೆ ಬಹಳಷ್ಟು ಜನ ಬಂದರೆ ನಂತರ ಜನರು ಕಡಿಮೆಯಾಗುತ್ತಿದ್ದುದು ಟೊಂಯ್ಕರಿಗೆ ಒಳಗಿಂದ ಅಸಮಾಧಾನವಾದರೆ ಡಿಲೈಟಾನಂದರಿಗೆ ಸ್ವಲ್ಪ ಖುಷಿಯೆನ್ನಿಸಿತ್ತು.

ಮಲ್ಲಪ್ಪನವರೂ ಹೊಸದಾಗಿ ಕೈಗೊಂಡ ಗ್ರಾನೈಟ್ ಬ್ಯುಸಿನೆಸ್ಸ್ ಸಲುವಾಗಿ ಈ ಗುರುಗಳನ್ನು, ಟೊಂಯ್ಕರನ್ನು ಮರೆತೇ ಬಿಟ್ಟರು. ಟೊಂಯ್ಕಾನಂದರು ಏನಾದರೂ ಮಾಡದಿದ್ದರೆ ಈಗ ಮತ್ತೆ ಎದ್ದು ಹೊರ ಜಗತ್ತಿಗೆ ಹತ್ತಿರವಾಗಲೇ ಬೇಕಾಯಿತು.

ಪುಟ-೬

ಮಳೆಗಾಲ ಮುಗಿಯುವಂತಿತ್ತು. ಆಕಾಶವು ನೀಲಿಯಾಗಿ ಅಲ್ಲಲ್ಲಿ ಈ ಸಂವತ್ಸರಕ್ಕೆ ತೇರ್ಗಡೆಯಾಗದ ಮೋಡಗಳನ್ನು ಉಳಿಸಿಕೊಂಡು ಅಲ್ಲಲ್ಲಿ ನೀಲಿಯನ್ನು ಕೆಡಿಸಿತ್ತು. ಒಳ್ಳೆಯ ಕೆಂಪಾದ ಮಾವಿನ ಹಣ್ಣನ್ನು ಅಳಿಲು ಕಚ್ಚಿ ಅಲ್ಲಲ್ಲಿ ಮಾವಿನ ತಿರುಳನ್ನು ಹೊರಚೆಲ್ಲಿದಂತೆ ಒಂದು ಸಂಜೆಯಾಯಿತು.

ಬೆಳಕು ಬರುವುದಕ್ಕೆ ಜಾಗ ಬೇಕು, ಕತ್ತಲೆಗೆ ಹೇಳಬೇಕೇ? ಬೆಳಕಿನಿಂದ ಕತ್ತಲೆಯ ಕಡೆಗೆ ನಡೆಯುವುದೇ ಸರಿ ಎನ್ನುವಂತೆ ಎಲ್ಲರೂ ತಮ್ಮ ಮನೆಗೆ ಬರುವ ಸಮಯ. ಅಲ್ಲಲ್ಲಿ ಹಕ್ಕಿಗಳ ಮಂಗಳ ಪದ್ಯಗಳು, ಮತ್ತೆಲ್ಲೋ ಯಾರನ್ನೋ ಕರೆದ ದನಿ. ಇದನ್ನೆಲ್ಲ ಕೇಳುವಾಗ ಡಿಲೈಟಾನಂದರಿಗೆ ಮತ್ತು ಟೊಂಯ್ಕರಿಗೆ ಒಂದು ದಿವ್ಯ ಅನುಭೂತಿ.

ಟೊಂಯ್ಕರು ಜೀವನದಲ್ಲಿ ಬಹಳ ಗುರುಗಳನ್ನು, ಯತಿಗಳನ್ನು ನೋಡಿದ್ದರು. ಅವರ ಪೂಜೆ, ಅವರ ಪ್ರವಚನ ಎಲ್ಲವನ್ನೂ ಕೇಳಿಯೂ ಇದ್ದರು. ಹೀಗಾಗಿ ಅವರೊಂದಿಗೆ ಡಿಲೈಟರನ್ನು ಹೋಲಿಸುವಾಗ ಯಾವುದೇ ರೀತಿಯ ಸಾಮ್ಯತೆ ಇರಲಿಲ್ಲವಾದುದರಿಂದ ಸ್ವಾಮೀಜಿ ಎನ್ನಲು ಆಗಲಿಲ್ಲ. ಗುರುವೇ, ಗುರುಗಳೇ ಎಂದು ಕರೆಯುತ್ತಿದ್ದರಿಂದ ದೊಡ್ಡ ಸಮಸ್ಯೆ ಆಗದಿದ್ದರೂ ಮನಸಿನಲ್ಲಿ ಒಂದು ಕೊರಗಿದ್ದಿತು.

ಈ ಕತ್ತಲು ನುಗ್ಗುವುದೂ ಹೀಗೆಯೇ, ಮೊದಲು ಬಾವಿಯೊಳಗಿಂದ, ನಂತರ ಕಾಡಿಗೆ ಮತ್ತೆ ಬಯಲಿಗೆ ಮತ್ತೆ ಬೆಟ್ಟಕ್ಕೆ. ಬೆಳಕು ಇದಕ್ಕೆ ವ್ಯತಿರಿಕ್ತವಾಗಿ ಮೊದಲು ಬೆಟ್ಟಕ್ಕೆ. ಬೆಳಕಿನ ಮೂಲಕವಾಗಿ ಬರುವ ಜ್ಞಾನ ಮೊದಲು ಈ ಬೆಟ್ಟವಾಸಿಗಳಿಗೆ ಬರಬೇಕು ಮೊದಲಿಗೆ ಎನ್ನುವುದು ಇದರಿಂದಲಾಗಿಯಾದರೂ ಸತ್ಯ.

ಸಂಜೆಯ ಸೊಬಗಿಗೆ ಡಿಲೈಟಾನಂದರು ಗುಹೆಯ ಬದಿಯಿಂದ ಬರುತ್ತಿದ್ದಂತೆಯೇ ಯಾವತ್ತೂ ಟೊಂಯ್ಕರು ನಮಸ್ಕರಿಸಿ ಆಶೀರ್ವಾದವನ್ನು ಪಡೆಯುವುದು ವಾಡಿಕೆ. ಆದರೆ ಈ ದಿನ ಟೊಂಯ್ಕರು ಕಾಣದಾದರು. ಏನಾಯ್ತು ಎನ್ನುವ ದುಗುಡ ಮೊದಲಬಾರಿಗೆ ಜೀವನದಲ್ಲಿ ಡಿಲೈಟಾನಂದರಿಗೆ ಬಂತು. ಹೇಗೂ ಸ್ವಲ್ಪ ಬೆಳಕಿದೆ, ಬೆಟ್ಟಕ್ಕೆ ಸುತ್ತಿ ಬರೋಣ ಎಂದು ನಡೆಯಲಾರಂಬಿಸಿದರು.

ಎಂತಹ ರಮಣೀಯ ಸಂಜೆಯದು. ಆ ಸೂರ್ಯನ ಕಿರಣಗಳು ಆಗಸದಲ್ಲಿ ಚಿತ್ತಾರಗಳನ್ನು ಮೂಡಿಸಿದ್ದವು, ಹಕ್ಕಿಗಳು ಕಪ್ಪಿನ ಗೆರೆಗಳಾಗಿ ಮೂಡಿ ಮರೆಯಾಗುತ್ತಿದ್ದವು. ಗಾಳಿ ಅದೆಲ್ಲಿಂದಲೋ ಬಂದು ಬಂದು ದೇಹವನ್ನು ಮುತ್ತಿಕ್ಕುತ್ತಿದ್ದವು. ಯಾವುದೋ ಮನೆಯ ಬಿಸಿನೀರೊಲೆಯ ಬೆಂಕಿಯಿಂದ ಬಂದ ಧೂಮರಾಶಿ ಇನ್ನೊಂದು ಮೋಡವಾಗುವತ್ತ ಸಾಗುತ್ತಿತ್ತು. ಇದನ್ನೆಲ್ಲ ನೋಡುತ್ತಾ ಮುಂದೆ ಬಂದ ಡಿಲೈಟರಿಗೆ ದೂರದಲ್ಲಿ ಟೊಂಯ್ಕರು ಕಂಡರು.

ನುಣುಪಲ್ಲದ ಬಂಡೆಯ ಮೇಲೆ ಹಾಗೇ ಬಿದ್ದಂತೆ ಮಲಗಿದ್ದರು ಟೊಂಯ್ಕರು. ಗುರುಗಳು ಬಳಿ ನಿಂದು ಕರೆದರು, ಕಿವಿಯಲ್ಲಿ ಹೆಸರನ್ನೇ ಹೇಳಿದರು. ಟೊಂಯ್ಕರು ಅಂತೂ ಎದ್ದರು. ಎದ್ದಕೂಡಲೇ ಪಶ್ಚಿಮಾಭಿಮುಖವಾಗಿ ನೋಡಿ ಕೈಮುಗಿದರು ಆಕಾಶಕ್ಕೆ. ಕಪ್ಪು ಇನ್ನಷ್ಟು ಕಪ್ಪಾಗುವ ವರೆಗೆ ಒಂದೂ ಮಾತುಕತೆಯಿರದೆ ಇಬ್ಬರೂ ಅಲ್ಲಿಯೇ ಇದ್ದರು.

ಸಂಜೆ ಹಾಗೇ ತಿರುಗುತ್ತಾ ಬಂದ ಟೊಂಯ್ಕರಿಗೆ ಬೆಟ್ಟದ ಇನ್ನೊಂದು ತಪ್ಪಲಿನಲ್ಲಿ ಜನರಿದ್ದಾರೆ ಎನ್ನುವುದು ಅರಿವಾಯಿತು. ಯಾರು? ಏನು ಎನ್ನುವ ಕುತೂಹಲ ಹೆಚ್ಚಾಗಿ ಗುಡ್ಡದ ಕಲ್ಲಿನ ಮೇಲೆ ಹತ್ತಿ ನೋಡಲು ಮುಂದಾದರು. ಯಾರೋ ಇಬ್ಬರು ಅರ್ಥಾತ್ ಒಂದು ಹೆಣ್ಣು ಮತ್ತೆ ಒಂದು ಗಂಡು ಸರಸವಾಡುವ ದೃಶ್ಯವನ್ನು ಕಂಡು ಟೊಂಯ್ಕರಿಗೆ ಒಂದು ಕ್ಷಣ ಮನಸ್ಸು ಅಲ್ಲೋಲಕಲ್ಲೋಲವಾಯಿತು.

ವಿಕಾರಗೊಂಡ ನೀಲ ಆಕಾಶದಲ್ಲಿ ಸಂಜೆಯ ಬಣ್ಣಗಳೆಲ್ಲ ಮುಗಿದು ಕಪ್ಪುಗಟ್ಟುತ್ತಿರುವ ದೃಶ್ಯವನ್ನು ಕಂಡು ಒಂದು ರೀತಿಯ ಆತ್ಮಾನುಸಂಧಾನಕ್ಕೆ ತೊಡಗಿದರು ಟೊಂಯ್ಕರು. ಈ ಧ್ಯಾನದಲ್ಲಿ, ಈ ಚಿಂತನೆಯಲ್ಲಿ ಮುಳುಗಿ ಅಲ್ಲಿಯೇ ಕುಸಿದು ಬಿದ್ದು ಬಿಟ್ಟರು. ಕತ್ತಲು ಎಂತಹದ್ದನ್ನೂ ಕಲಿಸುತ್ತದೆ. ಹಾಗಾಗಿ ಎದ್ದ ಕೂಡಲೇ ತಮ್ಮ ಮನಸ್ಸಿನ ಕಪ್ಪು ಈ ಜಗತ್ತಿನ ತಾತ್ಕಾಲಿಕ ಕಪ್ಪು ಎಲ್ಲವನ್ನೂ ತೊಡೆಯುವ ಸೂರ್ಯನ ಬೆನ್ನಿಗೆ ನಮಸ್ಕರಿಸಿದರು.

ಪುಟ-೭

ಊಟಕ್ಕೆ ಬಹಳ ತರನಾದ ಪದಾರ್ಥಗಳಿದ್ದಾಗ ಕೆಲವೊಂದು ರುಚಿಸಲಾರದು. ಒಂದೇ ತಂಬುಳಿಯೋ, ಒಂದೇ ಸಾಂಬಾರೋ ಇದ್ದಾಗ ಅದೇ ಪರಮಾನ್ನವಾಗುತ್ತದೆ. ಅಂತೆಯೇ ಕೆಲವೊಂದು ಬಾರಿ ಒಬ್ಬರ ಮಹಾತ್ಮ್ಯದ ಎಲ್ಲಾ ಅಂಶಗಳೂ ರಸಮಯವಾಗಿರುತ್ತದೆ ಎನ್ನುವ ಹಾಗಿಲ್ಲ.

ಜಾತ್ರೆಯ ಉಪನ್ಯಾಸದಿಂದ ಡಿಲೈಟಾನಂದರಿಗೆ ಸ್ವಲ್ಪ ಜನರ ಪರಿಚಯವೂ ಆಯ್ತು, ಕೆಲವು ಭಕ್ತರೂ ಹುಟ್ಟಿಕೊಂಡರು. ಅದಕ್ಕಿಂತ ಹೆಚ್ಚಾಗಿ ಶಿಷ್ಯ ಟೊಂಯ್ಕರ ಮೇಲೆ ಬಹಳವಾದ ಊಹಾಪೋಹವಾದ ಕತೆಗಳೂ, ಪವಾಡಗಳೂ ಹುಟ್ಟಿಕೊಂಡವು.

ಕೆಲವರ ಮಲಗಿದ ಕೂಡಲೇ ಬರುವ ಕನಸಾಗಿ, ಕೆಲವರ ಮಧ್ಯನಿದ್ರೆಯ ಕನಸಾಗಿ, ಕೆಲವರ ಬೆಳಗಿನ ಜಾವದ ಕನಸಾಗಿ ಟೊಂಯ್ಕರು ಕಾಣಿಸಿಕೊಂಡರು. ಕಳೆದು ಹೋದ ಎಮ್ಮೆ, ದನಗಳನ್ನು ಹುಡುಕುವಾಗ, ಉತ್ತೀರ್ಣರಾಗದ ಪರೀಕ್ಷೆಗಳನ್ನು ಮಕ್ಕಳು ಬರೆದು ಪಾಸ್ ಆಗುವಾಗೆಲ್ಲ ಟೊಂಯ್ಕರು ಬರುತ್ತಿದ್ದರು.

ಸದಾ ಮೌನಿಯಾಗಿರುತ್ತಿದ್ದ ಡಿಲೈಟಾನಂದರು ಮಾತುಗಳು ಟೊಂಯ್ಕರ ಮಹಾಮಳೆಯ ನಡುವಿನ ಆಲಿಕಲ್ಲುಗಳಂತಿರುತ್ತಿತ್ತು. ಜನರಿಗೆ ಅರ್ಥವಾಗುತ್ತಿರಲಿಲ್ಲ, ಜಾಸ್ತಿ ಸಮಯ ಉಳಿಯುತ್ತಲೂ ಇರಲಿಲ್ಲ. ಹೀಗಾಗಿ ಟೊಂಯ್ಕರಿಗೆ ಅಭಿಮಾನಿಗಳು ಜಾಸ್ತಿಯಾದರು. ಗುರುಗಳು ಮಾತನ್ನಾಡುತ್ತಿರುವಾಗಲೇ ಮಾತನ್ನಾಡುವ ಟೊಂಯ್ಕರಿಗೆ ಮೌನದಲ್ಲಿದ್ದಾಗ ಕೇಳಬೇಕೇ?

ಗುರು ಡಿಲೈಟಾನಂದರಿಗೆ ಮನಸ್ಸಿನಲ್ಲಿ ಕೋಲಾಹಲವಾಗಿರಬಹುದೇ ಎನ್ನುವ ಸಂಶಯವು ದಿನಾ ಟೊಂಯ್ಕರಲ್ಲಿ ಕೊರೆಯುತ್ತಿತ್ತು. ಈ ವಿದ್ಯಮಾನಗಳಿಂದ ಗುರುಗಳ ಮನಸ್ಸು ಏನಾಗಿರಬಹುದು? ಅವರಿಗೆ ನನ್ನ ಮೇಲೆ ಅಸಮಾಧಾನ ಇರಬಹುದು ಎನ್ನುವುದು ಹುಣ್ಣಾಗಿ ಪರಿಣಮಿಸಿತ್ತು.

ತಿನ್ನುವುದಕ್ಕೆ ಬಾಳೆಹಣ್ಣು ಮಾತ್ರ ಇರೋರು ದೇವರಿಗೆ ನೈವೇದ್ಯಕ್ಕೇನು ಕೊಡೋದು?. ಸಂಶಯಕ್ಕೆ ಅತೃಪ್ತಿಗೆ ಎಲ್ಲದಕ್ಕೂ ಗುರುಗಳನ್ನೇ ಕೇಳಬೇಕು ಎಂದುಕೊಂಡು ಟೊಂಯ್ಕರು ಒಂದು ಸೊಬಗಿನ ಸಂಜೆ ಕೇಳಿದರು.

ಉತ್ತರ ಗೊತ್ತಿರುವ ಪ್ರಶ್ನೆಯನ್ನು ಕೇಳುವುದು ಮೊಡವೆಯನ್ನು ಒಡೆದುಕೊಂಡಂತೆ. ಆ ನೋವು, ಕೀವು, ರಕ್ತದ ಪ್ರಮಾಣ ಎಲ್ಲ ಗೊತ್ತಿರುತ್ತದೆ. ಆದರೆ ಈ ರೀತಿಯ ಪ್ರಶ್ನೆ ಕೇಳುವುದು ಬೇರೆಯವರ ಮೊಡವೆ ಒಡೆದಂತೆ ಎನ್ನುವುದು ಟೊಂಯ್ಕರಿಗೆ ಗೊತ್ತಿತ್ತು. ಆದರೂ ಕೇಳಿದರು.

ಗುರುವರ್ಯಾ, ಈಗಿನ ವಿದ್ಯಮಾನಗಳು ಅರ್ಥಾತ್ ಜನರು ಹೆಚ್ಚಾಗಿ ನನ್ನನ್ನು ಮಾತನಾಡಿಸುವುದು, ಸಮಸ್ಯೆಗಳನ್ನು ಹೇಳಿಕೊಳ್ಳುವುದು ನಿಮಗೆ ದುಃಖವನ್ನು ಕೊಡುತ್ತಿಲ್ಲವೇ? ನನ್ನ ಬಗೆಗೆ ಅಸಮಾಧಾನವನ್ನು ಕೊಡುವುದಿಲ್ಲವೇ?

ಶಿಷ್ಯೋತ್ತಮ. ನಿನ್ನ ಈ ಒಂದು ಪ್ರಶ್ನೆಯಲ್ಲಿಯೇ ನೀನು ನನ್ನ ಬಗೆಗೆ ಇರಿಸಿಕೊಂಡ ಗೌರವ ಪ್ರೀತಿಗಳು ವ್ಯಕ್ತವಾಗುತ್ತದೆ. ಯಾವಾಗ ನಾವು ಏನನ್ನಾದರೂ ಅಪೇಕ್ಷಿಸುತ್ತೇವೆಯೋ ಆಗ ಮಾತ್ರ ದುಃಖ ಉಂಟಾಗುತ್ತದೆ. ನಾನು ಎಲ್ಲವನ್ನೂ ತ್ಯಜಿಸಿದ್ದೇನೆ ಅಂದರೆ ಇದ್ಯಾವುದೂ ನನ್ನ ಹತ್ತಿರವೇ ಬರಕೂಡದು. ಆದರೆ ಎಲ್ಲಿಯೋ ಒಳಗಿನಿಂದ ಒಂದು ಸೂಜಿ ಚುಚ್ಚಿದಂತಾಗುವ ಅಸಮಾಧಾನಕ್ಕೆ ಪರಿಹಾರವೆಂದರೆ ನಾಯಿ ಎಷ್ಟು ಬೊಗಳಿದರೂ ಅದರ ಕೊರಳಿಗೆ ಕಟ್ಟಿದ ಸಂಕಲೆಯ ಇನ್ನೊಂದು ತುದಿಯು ನನ್ನ ಕೈಯ್ಯಲ್ಲಿದೆ ಎನ್ನುವುದು.

ಹಾಗಾಗಿ…

ಟೊಂಯ್ಕಾನಂದರು ಸಮಾಧಿಗೆ ಸಂದರು.

ಮುಂದುವರೆಯುವುದು….


ಹಕ್ಕುಗಳು © Ishwara Bhat K|ಈಶ್ವರ ಭಟ್ ಕೆ.

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೧

ಶ್ರೀ ಟೊಂಯ್ಕಾನಂದ ಚರಿತೆ. ಭಾಗ ೨

ಮನಸೆಂಬ ಮಾಯದ ಕನ್ನಡಿ – ಬಿಂಬ ೫

ಅಪ್ಪ ಕಲಿಸಿದ ಪಾಠ

ಮಳೆಗಾಲದ ಒಂದು ಮಧ್ಯಾಹ್ನ, ಅದೂ ಮಲೆನಾಡು… ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು…. ನನಗೆ ಯಾಕೋ ಊಟದ ಮೇಲೆ ಕೋಪ ಬಂದು ಬಿಟ್ಟಿತ್ತು… ನನಗೆ ಊಟ ಬೇಡ ಎಂದರೆ ಬೇಡ ಎಂದು ಅಮ್ಮನ ಹತ್ತಿರ ನನ್ನ ಹಟ ಜೋರಾಗಿತ್ತು…

“ಮಗಾ ಊಟ ಬೇಡ ಎನ್ನಬಾರದು.. ಚಿಕ್ಕ ಮಕ್ಕಳು ಹಸಿದಿರಬಾರದು..ಸ್ವಲ್ಪ ಆದರೂ ಊಟ ಮಾಡು “ಎಂದು ಅಮ್ಮ ರಮಿಸುತ್ತಿದ್ದರು.. ನನ್ನದೋ ಊಟ ಬೇಡ ಎನ್ನುವ ಹಟ.. ಊಟಕ್ಕೆ ಕುಳಿತ ಅಪ್ಪ ಒಮ್ಮೆದೊಡ್ಡದಾಗಿ ಕಣ್ಣು ಬಿಟ್ಟು ಸುಮ್ಮನೆ ಊಟ ಮಾಡು ಎಂದು ಗದರಿಸಿದರು.. ( ಅಪ್ಪ ಎಂದೂ ಹೊಡೆದವರಲ್ಲ. ಹೆಚ್ಚೆಂದರೆ ದೊಡ್ಡದಾಗಿ ಕಣ್ಣು ಬಿಡುತ್ತಿದ್ದರು. ಅಪ್ಪ ಕಣ್ಣು ಬಿಟ್ಟ ಅಂತ ನಾನು ಮತ್ತೆ ಅಕ್ಕ ಅಳ್ತಾ ಇದ್ವಿ) ಅಪ್ಪನ ಭಯಕ್ಕೆ ಊಟಕ್ಕೆ ಕುಳಿತವಳು ನಾಲ್ಕು ತುತ್ತು ತಿಂದು ಕಲಸಿದ ಅನ್ನವನ್ನು ಬಿಟ್ಟು ಹೊರಬಂದಿದ್ದೆ..
ಅಪ್ಪ ಅದು ಹೇಗೋ ತಮ್ಮ ಕೋಪವನ್ನು ತಡೆದುಕೊಂಡು ಊಟವನ್ನು ಮುಗಿಸಿ ಹೊರಬಂದವರೇ, ” ಅನ್ನವನ್ನು ಬಿಡುತ್ತಿಯಲ್ಲಾ, ಅನ್ನದ ಬೆಲೆ ತಿಳಿಸುತ್ತೇನೆ ಬಾ” ಎಂದು ನನ್ನ ತೋಳನ್ನು ಹಿಡಿದು ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ಬಾವಿಯ ಹತ್ತಿರ ಎಳೆದುಕೊಂಡು ಬಂದಿದ್ದರು.. ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಾವಿಯಲ್ಲಿ ಕೆಂಬಣ್ಣದ ನೀರು ತುಂಬಿ ನಿಂತಿತ್ತು.. ನೀರನ್ನು ಕೈಯಿಂದಲೇ ಮೊಗೆಯಬಹುದಿತ್ತು‌…
ಅಮ್ಮಾ ಎಂದು ನಾನು ಜೋರಾಗಿ ಕೂಗುತ್ತಿದ್ದೆ. ಅಪ್ಪನ ರೌದ್ರಾವತರ ಮತ್ತು ನನ್ನ ಕೂಗಾಟ ಕೇಳಿ ಅಮ್ಮ ಓಡೋಡಿ ಬಂದಿದ್ದರು… ಅಷ್ಟರಲ್ಲಿ ಅಪ್ಪ ಗಡಗಡೆಯಲ್ಲಿನ ಹಗ್ಗ ಎಳೆದು ನನ್ನ ಸೊಂಟಕ್ಕೆ ಬಿಗಿದಿದ್ದರು.. ಮಗಳನ್ನು ಸಾಯಿಸುತ್ತೀರೇನು ಬಿಡಿ ಎಂದು ಅಮ್ಮ ಭಯದಿಂದ ಕೂಗುತ್ತಿದ್ದರೆ ನನ್ನ ಕೂಗಾಟ ಭಯಕ್ಕೆ ನಿಂತೇಹೋಗಿತ್ತು…. ” ಹಟಮಾಡ್ತೀಯಾ?? ಇನ್ನೊಮ್ಮೆ ಮಾಡು.. ಊಟ ಬಿಡ್ತೀಯಾ?? ಅನ್ನಕ್ಕೆ ಅವಮಾನ ಮಾಡ್ತೀಯಾ ??” ಎನ್ನುತ್ತಾ ಎತ್ತಿ ಬಾವಿಗೆ ಬಿಟ್ಟೇ ಬಿಟ್ಟರು.. ಹಗ್ಗ ಹಿಡಿದು ಹಟ ಮಾಡ್ತೀಯಾ ಎಂದು ಬಾವಿಯ ನೀರಿಗೆ ತಲುಪವ ವರೆಗೆ ಬಿಡುವದು ಮತ್ತೆ ಮೇಲೆ ಎತ್ತುವದು ಮಾಡುತ್ತಿದ್ದರು.. ‘ಅಪ್ಪಾ ನೀ ಹೇಳಿದ ಹಾಗೆಕೇಳುತ್ತೇನೆ, ಅನ್ನ ಬಿಡಲ್ಲ, ಹಟ ಮಾಡಲ್ಲ ನನ್ನ ಎತ್ಕೋ’ ಎಂದು ಕೂಗೋಕೆ ಶುರುಮಾಡಿದೆ…
‘ಇನ್ನೊಮ್ಮೆ ಹಟ ಮಾಡುವದೋ ಅನ್ನಕ್ಕೆ ಅವಮಾನ ಮಾಡುವದೋ ಮಾಡಿದರೆ ಮೇಲೆ ಎತ್ಕೊಳಲ್ಲ, ಕೆಳಗೇ ಬಿಟ್ಟುಬಿಡುತ್ತೇನೆ ನೋಡು’ ಎನ್ನುತ್ತಾ ಅಪ್ಪ ನನ್ನನ್ನು ಬಾವಿಯಿಂದ ಮೇಲಕ್ಕೆ ಎತ್ತಿಕೊಂಡರು..
ನಿಮ್ಮ ಬುದ್ಧಿಗೆ ಏನಾಗಿದೆ? ಹಗ್ಗ ತುಂಡಾಗಿ ಬಿದ್ದಿದ್ರೆ ಏನು ಮಾಡೋದು, ಭಯಪಟ್ಟುಕೊಂಡರೆ ಏನು ಗತಿ ಎಂದು ಅಮ್ಮ ಅಪ್ಪನ ಹತ್ತಿರ ಜಗಳಕ್ಕೇ ನಿಂತಿದ್ದರು..
” ನೀನು ಸುಮ್ಮನಿರು, ನನಗೆ ಮಗಳ ಮೇಲೆ ಪ್ರೀತಿ, ಕಾಳಜಿ ಇಲ್ಲವೇನು ? ಅವಳಿಗೆ ಏನಾದರೂ ಆಗಲು ನಾನು ಬಿಡುತ್ತೇನಾ ?? ಹಗ್ಗ ಕಟ್ಟಾಗಿ ಬಿದ್ದರೂ ನಾನು ಅವಳನ್ನು ಕಾಪಾಡಬಲ್ಲೆ,, ( ಅಪ್ಪ ನುರಿತ ಈಜು ಪಟು).. ಅವಳಿಗೆ ಈಗಿನಿಂದಲೇ ಹಟದ ಸ್ವಭಾವ ಬಿಡಿಸಬೇಕು.. ಅನ್ನದ ಬೆಲೆ ಅರಿವಾಗಬೇಕು… ಅನ್ನ ಬಿಡಲು ಹೋದಾಗಲೆಲ್ಲ ಇದು ನೆನಪಾಗಬೇಕು” ಎಂದು ಹೇಳುತ್ತಿದ್ದರು ಅಪ್ಪ..

ಅಂದಿನಿಂದ ಇಂದಿನ ತನಕ ಅನ್ನವನ್ನು ಹಾಳು ಮಾಡುವದು ನನ್ನಿಂದ ಆಗದು.. ಅಪ್ಪ ಕಲಿಸಿದ ಪಾಠ ನಾನು ಕೊನೆತನಕ ಮರೆಯಲಾರೆ.. ಇಂದು ನಾನೂ ನನ್ನ ಮಗನಿಗೆ ಅನ್ನದ ಮಹತ್ವ ತಿಳಿಸುತ್ತಿದ್ದೇನೆ ಅಂದರೆ ಅದಕ್ಕೆ ಅಪ್ಪ ಕಲಿಸಿದ ಪಾಠ ಕಾರಣ.

WhatsApp Image 2018-04-12 at 3.57.24 PM


By: Vindya Hegde

Kindness of strangers

clasped-hands-comfort-hands-people-45842.jpeg Kindness of strangers

I had once been to Mumbai’s busiest Dadar station at 7.30pm to receive my sister. Train had already arrived.  I was a bit late. Thanks to the Mumbai traffic. You can never reach on time.  I met my sister in the station and wanted to call the driver and then I realize that I had lost the purse. The purse had some cash and the drivers number. I walked to and fro on the 6th platform frantically looking for the purse but there was no signs of it.  Setting a final glance at the station I got into the vehicle. Just then my driver shows me the missing purse.

How did he get it?  Certain “Yadav” had found my purse at the station, found in it driver’s number, called and  handed it over to him and disappeared.

My heartfelt thanks to Mr.Yadav. It’s amazing to know that in this busy and corrupt world there are people honest and sincere who have the art of taking time for others and making this world a beautiful place to live in.

By :-  Nathalia Dsouza

ಅಮ್ಮ ಹೇಳಿದ ಜಯನ ಕತೆ

ಬೆಂಗಳೂರಿಂದ ಮನೆಗೆ ವಾಪಸ್ಸು ಹೋಗುತ್ತಿರುವ ಖುಷಿ. ಹೆಚ್ಚಾಗಿ ಎಲ್ಲರೂ ವಾಪಸ್ಸು ಹೋಗುವುದುಸಾಮಾನ್ಯವಾದರೂ ನಾನು ಹಾಗಲ್ಲ. ಬೆಂಗಳೂರಿಗೆ ಬಂದುಸುಮಾರು ಒಂದು ವರುಷವೂ ಐದಾರು ತಿಂಗಳುಗಳೂಕಳೆದಾದ ಮೇಲೆ ಈಗ ವಾಪಸ್ಸು ಹೋಗುತ್ತಿರುವುದು. ಸಮಯ ಸಿಕ್ಕಿರಲಿಲ್ಲ ಎನ್ನುವುದಕ್ಕಿಂತ ಕೆಲಸದ ಒತ್ತಡದಿಂದಪ್ರತಿ ಶನಿವಾರವಾಗಲೀ ಆದಿತ್ಯವಾರವಾಗಲೀ ಊರಿಗೆಹೋಗುವ ಯೋಚನೆ ಬಂದರೂ ಆಗುವುದಿಲ್ಲ. ಏನೋಒಂದು ಸಬೂಬು ಹೇಳಿ ಮಲಗುವುದೋ ಇಲ್ಲವೇ ಸಣ್ಣತಿರುಗಾಟವೋ ಮಾಡುವುದನ್ನು ಬಿಟ್ಟರೆ ಊರಿಗೆ ಹೋಗುವದೊಡ್ಡ ಆಸೆ ಇರುತ್ತಿರಲಿಲ್ಲ.

ಊರಿನ ಆತ್ಮೀಯ ಸ್ನೇಹಿತರೆಲ್ಲಾ ಇಂದು ನೆನಪಾಗುತ್ತಿದ್ದಾರೆ, ಹೇಗಿದ್ದಾರೋ? ಸಿಕ್ಕ ಒಂದು ವಾರದ ರಜೆಯಲ್ಲಿ ಎಲ್ಲರನ್ನುಅಲ್ಲದಿದ್ದರೂ ಸಾಧ್ಯವಾದಷ್ಟು ಜನರನ್ನ ಭೇಟಿಯಾಗಬೇಕು. ಡಿಗ್ರೀ ಮುಗಿಸಿದ ತಿಂಗಳೇ ಒಳ್ಳೆಯ ಉದ್ಯೋಗಸಿಕ್ಕಿದುದರಿಂದ ಬೆಂಗಳೂರಿಗೆ ಬಂದು ಬೆಂಗಳೂರಿಗನಾಗಿಹೋದ ನನಗೆ ಅವರ ಬಗ್ಗೆ ಇಷ್ಟು ದಿನ ನೆನಪಾಗದೇಇದ್ದುದಾದರೂ ಹೇಗೆ?

 
ಬಸ್ಸು ತಡವಾದರೂ ಘಾಟಿಯನ್ನು ಇಳಿಯುವಾಗ ಮನೆಗೆಬಂದಷ್ಟೇ ಖುಷಿ. ಬೆಂಗಳೂರಿನ ಚರ್ಮಕ್ಕೆ ಸಹನೀಯವಾದವಾತಾವರಣದಿಂದ ಮುಕ್ತಗೊಂಡ ಅನುಭವವಾಗುವುದುಘಾಟಿ ಇಳಿದಾಗಲೇ. ಈ ವಾತಾವರಣಕ್ಕೆ ಹೊಂದಿಕೊಂಡ ೨೨ವರ್ಷ ಅದೇಕೆ ಒಂದು ವರುಷದ ಬೆಂಗಳೂರಿನ ಹವೆಯನ್ನುಇಷ್ಟಪಡುತ್ತದೋ?
ಊರು ಬಂತು, ಇನ್ನೆಷ್ಟು ದೂರ ಮನೆ? ಮೊದಲಿನಕಾಲುಹಾದಿ ಈಗ ಮಣ್ಣಿನ ರಸ್ತೆಯಾಗಿದೆ. ಅಲ್ಲೆಲ್ಲೋ ಇದ್ದಹೆಸರಿಡದ ದಪ್ಪನೆಯ ಮರ ಕಾಣೆಯಾಗಿ ಯಾವುದೋಮನೆಯಲ್ಲಿ ಬೆಂಕಿಪೆಟ್ಟಿಗೆಯೊಳಗಿರಬಹುದು. ದಿನಕ್ಕೆಮುನ್ನೂರರ ವ್ಯಾಪಾರ ಮಾಡುತ್ತಿದ್ದ ತಿಮ್ಮಯ್ಯನಅಂಗಡಿಯಲ್ಲಿ ತುಂಬ ದಾಸ್ತಾನು. ಆಹಾ..ಬೆಳವಣಿಗೆಯೇ.

—-

ಅಮ್ಮಾ…

ಇಷ್ಟುದ್ದದ ಮುಖ ಅಷ್ಟಗಲವಾಗುವುದನ್ನು ಗಮನಿಸಿದೆ.

ಬಿಳಿಯಾಗಿದ್ದೀಯಲ್ಲಾ ಮಗನೇ,

ಎ ಸಿ ಆಫೀಸು.. ಅಂದರೆ ಹವಾನಿಯಂತ್ರಕ ಅಳವಡಿಸಿದಕೋಣೆಯಲ್ಲಿ ಕುಳಿತು ಕೆಲಸ ಮಾಡಿದ್ರೆ ಇನ್ನೇನು ಆಗುವುದು?

ಆಟ ಓಟ ಎಲ್ಲಾ ಇಲ್ಲ ಅನ್ನು,
ಹ್ಮ್..ಹಸಿವಾಗ್ತಾ ಇದೆ. ಇಲ್ಲೇ ಮಾತನಾಡೋದಾ ಅಲ್ಲ ಅಂಗಿಬನೀನು ಆದ್ರೂ ಬದಲಿಸಬೇಕಾ?
ಹೌದು. ನಿನಗಿಷ್ಟ ಅಂತ ಉದ್ದಿನದೋಸೆ ಮಾಡಿದ್ದೇನೆ. ಶೂ ಅಲ್ಲಿಡಬೇಡ, ನಾಯಿ ಕಚ್ಚಿಕೊಂಡು ಹೋದ್ರೆ ಮತ್ತೆಬರಿಗಾಲಲ್ಲಿ ನಡೆಯಬೇಕಷ್ಟೆ. ಮಾಡಿಗೆ ಸಿಕ್ಕಿಸಿಬಿಡು. ಎಂತವಾಸನೆ ಅದು ಕೊಳೆತ ಹಾಗೆ?
ಸಾಕ್ಸ್, ಕಾಲು ಬೆವರಿದೆ ಅದಕ್ಕೆ. ನಾನು ಕೈಕಾಲು ತೊಳೆದುಬರ್ತೇನೆ, ಮತ್ತೆ ಕತೆ ಹೇಳು.

ದೋಸೆ ಸೂಪರ್ರಾಗಿದೆ ಅಮ್ಮ, ಈಗ ಸಾಕು.

ಇನ್ನೊಂದು ತಿನ್ನು. ಬಿಸಿ ಬಿಸಿ. ಅಲ್ಲೆಲ್ಲಾ ಹೋಟೆಲಿನಲ್ಲಿ ಮಾಡಿಟ್ಟದ್ದು ತಿನ್ನೋದಲ್ವ? ಆಗಾಗ ಮನೆಗಾದ್ರೂ ಬರ್ಲಿಕ್ಕಾಗುದಿಲ್ವ?
ಒಂದೇ ಸಾಕು ದೋಸೆ, ಈಗ್ಲೇ ಐದಾರಾಯ್ತು. ಹೋಟೆಲಲ್ಲಿ ಮಾಡಿಟ್ಟದ್ದು ಕೊಡುವುದಿಲ್ಲ, ಆಗಲೇ ಮಾಡಿ ಕೊಡ್ತಾರೆ. ಮನೆಗೆ ಬರ್ಲಿಕ್ಕೆ ರಜೆ ಸಿಗ್ಬೇಕಲ್ವ? ಮನೆಗೆ ಬಂದ್ರೆ ವಾಪಸ್ಸು ಹೋಗ್ಲಿಕ್ಕೆ ಮನಸು ಬರೋದಿಲ್ಲ. ಇಲ್ಲೇ ಇರ್ಬೇಕಾ?
ಇರು ಮಾರಾಯ. ಅಪ್ಪನಿಗೆ ಇರುವ ೨೦ ಅಡಿಕೆ ಮರನೋಡ್ಲಿಕ್ಕಾಗುವುದಿಲ್ಲ. ಇರುವ ಒಂದು ದನ ಹಾರಿಹೋಗುವಷ್ಟು ಬಡವಾಗಿದೆ. ಸಂಜೆಯಾದ್ರೆ ಅಪ್ಪನಿಗೆ ಲೋಕದ ವಿಷಯ ಮಾತಾಡ್ಲಿಕ್ಕೆ ಪೇಟೆಗೆ ಹೋಗ್ಬೇಕು, ನಾನು ಗೋಡೆಯ ಹತ್ರ ಮಾತಾಡ್ಬೇಕಾ?

ಅದಕ್ಯಾಕೆ ತಲೆಬಿಸಿ ಮಾಡೋದು? ಒಂದು ಟೀವಿ ತರುವ.. ಹೇಗೂ ಟೈಂಪಾಸ್ ಆಗ್ತದೆ.

ಅದೊಂದು ಕಡ್ಮೆ ಇದೆ ನೋಡು. ದಿನಾ ಗುಡಿಸಿ ವರೆಸಿ ಸಾಕಾಗಿದೆ. ಇನ್ನು ಅದನ್ನೂ ತಂದು ಮಣ್ಣು ತಿನ್ನಲಿಕ್ಕೆ ಇಲ್ಲಿಟ್ರೆ ಸಾಕು.

ಸರಿ, ನೀನೂ ಬೆಂಗಳೂರಿಗೆ ಬಾ.. ಇನ್ನು ಒಂದು ವರುಷ ಆದ್ರೆ ಹೇಗೂ ಸ್ವಲ್ಪ ದೊಡ್ಡ ಕೆಲಸ ಸೇರಬಹುದು. ಜಯಣ್ಣನ ಮನೆಯಲ್ಲಿ ಯಾರೂ ಇಲ್ವ? ಎಂತ ಯಾರೂ ಇಲ್ಲದ ಹಾಗೆ?

ಸರಿ. ಇನ್ನು ನಾನು ಬಂದು ಬೆಂಗಳೂರು ಒಂದು ಉದ್ದಾರ ಆಗ್ಬೇಕು ನೋಡು. ಜಯಣ್ಣನ ಕತೆ ದೊಡ್ಡದಿದೆ. ಅದನ್ನುಹೇಳಿದ್ರೆ ಈ ಪಾತ್ರೆ ತೊಳೆಯುವ ಕೆಲಸ ಮಧ್ಯಾಹ್ನ ಆಗ್ತದೆ. ನೀನು ಸ್ವಲ್ಪ ನಿದ್ರೆ ಮಾಡು.

ಸುಮಾರು ೫-೬ ತಿಂಗಳಾಯ್ತು ಜಯನನ್ನು ನೋಡಿ, ಚೆನ್ನಾಗಿದ್ದಾರಂತೆ. ಅದು ಸುಮಾರು ಹಳೆಯ ಕತೆ. ಬಹುಶಃಜನರೆಲ್ಲಾ ಮರೆತಿದ್ದಾರೋ ಏನೊ. ಕೆಳಗೆ ನದಿಯ ಆಚೆಗೊತ್ತಿದೆಯಲ್ಲಾ ನಿನಗೆ? ರುಕ್ಕಯ್ಯ ಗೊತ್ತಿದೆಯಲ್ಲ?

ಹ್ಮ್.. ರುಕ್ಕಯ್ಯನ ಮಗಳು ಕುಮುದ ನನ್ನ ಕ್ಲಾಸು. ಏನಾಯ್ತು?

ಸುಮಾರು ಏಳೆಂಟು ತಿಂಗಳ ಹಿಂದಿನ ವಿಷಯ ಇದು. ರುಕ್ಕಯ್ಯನಿಗೂ ಈ ಜಯನಿಗೂ ಒಳ್ಳೆ ದೋಸ್ತಿ. ಈ ಜಯನಿಗೆ ನಿನ್ನಷ್ಟೇ ಪ್ರಾಯ, ಒಂದೆರಡು ವರ್ಷ ಜಾಸ್ತಿ ಅಲ್ವ? ನೀನುಕಾಲೇಜಿಗೆ ಹೋಗುವಾಗ ಅವನು ಮೇಸ್ತ್ರಿ ಕೆಲಸಕ್ಕೆಹೋಗುತ್ತಿದ್ದ. ಮತ್ತೇನೋ ಪಂಚಾಯತು ಕಾಂಟ್ರಾಕ್ಟು ಅಂತತಿರುಗಾಡಿದ. ಒಳ್ಳೆ ಹಣಮಾಡಿದ. ನಾನು ಮೊದಲು ಮೊಬೈಲು ನೋಡಿದ್ದು ಅವನ ಕೈಯ್ಯಲ್ಲೇ ಅಲ್ವ? ಮನೆಕಟ್ಟಿಸಿದ. ಅಪ್ಪ ತೀರಿಕೊಂಡ ಕೂಡಲೇ ಇಡೀ ಜಾಗದಲ್ಲಿಬುಲ್ಡೋಜರ್ ತರಿಸಿ ಚಂದ ಮಾಡಿ ಅಡಿಕೆ ಮರ ನೆಟ್ಟ.ಒಳ್ಳೆಕೆಲಸಗಾರ.

ಇದೆಲ್ಲಾ ನನಗೂ ಗೊತ್ತು. ನಾನಿರುವಾಗಲೇ ಇದನ್ನೆಲ್ಲಾಮಾಡಿದ್ದು ಅವನು. ಅವನ ತಂಗಿ ಮದುವೆಯ ಒಂದುವಾರದ ನಂತರ ನಾನು ಬೆಂಗಳೂರಿಗೆ ಹೋದದ್ದು. ಅಲ್ಲಿಂದಮುಂದುವರೆಸು ಕತೆ.

ಹೌದು. ತಂಗಿ ಮದುವೆಯಾದ ಮೇಲೆ ಜವಾಬ್ದಾರಿ ಕಡಿಮೆಯಾದಂತೆ ಅನ್ನಿಸಿತೋ ಏನೋ? ಅವನಮ್ಮ ದಿನಾಮನೆಗೆ ಬಂದು ಅಳುತ್ತಾ ಕೂತಿರುತ್ತಿದ್ದರು. ದಿನಾ ಕುಡೀತಿದ್ದ, ಇಸ್ಪೀಟಾಡಿ ಮನೆಗೆ ಬರೋದಕ್ಕೆ ಹನ್ನೆರಡುಘಂಟೆಯಾಗುತ್ತಿತ್ತು. ಈ ಕಾಲಕ್ಕೆ ರುಕ್ಕಯ್ಯ ಅವನ ಜೋಡಿ. ಅವನಿಗಾದ್ರು ಬುದ್ದಿ ಬೇಡ್ವ? ನಿನ್ನಪ್ಪನಿಗಿಂತ ದೊಡ್ಡವಯಸ್ಸಿನಲ್ಲಿ.

ಅದು ಅವರವರ ಇಷ್ಟ ಅಲ್ವೇನಮ್ಮಾ? ಅದರಲ್ಲಿ ನಾನುನೀನು ಏನು ಹೇಳ್ಳಿಕ್ಕುಂಟು?

ಅದು ಸರಿಯೇ. ಹೀಗೆ ಜಯನನ್ನು ರುಕ್ಕಯ್ಯ ತುಂಬಾಹಚ್ಚಿಕೊಂಡ. ರುಕ್ಕಯ್ಯನ ಮನೆಗೂ ಸಲೀಸಾಗಿ ಹೋಗಿಬರತೊಡಗಿದ. ಆ ಕುಮುದನಿಗಾದ್ರು ಬುದ್ಧಿ ಬೇಡ್ವಾ? ಅವಳಿಗೆ ಮದುವೆ ನಿಶ್ಚಯವಾಗಿತ್ತು. ಆದರೂ ಈ ಜಯನನ್ನುಇಷ್ಟಪಡ್ತಿದ್ಳಂತೆ. ಇನ್ನು ನಿನ್ನದೇನಾದರೂ ಇಂತ ಏರ್ಪಾಡು ಉಂಟಾ ಹೇಗೆ?

ಅಯ್ಯ. ಹೋಗಿ ಹೋಗಿ ನನಗೆ ಯಾರಾದ್ರು ಸಿಗ್ತಾರ? ಈಮುಸುಡಿಗೆ?

ಮಗನೆ, ಅದು ಬಿಡು. ಹುಡುಗಿಯರಿಗೆ ಇಷ್ಟ ಆಗ್ಲಿಕ್ಕೆ ಮುಸುಡು ಬೇಡ. ಅದೊಂದು ಸಮಯದಲ್ಲಿ ಅವರಿಗೆಹಾಗನ್ನಿಸಿದರೆ ಸಾಕು, ಮತ್ತೆ ಯಾವ ಸಾಹಸಕ್ಕೂ ಅವರುತಯಾರು. ನೀವೇ ಎಮ್ಮೆತಮ್ಮಣ್ಣಗಳು.. ಅರ್ಥವಾಗುವ ಬದಲು ಬೆಪ್ಪುತಕ್ಕಡಿಗಳ ಹಾಗೆ ಇರ್ತೀರಿ.

ಅದು ಬಿಡಮ್ಮ. ನಾನೇನಾದ್ರು ಅಂಥ ಏರ್ಪಾಡು ಮಾಡಿದ್ರೆಹೇಳ್ತೇನೆ.. ನೀನೇ ಅಪ್ಪನಲ್ಲಿ ಹೇಳು. ಈಗ ಕತೆಮುಂದುವರೀಲಿ.

ಹಾಗೆ ಈ ಜಯ ಹೋಗಿ ಅವಳ ತಲೆಯಲ್ಲಿ ಕೂತು, ಅವಳುಮದುವೆಯಾದ್ರೆ ಈ ಜಯನನ್ನೇ ಎನ್ನುವ ಒಂದು ರಾಗಶುರುಮಾಡಿದಳು. ಆ ಪೆದ್ದು ರುಕ್ಕಯ್ಯನಿಗೆ ಗೊತ್ತಾಗ್ಲೇ ಇಲ್ಲತುಂಬಾ ಸಮಯ. ಈ ಜಯನೂ ಸುಮ್ಮನೇ ಇದ್ದ. ಪೇಟೆಗೆಹೋದಾಗ ಭೇಟಿಯಾಗುವುದು, ಎಲ್ಲೆಲ್ಲೋ ತಿರುಗುವುದೆಲ್ಲಾಮತ್ತೆ ಕ್ರಮೇಣ ಗೊತ್ತಾಯಿತು ಜನರಿಗೆ.

ಮತ್ತೆ?

ಇದೆಲ್ಲಾ ಕ್ರಮೇಣ ನಡೆಯುತ್ತಾ ಇದ್ದ ಹಾಗೆ ರುಕ್ಕಯ್ಯನಿಗೆಯಾವುದೋ ಹಣದ ವಿಷಯದಲ್ಲಿ ಜಯನ ಜೊತೆಗೆ ಜಗಳವಾಯಿತು. ಇದರಿಂದ ರುಕ್ಕಯ್ಯ ಮತ್ತೆ ಜಯ ಬೇರೆಬೇರೆಯಾದರು. ಇದು ಜಯ ಮತ್ತೆ ಕುಮುದನ ಮಧ್ಯೆ ದೊಡ್ಡಗೋಡೆಯಾಯಿತು.

ಅಮ್ಮಾ.. ನಿನ್ನ ಧಾರಾವಾಹಿ ಕತೆ ಒಂದು ಸಲ ಮುಗಿಸು. ನಂಗೇನೋ ನೀನೇ ತಯಾರಿಸಿದ ಕತೆಯ ತರಹ ಕಾಣ್ತಿದೆ.

ಹೌದು ಮಗನೆ, ಈಗೆಲ್ಲಾ ಹಾಗೆ ಅಲ್ವ? ನಿಜವಾದ ಕತೆಗಳು ಯಾವತ್ತೂ ರೋಚಕ ಅಂತ್ಯ ಕಾಣಬೇಕಾಗಿಲ್ಲವಲ್ಲ!. ಹೀಗೆಕುಮುದನ ಮದುವೆಗೆ ಇನ್ನೇನು ಒಂದುವಾರ ಇದೆಅನ್ನುವಷ್ಟರಲ್ಲಿ ಕುಮುದಳ ಒತ್ತಾಯದ ಮೇರೆಗೆ ಜಯ ಕುಮುದಳನ್ನು ಕರೆದುಕೊಂಡು ಮಂಗ್ಳೂರಿಗೋ ಪುತ್ತೂರಿಗೋ ಓಡಿ ಹೋದ. ಇದು ಮರುದಿನ ಊರೆಲ್ಲಾತುಂಬಾ ದೊಡ್ಡ ಸುದ್ಧಿಯಾಯ್ತು.

ಮತ್ತೆ?

ಮದುವೆಗೆ ಎಲ್ಲ ಸಿದ್ಧಮಾಡಿದ್ದ ರುಕ್ಕಯ್ಯ ಕುಸಿದು ಆಸ್ಪತ್ರೆಸೇರಿದ. ಒಂದು ವಾರದಲ್ಲಿ ಪುನಃ ಮನೆಗೆ ಬಂದನಂತೆ. ಬಂದಮೇಲೆ ದೊಡ್ಡ ಕತ್ತಿ ತೆಗೆದುಕೊಂಡು ಬಂದು ಜಯನ ಮನೆಯ ಹತ್ತಿರ ಬಂದು ಕಾಯುತ್ತಾ ಕುಳಿತಿದ್ದನಂತೆ.

ಆಮೇಲೆ?

ಸುಮಾರು ಇನ್ನೊಂದು ವಾರ ಆಗಿರಬಹುದು. ಜಯ ಮನೆಗೆಬಂದ. ಬಂದು ಅಮ್ಮನನ್ನೂ ಮತ್ತೆ ಕೆಲವು ವಸ್ತುಗಳನ್ನೂತೆಗೆದುಕೊಂಡು ವಾಪಸ್ಸು ಹೋದನು. ಮನೆಗೆ ಬಂದುಅಮ್ಮನೂ ಜಯನೂ ಬರ್ತೇನೆ. ಯಾವತ್ತಾದರೂ ಎಲ್ಲಿಯಾದರೂ ಸಿಗುವ. ಕುಮುದ ಚೆನ್ನಾಗಿದ್ದಾಳೆ. ನಾನಿನ್ನುಹೊಸ ಜೀವನ ಶುರು ಮಾಡ್ತೇನೆ ಎಂದೆಲ್ಲಾ ಹೇಳಿ ಹೋದ.

ಓಹೋ.. ಹೀಗೆಲ್ಲಾ ಆಯ್ತಾ?

ಹೌದು. ಇದು ಗೊತ್ತಾದ ರುಕ್ಕಯ್ಯ ರಾತ್ರಿ ಪುನಃ ಕತ್ತಿಹಿಡಿದುಕೊಂಡು ಬಂದ. ಮನೆಯ ಹಂಚುಗಳಿಗೆಲ್ಲಾ ಕಲ್ಲೆಸೆದು, ನಮ್ಮ ಮನೆಗೂ ಬಂದು ಜಯ ಎಲ್ಲಿದ್ದಾನೆ ಎಂದುಕೇಳಿದ. ನನಗ್ಗೊತ್ತಿಲ್ಲ ಅಂದೆ. ಒಂದು ಗ್ಲಾಸು ನೀರು ಕುಡಿದುಹೊರಟುಹೋದ.

ಇಷ್ಟೆಲ್ಲಾ ಆಯ್ತಾ? ಇದೆಲ್ಲಾ ಯಾಕೆ ನಂಗೆ ಹೇಳ್ಳಿಲ್ಲ ಫೋನಲ್ಲಿ?

ನೀನು ಮಾತಾಡುವ ಮೂರು ನಿಮಿಷಕ್ಕೆ ಕತೆ ಹೇಳಲಿಕ್ಕಾಗತ್ತಾ ಮಗನೇ?

ಸರಿ. ನನಗೆ ಸೀರೆ ಸೆಲೆಕ್ಟ್ ಮಾಡಲಿಕ್ಕೆ ಬರಲಿಲ್ವೇನೋ? ಈನೀಲಿ ಸೀರೆ ನಿನಗೆ. ಅಪ್ಪನಿಗೆ ಪಂಚೆ ಅಲ್ಲಿಂದ ತರುವುದೇನಕ್ಕೆಅಲ್ವಾ? ಅಂಗಿ ತಂದಿದ್ದೇನೆ.
ಎಂತಕೆ ಸೀರೆ, ಇರಲಿ. ಈ ಸಲದ ಜಾತ್ರೆಗಾದರೂ ಇದನ್ನುಹಾಕಿಕೊಂಡು ರೈಸಬಹುದು..ಈಗ ಎಂತ ಬರೀ ಚಾಯ ಸಾಕಾನಿನಗೆ?
ಹ್ಮ್. ಕೊಡು. ಒಂದು ರೌಂಡ್ ತಿರುಗಿ ಬರ್ತೇನೆ ಮತ್ತೆ.

ಅದ್ಯಾಕೋ ಸಂಜೆಗತ್ತಲೆಯಲ್ಲಿ ಜಯಣ್ಣನ ಮನೆಯ ಹತ್ತಿರಹೋದೆ. ಯಾರೋ ಜಗಲಿಯಲ್ಲಿ ಕುಳಿತಂತೆ ಕಂಡಿತು? ಲೈಟುಮುಖಕ್ಕೆ ಹಿಡಿದೆ. ಕತ್ತಿ ಹಿಡಿದುಕೊಂಡು ಎದ್ದು ಬಂತು ದೇಹಜೊತೆಗೆ ನೂರಿನ್ನೂರು ಬರೆಯಲಾಗದ ಪದಗಳು. ಓಡಿಅಲ್ಲಿಂದ ಮನೆ ಸೇರಿದೆ.


By: Ishwara Bhat K

ಎರಡು ದಿಂಬಿನ ಕತೆ

ಒಂದನೇ ದಿಂಬು :ಯಾಕೆ ಇವ್ಳು ಅರ್ಥ ಮಾಡ್ಕೊಳ್ಳಲ್ಲ

-ಮೊನ್ನೆ ತಾನೇ ಹೋಗ್ಬಂದಿದ್ದೀಯಲ್ಲೇ? ಮತ್ತೆ ಯಾಕ್ ಹೋಗ್ತಾ ಇದೀಯಾ?
ಅಯ್ಯೋ, ನಿಮ್ಗೊತ್ತಾಗಲ್ಲ. ಹೋಗ್ಲೇ ಬೇಕು. ಸ್ವಲ್ಪ ಅರ್ಜೆಂಟ್ ಕೆಲ್ಸ ಇದೆ ಊರಲ್ಲಿ.
-ಅಲ್ಲಾ, ನಂಗೆ ಇಲ್ಯಾರಿದ್ದಾರೆ?
ಅಯ್ಯೋ.. ಹತ್ವರ್ಷ ಒಬ್ರೇ ಇದ್ರಿ, ಈಗೇನ್ ಒಂದ್ ದಿನಕ್ಕೆ ಹೀಗೆಲ್ಲಾ ಹೇಳೋದು?
-ಅದಲ್ವೇ, ನೀನು ಇಲ್ದಿದ್ರೆ ಏನಾಗಲ್ಲ. ಊಟಕ್ಕೆ ಸಾಂಬಾರು, ಸಾರು ಏನಾದ್ರು ಮಾಡೋದಕ್ಕೆ.. ಹೇಳ್ದೆ.
ಅದ್ಕೇನು, ಹೇಳ್ಕೊಡ್ತೀನಿ.
-ಹ್ಮ್ಂ, ಹೇಳು.
ಒಂದೂವರೆ ಚಮಚ ಉದ್ದಿನಬೇಳೆ, ನಾಲ್ಕು ಮೆಣಸು, ಸ್ವಲ್ಪ ಜೀರಿಗೆ…
-ಅದು ಗೊತ್ತು ಬಿಡೆ, ಅದೆಲ್ಲಾ ಗೊತ್ತು.
ಓಹ್ ಉಪ್ಪು, ಹುಳಿ, ಬೆಲ್ಲ ಹಾಕೋದಾ.. ಇಷ್ಟೇ ಇಷ್ಟು ಹುಳಿ,
-ಬೇಡ, ಬೇಡ.. ನಾನು ಅಡುಗೇನೇ ಮಾಡ್ಕೊಳ್ಳಲ್ಲ. ಹೋಟೆಲ್ಲಲ್ಲಿ ತಿಂತೀನಿ. ನೀನ್ಯಾವಾಗ ವಾಪಸ್ಸು?
ಹೋಟೆಲ್ಲಾ? ಯಾಕೆ? ನಿಮ್ಗೇನ್ ಮಾಡ್ಕೊಂಡ್ ತಿಂದ್ರೆ? ನೂರ್ ರುಪಾಯಿನಾದ್ರೂ ಉಳಿಯತ್ತೆ.
-ಅದೇ ನೀನ್ಯಾಕೆ ಊರಿಗೆ? ಒಂದ್ ಸಾವ್ರ ಉಳಿಯಲ್ವಾ?
ನಾನು ಊರಿಗೆ ಹೋಗ್ಬೇಕಾದ್ರೆ ಮಾತ್ರ ಹೀಗೆ ಹೇಳ್ತೀರ, ನೀವೆಲ್ಲ ಆಫೀಸ್ ಟೂರ್ ಅಂತ ನಾಲ್ಕ್ ದಿನ ಹೋಗ್ತೀರ.
-ಹ್ಮ್ಂ, ಅದಿರ್ಲಿ, ನೀನ್ಯಾವಾಗ ವಾಪಸ್ಸು?
ಇವತ್ ಸೋಮವಾರ, ಗುರುವಾರ ವಾಪಸ್ ಬರ್ತೀನಿ. ಆದ್ರೆ ಸ್ಲೀಪರ್ ಬಸ್ಸು ಬುಕ್ ಮಾಡಿ.
-ಬಸ್ ಬುಕ್ ಮಾಡ್ಬೇಕಾ? ಒಬ್ಳಿಗೆ ಬರೋಕೆ ಇಡೀ ಬಸ್ ಯಾಕೆ ಬುಕ್ ಮಾಡ್ಲಿ?
ಇದೇ ಆಯ್ತು.. ನಾನು ಹೋಗಲ್ಲ. ಬರೀ ತಮಾಷೆ ಮಾಡಿ.
-ಹಹ.. ಆಯ್ತು ಕಣೆ, ನಾನು ಬರೋಕೆ ಮಾತ್ರ ಬುಕ್ ಮಾಡ್ತೀನಿ. ಹೋಗೋಕಲ್ಲ.


ಎರಡನೇ ದಿಂಬು: ಯಾಕೆ ಇವ್ರು ಅರ್ಥ ಮಾಡ್ಕೊಳ್ಳಲ್ಲ

ಯಾಕೋ ಹೋಗೋಕೇ ಮನ್ಸಿಲ್ಲ ರೀ,
ಯಾಕೆ? ಬುಕ್ ಮಾಡಿದ್ದು ವೇಷ್ಟಾಗುತ್ತೆ. ಹೋಗ್ಬಾ.. ಅಲ್ಲೇನೋ ಅರ್ಜೆಂಟ್ ಕೆಲ್ಸ ಇತ್ತಲ್ಲ.
ಅದು ಬಿಡ್ರೀ, ಯಾರಾದ್ರೂ ಮಾಡ್ತಾರೆ, ನಾನು ಹೋಗ್ದಿದ್ರೂ ನಡೆಯುತ್ತೆ.
ಅದ್ಯಾಕೆ ಸಡನ್ ಆಗಿ ಚೇಂಜ್ ಮಾಡಿದ್ದು? ಈಗ ಬುಕ್ ಮಾಡಾಯ್ತಲ್ಲ?
ಏನೋ, ನೀವು ನಿಜ್ವಾಗ್ಲೂ ಅಡುಗೆ ಮಾಡಿ ಊಟ ಮಾಡ್ತೀರಾ?
ಅದೇನ್ ಬಿಡೆ ಮಹಾ, ಒಂದೂವರೆ ಚಮ್ಚ ಕೊತ್ತಂಬರಿ, ಒಂದ್ ಚಮಚ ಜೀರಿಗೆ..
ಅದೆಲ್ಲಾ ಗೊತ್ತು ಬಿಡ್ರೀ, ನೀವು ಚೆನ್ನಾಗೇ ಮಾಡ್ತೀರ ಅಡುಗೇನ.. ಆದ್ರೂ
ಏನು?
ಊಟ ಮಾಡುವಾಗ ಒಂದೆರಡು ತುತ್ತು ಕಟ್ಟಿ ಕೊಡ್ತೀರಲ್ಲಾ, ಅದನ್ನ ಬಿಟ್ಟು ಹೆಂಗೆ ಹೋಗೋದು?
ಅಯ್ಯೋ ಮಹರಾಣಿ, ಬ್ಯಾಗ್ ಎಲ್ಲಾ ತುಂಬ್ಸಿ ಆಯ್ತಾ? ಬಸ್ಸಿಗೆ ಇನ್ನು ಹತ್ತೇ ನಿಮಿಷ ಇರೋದು.


By: Ishwara Bhat K

 

%d bloggers like this: