ಸರಳ ಸಂಜೆಯೂ ಮೋದಗೊಂಡಿರಲು ಸೀತೆಗಾಯ್ತು ನೆಪವು
ಮರಳಿ ಅಡವಿಯೊಳು ತಿರುಗಬೇಕೆನುವ ಆಸೆಯಾಯ್ತು ಬಲವು
ತಂಗಿ ಊರ್ಮಿಳೆಯ ಮತ್ತೆ ಮಾಂಡವಿಯ ಕರೆದಳಲ್ಲಿ ಬಳಿಗೆ
ಬೆಳಗು ಜಾವದಲಿ ಸರಯೂ ದಾಟಿದರು ನಾಲ್ವರಡವಿಯೆಡೆಗೆ!


ನಡೆದ ದಾರಿ ನೆನಪಿಸುವ ಆಸೆ ಸೀತೆಗೋ ಹಾಗೆ ಹೀಗೆ
ಊರ್ಮಿಳೆಗೆ ಮಾತ್ರ ನೆನಪಿರಲುಬಹುದು ತಾ ಕಳೆದ ಮನದ ಬೇಗೆ
“ಓ ಇಲ್ಲೆ ತಾನೆ ಈ ಮುಳ್ಳುಚುಚ್ಚೆ ಕಾಲಡಿಗೆ ನೋವು ಬಂತು”
ಎನುತ ನಡೆಸಿದಳು ಸೀತೆ ಸೋದರಿಯ ;ಮುಳ್ಳು ಕಾಣದಾಯ್ತು!

ಮುಂದೆ ನಡೆಯುತಿರೆ ಕಂಡು ಮೆರೆದಿತೋ ಹಿರಿಯ ವೃಕ್ಷವೊಂದು
ಸೀತೆ ಹೇಳಿದಳು ಮರದ ಬಗೆಗಿರುವ ತನ್ನ ನೆನಪದೊಂದು
“ಅಂದಲ್ಲಿ ರಾಮ ಬರೆದಿಹನು ಪ್ರೇಮ ತಾ ರಾಮಬಾಣದಲ್ಲಿ!”
ಊರ್ಮಿಳೆಯ ಮೊಗವು ಅರಳಿತ್ತು ಕಂಡು,ಲಕ್ಷ್ಮಣನ ಚಿತ್ರದಲ್ಲಿ!

ಹರಿಣಗಳ ಹಿಂಡು ನೆಗೆಯುತ್ತ ಸಾಗಿ ಹೇಗೇಗೋ ಸಾಗುತಿತ್ತು
ಒಂದೆರಡು ಜಿಂಕೆ ತಿರುತಿರುಗಿ ನೋಡಿ ಹುಲ್ಲನ್ನು ಮೇಯುತಿತ್ತು
ಓ ಅಕ್ಕ ನೋಡೆ, ಸೀತಕ್ಕ ನೋಡೆ ಎಂದೆಂಬ ಮಾತು ಬಂತು
ಮಾರೀಚ ಬಂದ, ರಾವಣನು ಬರುವ ಎನುತಾಗ ಬಯ್ದಳಿಂತು.

ಮುನ್ನಡೆದು ಬರಲು ನಡೆಯುತ್ತಲಿರಲು ಹದ್ದೊಂದು ಎಗರಿ ಬಂತು
ಕಣ್ಣೆದುರು ಕಂಡ ಕಾಡ್ಕೋಳಿಮರಿಯ ಕೊಕ್ಕಿಂದ ಕುಕ್ಕಿ ಹೋಯ್ತು
ಬಲುಕೆಟ್ಟ ಹಕ್ಕಿ ಎಂದೆಂಬ ಮಾತು ಊರ್ಮಿಳೆಯು ಹೇಳಿದಂತೆ
ಸೀತೆ ಬಿಕ್ಕಿದಳು ನೆನೆಸಿ ಹದ್ದುಗಳ; ಪೊಗಳುತದರ ಮಮತೆ.

ಕಪಿಯ ನೋಡಿದರೆ ಹನುಮ ನೆನಪಾಗಿ ಕಣ್ಣ ತುಂಬ ನೀರು
ಕಿಷ್ಕಿಂಧೆ ಕತೆಯ ಹೇಳಿದಳು ಸೀತೆ, ಬಾಯ್ತುಂಬ ವಾಲಿ ಪೊಗರು!
ಸುಗ್ರೀವ ಸಖ್ಯ ಹೇಗಾಯ್ತು ನಮಗೆ, ಅಂಗದನು ಜೊತೆಗೆ ನಿಂದ
ಶ್ರೀರಾಮನಲ್ಲಿ ದೇವತ್ವ ಕಂಡು ಜಾಂಬವನು ಮಹಿಮನಾದ

ಬೆಂಕಿ ಮುಡಿದಂತೆ ಬೆಳೆದು ಹೂತಿರುವ ಮರ ಅಶೋಕ ತಾನೆ?
ಮಾಂಡವಿಯ ಪ್ರಶ್ನೆ ಊರ್ಮಿಳೆಗೆ ಬಂತು, ಸೀತೆಗೇ ಇದರ ಬೇನೆ
ರಾವಣೇಶ್ವರನ ದರ್ಪ ಮುರಿದಿರುವ ಒಂದು ಹುಲ್ಲು ಗರಿಕೆ!
ಸೀತೆ ಸಿಡುಕಿದಳು ಗೆಲ್ಲು ಮುರಿದಳೋ! ಶಾಪದ ಕನವರಿಕೆ.

ಹೊತ್ತು ಮೀರುತಿರೆ ಸೋನೆ ತಂಪಡರಿ ಮರಳುವಂತ ಘಳಿಗೆ
ನೆತ್ತಿಗುರಿದ ಆ ಸೂರ್ಯ ಕರಗಿ ಕೆಂಪಾಗುತಿದ್ದ ಕಡೆಗೆ
ನೋಡು ನೋಡದೋ ಪಶ್ಚಿಮಾದ್ರಿಯಲಿ ಹೊಳೆವ ಮಳೆಯ ಬಿಲ್ಲು
ಕೋದಂಡರಾಮ ತಾ ಧರಿಸಿ ಪೊರೆವನೋ ತ್ರಾಹಿ ಎನುವರನ್ನು!

ಧೂರ್ತ ರಾವಣರು ಮತ್ತೆ ಬರುವರೇ ಅಕ್ಕ ಹೇಳೆ ನಮಗೆ
ಎನುತ ಕೇಳಿದರೆ ಸೀತೆ ನಗುವಿನಲಿ ಪೇಳ್ದಳಿಂತು ಕೊನೆಗೆ
ಮನದ ಭಾವನೆಗೆ ರಾಮ ಲೇಪನವು ಇದ್ದರಾಯ್ತು ಜೊತೆಗೆ
ವಾಲಿ ರಾವಣರು ಹಿಂದೆ ಜಾರುವರು -ನಡೆಯಿರಮ್ಮ ಮನೆಗೆ!

4 thoughts on “Ramayana – By Seeta – ಸೀತಾ_ರಾಮಾಯಣ”

Leave a Reply

This site uses Akismet to reduce spam. Learn how your comment data is processed.