ಮಂಜಿನ ಹನಿಗಳೆ ಕುಡಿಯಲು ಬನ್ನಿ

ಮಂಜಿನ ಹನಿಗಳೆ ಕುಡಿಯಲು ಬನ್ನಿ
ನನ್ನೆದೆ ಕನಸುಗಳ
ನಶೆಯೇರದೆ ಮರಗಟ್ಟುವ ತೆರದಲಿ
ಕುಣಿಸುವ ಆಶೆಗಳ

ಬಿಸಿಯಿದ್ದರೆ ಆ ಕನಸಿನ ಮೂಟೆಯು
ಹೀರಿ ಆವಿಯಾಗಿ
ಮೋಡದಾಚೆಗೂ ಲೋಕವಿದೆಯಲ್ಲ
ಅಲ್ಲಿ ಹಿಡಿದು ಸಾಗಿ!

ತಂಪಗಿದ್ದು ನೀವ್ ಕರಗಿಹೋದರೆ
ನೀರು ಆಗಿ ತನ್ನಿ!
ಕಪ್ಪು ಮಣ್ಣಿನಲಿ ಸತ್ವ ರಾಶಿಯಿದೆ
ಹೊಸದು ಬೆಳೆಯ ತನ್ನಿ.

ಕನಸುಗಳೆದೆಯಲಿ ಭ್ರಾಂತಿಯ ಮುಸುಕಿದೆ
ಸುಳ್ಳಲಿ ಆಗಿದೆ ಘಾಸಿ;
ಕನಸಿದೆಯೆನುತಲಿ ಇಲ್ಲೇ ನಿಲ್ಲದಿರೆ
ಸತ್ಯರವಿಯನುಳಿಸಿ.

pexels-photo-552791.jpeg


By: Ishwara Bhat K

Advertisements

ದೋಸೆ

ಚುಂಮ್ ಚುಂಮ್ ಜಳಿಯಲಿ ಚುಂಯಿ ಚುಂಯಿ ದೋಸೆ ಹೊಯ್ಯುವಾಗಲೇ ಚುಂಯಿ ಚುಂಯಿ ಸಂಗೀತ ಹೊರಡಿಸುವ ದೋಸೆ ತಿಂದಮೇಲೆಯೂ ಸಂಗೀತ ಹೊರಡಿಸುವುದೇ? ಅದು ದೋಸೆಯೊಂದಿಗೆ ತಿನ್ನುವ ಪಲ್ಯದ ಮೇಲೆ ಅವಲಂಬಿತವಾಗಿರುತ್ತದೆ. ದೋಸೆ ಎನ್ನುವಾಗ ಬಾಲ್ಯದ ನೆನಪಾಗುತ್ತದೆ. ಅಂದು ಚಳಿಗಾಲದಲ್ಲಿ, ಬೆಳಗ್ಗೆ ಅಮ್ಮ ಬೇಗನೆ ಎದ್ದು ಒಲೆಯ ಮೇಲೆ ಕಾವಲಿ ಇಟ್ಟು ಚೊಂಯ್ಯ್ ಎಂದು ದೋಸೆ ಹೊಯ್ಯಲು ನಿದ್ರೆಯಲ್ಲಿದ್ದ ನಾವೆಲ್ಲ ಎದ್ದು ಅಮ್ಮನ ಹತ್ತಿರ ಒಲೆ ಮುಂದೆ ಕುಳಿತು ಕೊಳ್ಳುತ್ತಿದ್ದೆವು.ಹೊಯ್ದ ದೋಸೆಗಳನ್ನೆಲ್ಲ ಸರದಿಯಂತೆ ತಿನ್ನಲು ಯಾರು ಎಷ್ಡು ದೋಸೆ ತಿಂದರು ಎಂದು ಗೊತ್ತೇ ಆಗುತ್ತಿರಲಿಲ್ಲ. ಮೊದ ಮೊದಲು ಬೆಂಗಳೂರಿನಲ್ಲಿ ನಾನು ದೋಸೆ ತಿನ್ನುತ್ತಾನೆ ಇರಲಿಲ್ಲ. ಯಾಕೆ ಗೊತ್ತಾ?. ಇಲ್ಲಿ ದೋಸೆ ಹೊಯ್ಯವುದು ತಗಡಿನ ಮೇಲೆ. ಹೊಯ್ಯುವ ಮೊದಲು ಈ ತಗಡನ್ನು ಕಸಪೊರಕೆ ಅರ್ಥಾತ್ ಹಿಡಿಸೂಡಿಯಿಂದ ಗುಡಿಸುತ್ತಾರೆ. ಅದೇನೂ ಇರಲಿ, ತಗಡಿನ ಮೇಲೆ ವೃತ್ತಾಕಾರದಲ್ಲಿ ದೋಸೆ ಹೊಯ್ಯುತ್ತಾರಲ್ಲ. ಅವರ ಕಲೆಯನ್ನು ಮೆಚ್ಚಲೇ ಬೇಕು.ವೃತ್ತ ಬಿಡಿಸಲು ಇವರಿಗೆ ಯಾವುದೇ ಗಣಿತದ ಉಪಕರಣ ಬೇಕಾಗಿಲ್ಲ ಅಂತ ಅನಿಸುತ್ತೆ. ದೋಸೆ ವೃತ್ಯಾಕಾರದಲ್ಲಿದೆ. ಅಂದರೆ ಅದರ ತ್ರಿಜ್ಯದ ವರ್ಗಕ್ಕೆ ಪೈ ಯಿಂದ ಗುಣಿಸಿದರೆ ಅದರ ವಿಸ್ತಿರ್ಣ ಸಿಗುತ್ತದೆ. ಪೈ ಯ ನಿಜವಾದ ಬೆಲೆ ಅನಂತ. ಅಂದರೆ ಅದಕ್ಕೆ ಕೊನೆಯಿಲ್ಲ. ಅಂದರೆ ದೋಸೆಯ ವಿಸ್ತಿರ್ಣವು ಅನಂತವಾಗಿರ ಬೇಕು ಅಲ್ವಾ? ಅನಂತ ವಿಸ್ತಿರ್ಣ ಹೊಂದಿರುವ ದೋಸೆ ತಿಂದರೆ ಯಾಕೆ ಖಾಲಿಯಾಗುತ್ತದೆ.ಇದು ಯಕ್ಷ ಪ್ರಶ್ನೆಯಾಗು ನನ್ನನ್ನು ಕಾಡತ್ತಿದೆ.

By Marcel Dsouza

ಕೈ ಕೆಸರಾದರೆ …. ಒಂದು ವಿಡಂಬನೆ

ಕೈ ಕೆಸರಾದರೆ …. ಒಂದು ವಿಡಂಬನೆ “ಅಮ್ಮ ಇವತ್ತು ಟೀಚರ್, ಗಾದೆಯ ಬಗ್ಗೆ ಬರೆಯಲು ಹೇಳಿದ್ದಾರೆ.” “ಹೌದಾ ಯಾವ ಗಾದೆ? ಕೈ ಕೆಸರಾದರೆ ಬಾಯಿ ಮೊಸರು” “ಅಂದ್ರೆ” “ಬಾಯಿ ಮೊಸರಾಗ ಬೇಕಾದರೆ ಕೈ ಕಸರಾಗ ಬೇಕಂತೆ” “ಯಾರು ಹೇಳಿದ್ರು?” “ಪ್ರಂಡ್ ಹೇಳಿದ್ದು” “ಅವನಿಗೆ ಬುದ್ಧಿಯಿಲ್ಲ. ವಿಷಯ ಕೊಡುವ ಟೀಚರಿಗೆಚಾದರೂ ಬುದ್ಧಿ ಬೇಡವಾ? ಕೆಸರು ಅಂದರೇನು ಗೊತ್ತಾ ನಿಂಗೆ?” “ಇಲ್ಲ ಮಮ್ಮಿ” “ಮಡ್ಡ್.: ಮಡ್ಡ್. ಡರ್ಟಿ ಮಡ್ಡ್. ಅದನ್ನು ಕೈಯಲ್ಲಿ ಮುಟ್ಟಿದರೆ ಡೆಟ್ಟೋಲ್ ನಲ್ಲಿ ಹತ್ತು ಸಲ ಕೈ ತೊಳೆಯ ಬೇಕು.” “ಹಾಗದರೆ ಕೈ ಕೆಸರಾದರೆ ಬಾಯಿ ಮೊಸರು ಅಂದರೆ ಏನಮ್ಮ?” “ಅದೊಂದು ದೊಡ್ಡ ಕತೆ.” “ಕತೆನಾ, ಅದನ್ನು ಬೇಗ ಹೇಳಮ್ಮ” “ಒಂದು ಊರಿನಲ್ಲಿ ಒಬ್ಬ ಹುಡುಗನಿದ್ದ.. ಅವನು ಮನೆಗೆ ಹೋಗುವಾಗ ದಾರಿಯಲ್ಲಿ ಬಿದ್ದು ಬಿಟ್ಟ. ಅವನ ಕೈಗೆ ಕೆಸರಾಯಿತು. ಮನೆ ತಲುಪುವಾಗ ಅವನಿಗೆ ತುಂಬಾ ಹಸಿವಾಗಿತ್ತು. ಪಾತ್ರೆಯಲ್ಲಿ ಮೊಸರಿತ್ತು. ಆದರೆ ಕೈ ತೊಳೆಯಕು ನೀರು ಇರಲಿಲ್ಲ. ಅದಕ್ಕ ಅವನು ಪಾತ್ರೆಗೆ ಬಾಯಿ ಹಾಕಿ ಮೊಸರನ್ನು ತಿಂದ. ಈ ಗಾದೆಯ ನೀತಿ ಏನು ಗೊತ್ತಾ?” “ಇಲ್ಲಮ್ಮಾ” “ಕೈ ಕೆಸರು ಮಾಡಬಾರದು. ಮಾಡಿದರೆ ಪಾತ್ರೆಗೆ ಬಾಯಿ ಹಾಕಿ ಮೊಸರು ಕುಡಿಯಬೇಕಾಗುವುದು.”

By Marcel Dsouza

ಚಿತ್ರವ ಬಿಡಿಸುವ ಚಂದಿರ ಬಾನೊಳು

ಚಿತ್ರವ ಬಿಡಿಸುವ ಚಂದಿರ ಬಾನೊಳು
ಸೂರ್ಯನ ಕಿರಣದಿ ಕುಂಚವ ಮಾಡಿ

ಆಗಸ ಬಿಳಿಯೆನೆ ಕರಿಯನು ಒಡ್ಡುತ
ಕರಿಯಾಯ್ತೆನುತಿರೆ ಬಿಳಿಯೆಳೆಯ
ಕೆಂಪು ನೀಲಿಗಳ ಬಣ್ಣಗಳೆಲ್ಲಿದೆ?
ದೂರುವ ವಿಕೃತಿಯ ಮಾಡುವ ತಿಳಿಯ!

ಬಳಿಯೊಳು ತೇಲುವ ಕಪ್ಫಿನ ಅಂಗಿಯ
ಮೋಡದ ಕೊಳೆಯನು ಹೊರಗೆಸೆದು
ನೆಲವದು ಕರಿಯೆನೆ ಭ್ರಾಂತಿಯ ಬರಿಸುವ
ಮೋಡವೆ ಮನಸೆನೆ, ಆಗಿದೆ ಹೊಳೆದು.

ಗೆಳೆಯನ ಖಾರವ ಎದೆಯೊಳಗಾಡಿಸಿ
ಶಾಂತಿಯ ಮಾತುಗಳಾಡುವೊಲು!
ಸೂರ್ಯನ ಬಿಸಿಯನು ನಮ್ಮೆದೆಗಿಳಿಸುವ
ಚಂದಿರ ಚಿತ್ರಕ, ನಮಗಿಂ ಮಿಗಿಲು.

pexels-photo-746111.jpeg


By : Ishwara Bhat K

ಹಾಡೆಷ್ಟನೋ ಬರೆದ ಕವಿ

ಹಾಡೆಷ್ಟನೋ ಬರೆದ ಕವಿ ಓದಿದರು ಹಲವರು
ಕವಿಗಾಗಿ ಹಾಡಿದವರ್ಯಾರು?
ಇರದ ಭಾವನೆಗಳನು ಎಳೆದು ತುಂಬಿದ ಅವನು
ಅವನ ಭಾವವ ಅರಿತರ್ಯಾರು?

ಮರವು ಎಲೆಗಳನುಳಿದು ದೇಹಗಾಯದ ನಡುವೆ
ಮೊಗ್ಗುಗಳ ಹೊರದೂಡಲೇಕೆ?
ಹೂವರಳಿ ನಿಂತಾಗ ಚಿಟ್ಟೆಗೋ ಹಸಿವಾಯ್ತು
ಮೊಳಕೆಯಾದಿತೆ ಕಾಯಿ ಮಳೆಗಾಲಕೆ?

ಹುಳದ ರಕ್ಷಣೆಕವಚ ರೇಶ್ಮೆಯಾಗುವುದೆಂತೊ
ಕವಿಗಿಲ್ಲ ಅವನೊಲಿದ ಭಾವ
ಯಾವುದೋ ಹೊದಿಕೆಯಲಿ ಯಾರದೋ ಕನಸಿರಲು
ಜಿಗಣೆ ಕಳೆಯಿತು ರಾತ್ರಿ ಹಸಿವ!

ನೋಡಿ ಸುಮ್ಮನೆ ನಗಲು, ನಕ್ಕಂತೆ ನಟಿಸಿರಲು
ಜಗವು ಖುಷಿಪಟ್ಟರದು ಪಡಲಿ;
ಏನಾದರೇನಿಹುದು ಏನುಳಿದು ಹೊಳೆಯುವುದು?
ಎನುತ ಬರೆದಿಟ್ಟ ಕವಿ ಬಳಲಿ.

notebook-pencil-notes-sketch.jpg


By : Ishwara Bhat K

ಹೈಸ್ಕೂಲ್ ದಿನಗಳು – ಭಾಗ ೨

10ನೇಯ ಸರದಿ. ಶಿಕ್ಷಕರು ಹೆಸರು ಕರೆದರು. ಉತ್ತರ ಪತ್ರಿಕೆ ಪಡೆಯಲು ಹೊರಟವರನ್ನು. ಅಲ್ಲೇ ನಿಲ್ಲಲು ಹೇಳಿದರು ಶಿಕ್ಷಕರು.
ಉತ್ತರ ಪತ್ರಿಕೆಯನ್ನು ತೆರೆದು ಓದಲು ಆರಂಬಿಸಿದರು.
ಪ್ರಶ್ಬೆ: ಹಾಸಿಗೆ ಇದ್ದಷ್ಟು ಕಾಲು ಚಾಚು ಈ ಗಾದೆಯನ್ನು ವಿವರಿಸಿ.
ಉತ್ತರ: ಬಸವ ಮನೆಗೆ ಬಂದಾಗ ಬಂಗಾರಿ. ಹಾಸಿಗೆಯಲ್ಲಿ ಮಲಗಿ ನಿದ್ರಿಸುತ್ತಿದ್ದಳು. ಅವಳು ಕಾಲನ್ನು ಹಾಸಿಗೆಯಿಂದ ಹೊರಗೆ ಚಾಚಿದ್ದಳು. ಇದನ್ನು ನೋಡಿ ಬಸವನಿಗೆ ಕೋಪ ಬಂತು. ಹಾಸಿಗೆಯಿದ್ದಷ್ಟು ಕಾಲು ಚಾಚು ಎಂದು ಬಸವನು ಬಂಗಾರಿಯನ್ನುಬೈದನು.
ಶಿಕ್ಷಕರು ಉತ್ತರವನ್ನು ಓದಿ ಮುಗಿಸಿದರು.ನಮಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ.

ಅಂತೂ ಇಂತೂ 8 ಮತ್ತು 9 ಮುಗಿಯಿತು. 10 ನೇ ಕ್ಲಾಸಿಗೆ ಕಾಲಿಟ್ಟಿದ್ದೆವು. 9 ಮತ್ತು 10 ಇದ್ದುದು ಹೊಸ ಕಟ್ಟಡ ದ‌ಲ್ಲಿ. ಅದು ಮಕ್ಕಳಿಗೆ ತುಂಬಾ ಯೂಸರ್ ಪ್ರಂಡ್ಲಿಯಾಗಿತ್ತು. ಅದಕ್ಕೆ ಬಾಗಿಲುಗಳು ಮಾತ್ರವಲ್ಲ, ಕಿಟಿಕಿಗಳು ಇದ್ದುವು. ತರಗತಿಗಳಿಗೆ ಕಿಟಿಕಿಗಳಿರುವುದು ಸಹಜ.ಅದನ್ನು ವೆಬ್ ಸೈಟಿ ನಲ್ಲಿ ಬರೆಯಬೇಕೆ? ಎಂದು ಮಂಡೆ ಬೆಚ್ಚ ಮಾಡ್ತಾ ಇದ್ದೀರಾ?ವಿಷಯ ಏನು ಗೊತ್ತಾ? ಆ ಕಿಟಿಕಿಗಳಿಗೆ ಸರಳುಗಳೇ ಇರಲಿಲ್ಲ, ಅರ್ಥಾತ್ ಬಾಗಿಲಿನಂತೆಯೇ ಇದ್ದುವು. ಈ ಕ್ಲಾಸುಗಳಿಗೆ ನನ್ನ ಆಗಮನ ಮತ್ತು ನಿರ್ಗಮನ ಹೆಚ್ವಾಗಿ ನಡೆದದ್ದು ಈ ಕಿಟಿಕಿಗಳ ಮೂಲಕವೇ ಎಂದು ಹೆಮ್ಮೆಯಿಂದಲೇ ಹೇಳುತ್ತೇನೆ.
ಬಿಡುವಿನ ಸಮಯದಲ್ಲಿ ಹುಡುಗರು ವಿಂಡೊ10 ಮೂಲಕ ಛಂಗನೆ ಹಾರಿ ವಿಂಡೊ 9ನಲ್ಲಿದ್ದ ಸೌಂದರ್ಯವನ್ನು ಅಸ್ವಾದಿಸಿ ಮತ್ತೆ ವಿಂಡೊ ಮೂಲಕ ಸ್ವಸ್ಥಾನ ಸೇರುತ್ತಿದ್ದರು. ವಿಂಡೊಗಳು ದಿನಚರಿಯನ್ನು ಇಷ್ಟು ಸುಲಭಗೊಳಿಸುತ್ತವೆ ಎಂದು ನಮಗೆ ತಿಳಿದಿರಲಿಲ್ಲ. ಬಹುಶ: ಬಿಲ್ ಗ್ರೇಟ್ಸ್ ನಮ್ಮ ಕಿಟಿಕಿ ಬಳಕೆ ನೋಡಿಯೇ ವಿಂಡೊ ಕಂಡು ಹಿಡಿದಿರ ಬೇಕು ಅಂತ ಕಾಣುತ್ತೆ. ಹುಡುಗರ ತುಂಟತನ ಮುಂದುವರಿದಿತ್ತು. ರಾಕೆಟ್ ಉಡಾಯಿಸುವ ಯೋಜನೆಯು ಆರಂಭವಾಗಿತ್ತು. ಹುಡುಗರ ಈ ಮಂಗನಾಟವನ್ನು ಹೇಗಾದರು ಮಟ್ಟಹಾಕಬೇಕೆಂದು ಕ್ಲಾಸ್ ಟೀಚರ್ ಯೋಚಿಸುತ್ತಿದ್ದರು. ಅವರ ಯೋಚನೆಯ ಫಲವೇ ಲೇಡಿ ಕ್ಲಾಸ್ ಲೀಡರ್ ನೇಮಕ. ಆ ಕ್ಲಾಸ್ ಲೀಡರ್ ಯಾರು? ಅವಳ ಅಧಿಕಾರದ ಅವದಿಯಲ್ಲಿ ಎನೇನು ನಡೆಯಿತು ಹೇಳ್ತೀನಿ.

ಮುಂದಿನ ಭಾಗದಲ್ಲಿ…


By: Marshal D’souza

ಮೊದಲನೇ ಭಾಗ ಓದಲು : ಹೈಸ್ಕೂಲ್ ದಿನಗಳು – ಭಾಗ ೧

ಒಂದೇ ರೀತಿಯ ಎರಡು ಹೂಗಳು.

ಒಂದೇ ರೀತಿಯ ಎರಡು ಹೂಗಳು
ಬಳ್ಳಿಯಲಿತ್ತು, ಅರಳಿತ್ತು!
ಒಂದನು ಕೊಯ್ದಳು ಮಲ್ಲಿಗೆ ಮಗಳು
ಇನ್ನೊಂದಲ್ಲಿಯೆ ಉಳಿದಿತ್ತು.

ಕೊಯ್ದಿಹ ಹೂವಿಗೆ ದಾರವು ಸೇರಿ
ಹೂವಿನ ಮಾಲೆ! ಹೆಸರಾಯ್ತು
ಬಳ್ಳಿಯೊಳುಳಿದ ಘಮಿಸುವ ಹೂವು
ಸಂಜೆಯವರೆಗೂ ನಗುತಿತ್ತು.

ದೇವರಿಗಿಟ್ಟಳು, ಮುಡಿಯೊಳಗಿಟ್ಟಳು
ಹೂವಿನ ಮನಸಿನ ನಗೆಯವಳು!
ರಾತ್ರಿಯ ಇಬ್ಬನಿ ಬಳ್ಳಿಯ ಹೂವಿನ
ಮೆಲ್ಲನೆ ಹೀರುತ ಕೊಳೆಸಿದಳು.

ಒಂದೇ ಭಾವದ ಜನರು ಬೆರೆತರೂ
ಹೊಂದಿಕೆಯಾಗದೆ ಬದುಕಿದರು!
ಜತೆಗೆ ಸೇರಿದರೂ, ಜೊತೆಗೆ ಬಾಳಿದರೂ
ತೆರಳುವ ದಿನದಲಿ ಅಗಲಿದರು.

FB_IMG_1521452281859.jpg


By : Ishwara Bhat K

Photo : Google.

%d bloggers like this: